Road Accident: ಬೈಕ್ ಸ್ಟಂಟರ್‌ಗಳ ಹಾವಳಿ; ಕಾರು ಪಲ್ಟಿಯಾಗಿ ಕುಂಭಮೇಳದಿಂದ ಮರಳುತ್ತಿದ್ದ 5 ನೇಪಾಳಿ ಪ್ರಜೆಗಳ ದುರ್ಮರಣ
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದ ಐವರು ನೇಪಾಳದ ಪ್ರಜೆಗಳು ಬಿಹಾರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮೃತರನ್ನು ಅರ್ಚನಾ ಠಾಕೂರ್, ಇಂದು ದೇವಿ, ಮಂತ್ರಾಣಿ ದೇವಿ, ಬಾಲಕೃಷ್ಣ ಝಾ ಮತ್ತು ಚಾಲಕ ಎಂದು ಗುರುತಿಸಲಾಗಿದೆ.
ಪಾಟ್ನಾ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದ ಐವರು ನೇಪಾಳದ ಪ್ರಜೆಗಳು ಬಿಹಾರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ (Road Accident). ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ ಇವರು ಸಂಚರಿಸುತ್ತಿದ್ದ ಕಾರು ರಸ್ತೆ ಬಿಭಜಕಕ್ಕೆ ಡಿಕ್ಕಿ ಹೊಡೆದು ಫೆ. 1ರಂದು ಅಪಘಾತ ಸಂಭವಿಸಿದೆ. ಮಧುಬನಿ ಚತುಷ್ಪಥ ಹೆದ್ದಾರಿಯಲ್ಲಿ ಸ್ಟಂಟ್ ಮಾಡುತ್ತಿದ್ದ ಬೈಕರ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದಾಗ ಕಾರು ಚಾಲಕನ ನಿಯಂತ್ರಣ ತಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು ಸುಮಾರು 5 ಸುತ್ತು ತಿರುಗಿ ಪಲ್ಪಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕಾರಿನಲ್ಲಿ ಒಟ್ಟು 9 ಮಂದಿ ಪ್ರಯಾಣಿಸುತ್ತಿದ್ದರು. ಅಪಘಾತದಲ್ಲಿ ಇನ್ನುಳಿದ ನಾಲ್ವರು ಗಾಯಗೊಂಡಿದ್ದಾರೆ.
ಮೃತರನ್ನು ಅರ್ಚನಾ ಠಾಕೂರ್, ಇಂದು ದೇವಿ, ಮಂತ್ರಾಣಿ ದೇವಿ, ಬಾಲಕೃಷ್ಣ ಝಾ ಮತ್ತು ಚಾಲಕ ಎಂದು ಗುರುತಿಸಲಾಗಿದೆ. ಗಾಯಗೊಂಡ ಮನೋಹರ್ ಠಾಕೂರ್, ಸೃಷ್ಟಿ ಠಾಕೂರ್, ಕಾಮ್ನಿ ಝಾ ಮತ್ತು ದೇವತರಣ ದೇವಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರೆಲ್ಲ ನೇಪಾಳ ಪ್ರಜೆಗಳು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಪಘಾತದ ತೀವ್ರತೆ
ʼʼಡಿವೈಡರ್‌ಗೆ ಡಿಕ್ಕಿ ಹೊಡೆದ ಸ್ಕಾರ್ಪಿಯೋ ಎಸ್‌ಯುವಿ 5 ಬಾರಿ ಉರುಳಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ. 1 ಟೈರ್ ವಾಹನದೊಳಗೆ ಪ್ರವೇಶಿಸಿದೆ. ಜತೆಗೆ ವಾಹನದಲ್ಲಿ ರಕ್ತದ ಕೋಡಿಯೇ ಹರಿದಿದೆʼʼ ಎಂದು ಸ್ಥಳ ಪರಿಶೀಲಿಸಿದ ಪೊಲೀಸರ್ ಅಧಿಕಾರಿಗಳು ತಿಳಿಸಿದ್ದಾರೆ.
ʼʼಚತುಷ್ಪಥ ಹೆದ್ದಾರಿಯಲ್ಲಿ ಬೈಕ್‌ನಲ್ಲಿ ಬಂದ ಕೆಲವರು ಸ್ಟಂಟ್ ಮಾಡುತ್ತಿದ್ದರು. ವೇಗವಾಗಿ ಸಾಗುತ್ತಿದ್ದ ಕಾರು ಬೈಕ್ ಸವಾರರಲ್ಲಿ ಒಬ್ಬರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿದಾಗ ರಸ್ತೆ ವಿಭಾಜಕಕ್ಕೆ ಡಿಕ್ಕಿ ಹೊಡೆದಿದೆʼʼ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅಪಘಾತ ನಡೆಯುತ್ತಿದ್ದಂತೆ ಸ್ಟಂಟ್ ನಡೆಸುತ್ತಿದ್ದ ಬೈಕರ್‌ಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಕಾರಿನ ಏರ್ ಬ್ಯಾಗ್ ತೆರೆದುಕೊಳ್ಳದೇ ಇರುವುದು ಕೂಡ ಇಷ್ಟೊಂದು ಸಾವು-ನೋವಿಗೆ ಕಾರಣ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ. ʼʼಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನುಜ್ಜುಗುಜ್ಜಾದ ವಾಹನದಿಂದ ಇತರ ನಾಲ್ವರನ್ನು ರಕ್ಷಿಸಿದ್ದೇವೆ. ಸ್ಥಳೀಯರ ನೆರವಿನಿಂದ ಗಾಯಗೊಂಡವರನ್ನು ಶ್ರೀ ಕೃಷ್ಣ ಮೆಮೋರಿಯಲ್ ಮೆಡಿಕಲ್ ಕಾಲೇಜಿಗೆ (SKMCH) ದಾಖಲಿಸಿದ್ದೇವೆ. ಇವರ ಪರಿಸ್ಥಿತಿ ಗಂಭೀರವಾಗಿದೆ. ನೇಪಾಳದ ಅಧಿಕಾರಿಗಳಿಗೆ ಅಪಘಾತದ ಬಗ್ಗೆ ಮಾಹಿತಿ ನೀಡಿದ್ದೇವೆ. ಸಂತ್ರಸ್ತರ ಕುಟುಂಬಸ್ಥರನ್ನು ಸಂಪರ್ಕಿಸಲು ಯತ್ನಿಸುತ್ತಿದ್ದೇವೆʼʼ ಎಂದು ಹಿರಿಯ ಅಧಿಕಾರಿ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Mahakumbh Stampede: ಮಹಾ ಕುಂಭಮೇಳದ ಕಾಲ್ತುಳಿತ; ಹೇಗಾಯ್ತು ಈ ದುರಂತ?
ಹರಿಯಾಣದಲ್ಲಿ ಕಾಲುವೆಗೆ ಬಿದ್ದ ವಾಹನ; 6 ಮಂದಿ ಸಾವು
ಚಂಡೀಗಢ: ಹರಿಯಾಣದಲ್ಲಿ ಭೀಕರ ಅಪಘಾತವೊಂದು ಸಂಭವಿಸಿದ್ದು, ಶುಕ್ರವಾರ ತಡರಾತ್ರಿ ಫತೇಹಾಬಾದ್‌ನಲ್ಲಿ 14 ಜನರನ್ನು ಹೊತ್ತೊಯ್ಯುತ್ತಿದ್ದ ವಾಹನವು ಕಾಲುವೆಗೆ ಉರುಳಿದ ಪರಿಣಾಮ ಕನಿಷ್ಠ 6 ಮಂದಿ ಮೃತಪಟ್ಟಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಜಗದೀಶ್ ಚಂದ್ರ, ''ಪಂಜಾಬ್‌ನ ಫಜಿಲ್ಕಾದಲ್ಲಿ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದಾಗ ವಾಹನ ಫತೇಹಾಬಾದ್‌ನಲ್ಲಿ ಕಾಲುವೆಗೆ ಉರುಳಿದೆ. 14 ಜನರಲ್ಲಿ 6 ಮೃತದೇಹಗಳು ಪತ್ತೆಯಾಗಿದ್ದು, 2 ಮಂದಿಗೆ ಗಂಭೀರ ಗಾಯಗಳಾಗಿದ್ದು, ಇನ್ನು 6 ಜನ ನಾಪತ್ತೆಯಾಗಿದ್ದಾರೆ'' ಎಂದು ತಿಳಿಸಿದ್ದಾರೆ.