ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Red-Crowned Roofed Turtle: ಗಂಗಾ ನದಿಗೆ ಅಳಿವಿನಂಚಿನಲ್ಲಿದ್ದ ಆಮೆ ಪ್ರಭೇದದ ಮರುಪರಿಚಯ

ಉತ್ತರಪ್ರದೇಶ ಸರ್ಕಾರವು ಇದೇ ಮೊದಲ ಬಾರಿಗೆ ನಮಾಮಿ ಗಂಗೆ ಮತ್ತು ಭಾರತ ಆಮೆ ಸಂರಕ್ಷಣಾ ಕಾರ್ಯಕ್ರಮ (ಐಟಿಸಿಪಿ)ದ ಸಹಯೋಗದೊಂದಿಗೆ ಈ ಆಮೆ ಪ್ರಭೇದವನ್ನು ಮತ್ತೆ ಗಂಗಾ ನದಿಗೆ ಮರುಪರಿಚಯಿಸಿದೆ. ಇದನ್ನು ಸಂರಕ್ಷಿತ ಪ್ರದೇಶದೊಳಗೆ ಇರಿಸಲು ಯೋಜನೆ ರೂಪಿಸಲಾಗಿದೆ. ಈಗಾಗಲೇ ಎರಡರಿಂದ ಮೂರು ವರ್ಷದೊಳಗಿನ ತಲಾ ಹತ್ತು ಗಂಡು ಮತ್ತು ಹೆಣ್ಣು ಆಮೆಗಳನ್ನು ಎರಡು ಸುರಕ್ಷಿತ ಸ್ಥಳಗಳಲ್ಲಿ ಬಿಡಲಾಗಿದೆ.

ಗಂಗಾ ನದಿಗೆ ಮರಳಿದ ಕೆಂಪು ತಲೆಯ ಆಮೆಗಳು

ಲಖನೌ: ಗಂಗಾ ಜಲಾನಯನ (Ganga basin ) ಪ್ರದೇಶದಿಂದ ಕಣ್ಮರೆಯಾಗಿದ್ದ ಕೆಂಪು ತಲೆಯ ಆಮೆ (Red-Crowned Roofed Turtle) ಈಗ ಮತ್ತೆ ಉತ್ತರಪ್ರದೇಶದಲ್ಲಿ (Uttarpradesh) ಮರುಪರಿಚಯಿಸಲಾಗಿದೆ. ಸಿಹಿ ನೀರಿನಲ್ಲಿ ( freshwater turtle) ವಾಸ ಮಾಡುವ ಆಮೆ ಪ್ರಭೇದಗಳಲ್ಲಿ ಇದು ಒಂದು. ಏಷ್ಯಾ ಖಂಡದಲ್ಲಿ ಅಳಿವಿನಂಚಿನಲ್ಲಿರುವ ಪ್ರಭೇದಗಳಲ್ಲಿ ಇದು ಕೂಡ ಸೇರಿದೆ. ಇದನ್ನು ಕೆಂಪು ಕಿರೀಟಧಾರಿ ಆಮೆ ಅಥವಾ ಬಟಗೂರ್ ಆಮೆ ಎಂದು ಕರೆಯಲಾಗುತ್ತದೆ. ಅಳಿವಿನಂಚಿನಲ್ಲಿರುವ ಜಲಚರ ಜೀವಿಗಳನ್ನು ಪುನರುಜ್ಜೀವನಗೊಳಿಸುವ ಭಾರತದ ಪ್ರಯತ್ನಗಳಲ್ಲಿ ಇದು ಒಂದು ಮೈಲುಗಲ್ಲಾಗಿದೆ.

ಉತ್ತರಪ್ರದೇಶ ಸರ್ಕಾರವು ಇದೇ ಮೊದಲ ಬಾರಿಗೆ ನಮಾಮಿ ಗಂಗೆ ಮತ್ತು ಭಾರತ ಆಮೆ ಸಂರಕ್ಷಣಾ ಕಾರ್ಯಕ್ರಮ (ಐಟಿಸಿಪಿ)ದ ಸಹಯೋಗದೊಂದಿಗೆ ಈ ಆಮೆ ಪ್ರಭೇದವನ್ನು ಮತ್ತೆ ಗಂಗಾ ನದಿಗೆ ಮರುಪರಿಚಯಿಸಿದೆ. ಇದನ್ನು ಸಂರಕ್ಷಿತ ಪ್ರದೇಶದೊಳಗೆ ಇರಿಸಲು ಯೋಜನೆ ರೂಪಿಸಲಾಗಿದೆ.

ಈಗಾಗಲೇ ಎರಡರಿಂದ ಮೂರು ವರ್ಷದೊಳಗಿನ ತಲಾ ಹತ್ತು ಗಂಡು ಮತ್ತು ಹೆಣ್ಣು ಆಮೆಗಳನ್ನು ಎರಡು ಸುರಕ್ಷಿತ ಸ್ಥಳಗಳಲ್ಲಿ ಬಿಡುಗಡೆ ಮಾಡಲಾಗಿದೆ. ಹೈದರ್ಪುರ್ ಜೌಗು ಪ್ರದೇಶದಲ್ಲಿ ಮೇಲ್ಮುಖವಾಗಿ ಮತ್ತು ಹಸ್ತಿನಾಪುರ ವನ್ಯಜೀವಿ ಅಭಯಾರಣ್ಯದಲ್ಲಿ ಕೆಳಮುಖವಾಗಿ ಆಮೆಗಳನ್ನು ಹರಿಯಬಿಡಲಾಗಿದೆ.

ಈ ಆಮೆಗಳನ್ನು ಆರೋಗ್ಯ, ಲಿಂಗ ಮತ್ತು ರೂಪ ಗುಣಲಕ್ಷಣಗಳ ಆಧಾರದ ಮೇಲೆ ಎಚ್ಚರಿಕೆಯಿಂದ ಆಯ್ಕೆ ಮಾಡಲಾಗಿದೆ. ಈಗಾಗಲೇ 20 ಆಮೆಗಳನ್ನು ನದಿಗೆ ಬಿಡಲಾಗಿದೆ. ಈ ಜಾತಿಯ ಆಮೆಯನ್ನು ಭಾರತದಲ್ಲಿ ಮರು ಪರಿಚಯಿಸುತ್ತಿರುವುದು ಇದೇ ಮೊದಲು ಎಂದು ಮೀರತ್ ಶ್ರೇಣಿಯ ವಿಭಾಗೀಯ ಅರಣ್ಯ ಅಧಿಕಾರಿ (DFO) ರಾಜೇಶ್ ಕುಮಾರ್ ಹೇಳಿದ್ದಾರೆ.

ಮರು ಪರಿಚಯಿಸಲಾಗಿರುವ ಪ್ರತಿಯೊಂದು ಆಮೆಯ ಚಿಪ್ಪಿಗೆ ಜೋಡಿಸಲಾದ ಸೋನಿಕ್ ಟ್ರಾನ್ಸ್‌ಮಿಟರ್ ಮೂಲಕ ಅದರ ಚಲನವಲನಗಳು ಮತ್ತು ನಡವಳಿಕೆ ಮೇಲೆ ಕಣ್ಣಿಡಲಾಗುತ್ತಿದೆ. ಈ ಟ್ರಾನ್ಸ್‌ಮಿಟರ್‌ಗಳು ಸಂಗ್ರಹಿಸುವ ಡೇಟಾವು ಆಮೆಗಳು ಹೊಸ ಪರಿಸರಕ್ಕೆ ಹೇಗೆ ಹೊಂದಿಕೊಳ್ಳುತ್ತಿವೆ, ಅವು ಯಾವ ಸವಾಲುಗಳನ್ನು ಎದುರಿಸುತ್ತವೆ ಮತ್ತು ಭವಿಷ್ಯದ ಮರುಪರಿಚಯಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡುವುದು ಹೇಗೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎನ್ನುತ್ತಾರೆ ಭಾರತ ಆಮೆ ಸಂರಕ್ಷಣಾ ಕಾರ್ಯಕ್ರಮದ ಹಿರಿಯ ಜೀವಶಾಸ್ತ್ರಜ್ಞೆ ಅರುಣಿಮಾ ಸಿಂಗ್.

ಅಪರೂಪದ ಪ್ರಭೇದ

ಗಂಗಾ ಮತ್ತು ಬ್ರಹ್ಮಪುತ್ರ ನದಿಗಳಲ್ಲಿ ವ್ಯಾಪಕವಾಗಿದ್ದ ಕೆಂಪು ಕಿರೀಟ ಛಾವಣಿಯ ಆಮೆಗಳು ಈಗ ಚಂಬಲ್ ನದಿಯಲ್ಲಿ ಮಾತ್ರ ಕಾಣಿಸುತ್ತದೆ. ಅಲ್ಲಿಯೂ 300ಕ್ಕಿಂತಲೂ ಕಡಿಮೆ ಮಾತ್ರ ಉಳಿದುಕೊಂಡಿದೆ. ನೇಪಾಳ ಮತ್ತು ಬಾಂಗ್ಲಾದೇಶದಲ್ಲಿ ಇದೆ ಎನ್ನಲಾಗುತ್ತಿದ್ದರೂ ಇತ್ತೀಚಿನ ದಶಕಗಳಲ್ಲಿ ಅಲ್ಲಿ ಕಾಣಿಸಿಕೊಂಡಿಲ್ಲ. ಈ ಆಮೆ ಏಷ್ಯಾದ 50 ಪ್ರಮುಖ ಅತ್ಯಂತ ಅಳಿವಿನಂಚಿನಲ್ಲಿರುವ ಆಮೆಗಳಲ್ಲಿ ಒಂದು ಎನ್ನುತ್ತಾರೆ ತಜ್ಞರು.

ಆಮೆಗಳ ಸ್ಥಳಾಂತರದ ವೇಳೆ ಕಟ್ಟುನಿಟ್ಟಿನ ನಿಯಮಗಳನ್ನು ಅನುಸರಿಸಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಂಗೀಕರಿಸಲ್ಪಟ್ಟ ಸ್ಥಳಾಂತರ ಮಾರ್ಗಸೂಚಿಗಳನ್ನು ಪಾಲಿಸಲಾಗಿದೆ. ಮೊದಲ ಹಂತದಲ್ಲಿ ಏಪ್ರಿಲ್ 26ರಂದು ಗಂಗಾ ನದಿಯಲ್ಲಿ 30 ಆಮೆಗಳ ತಂಡವನ್ನು ಬಿಡುಗಡೆ ಮಾಡಲಾಗಿದೆ ಎಂದು ಯೋಜನೆಯಲ್ಲಿ ಭಾಗಿಯಾಗಿದ್ದ ಪಶುವೈದ್ಯ ಡಾ. ಆಶಿಶ್ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸ್ಥಳೀಯ ಗ್ರಾಮಸ್ಥರು, ಶಾಲಾ ವಿದ್ಯಾರ್ಥಿಗಳು ಮತ್ತು ಧಾರ್ಮಿಕ ಮುಖಂಡರು ಉಪಸ್ಥಿತರಿದ್ದು ಆಮೆಗಳು ಗಂಗಾ ನದಿಗೆ ಮರಳುವುದನ್ನು ನದಿಯ ದಡದಲ್ಲಿ ನಿಂತು ವೀಕ್ಷಿಸಿದರು.