ಜಾಮೀನು ಸಿಕ್ಕರೂ ಸಿಜೆಪಿ ನಾಯಕ ಸೌರವ್ ದಾಸ್‌ಗೆ ವಿದೇಶ ಪ್ರವಾಸ ಯೋಗವಿಲ್ಲ; ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ತಡೆದಿದ್ದೇಕೆ?
CJP co-convener Saurav Das: ಅಕ್ಟೋಬರ್‌ನಲ್ಲಿ ಜಾಮೀನು ಪಡೆದಿದ್ದರೂ, ಆಕ್ಸ್‌ಫರ್ಡ್ ಯೂನಿಯನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಲಂಡನ್‌ಗೆ ಹೊರಟಿದ್ದ ಕಾಕ್ರೋಚ್ ಜನತಾ ಪಾರ್ಟಿ ಸಹ-ಸಂಚಾಲಕ ಸೌರವ್ ದಾಸ್ ಅವರನ್ನು ದೆಹಲಿ ವಿಮಾನ ನಿಲ್ದಾಣದ ವಲಸೆ ಅಧಿಕಾರಿಗಳು ತಡೆಹಿಡಿದಿದ್ದಾರೆ. ಪಾಸ್‌ಪೋರ್ಟ್ ಫ್ಲ್ಯಾಗ್ ಆಗಿರುವ ಕಾರಣ ನೀಡಿ ಪ್ರಯಾಣಕ್ಕೆ ಬ್ರೇಕ್ ಹಾಕಿದ ಬೆನ್ನಲ್ಲೇ, "ನಾನೂ ನೀರವ್ ಮೋದಿ, ವಿಜಯ್ ಮಲ್ಯ ಆಗಬೇಕಿತ್ತು" ಎಂದು ಸರ್ಕಾರದ ವಿರುದ್ಧ ಸೌರವ್ ದಾಸ್ ಕಟುವಾಗಿ ವ್ಯಂಗ್ಯವಾಡಿದ್ದಾರೆ.
ಕಾಕ್ರೋಚ್ ಜನತಾ ಪಾರ್ಟಿ ಸಹ-ಸಂಚಾಲಕ ಸೌರವ್ ದಾಸ್ (ಸಂಗ್ರಹ ಚಿತ್ರ) -
ನವದೆಹಲಿ, ನ. 24: ಅಕ್ಟೋಬರ್‌ನಲ್ಲಿ ಜಾಮೀನು ಪಡೆದಿದ್ದರೂ, ಕಾಕ್ರೋಚ್ ಜನತಾ ಪಾರ್ಟಿ (CJP) ಸಹ-ಸಂಚಾಲಕ ಸೌರವ್ ದಾಸ್ (Saurav Das) ಅವರನ್ನು ಲಂಡನ್‌ಗೆ ತೆರಳುವ ಮುನ್ನ ದೆಹಲಿ ವಿಮಾನ ನಿಲ್ದಾಣದ ವಲಸೆ ವಿಭಾಗದಲ್ಲಿ ತಡೆಹಿಡಿಯಲಾಗಿದೆ. ಪಾಸ್‌ಪೋರ್ಟ್ ಫ್ಲ್ಯಾಗ್ ಆಗಿರುವ ವಿಚಾರ ಇಮಿಗ್ರೇಷನ್ ಕೌಂಟರ್‌ಗೆ ಹೋದಾಗಲೇ ತಮಗೆ ಗೊತ್ತಾಯಿತು ಎಂದು ಹೇಳಿರುವ ದಾಸ್, "ನಾನೂ ನೀರವ್ ಮೋದಿ, ವಿಜಯ್ ಮಲ್ಯ ಆಗಬೇಕಿತ್ತು" ಎಂದು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನವೆಂಬರ್ 23–24ರ ಮಧ್ಯರಾತ್ರಿ 1 ಗಂಟೆಯ ಲಂಡನ್ ವಿಮಾನಕ್ಕೆ ತೆರಳಲು ಸೌರವ್ ದಾಸ್ ಸಿದ್ಧರಾಗಿದ್ದ ವೇಳೆ ಈ ಘಟನೆ ನಡೆದಿದೆ. ಕಳೆದ ಅಕ್ಟೋಬರ್‌ನಲ್ಲಿ ನೀಡಿದ ಜಾಮೀನು ಆದೇಶದಲ್ಲಿ ವಿದೇಶ ಪ್ರಯಾಣಕ್ಕೆ ಸ್ಪಷ್ಟ ನಿರ್ಬಂಧ ಇಲ್ಲದಿದ್ದರೂ, ಬಾಕಿ ಇರುವ ಎಫ್‌ಐಆರ್‌ಗಳು ಅಥವಾ ನಡೆಯುತ್ತಿರುವ ತನಿಖೆಗಳಿಗೆ ಸಂಬಂಧಿಸಿದಂತೆ ಪಾಸ್‌ಪೋರ್ಟ್ ಫ್ಲ್ಯಾಗ್ ಆಗಿದ್ದರೆ ಅಥವಾ ಲುಕ್‌ಔಟ್ ಸುತ್ತೋಲೆ ಇದ್ದರೆ ವಿಮಾನ ನಿಲ್ದಾಣದಲ್ಲೇ ಪ್ರಯಾಣವನ್ನು ತಡೆಯಲಾಗುತ್ತದೆ.
ಲಂಡನ್‌ಗೆ ಹೊರಟಿದ್ದ ಸಿಜೆಪಿ ಸಂಚಾಲಕ ಸೌರವ್ ದಾಸ್‌ಗೆ ವಿಮಾನ ನಿಲ್ದಾಣದಲ್ಲಿ ತಡೆ
ಜಾಮೀನು ಇದ್ದರೂ ಇಮಿಗ್ರೇಷನ್‌ನಲ್ಲಿ ತಡೆ
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಅಕ್ಟೋಬರ್‌ನಲ್ಲಿ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಸೌರವ್ ದಾಸ್ ಬಂಧನಕ್ಕೊಳಗಾಗಿದ್ದರು. ಅಕ್ಟೋಬರ್ 21ರಂದು 50,000 ರೂ. ಬಾಂಡ್, ಒಂದು ವರ್ಷ ಶಾಂತಿ ಪಾಲನೆ ಮತ್ತು ಜಂತರ್ ಮಂತರ್‌ನಲ್ಲಿ ಅನಧಿಕೃತ ಪ್ರತಿಭಟನೆ ನಡೆಸದ ಷರತ್ತುಗಳೊಂದಿಗೆ ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದರು. ಆ ಜಾಮೀನು ಆದೇಶದಲ್ಲಿ ವಿದೇಶಕ್ಕೆ ಹೋಗದಂತೆ ನೇರ ನಿಷೇಧ ಇರಲಿಲ್ಲವಾದರೂ, ಅಕ್ಟೋಬರ್ ಪ್ರತಿಭಟನೆ ಸಂಬಂಧ ದಾಖಲಾಗಿರುವ ಪ್ರಕರಣಗಳು ಹಾಗೂ ತನಿಖೆಗಳ ಹಿನ್ನೆಲೆಯಲ್ಲಿ ಪಾಸ್‌ಪೋರ್ಟ್ ಫ್ಲ್ಯಾಗ್ ಆಗಿದೆ ಎನ್ನಲಾಗಿದೆ.
ನೀರವ್ ಮೋದಿ, ವಿಜಯ್ ಮಲ್ಯ ಉಲ್ಲೇಖಿಸಿ ವ್ಯಂಗ್ಯ
ಆಕ್ಸ್‌ಫರ್ಡ್ ಯೂನಿಯನ್‌ನಿಂದ ಆಹ್ವಾನದ ಮೇರೆಗೆ ಕಾಕ್ರೋಚ್ ಮೂವ್‌ಮೆಂಟ್ ಕುರಿತು ಪ್ಯಾನಲ್ ಚರ್ಚೆ ಹಾಗೂ ಉಪನ್ಯಾಸಕ್ಕಾಗಿ ಸೌರವ್ ದಾಸ್ ಲಂಡನ್‌ಗೆ ತೆರಳುತ್ತಿದ್ದರು. "ಶಿಕ್ಷಿತ ಯುವಕ ವಿದೇಶಿ ವಿವಿಗಳಲ್ಲಿ ಬೌದ್ಧಿಕ ಚರ್ಚೆಯಲ್ಲಿ ಭಾಗವಹಿಸುವುದಕ್ಕೆ ಸರ್ಕಾರ ಯಾಕೆ ಹೆದರುತ್ತಿದೆ? ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂ. ವಂಚಿಸಿದ ನೀರವ್ ಮೋದಿ, ವಿಜಯ್ ಮಲ್ಯ ಆಗಿದ್ದರೆ ಒಳ್ಳೆಯದಿತ್ತು" ಎಂದು ದಾಸ್ ಕಿಡಿಕಾರಿದ್ದಾರೆ. ಅಲ್ಲದೆ, ಸಚಿವರು ರಾಜೀನಾಮೆ ನೀಡಲು ನಿರಾಕರಿಸುತ್ತಿರುವುದರಿಂದ ಸರ್ಕಾರಕ್ಕೆ ಸಂಪುಟ ವಿಸ್ತರಣೆಯನ್ನೂ ಮಾಡಲು ಆಗುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಸೌರವ್ ದಾಸ್ ಅವರಿಗೆ ಆಕ್ಸ್‌ಫರ್ಡ್‌ನಿಂದ ಆಹ್ವಾನ ಬಂದಿರುವುದು ಅಧಿಕಾರದಲ್ಲಿರುವವರಿಗೆ ಸಹಿಸಲಾಗುತ್ತಿಲ್ಲ ಎಂದು ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಆರೋಪಿಸಿದ್ದಾರೆ. ಈ ಘಟನೆಯಿಂದ ತಮ್ಮ ಕೆಲಸ ನಿಲ್ಲುವುದಿಲ್ಲ, ಮುಂದಿನ ದಿನಗಳಲ್ಲಿ ಲಂಡನ್, ಪ್ಯಾರಿಸ್ ಸೇರಿದಂತೆ ಇತರ ಕಡೆಗಳಿಗೂ ಪ್ರಯಾಣಿಸುವುದಾಗಿ ದಾಸ್ ಸ್ಪಷ್ಟಪಡಿಸಿದ್ದಾರೆ. ವಿಮಾನ ನಿಲ್ದಾಣದ ತಪಾಸಣೆ ಪ್ರಕ್ರಿಯೆಯನ್ನು ವಲಸೆ ಅಧಿಕಾರಿಗಳು ನಿರ್ವಹಿಸುತ್ತಾರೆ ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ.