ನವದೆಹಲಿ, ಫೆ. 2: ಚೀನಾ ಗಡಿ ಸಂಘರ್ಷಕ್ಕೆ (China Border Clash) ಸಂಬಂಧಿಸಿದಂತೆ ಮಾಜಿ ಸೇನಾಧಿಕಾರಿ ಎಂ.ಎಂ. ನರವಣೆ ಅವರ ಅಪ್ರಕಟಿತ ಪುಸ್ತಕವನ್ನು ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಪ್ರಸ್ತಾಪಿಸಿದ್ದು, ಲೋಕಸಭೆಯಲ್ಲಿ ಭಾರಿ ಗದ್ದಲವನ್ನು ಸೃಷ್ಟಿಸಿತು. ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ ಹಾಗೂ ಇತರ ಬಿಜೆಪಿ ಸದಸ್ಯರು, ಕಾಂಗ್ರೆಸ್ ನಾಯಕ ಸದನದ “ದಾರಿ ತಪ್ಪಿಸುತ್ತಿದ್ದಾರೆ” ಎಂದು ಆರೋಪಿಸಿದರು.
ಸಂಸತ್‌ನಲ್ಲಿ ಸೋಮವಾರ (ಫೆಬ್ರವರಿ 2) ರಾಷ್ಟ್ರಪತಿ ಭಾಷಣಕ್ಕೆ ಸಂಬಂಧಿಸಿದಂತೆ ವಂದನಾ ನಿರ್ಣಯದ ಮೇಲಿನ ಚರ್ಚೆ ಕೈಗೆತ್ತಿಕೊಳ್ಳಲಾಯಿತು. ಈ ವೇಳೆ ರಾಹುಲ್ ಗಾಂಧಿ ಭಾರತದ ಮಾಜಿ ಸೇನಾಧಿಕಾರಿ ಎಂ.ಎಂ. ನರವಾಣೆ ಅವರ ಕುರಿತಾದ ಪುಸ್ತಕ ಪ್ರಕಟಿಸಲು ಕೇಂದ್ರ ಅನುಮೋದನೆ ನೀಡಿಲ್ಲ. 2020ರ ಭಾರತ-ಚೀನಾ ಗಡಿ ಸಂಘರ್ಷ ಸಮಯದಲ್ಲಿನ ಮಹತ್ವದ ಅಂಶಗಳು ಪುಸ್ತಕದಲ್ಲಿವೆ. ಚೀನಾ ಆಕ್ರಮಣ, ಉಪಟಳದ ಪ್ರಸ್ತಾವ ಅದರಲ್ಲಿದೆ. ಇಂತಹ ಪುಸ್ತಕದ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕೆಂದು ತಿಳಿಸಿದರು.
ರಾಹುಲ್ ಗಾಂಧಿ ಅವರ ವಾದ:
ಈ ವೇಳೆ ಮಧ್ಯ ಪ್ರವೇಶಿಸಿದ ರಾಜನಾಥ್ ಸಿಂಗ್, ಅಪ್ರಕಟಿತ ಪುಸ್ತಕದ ಬಗ್ಗೆ ಸದನದಲ್ಲಿ ಉಲ್ಲೇಖ ಸರಿಯಲ್ಲ ಎಂದರು. ಅವರಿಗೆ ಬೆಂಬಲವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಆಕ್ಷೇಪ ವ್ಯಕ್ತಪಡಿಸಿದರು. ಆಕ್ಷೇಪಣೆಗಳ ನಡುವೆಯೂ ರಾಹುಲ್ ಗಾಂಧಿ ಪುಸ್ತಕ ಓದಲು ಹಠ ಹಿಡಿದರು. ಆದರೆ ಸ್ಪೀಕರ್ ಓಂ ಬಿರ್ಲಾ ಲೋಕಸಭೆಯ ಕಾರ್ಯವಿಧಾನ ಮತ್ತು ವ್ಯವಹಾರ ನಡೆಸುವ ನಿಯಮಗಳನ್ನು ಉಲ್ಲೇಖಿಸಿ, ಪುಸ್ತಕ ಓದಲು ಅವಕಾಶ ನೀಡಲಿಲ್ಲ. ಬಳಿಕ ರಾಹುಲ್ ಗಾಂಧಿ, ನಾನು ಈ ಪುಸ್ತಕವನ್ನು ಉಲ್ಲೇಖಿಸಲು ಬಯಸಿರಲಿಲ್ಲ. ಆದರೆ ನಿಮ್ಮ ಸದಸ್ಯರು (ತೇಜಸ್ವಿ ಸೂರ್ಯ) ನಮ್ಮ ರಾಷ್ಟ್ರಭಕ್ತಿಯನ್ನು ಪ್ರಶ್ನಿಸಿದ್ದಾರೆ ಎಂದರು.
ಅಕ್ರಮ ಬಾಂಗ್ಲಾ ವಲಸಿಗರನ್ನು ರಾಜ್ಯದಿಂದ ಹೊರ ಕಳುಹಿಸುತ್ತೇವೆ: ಸಿಎಂ ಸಿದ್ದರಾಮಯ್ಯ
ಸ್ಪೀಕರ್ ಬಿರ್ಲಾ ಪುಸ್ತಕದ ಬಗ್ಗೆ ಯಾವುದೇ ಪ್ರಸ್ತಾಪಿಸಲು ಅನುಮತಿ ನೀಡದೇ ಇದ್ದಾಗ, ಕಾಂಗ್ರೆಸ್ ಸಂಸದ ಕೆ.ಸಿ. ವೇಣುಗೋಪಾಲ್ ಅವರ ಸಲಹೆಯೊಂದಿಗೆ ರಾಹುಲ್ ಗಾಂಧಿ, ನೀವು ಹೇಳಿದಂತೆ ನಾನು ಪುಸ್ತಕದ ಬಗ್ಗೆ ಉಲ್ಲೇಖಿಸುತ್ತಿಲ್ಲ. ಒಂದು ಗಡಿ ಇತ್ತು, ಅಲ್ಲಿ ನಾಲ್ಕು ಟ್ಯಾಂಕ್‌ಗಳು ಇದ್ದವು ಎಂದು ಹೇಳಲು ಮುಂದಾದರು. ಕೂಡಲೇ ಅಮಿತ್ ಶಾ ಮಧ್ಯ ಪ್ರವೇಶಿಸಿ, ಅಲ್ಲಿ ಟ್ಯಾಂಕರ್‌ಗಳಿದ್ದವು ಎಂಬುವುದು ನಿಮಗೆ ಹೇಗೆ ಗೊತ್ತು? ಎಂದು ಪ್ರಶ್ನಿಸಿದರು. ಬಿರ್ಲಾ ಮತ್ತೆ ರಾಹುಲ್ ಗಾಂಧಿ ಅವರಿಗೆ ಆ ವಿಷಯವನ್ನು ಪ್ರಸ್ತಾಪಿಸದಂತೆ ಹೇಳಿದರು. ರಾಹುಲ್ ಗಾಂಧಿ ಅವರ ಆ ಪುಸ್ತಕವನ್ನು ಪ್ರಸ್ತಾಪಿಸಲು ಸಾಧ್ಯವಿಲ್ಲ ಎಂದು ವಾದಿಸಲು ಬಿಜೆಪಿ ಸದಸ್ಯರು ನಿಯಮ ಪುಸ್ತಕವನ್ನು ಕೈಗೆತ್ತಿಕೊಂಡರು. ಕೂಡಲೇ ವೇಣುಗೋಪಾಲ್, ಈ ನಿಯಮಗಳೆಲ್ಲಾ ವಿಪಕ್ಷಕ್ಕೆ ಮಾತ್ರ ಅನ್ವಯವಾಗುತ್ತವೆಯೇ ಎಂದು ಪ್ರಶ್ನಿಸಿದರು.
ಇದೇ ವೇಳೆ ಮಾತನಾಡಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ನನ್ನ ಪ್ರಕಾರ ವಿಪಕ್ಷ ನಾಯಕರಿಗೆ ಚೀನಾ ವಿಷಯದಲ್ಲಿ ಮಾತನಾಡಲು ಅವಕಾಶ ನೀಡಬೇಕು. ಇದು ಅತ್ಯಂತ ಮಹತ್ವದ ವಿಷಯ ಎಂದು ಹೇಳಿದರು. ವೇಣುಗೋಪಾಲ್ ಮತ್ತು ರಾಹುಲ್ ಗಾಂಧಿ ಸ್ಪೀಕರ್ ಅವರೊಂದಿಗೆ ವಾದಿಸಿದಾಗ, ತಮ್ಮ ತೀರ್ಪಿನ್ನು ಪ್ರಶ್ನಿಸಲು ಅವಕಾಶ ಇರುವುದಿಲ್ಲ ಎಂದು ನೆನಪಿಸಿದರು. ಚರ್ಚೆಯಲ್ಲಿ ಭಾಗವಹಿಸಲು ಆಸಕ್ತಿ ಇಲ್ಲದಿದ್ದರೆ, ಮುಂದಿನ ಸದಸ್ಯ ಯಾದವ್ ಅವರಿಗೆ ಮಾತನಾಡಲು ಅವಕಾಶ ನೀಡಲಾಗುವುದು ಎಂದು ಬಿರ್ಲಾ ಎಚ್ಚರಿಸಿದರು.
ಸ್ಪೀಕರ್ ಅವರ ತೀರ್ಪನ್ನು ರಾಹುಲ್ ಗಾಂಧಿ ಪುನಃ ಪುನಃ ಮೀರಿ ನಡೆಯುತ್ತಿದ್ದಂತೆ, ಸಚಿವ ಕಿರಣ್ ರಿಜಿಜು, ಸ್ಪೀಕರ್ ತೀರ್ಪನ್ನು ಪಾಲಿಸದ ಸದಸ್ಯರಿಗೆ ಏನು ಮಾಡಬೇಕು ಎಂಬುವುದನ್ನು ತೀರ್ಮಾನಿಸಬೇಕಾಗಿದೆ. ನೀವು ಐದು ಬಾರಿ ಸಂಸದರಾಗಿದ್ದೀರಿ, ಇತರರಿಗೆ ಮಾದರಿಯಾಗಬೇಕು ಎಂದು ಹೇಳಿದರು. ಬಳಿಕ ಸ್ಪೀಕರ್ ಬಿರ್ಲಾ ಕಲಾಪವನ್ನು ಮುಂದೂಡಿದರು.