ನವದೆಹಲಿ, ಜ. 19: ಸಮಾಜವಾದಿ ಪಕ್ಷ (Samajwadi Party)ದ ಸ್ಥಾಪಕ ಮುಲಾಯಂ ಸಿಂಗ್ ಯಾದವ್ (Mulayam Singh Yadav) ಅವರ ಕಿರಿಯ ಪುತ್ರ ಹಾಗೂ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ಅವರ ಸಹೋದರ ಪ್ರತೀಕ್ ಯಾದವ್ (Prateek Yadav), ಸೋಮವಾರ ತಮ್ಮ ಪತ್ನಿ ಮತ್ತು ಬಿಜೆಪಿ ನಾಯಕಿ ಅಪರ್ಣಾ ಯಾದವ್ (Aparna Yadav) ಅವರಿಗೆ ವಿಚ್ಛೇದನ ನೀಡುವುದಾಗಿ ಘೋಷಿಸಿದ್ದಾರೆ. ಅಪರ್ಣಾ ಯಾದವ್ ತಮ್ಮ ಕುಟುಂಬವನ್ನು ನಾಶ ಮಾಡಿದ್ದಾರೆ ಎಂದು ಪ್ರತೀಕ್ ಆರೋಪಿಸಿದ್ದಾರೆ.
ಪ್ರತೀಕ್ ಯಾದವ್ ಇನ್‌ಸ್ಟಾಗ್ರಾಂ (Instagram)ನಲ್ಲಿ ಅಪರ್ಣಾ ಅವರ ಫೋಟೊವನ್ನು ಪೋಸ್ಟ್ ಮಾಡಿ, ಅವರನ್ನು “ಕುಟುಂಬ ವಿಧ್ವಂಸಕ” ಹಾಗೂ “ಸ್ವಾರ್ಥಿ” ಎಂದು ಬರೆದಿದ್ದಾರೆ. ತಮ್ಮ ಕುಟುಂಬದ ಸಂಬಂಧಗಳನ್ನು ಅವಳು ಹಾಳು ಮಾಡಿದ್ದಾಳೆ ಎಂದು ಆರೋಪಿಸಿದ ಅವರು, ತಾವು “ತೀವ್ರ ಮಾನಸಿಕ ಸಂಕಷ್ಟದ” ಸ್ಥಿತಿಯಲ್ಲಿ ಇರುವುದಾಗಿ ತಿಳಿಸಿದ್ದಾರೆ.
ಪ್ರತೀಕ್ ಯಾದವ್ ಇನ್‌ಸ್ಟಾಗ್ರಾಂ ಪೋಸ್ಟ್:
“ಈ ಸ್ವಾರ್ಥಿ ಮಹಿಳೆಗೆ ಸಾಧ್ಯವಾದಷ್ಟು ಬೇಗ ವಿಚ್ಛೇದನ ನೀಡಲು ನಾನು ನಿರ್ಧರಿಸಿದ್ದೇನೆ. ಅವಳು ನನ್ನ ಕುಟುಂಬದ ಸಂಬಂಧಗಳನ್ನು ಹಾಳು ಮಾಡಿದ್ದಾಳೆ. ಫೇಮಸ್ ಆಗಬೇಕು, ಪ್ರಭಾವಿಯಾಗಬೇಕು ಎಂಬುವುದು ಮಾತ್ರ ಅವಳ ಗುರಿ...ಈ ಕ್ಷಣ ನಾನು ತುಂಬಾ ಕೆಟ್ಟ ಮಾನಸಿಕ ಸ್ಥಿತಿಯಲ್ಲಿ ಇದ್ದೇನೆ. ಆದರೆ ಅದನ್ನು ಅವಳು ಗಮನಿಸುವುದಿಲ್ಲ. ಅವಳು ತನ್ನ ಬಗ್ಗೆ ಮಾತ್ರ ಚಿಂತಿಸುತ್ತಾಳೆ. ಇಂತಹ ಕೆಟ್ಟ ಮನಸ್ಸಿನವಳನ್ನು ನಾನು ಹಿಂದೆಂದೂ ನೋಡಿಲ್ಲ. ಅವಳನ್ನು ಮದುವೆಯಾದದ್ದು ನನ್ನ ದುರಾದೃಷ್ಟ” ಎಂದು ಪ್ರತೀಕ್ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಭಾರತೀಯ 'ಮೋಮೋಸ್' ರುಚಿಗೆ ಫಿದಾ ಆದ ಅಮೆರಿಕದ ಯುವಕ!
ಅಪರ್ಣಾ ಯಾದವ್ ಅವರ ಸಹೋದರ ಅಮನ್ ಬಿಷ್ಠ್ ಆರೋಪಗಳನ್ನು ನಿರಾಕರಿಸಿದ್ದು, ಪ್ರತೀಕ್ ಯಾದವ್ ಅವರ ಇನ್‌ಸ್ಟಾಗ್ರಾಂ ಖಾತೆಯನ್ನು “ಹ್ಯಾಕ್ ಮಾಡಲಾಗಿದೆ” ಎಂದು ಹೇಳಿದ್ದಾರೆ. ಪ್ರತೀಕ್ ಯಾದವ್ ಮತ್ತು ಅಪರ್ಣಾ ಯಾದವ್ ಅವರು 2011ರಲ್ಲಿ ವಿವಾಹವಾಗಿದ್ದು, ಅವರಿಗೆ ಒಬ್ಬ ಮಗಳು ಸಹ ಇದ್ದಾಳೆ.
ಆರಂಭದಲ್ಲಿ ಸಮಾಜವಾದಿ ಪಕ್ಷದಲ್ಲಿದ್ದ ಅಪರ್ಣಾ ಯಾದವ್, 2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಲಖನೌ ಕ್ಯಾಂಟೋನ್ಮೆಂಟ್ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ರೀಟಾ ಬಹುಗುಣಾ ಜೋಶಿ ವಿರುದ್ಧ ಸೋಲು ಅನುಭವಿಸಿದ್ದರು. 2022ರಲ್ಲಿ ಅಪರ್ಣಾ “ರಾಷ್ಟ್ರಭಕ್ತಿ”ಯನ್ನು ಉಲ್ಲೇಖಿಸಿ ಬಿಜೆಪಿಗೆ ಸೇರಿದರು. ಪ್ರಸ್ತುತ ಅವರು ಉತ್ತರ ಪ್ರದೇಶ ರಾಜ್ಯ ಮಹಿಳಾ ಆಯೋಗದ ಉಪಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ ಕುಟುಂಬದಿಂದ ಬಂದಿದ್ದರೂ ಪ್ರತೀಕ್ ಯಾದವ್ ರಾಜಕೀಯದಿಂದ ದೂರವೇ ಉಳಿದಿದ್ದಾರೆ. ಅವರು ರಿಯಲ್ ಎಸ್ಟೇಟ್ ಮತ್ತು ಫಿಟ್‌ನೆಸ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.