ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಮತಾ ಬ್ಯಾನರ್ಜಿ ಹಿಡಿತದಿಂದ ಜಾರುತ್ತಿದೆ ಟಿಎಂಸಿ; ಬಂಡಾಯ ಶಾಸಕರಿಂದ ಅಧ್ಯಕ್ಷರಾಗಿ ಅರೂಪ್‌ ರಾಯ್‌ ನೇಮಕ

Mamata Banerjee: ತೃಣಮೂಲ ಕಾಂಗ್ರೆಸ್‌ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಂದು ಆಘಾತ ಎದುರಾಗಿದೆ. ಶಾಸಕರು, ಸಂಸದರ ಬಂಡಾಯದ ಬಳಿಕ ಇದೀಗ ಮಮತಾ ಬ್ಯಾನರ್ಜಿಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿದೆ. ಅವರ ಸ್ಥಾನಕ್ಕೆ ಹಿರಿಯ ನಾಯಕ ಅರೂಪ್‌ ರಾಯ್‌ ಅವರನ್ನು ನೇಮಕ ಮಾಡಲಾಗಿದೆ.

ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ವಜಾಗೊಳಿಸಿದ ಬಂಡಾಯ ಶಾಸಕರು

ಅರೂಪ್‌ ರಾಯ್‌ ಮತ್ತು ಮಮತಾ ಬ್ಯಾನರ್ಜಿ (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole Jun 22, 2026 11:00 PM

ಕೋಲ್ಕತಾ, ಜೂ. 22: ಇತ್ತೀಚಿನ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸೋಲು ತೃಣಮೂಲ ಕಾಂಗ್ರೆಸ್‌ (TMC) ನಾಯಕಿ, ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರನ್ನು ಅಕ್ಷರಶಃ ಮೂಲ ಗುಂಪಾಗಿ ಮಾಡಿದೆ. ಒಂದೇ ಒಂದು ಸೋಲು ಅವರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಮಮತಾ ಕಟ್ಟಿದ್ದ 15 ವರ್ಷಗಳ ಭದ್ರ ಕೋಟೆಯಲ್ಲಿ ಬಿರುಕು ಮೂಡಲಾರಂಭಿಸಿದ್ದು, ಸಂಸದರು, ಶಾಸಕರು, ನಾಯಕರು ಬಂಡಾಯದ ಬಾವುಟ ಹಾರಿಸಿದ್ದಾರೆ. ಜತೆಗೆ ಬಂಡಾಯವೆದ್ದ ಶಾಸಕರು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಮಮತಾ ಬದಲು ಹಿರಿಯ ನಾಯಕ ಅರೂಪ್‌ ರಾಯ್‌ (Arup Roy) ಅವರನ್ನು ನೇಮಕ ಮಾಡಿದ್ದಾರೆ.

ತಮ್ಮದು ನಿಜವಾದ ಟಿಎಂಸಿ ಎನ್ನುವ ಹಕ್ಕು ಮಂಡಿಸಿರುವ ಋತಬ್ರತ ನೇತೃತ್ವದ ಬಂಡಾಯ ಶಾಸಕರ ಬಣ ತಮ್ಮ ಅಧ್ಯಕ್ಷ ಸ್ಥಾನಕ್ಕೆ ಅರೂಪ್‌ ರಾಯ್‌ ಅವರನ್ನು ಹೆಸರಿಸಿ, ಮಮತಾ ಬ್ಯಾನರ್ಜಿ ನಾಯಕತ್ವಕ್ಕೆ ಸವಾಲು ಹಾಕಿದೆ. ಆ ಮೂಲಕ ತಾವೇ ಕಟ್ಟಿದ ಪಕ್ಷದಿಂದ ಮಮತಾ ಬ್ಯಾನರ್ಜಿ ದೂರ ಸಾಗುವಂತಾಗಿದೆ.

ಟಿಎಂಸಿಯಲ್ಲಿ ಮತ್ತೆ ಬಂಡಾಯ:



ಸರಣಿ ಪಕ್ಷಾಂತರ

ಸಮಾನಾಂತರ ನಾಯಕತ್ವವನ್ನು ಘೋಷಿಸಿದ ಬೆನ್ನಲ್ಲೇ ಬಂಡಾಯ ಬಣವು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರನ್ನು ಅಮಾನತುಗೊಳಿಸುವುದಾಗಿ ತಿಳಿಸಿದೆ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಸೋಲಿನ ನಂತರ ಶಾಸಕಾಂಗ ಮತ್ತು ಸಂಸದೀಯ ವಿಭಾಗಗಳಲ್ಲಿ ಸರಣಿ ಪಕ್ಷಾಂತರ ನಡೆಯುತ್ತಿದೆ. ವಿರೋಧ ಪಕ್ಷದ ನಾಯಕ ಋತಬ್ರತ ಬ್ಯಾನರ್ಜಿ ಮತ್ತು ಬಂಡಾಯ ತೃಣಮೂಲ ಶಾಸಕರು ಪ್ರತ್ಯೇಕ ಸಭೆ ನಡೆಸಿದ ನಂತರ ಅರೂಪ್ ರಾಯ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು. ಅರೂಪ್ ರಾಯ್, ಫಿರ್ಹಾದ್ ಹಕೀಮ್, ಅರೂಪ್ ಬಿಸ್ವಾಸ್, ಜಾವೇದ್ ಖಾನ್, ಸಂದೀಪನ್ ಸಹಾ, ಅಸಿಮ್ ಬೋಸ್, ಜುಯಿ ಬಿಸ್ವಾಸ್ ಮತ್ತು ತಾರಕ್ ಸಿಂಗ್ ಸೇರಿ ಹಿರಿಯ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು. ಜತೆಗೆ ಕೋಲ್ಕತಾ, ಹೌರಾ, ಮುರ್ಷಿದಾಬಾದ್, ಬೆರ್ಹಾಂಪೋರ್ ಮತ್ತು ಇತರ ಹಲವು ಜಿಲ್ಲೆಗಳ ಬಂಡಾಯ ಶಾಸಕರು, ಕೌನ್ಸಿಲರ್‌ಗಳು ಪಾಲ್ಗೊಂಡಿದ್ದರು.

ಅಭಿಷೇಕ್‌ ಬ್ಯಾನರ್ಜಿ ಮೇಲಿನ ದಾಳಿ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ರಾಜಕೀಯ ಜೀವನಕ್ಕೆ ಮತ್ತೊಂದು ತಿರುವಾಗುತ್ತ?

ಸಭೆಯನ್ನುದ್ದೇಶಿಸಿ ಮಾತನಾಡಿದ ಋತಬ್ರತ ಬ್ಯಾನರ್ಜಿ, ಪಕ್ಷದ ಸಂವಿಧಾನವು ಪ್ರತಿ ಮೂರು ವರ್ಷಗಳಿಗೊಮ್ಮೆ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನು ರಚಿಸುವುದನ್ನು ಕಡ್ಡಾಯಗೊಳಿಸುತ್ತದೆ ಮತ್ತು 2022ರ ಫೆಬ್ರವರಿ ರಚನೆಯಾದ ಹಿಂದಿನ ಸಮಿತಿಯನ್ನು ಇನ್ನೂ ಪುನರ್‌ರಚಿಸಿಲ್ಲ ಎಂದು ವಾದಿಸಿದರು.

"ಅಧಿಕಾರಾವಧಿ ಮುಗಿದ ನಂತರವೂ ಸಾಂಸ್ಥಿಕ ರಚನೆಯನ್ನು ಪುನರ್‌ರಚಿಸಿಲ್ಲ. ಆದ್ದರಿಂದ, ಸಂವಿಧಾನಕ್ಕೆ ಅನುಗುಣವಾಗಿ ಪಕ್ಷದ ರಾಷ್ಟ್ರೀಯ ನಾಯಕತ್ವವನ್ನು ಮರುರೂಪಿಸುವ ಪ್ರಕ್ರಿಯೆ ನಡೆಸುವುದು ಅನಿವಾರ್ಯವಾಯಿತು" ಎಂದು ಸಭೆಯಲ್ಲಿ ಭಾಗವಹಿಸಿದ ಮುಖಂಡರೊಬ್ಬರು ತಿಳಿಸಿದರು.

ಅರೂಪ್ ರಾಯ್, ಫಿರ್ಹಾದ್ ಹಕೀಮ್, ಅರೂಪ್ ಬಿಸ್ವಾಸ್, ಬಿಪ್ಲಬ್ ಮಿತ್ರ, ಅಖ್ರುಝಮಾನ್ ಅನ್ಸಾರಿ, ಸಬೀನಾ ಯಾಸ್ಮಿನ್, ಸಂದೀಪನ್ ಸಹಾ, ರತಿನ್ ಘೋಷ್, ಜಾವೇದ್ ಖಾನ್ ಮತ್ತು ಋತಬ್ರತ ಬ್ಯಾನರ್ಜಿ ಅವರನ್ನು ಒಳಗೊಂಡ ಹೊಸ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ರಚನೆಗೆ ಸರ್ವಾನುಮತದಿಂದ ಅನುಮೋದನೆ ನೀಡಲಾಯಿತು. ನಂತರ ಸಮಿತಿಯನ್ನು 30 ಸದಸ್ಯರಿಗೆ ವಿಸ್ತರಿಸಲಾಯಿತು. ನಂತರ ಅರೂಪ್ ರಾಯ್ ಅವರನ್ನು ಧ್ವನಿ ಮತದ ಮೂಲಕ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

ಮಮತಾ ಬ್ಯಾನರ್ಜಿಗೆ ಮತ್ತೊಂದು ಶಾಕ್; ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಟಿಎಂಸಿಯ ಸುಷ್ಮಿತಾ ದೇವ್ ರಾಜೀನಾಮೆ

ಪದಾಧಿಕಾರಿಗಳ ಆಯ್ಕೆ

ಫಿರ್ಹಾದ್ ಹಕೀಮ್, ಅರೂಪ್ ಬಿಸ್ವಾಸ್, ರತಿನ್ ಘೋಷ್ ಮತ್ತು ಸಬೀನಾ ಯಾಸ್ಮಿನ್ ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಲಾಯಿತು. ಋತಬ್ರತ ಬ್ಯಾನರ್ಜಿ, ಜಾವೇದ್ ಖಾನ್ ಮತ್ತು ಸಂದೀಪನ್ ಸಹಾ ಅವರನ್ನು ಪ್ರಧಾನ ಕಾರ್ಯದರ್ಶಿಗಳನ್ನಾಗಿ ಆಯ್ಕೆ ಮಾಡಲಾಯಿತು. ಅಖ್ರುಝಮಾನ್ ಅನ್ಸಾರಿ ಖಜಾಂಚಿಯಾಗಿ ನೇಮಕಗೊಂಡರು.

ಕೆಲವು ದಿನಗಳ ಹಿಂದೆ ಪಕ್ಷದ ಬಹುಪಾಲು ಶಾಸಕರು ಋತಬ್ರತ ಬ್ಯಾನರ್ಜಿ ಅವರನ್ನು ವಿರೋಧ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿದರೆ, 28 ಸಂಸದರ ಪೈಕಿ ಕನಿಷ್ಠ 20 ಮಂದಿ ಟಿಎಂಸಿಯಿಂದ ಹೊರ ಬಂದಿದ್ದಾರೆ. ಒಟ್ಟಿನಲ್ಲಿ ಮಮತಾ ಬ್ಯಾನರ್ಜಿ ಬಹುದೊಡ್ಡ ಆಂತರಿಕ ಬಿಕ್ಕಟ್ಟು ಎದುರಿಸುತ್ತಿದ್ದಾರೆ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.