Shivraj Patil Death: ಮುಂಬಯಿ ದಾಳಿ, ಕೋಟು ಮತ್ತು ಶಿವರಾಜ್ ಪಾಟೀಲ್ ರಾಜೀನಾಮೆ!
2008ರ ಮುಂಬೈ ಭಯೋತ್ಪಾದಕ ದಾಳಿ ನಡೆದಾಗ ಶಿವರಜ್ ಪಾಟೀಲ್ (Shivraj Patil Death) ಅವರು ಗೃಹ ಸಚಿವರಾಗಿದ್ದರು. ಮುಂಬೈ ದಾಳಿಯ ನಂತರ ಅವರು ಪಕ್ಷದ ಒಳಗಿನಿಂದ ಹಾಗೂ ಸಾರ್ವನಿಕವಾಗಿ ಒತ್ತಡ ಬಂದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಬೇಕಾಯಿತು. ದಾಳಿಯ ಕುರಿತು ಮಾಧ್ಯಮಕ್ಕೆ ಮಾಹಿತಿ ನೀಡಲು ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಶಿವರಾಜ್ ಪಾಟೀಲ್, ದಿನಕ್ಕೆ ಮೂರು ಬಾರಿ ಕೋಟ್ ಬದಲಿಸಿಕೊಂಡು ಬಂದರು ಎಂದು ವಿಪಕ್ಷಗಳ ಟೀಕೆಗೆ ಗುರಿಯಾಗಿದ್ದರು.
ಶಿವರಾಜ್ ಪಾಟೀಲ್ -
ನವದೆಹಲಿ, ಡಿ.12: ಇಂದು ನಿಧನರಾದ ಕೇಂದ್ರದ ಮಾಜಿ ಗೃಹ ಸಚಿವ, ಹಿರಿಯ ಮುತ್ಸದ್ಧಿ ಶಿವರಾಜ್ ಪಾಟೀಲ್ (Shivraj Patil Death) ಅವರು ಮುಂಬಯಿ ಭಯೋತ್ಪಾದಕ ದಾಳಿಯ (Mumbai Attack) ಸಮಯದಲ್ಲಿ ದೇಶದ ಗೃಹ ಸಚಿವ (Home minister) ಆಗಿದ್ದರು ಎಂಬುದು ಬಹಳ ಮಂದಿಗೆ ಗೊತ್ತಿರಲಿಕ್ಕಿಲ್ಲ. ʼಮುಂಬಯಿ ದಾಳಿಯ ಸಂದರ್ಭದಲ್ಲಿ ದಿನಕ್ಕೆ ಮೂರು ಬಾರಿ ಕೋಟು ಬದಲಿಸಿಕೊಂಡು ಬಂದು ಪತ್ರಿಕಾಗೋಷ್ಠಿ ನಡೆಸಿದ್ದಾರೆʼ ಎಂದು ವಿಪಕ್ಷಗಳು ಅವರನ್ನು ಟೀಕಿಸಿದ್ದವು.
2008ರ ಮುಂಬೈ ಭಯೋತ್ಪಾದಕ ದಾಳಿ ನಡೆದಾಗ ಅವರು ಗೃಹ ಸಚಿವರಾಗಿದ್ದರು. ಮುಂಬೈ ದಾಳಿಯ ನಂತರ ಅವರು ಪಕ್ಷದ ಒಳಗಿನಿಂದ ಹಾಗೂ ಸಾರ್ವನಿಕವಾಗಿ ಒತ್ತಡ ಬಂದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಬೇಕಾಯಿತು. ಒಂದೆಡೆ ಭಯೋತ್ಪಾದಕರು ಮುಂಬಯಿಯ ನಾಲ್ಕು ತಾಣಗಳು ತಮ್ಮ ಹಿಡಿತದಲ್ಲಿಟ್ಟುಕೊಂಡು ದಾಳಿ ಮುಂದುವರಿಸಿದ್ದರು. ಇನ್ನೊಂದು ಕಡೆ ಕಮಾಂಡೋಗಳು ಈ ಉಗ್ರರನ್ನು ಹಣಿಯಲು ಸಾಹಸೀ ಪ್ರಯತ್ನ ನಡೆಸಿದ್ದರು. ಇದೇ ಸಂದರ್ಭದಲ್ಲಿ ದಾಳಿಯ ಕುರಿತು ಮಾಧ್ಯಮಕ್ಕೆ ಮಾಹಿತಿ ನೀಡಲು ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಶಿವರಾಜ್ ಪಾಟೀಲ್, ದಿನಕ್ಕೆ ಮೂರು ಬಾರಿ ಕೋಟ್ ಬದಲಿಸಿಕೊಂಡು ಬಂದು ವಿಪಕ್ಷಗಳ ಟೀಕೆಗೆ ಗುರಿಯಾಗಿದ್ದರು. ಇದಕ್ಕೂ ಮುನ್ನವೇ ಅವರು ಗೃಹ ಸಚಿವರಾಗಿ ತಮ್ಮ ಜನಪ್ರಿಯತೆ ಕಳೆದುಕೊಂಡಿದ್ದರಿಂದ, ಪಕ್ಷದ ಒಳಗಿನಿಂದಲೂ ಅವರ ರಾಜೀನಾಮೆಗೆ ಒತ್ತಡವಿತ್ತು. ಶಿವರಾಜ್ ಪಾಟೀಲ್ ರಾಜೀನಾಮೆ ಬಳಿಕ ಪಿ ಚಿದಂಬರಂ ಅವರು ಗೃಹ ಖಾತೆಯ ಜವಾಬ್ದಾರಿ ವಹಿಸಿಕೊಂಡರು.
ಲಾತೂರಿನ ಚಾಕೂರ್ ನಿವಾಸಿ ಶಿವರಾಜ್ ಪಾಟೀಲ್ ಚಾಕರ್ಕರ್, ಮರಾಠವಾಡ ಮತ್ತು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಪ್ರಭಾವಿ ಮತ್ತು ಪ್ರಮುಖ ವ್ಯಕ್ತಿಯಾಗಿದ್ದರು. ಲಾತೂರಿನ ಚಾಕೂರ್‌ನಿಂದ ಅವರು ಪ್ರಭಾವಿ ಕಾಂಗ್ರೆಸ್ ನಾಯಕರಾಗಿದ್ದರು. ಲಾತೂರ್ ಲೋಕಸಭಾ ಕ್ಷೇತ್ರದಿಂದ ಏಳು ಬಾರಿ ಗೆದ್ದಿದ್ದರು. ಲೋಕಸಭೆಯ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದರು. 2004ರಲ್ಲಿ ಲೋಕಸಭಾ ಸ್ಥಾನವನ್ನು ಕಳೆದುಕೊಂಡರೂ, ಅವರು ರಾಜ್ಯಸಭೆಯ ಮೂಲಕ ಆರಿಸಿ ಬಂದು ಗೃಹ ಸಚಿವ ಹುದ್ದೆಯನ್ನು ಸ್ವೀಕರಿಸಿದ್ದರು. ಅವರ ರಾಜಕೀಯ ಜೀವನದುದ್ದಕ್ಕೂ, ದೇಶದ ಹಲವಾರು ಪ್ರತಿಷ್ಠಿತ ಹುದ್ದೆಗಳನ್ನು ಅಲಂಕರಿಸಿದರು ಮತ್ತು ದೇಶದ ಸಾಂವಿಧಾನಿಕ ಪ್ರಕ್ರಿಯೆಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು.
ಮಾಜಿ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ನಿಧನ
ಮೃತರು ಪುತ್ರ ಶೈಲೇಶ್ ಪಾಟೀಲ್, ಸೊಸೆ ಬಿಜೆಪಿ ನಾಯಕಿ ಅರ್ಚನಾ ಮತ್ತು ಇಬ್ಬರು ಮೊಮ್ಮಕ್ಕಳನ್ನು ಅಗಲಿದ್ದಾರೆ.1991ರಿಂದ 1996ರವರೆಗೆ ಲೋಕಸಭೆಯ ಸ್ಪೀಕರ್ ಆಗಿದ್ದ ಅವರು 2004ರಿಂದ 2008ರವರೆಗೆ ಯುಪಿಎ ಸರ್ಕಾರದಲ್ಲಿ ಗೃಹಸಚಿವರಾಗಿದ್ದರು. 2010ರಿಂದ 2015ರವರೆಗೆ ಪಂಜಾಬ್ -ಚಂಡೀಗಢ ಕೇಂದ್ರ ಪ್ರದೇಶದ ಆಡಳಿತಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು.
1935ರ ಅ.12ರಂದು ಜನಿಸಿದ ಪಾಟೀಲ್, ಲಾತೂರ್‌ನ ಪುರಸಭೆಯ ಮುಖ್ಯಸ್ಥರಾಗಿ ತಮ ರಾಜಕೀಯ ಪ್ರಯಾಣ ಪ್ರಾರಂಭಿಸಿದರು ಮತ್ತು 70ರ ದಶಕದ ಆರಂಭದಲ್ಲಿ ಶಾಸಕರಾಗಿ ಆಯ್ಕೆಯಾದರು. ನಂತರ ಲಾತೂರ್ ಲೋಕಸಭಾ ಕ್ಷೇತ್ರವನ್ನು ಏಳು ಬಾರಿ ಗೆದ್ದರು. ಪಾಟೀಲ್ ಪುಸ್ತಕ ಓದುವುದು ,ಸೂಕ್ಷ್ಮ ಅಧ್ಯಯನ ಮತ್ತು ಸ್ಪಷ್ಟ ಪ್ರಸ್ತುತಿಗೆ ಹೆಸರುವಾಸಿಯಾಗಿದ್ದರು. ಮರಾಠಿ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಅವರ ಪಾಂಡಿತ್ಯ ಹೊಂದಿದ್ದರು. ಜೊತೆಗೆ ಸಾಂವಿಧಾನಿಕ ವಿಷಯಗಳ ಮೇಲಿನ ಅವರ ಅಸಾಧಾರಣ ಗ್ರಹಿಕೆಯು ಅವರನ್ನು ಮುತ್ಸದ್ಧಿಯನ್ನಾಗಿ ಮಾಡಿತ್ತು.