Delhi's New CM: ದಿಲ್ಲಿ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಆಯ್ಕೆ
ರಾಷ್ಟ್ರ ರಾಜಧಾನಿ ದಿಲ್ಲಿಯ ಮುಖ್ಯಮಂತ್ರಿ ಯಾರಾಗ್ತಾರೆ ಎನ್ನುವ ಸಸ್ಪೆನ್ಸ್‌ಗೆ ಕೊನೆಗೂ ತೆರೆ ಬಿದ್ದಿದೆ. ರೇಖಾ ಗುಪ್ತಾ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಪಕ್ಷದ ಕಚೇರಿಯಲ್ಲಿ ಸಭೆ ಸೇರಿದ ಜನಪ್ರತಿನಿಧಿಗಳು ತಮ್ಮ ನಾಯಕನ್ನು ಒಮ್ಮತದಿಂದ ಆಯ್ಕೆ ಮಾಡಿದ್ದಾರೆ. ಆ ಮೂಲಕ ಫಲಿತಾಂಶ ಘೋಷಣೆಯಾಗಿ 11 ದಿನಗಳ ಬಳಿಕ ಸಿಎಂ ಆಯ್ಕೆಯಾದಂತಾಗಿದೆ.

ರೇಖಾ ಗುಪ್ತ.

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯ ಮುಖ್ಯಮಂತ್ರಿ ಯಾರಾಗ್ತಾರೆ ಎನ್ನುವ ಬಹು ದಿನಗಳ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ (Delhi's New CM). ರೇಖಾ ಗುಪ್ತಾ (Rekha Gupta) ಅವರನ್ನು ಮುಖ್ಯಮಂತ್ರಿಯನ್ನಾಗಿ ಒಮ್ಮತದಿಂದ ಆಯ್ಕೆ ಮಾಡಲಾಗಿದೆ. ನೂತನವಾಗಿ ಆಯ್ಕೆಯಾದ ಶಾಸಕರು ಪಕ್ಷದ ಕಚೇರಿಯಲ್ಲಿ ಬುಧವಾರ (ಫೆ. 19) ಸಭೆ ಸೇರಿ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿದ್ದಾರೆ. ಆ ಮೂಲಕ ಫಲಿತಾಂಶ ಘೋಷಣೆಯಾಗಿ ಸುಮಾರು 11 ದಿನಗಳ ಬಳಿಕ ಮುಖ್ಯಮಂತ್ರಿ ಹೆಸರನ್ನು ಘೋಷಿಸಲಾಗಿದೆ. ಇನ್ನು ಪರ್ವೇಶ್ ವರ್ಮ ಅವರನ್ನು ಉಪಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ. 70 ಸದಸ್ಯ ಬಲದ ದಿಲ್ಲಿ ವಿಧಾನಸಭೆಗೆ ಫೆ. 5ರಂದು ಒಂದೇ ಹಂತದಲ್ಲಿ ಚುನಾವಣೆ ನಡೆದು ಫೆ. 8ರಂದು ಫಲಿತಾಂಶ ಘೋಷಣೆಯಾಗಿತ್ತು.
ನಾಳೆ ಪ್ರಮಾಣ ವಚನ ಸ್ವೀಕಾರ
ಇನ್ನು ಮುಖ್ಯಮಂತ್ರಿ ಸೇರಿದಂತೆ ಸಚಿವರ ಪ್ರಮಾಣ ವಚನ ಸ್ವೀಕಾರಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಗುರುವಾರ (ಫೆ. 20) ಸಮಾರಂಭ ನಡೆಯಲಿದೆ. ರಾಮಲೀಲಾ ಮೈದಾನದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಹಿತ ಹಲವು ಬಿಜೆಪಿ ನಾಯಕರು, ಕೇಂದ್ರ ಸಚಿವರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬರೋಬ್ಬರಿ 48 ಕ್ಷೇತ್ರಗಳಲ್ಲಿ ಗೆದ್ದು, 27 ವರ್ಷಗಳ ನಂತರ ಅಧಿಕಾರಕ್ಕೆ ಬಂದಿದೆ. ಆ ಮೂಲಕ 10 ವರ್ಷಗಳ ಆಪ್ ಆಡಳಿತ ಕೊನೆಗೊಂಡಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಗೆ ದಿಲ್ಲಿ ಗದ್ದುಗೆ ವಿಶೇಷ ಎನಿಸಿಕೊಂಡಿದೆ.
Meet Delhi’s new CM.. Rekha Gupta 🔥 pic.twitter.com/quxNWBDRmD
— Viक़as (@VlKAS_PR0NAM0) February 19, 2025
ಬಿಜೆಪಿ ಸರ್ಕಾರದ ಮುಂದಿರುವ ಸವಾಲುಗಳೇನು?
ಭರವಸೆಗಳ ಈಡೇರಿಕೆ: ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಈಡೇರಿಸುವುದೇ ಬಿಜೆಪಿ ಸರ್ಕಾರದ ಮುಂದಿರುವ ಪ್ರಮುಖ ಸವಾಲು. ಅಂತಾರಾಷ್ಟ್ರೀಯ ಮಹಿಳಾ ದಿನವಾದ ಮಾ. 8ರೊಳಗೆ ಅರ್ಹ ಮಹಿಳಾ ಫಲಾನುಭವಿಗಳಿಗೆ 2,500 ರೂ.ಗಳ ಆರ್ಥಿಕ ನೆರವು ನೀಡುವುದು ಬಿಜೆಪಿಯ ಚುನಾವಣಾ ಪ್ರಚಾರದ ಪ್ರಮುಖ ಭರವಸೆಯಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಚುನಾವಣಾ ರ‍್ಯಾಲಿಗಳಲ್ಲಿ ಈ ಭರವಸೆ ನೀಡಿದ್ದರು. ಇದನ್ನು ತಕ್ಷಣವೇ ಜಾರಿಗೊಳಿಸಬೇಕಾದ ಅನಿವಾರ್ಯತೆ ಇದೆ.
ವಾಯು ಮಾಲಿನ್ಯ ಬಿಕ್ಕಟ್ಟು: ತೀರಾ ಹದಗೆಟ್ಟು ಅಪಾಯಕಾರಿಯಾಗಿ ದಿಲ್ಲಿಯ ಗಾಳಿಯ ಗುಣಮಟ್ಟ ಕುಸಿದಿದ್ದು, ಇದನ್ನು ಸರಿಪಡಿಸುವ ಗುರುತರ ಜವಾಬ್ದಾರಿ ಹೊಸ ಸರ್ಕಾರದ ಮೇಲಿದೆ. ವಿಶೇಷವಾಗಿ ಚಳಿಗಾಲದಲ್ಲಿ ಕಸ ಸುಡುವುಡು, ವಾಹನಗಳ ಸಂಖ್ಯೆ ಹೆಚ್ಚಳ ಮತ್ತು ಕೈಗಾರಿಕಾ ಮಾಲಿನ್ಯ ಪರಿಸ್ಥಿತಿಯನ್ನು ಗಂಭೀರವಾಗಿಸಿದೆ. ಗಿಡ ನೆಡುವುದು, ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜಿಸುವುದು ಮತ್ತು ತ್ಯಾಜ್ಯ ನಿರ್ವಹಣೆಯನ್ನು ಸುಧಾರಿಸುವುದು ಸೇರಿದಂತೆ ಸುಸ್ಥಿರ ಪರಿಹಾರಗಳನ್ನು ಜಾರಿಗೆ ತರಲು ಸರ್ಕಾರ ಮುಂದಾಗಬೇಕಿದೆ.
ನೀರು ಮತ್ತು ವಿದ್ಯುತ್ ಸರಬರಾಜು: ನೀರಿನ ಕೊರತೆ ಮತ್ತು ಅನೇಕ ಪ್ರದೇಶಗಳಲ್ಲಿ ಅನಿಯಮಿತ ಪೂರೈಕೆಯಿಂದ ದಿಲ್ಲಿ ಸಮಸ್ಯೆ ಎದುರಿಸುತ್ತಿದೆ. ಯಮುನಾ ನದಿಯ ಮಾಲಿನ್ಯದಿಂದ ಈ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ. ವಿಧಾನಸಭಾ ಚುನಾವಣೆಗೆ ಮೊದಲು ಬಿಜೆಪಿ ನೀಡಿದ ಭರವಸೆಗಳ ಪಟ್ಟಿಯಲ್ಲಿ ಶುದ್ಧ ಕುಡಿಯುವ ನೀರು ಮತ್ತು ನಿರಂತರ ವಿದ್ಯುತ್ ಸರಬರಾಜು ಕೂಡ ಸೇರಿದೆ.
ಕಾನೂನು ಮತ್ತು ಸುವ್ಯವಸ್ಥೆ: ಮಹಿಳೆಯರ ಸುರಕ್ಷತೆ ಮತ್ತು ಹೆಚ್ಚುತ್ತಿರುವ ಅಪರಾಧಗಳು ಕೂಡ ಹೊಸ ಸರ್ಕಾರಕ್ಕೆ ಕಠಿಣ ಸವಾಲು ತಂದೊಡ್ಡಲಿದೆ. ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವುದು ಮತ್ತು ದಿಲ್ಲಿ ಪೊಲೀಸರೊಂದಿಗೆ ಸಮನ್ವಯವನ್ನು ಸುಧಾರಿಸುವುದು ಕೂಡ ತುರ್ತು ಅಗತ್ಯ.
ಈ ಸುದ್ದಿಯನ್ನೂ ಓದಿ: Delhi Election Results 2025: ದಿಲ್ಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಬಿಜೆಪಿಯ ಪರ್ವೇಶ್ ವರ್ಮಾಗೆ ಜಯ; ಯಾರಿವರು? ಹಿನ್ನೆಲೆ ಏನು?
ಕಲ್ಯಾಣ ಯೋಜನೆಗಳ ಜಾರಿ: ಕಳೆದ 2 ಚುನಾವಣೆಗಳಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಅಧಿಕಾರಕ್ಕೆ ಏರಲು ಉಚಿತ ನೀರು, ವಿದ್ಯುತ್ ಮತ್ತು ಸರ್ಕಾರಿ ಶಾಲೆಗಳಲ್ಲಿ ಸುಧಾರಿತ ಶಿಕ್ಷಣ ಸೇರಿದಂತೆ ಹಲವು ಕಲ್ಯಾಣ ಯೋಜನೆಗಳು ಕಾರಣವಾಗಿದ್ದವು. ಈ ಬಾರಿ ಬಿಜೆಪಿ ತನ್ನ ಸಂಕಲ್ಪ ಪತ್ರದಲ್ಲಿ (ಪ್ರಣಾಳಿಕೆ) ಇದೇ ರೀತಿಯ ಕಲ್ಯಾಣ ಯೋಜನೆಗಳನ್ನು ಘೋಷಿಸಿರುವುದರಿಂದ ಇದರ ಅನುಷ್ಠಾನವನ್ನು ಯಾವ ರೀತಿ ಜಾರಿಗೊಳಿಸಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.