ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Raj Kundra: 60 ಕೋಟಿ ರೂ. ವಂಚನೆ ಪ್ರಕರಣ: ರಾಜ್ ಕುಂದ್ರಾಗೆ ಸಮನ್ಸ್

ಸುಮಾರು 60 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರಿಗೆ ಮುಂಬೈ ಪೊಲೀಸರು ಸಮನ್ಸ್ ನೀಡಿದ್ದಾರೆ. ಈ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ದೂರುದಾರರು ಮೊದಲು ಸಂಪರ್ಕಿಸಿದ್ದ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯ ಮಂಡಳಿಯ ಲೆಕ್ಕಪರಿಶೋಧಕರಿಗೂ ಸಮನ್ಸ್ ನೀಡಲಾಗಿದೆ.

60 ಕೋಟಿ ರೂ. ವಂಚನೆ ಪ್ರಕರಣ; ರಾಜ್ ಕುಂದ್ರಾಗೆ ಸಮನ್ಸ್

-

ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Bollywood actor Shilpa Shetty) ಅವರ ಪತಿ ರಾಜ್ ಕುಂದ್ರಾ (Raj Kundra) ಅವರಿಗೆ ಮುಂಬೈ ಪೊಲೀಸರ (Mumbai police) ಆರ್ಥಿಕ ಅಪರಾಧಗಳ ವಿಭಾಗದಿಂದ (Economic Offences Wing) ಸಮನ್ಸ್ (Summons) ಜಾರಿಯಾಗಿದೆ. 60 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಈ ಸಮನ್ಸ್ ಜಾರಿಗೊಳಿಸಲಾಗಿದೆ. ರಾಜ್ ಅವರಿಗೆ ಮೊದಲು ಬುಧವಾರಕ್ಕೆಂದು ಸಮನ್ಸ್ ನೀಡಲಾಗಿತ್ತು. ಆದರೆ ತನಿಖೆಗೆ ಹಾಜರಾಗಲು ಅವರು ಹೆಚ್ಚಿನ ಸಮಯ ಕೋರಿದ್ದರಿಂದ ಈ ದಿನಾಂಕವನ್ನು ಸೆಪ್ಟೆಂಬರ್ 15ಕ್ಕೆ ಪರಿಷ್ಕರಿಸಲಾಗಿದೆ ಎನ್ನಲಾಗಿದೆ.

ಈ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ದೂರುದಾರರು ಈ ಹಿಂದೆ ಸಂಪರ್ಕಿಸಿದ್ದ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT) ಲೆಕ್ಕಪರಿಶೋಧಕರಿಗೂ ಸಮನ್ಸ್ ಕಳುಹಿಸಲಾಗಿದೆ.

ಆಗಾಗ್ಗೆ ಅಂತಾರಾಷ್ಟ್ರೀಯ ಪ್ರವಾಸಗಳನ್ನು ಮಾಡುವ ದಂಪತಿ ವಿರುದ್ಧ ಮುಂಬೈ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ ಲುಕ್ಔಟ್ ಸುತ್ತೋಲೆ ಹೊರಡಿಸಿದ ಕೆಲವು ದಿನಗಳ ಅನಂತರ ಈ ಸಮನ್ಸ್ ಜಾರಿಗೊಳಿಸಲಾಗಿದ್ದು, ದಂಪತಿ ದೇಶವನ್ನು ತೊರೆಯದಂತೆ ತಡೆಯಲಿದೆ ಎನ್ನಲಾಗಿದೆ.

ಜುಹು ನಿವಾಸಿ, ಲೋಟಸ್ ಕ್ಯಾಪಿಟಲ್ ಫೈನಾನ್ಸ್ ಸರ್ವೀಸಸ್ ಎಂಬ ಬ್ಯಾಂಕೇತರ ಹಣಕಾಸು ಕಂಪನಿಯ (NBFC) ನಿರ್ದೇಶಕರಾಗಿರುವ 60 ವರ್ಷದ ಉದ್ಯಮಿ ದೀಪಕ್ ಕೊಠಾರಿ ಅವರು ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಅವರು ಸಾಲ ಮತ್ತು ಹೂಡಿಕೆ ಒಪ್ಪಂದದಲ್ಲಿ ಸುಮಾರು 60 ಕೋಟಿ ರೂಪಾಯಿಗಳನ್ನು ವಂಚಿಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.

ದೂರುದಾರ ಕೊಠಾರಿ ಅವರು ರಾಜೇಶ್ ಆರ್ಯ ಎಂಬವರ ಮೂಲಕ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ಅವರನ್ನು ಸಂಪರ್ಕಿಸಿದರು. ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ಮನೆ ಶಾಪಿಂಗ್ ಮತ್ತು ಆನ್‌ಲೈನ್ ಚಿಲ್ಲರೆ ವೇದಿಕೆಯಾದ ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಾಗಿದ್ದರು. ಆರ್ಯ ಅವರ ಮೂಲಕ 75 ಕೋಟಿ ರೂ. ಸಾಲವನ್ನು ಕೋರಿದರು. ಆದರೆ ಹೆಚ್ಚಿನ ತೆರಿಗೆಯನ್ನು ತಪ್ಪಿಸಲು ಅವರು ಅದನ್ನು ಹೂಡಿಕೆಯಾಗಿ ತೋರಿಸಿದರು. ಮಾಸಿಕ ರಿಟರ್ನ್ಸ್ ಮತ್ತು ಮೂಲ ಮೊತ್ತದ ಮರುಪಾವತಿಯ ಭರವಸೆ ನೀಡಿದರು.

ಷೇರು ಚಂದಾದಾರಿಕೆ ಒಪ್ಪಂದದ ಅಡಿಯಲ್ಲಿ 2015ರ ಏಪ್ರಿಲ್ ತಿಂಗಳಲ್ಲಿ 31.9 ಕೋಟಿ ರೂ. ವರ್ಗಾಯಿಸಿದ್ದರು. ಬಳಿಕ 2015ರ ಸೆಪ್ಟೆಂಬರ್ ತಿಂಗಳಲ್ಲಿ ಇನ್ನೊಂದು ಒಪ್ಪಂದದಡಿಯಲ್ಲಿ 28.53 ಕೋಟಿ ರೂ. ವರ್ಗಾಯಿಸಿದರು ಎಂದು ದೂರುದಾರರು ಆರೋಪಿಸಿದ್ದಾರೆ.

2016ರ ಏಪ್ರಿಲ್ ತಿಂಗಳಲ್ಲಿ ವೈಯಕ್ತಿಕ ಖಾತರಿಯನ್ನು ನೀಡಿದ್ದರೂ ಶಿಲ್ಪಾ ಶೆಟ್ಟಿ ಆ ವರ್ಷ ಸೆಪ್ಟೆಂಬರ್‌ನಲ್ಲಿ ಕಂಪನಿಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. 2017ರಲ್ಲಿ ಮತ್ತೊಂದು ಒಪ್ಪಂದವನ್ನು ಮುರಿದಿರುವ ಕಂಪನಿಯ ವಿರುದ್ಧ ದಿವಾಳಿತನ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ತಿಳಿದ ಕೊಠಾರಿ ಅವರು ವ್ಯವಹಾರಕ್ಕಾಗಿ ಸಾಲ ಒದಗಿಸಿದ್ದು, ಆರೋಪಿಗಳು ಹಣವನ್ನು ವೈಯಕ್ತಿಕ ಉದ್ದೇಶಗಳಿಗೆ ಬಳಸಿದ್ದಾರೆ ಎಂದು ಆರೋಪಿಸಿ ದೂರು ನೀಡಿದರು. ಆದರೆ ಈ ಆರೋಪವನ್ನು ಕುಂದ್ರಾ ದಂಪತಿ ನಿರಾಕರಿಸಿದ್ದಾರೆ.

ಇದನ್ನೂ ಓದಿ: Siachen Avalanche: ಸಿಯಾಚಿನ್‌ನಲ್ಲಿ ಭಾರಿ ಹಿಮಪಾತ; ಮೂವರು ಸೈನಿಕರು ಬಲಿ

ಇದಕ್ಕೆ ಸಂಬಂಧಿಸಿ ಲೆಕ್ಕಪರಿಶೋಧಕರು ವಿನಂತಿಸಿರುವ ಎಲ್ಲ ದಾಖಲೆಗಳನ್ನು ಸಲ್ಲಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಜುಹು ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ.