ಭಯೋತ್ಪಾದನೆಯ ವಿರುದ್ಧ ಹೋರಾಡಲು ಸಂಕಲ್ಪ: ಇಸ್ರೇಲ್ ಪ್ರಧಾನಿ ನೆತನ್ಯಾಹು ಜತೆ ನರೇಂದ್ರ ಮೋದಿ ಮಾತುಕತೆ
PM Modi holds talks with Israel PM: ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ನಿಲುವನ್ನು ಪುನರ್‌ದೃಢಪಡಿಸಿದ ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ದೂರವಾಣಿ ಮೂಲಕ ಮಹತ್ವದ ಮಾತುಕತೆ ನಡೆಸಿದರು. ಈ ಕುರಿತು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಬರೆದಿದ್ದಾರೆ.
ಬೆಂಜಮಿನ್ ನೆತನ್ಯಾಹು ಮತ್ತು ನರೇಂದ್ರ ಮೋದಿ (ಸಂಗ್ರಹ ಚಿತ್ರ) -
ನವದೆಹಲಿ, ಜ. 7: ಭಾರತ-ಇಸ್ರೇಲ್ (India-Israel) ಕಾರ್ಯತಂತ್ರದ ಸಹಭಾಗಿತ್ವದಲ್ಲಿನ ಪ್ರಗತಿಯನ್ನು ಪರಿಶೀಲಿಸಲು ಮತ್ತು ಹೊಸ ವರ್ಷದ ಶುಭಾಶಯಗಳನ್ನು ತಿಳಿಸಲು ಪ್ರಧಾನಿ ನರೇಂದ್ರ ಮೋದಿ (PM Narendra Modi) ಬುಧವಾರ (ಜನವರಿ 7) ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Israeli PM Netanyahu) ಅವರೊಂದಿಗೆ ಮಾತುಕತೆ ನಡೆಸಿದರು. ಈ ಬಗ್ಗೆ ಮೋದಿ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ʼʼನನ್ನ ಸ್ನೇಹಿತ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಮಾತನಾಡಲು ಹಾಗೂ ಅವರಿಗೆ ಮತ್ತು ಇಸ್ರೇಲ್ ಜನತೆಗೆ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಲು ಸಂತೋಷವಾಗಿದೆ. ಮುಂದಿನ ವರ್ಷದಲ್ಲಿ ಭಾರತ-ಇಸ್ರೇಲ್ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳ ಕುರಿತು ನಾವು ಚರ್ಚಿಸಿದ್ದೇವೆʼʼ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಪ್ರಧಾನಿ ಮೋದಿ ನನ್ನನ್ನು 'ಸರ್' ಎಂದರು; ಡೊನಾಲ್ಡ್ ಟ್ರಂಪ್
ಉಭಯ ದೇಶಗಳ ನಾಯಕರು ಪ್ರಾದೇಶಿಕ ಪರಿಸ್ಥಿತಿಯ ಕುರಿತು ಅಭಿಪ್ರಾಯ ವಿನಿಮಯ ಮಾಡಿಕೊಂಡು, ಭಯೋತ್ಪಾದನೆ ವಿರುದ್ಧ ಹೋರಾಡುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ʼʼಭಯೋತ್ಪಾದನೆ ವಿರುದ್ಧದ ನಮ್ಮ ಶೂನ್ಯ ಸಹಿಷ್ಣುತೆಯ ಕುರಿತಾದ ಸಾಮಾನ್ಯ ಬದ್ಧತೆಯನ್ನು ಮತ್ತೆ ದೃಢಪಡಿಸಿದ್ದೇವೆ. ಈ ಪ್ರದೇಶದಲ್ಲಿ ನ್ಯಾಯಯುತ ಹಾಗೂ ಶಾಶ್ವತ ಶಾಂತಿ ಸಾಧಿಸುವ ಗುರಿಯನ್ನು ಹೊಂದಿರುವ ಎಲ್ಲ ಪ್ರಯತ್ನಗಳಿಗೆ ಭಾರತ ಬೆಂಬಲ ನೀಡುತ್ತದೆʼʼ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಇತ್ತೀಚೆಗೆ ಇಬ್ಬರು ನಾಯಕರ ನಡುವೆ ಹಲವು ಉನ್ನತ ಮಟ್ಟದ ಮಾತುಕತೆಗಳಾದ ಬೆನ್ನಲ್ಲೇ ಈ ಸಂಭಾಷಣೆ ಆಡೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಡಿಸೆಂಬರ್‌ನಲ್ಲಿ ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಕರೆ ಮಾಡಿ, ದ್ವಿಪಕ್ಷೀಯ ಸಹಕಾರ ಹಾಗೂ ಪ್ರಾದೇಶಿಕ ಬೆಳವಣಿಗೆಗಳನ್ನು ಪರಿಶೀಲಿಸಿದ್ದರು. ಇದರಲ್ಲಿ ಅಮೆರಿಕದ ಬೆಂಬಲಿತ ಗಾಜಾ ಯುದ್ಧ ವಿರಾಮ ಯೋಜನೆಯ ಎರಡನೇ ಹಂತವೂ ಸೇರಿತ್ತು.
ಇಲ್ಲಿದೆ ಪ್ರಧಾನಿ ಮೋದಿ ಎಕ್ಸ್ ಪೋಸ್ಟ್:
Glad to speak with my friend, Prime Minister Benjamin Netanyahu and convey New Year greetings to him and the people of Israel. We discussed ways to further strengthen the India-Israel Strategic Partnership in the year ahead.
— Narendra Modi (@narendramodi) January 7, 2026
We also exchanged views on the regional situation and…
ಎರಡೂ ನಾಯಕರು ತಂತ್ರಾತ್ಮಕ ಸಹಭಾಗಿತ್ವವು ನಿರಂತರವಾಗಿ ಮುನ್ನಡೆಯುತ್ತಿರುವುದರ ಬಗ್ಗೆ ತೃಪ್ತಿ ವ್ಯಕ್ತಪಡಿಸಿ, ಪರಸ್ಪರ ಲಾಭಕ್ಕಾಗಿ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರವನ್ನು ಇನ್ನಷ್ಟು ಗಟ್ಟಿಗೊಳಿಸಲು ಒಪ್ಪಿಗೆ ಸೂಚಿಸಿದರು.
ಈ ವೇಳೆ ಇಬ್ಬರೂ ನಾಯಕರು ಎಲ್ಲ ರೀತಿಯ ಭಯೋತ್ಪಾದಕತೆಯನ್ನು ಖಂಡಿಸಿದರು ಮತ್ತು ಮಧ್ಯಪ್ರಾಚ್ಯದಲ್ಲಿ ಶಾಂತಿ ಉಪಕ್ರಮಗಳಿಗೆ ಬೆಂಬಲ ನೀಡಲು ನಿರಂತರ ಸಮನ್ವಯ ಅಗತ್ಯವೆಂದು ಒತ್ತಿ ಹೇಳಿದರು. ಆ ಮೂಲಕ ನರೇಂದ್ರ ಮೋದಿ ಮತ್ತು ಬೆಂಜಮಿನ್ ನೆತನ್ಯಾಹು ಶಾಂತಿ ಪ್ರಯತ್ನಗಳಿಗೆ ಸಹಕಾರವನ್ನು ಮುಂದುವರಿಸುವ ಬದ್ಧತೆಯನ್ನು ದೃಢಪಡಿಸಿದರು.
ಡಿಸೆಂಬರ್‌ಗೆ ನಿಗದಿಯಾಗಿದ್ದರೂ ಮುಂದೂಡಲ್ಪಟ್ಟಿದ್ದ ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರ ಭಾರತ ಭೇಟಿಯನ್ನು ಮರುನಿಗದಿ ಮಾಡುವ ಕುರಿತು ಚರ್ಚೆಗಳು ನಡೆಯುತ್ತಿವೆ ಎಂದು ಅವರ ಕಚೇರಿ ದೃಢಪಡಿಸಿದೆ.
2025ರಲ್ಲಿ ಭಾರತ-ಇಸ್ರೇಲ್ ಸಂಬಂಧಗಳ ಬೆಳವಣಿಗೆಯನ್ನು ಎತ್ತಿ ತೋರಿಸುತ್ತ, ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಆ ವರ್ಷವನ್ನು ಮಹತ್ವದ ಮೈಲಿಗಲ್ಲುಗಳು ಎಂದು ಕರೆದಿದೆ. ತಂತ್ರಜ್ಞಾನ, ನಾವೀನ್ಯತೆ, ಕೃಷಿ, ರಕ್ಷಣೆ, ಇಂಧನ ಮತ್ತು ಹೂಡಿಕೆ ಸೌಲಭ್ಯಗಳ ಮೇಲೆ ಗಮನಹರಿಸುವ ಭಾರತ-ಇಸ್ರೇಲ್ ಸಿಇಒಗಳ ವೇದಿಕೆ ಮತ್ತು ಭಾರತ-ಇಸ್ರೇಲ್ ವ್ಯವಹಾರ ವೇದಿಕೆ ಮುಂತಾದವುಗಳ ಮೂಲಕ ಆರ್ಥಿಕ ತೊಡಗಿಸಿಕೊಳ್ಳುವಿಕೆಯನ್ನು ಮತ್ತಷ್ಟು ಬಲಪಡಿಸಲಾಯಿತು.
2025ರಲ್ಲಿ ಟೆಲ್ ಅವಿವ್‌ನಲ್ಲಿ ನಡೆದ ಭಾರತ-ಇಸ್ರೇಲ್ ಜಂಟಿ ಕಾರ್ಯಕಾರಿ ಗುಂಪಿನ 17ನೇ ಸಭೆಯಲ್ಲಿ ರಕ್ಷಣಾ ಸಹಕಾರ ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ ಒಪ್ಪಂದ ಮುಂದುವರಿದಿದೆ.