Shubhanshu Shukla: ಉತ್ತರ ಪ್ರದೇಶಕ್ಕೆ ಬಂದಿಳಿದ ಶುಭಾಂಶು ಶುಕ್ಲಾಗೆ ಅದ್ಧೂರಿ ಸ್ವಾಗತ
ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಮತ್ತು ಪರೀಕ್ಷಾ ಪೈಲಟ್ ಶುಭಾಂಶು ಶುಕ್ಲಾ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಭೇಟಿ ನೀಡಿದ ಬಳಿಕ ಮೊದಲ ಬಾರಿಗೆ ಸೋಮವಾರ ತವರಿಗೆ ಮರಳಿದರು. ಇವರ ಅದ್ದೂರಿ ಸ್ವಾಗತಕ್ಕೆ ಸಾವಿರಾರು ಮಂದಿ ವಿಮಾನ ನಿಲ್ದಾಣದಲ್ಲಿ ಸೇರಿದ್ದರು. ವಿಮಾನ ನಿಲ್ದಾಣದಲ್ಲಿ ಹೂವಿನ ದಳಗಳನ್ನು ಸುರಿಸಿ, ಡ್ರಮ್ ಬಾರಿಸಿ ಅವರಿಗೆ ಹೃದಯಸ್ಪರ್ಶಿ ಸ್ವಾಗತ ನೀಡಲಾಯಿತು.


ಲಖನೌ: ಬಾಹ್ಯಾಕಾಶಕ್ಕೆ (International Space Station) ತೆರಳಿದ ಬಳಿಕ ಮೊದಲ ಬಾರಿಗೆ ತನ್ನ ತವರಿಗೆ ಮರಳಿದ ಭಾರತೀಯ ಗಗನಯಾತ್ರಿ (Indian astronaut) ಶುಭಾಂಶು ಶುಕ್ಲಾ (Shubhanshu Shukla) ಅವರನ್ನು ಸೋಮವಾರ ಉತ್ತರ ಪ್ರದೇಶದ ಲಖನೌನಲ್ಲಿ (Lucknow) ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಈ ವೇಳೆ ಅವರ ತಾಯಿ ಭಾವುಕರಾಗಿ ಮಗ ಹಿಂತಿರುಗಿದ್ದಾನೆ ಎಂದು ಹೇಳಿದರು. ಅವರನ್ನು ಸ್ವಾಗತಿಸಲು ಸಾವಿರಾರು ಜನರು ಸೇರಿದ್ದರು. ಅವರಿಗೆ ವಿಮಾನ ನಿಲ್ದಾಣದಲ್ಲಿ (Airport) ಹೂವಿನ ದಳಗಳನ್ನು ಸುರಿಸಿ, ಡ್ರಮ್ ಬಾರಿಸಿ ಹೃದಯಸ್ಪರ್ಶಿ ಸ್ವಾಗತ ಕೋರಲಾಯಿತು.
ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಮತ್ತು ಪರೀಕ್ಷಾ ಪೈಲಟ್ ಆಗಿರುವ ಶುಭಾಂಶು ಶುಕ್ಲಾ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಭೇಟಿ ನೀಡಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಮೊದಲ ಗಗನಯಾತ್ರಿಯಾಗಿ ಗುರುತಿಸಿಕೊಂಡಿದ್ದಾರೆ.
ಶುಭಾಂಶು ಶುಕ್ಲಾ ತಮ್ಮ ಐತಿಹಾಸಿಕ ಬಾಹ್ಯಾಕಾಶ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದ ಅನಂತರ ಮೊದಲ ಬಾರಿಗೆ ಸೋಮವಾರ ತಮ್ಮ ಹುಟ್ಟೂರು ಲಖನೌಗೆ ಆಗಮಿಸಿದರು. ಈ ವೇಳೆ ಅವರನ್ನು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಮತ್ತು ಇತರ ಅಧಿಕಾರಿಗಳು ಆತ್ಮೀಯವಾಗಿ ಬರಮಾಡಿಕೊಂಡರು. ಅವರು ಲಖನೌನಲ್ಲಿ ಬಂದು ಇಳಿಯುತ್ತಿದ್ದಂತೆ ಅವರ ಸೇರಿದ್ದ ಜನಸಮೂಹ ಹರ್ಷೋದ್ಗಾರ ಮಾಡಿ ಸ್ವಾಗತಿಸಿತು. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
VIDEO | Lucknow: Group Captain Shubhanshu Shukla, the second Indian to travel to space and the first to visit the International Space Station (ISS), has returned to his hometown following a landmark mission aboard Axiom Mission 4.
— Press Trust of India (@PTI_News) August 25, 2025
Uttar Pradesh Deputy CM Brajesh Pathak… pic.twitter.com/H1brHdYBCa
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶುಕ್ಲಾ ಅವರ ತಾಯಿ ಆಶಾ ಶುಕ್ಲಾ, ʼʼನನ್ನ ಮಗ ಒಂದೂವರೆ ವರ್ಷಗಳ ಅನಂತರ ಮನೆಗೆ ಬರುತ್ತಿದ್ದಾನೆ. ಬಹಳ ದಿನಗಳ ಅನಂತರ ನಾನು ಅವನನ್ನು ಭೇಟಿಯಾಗುತ್ತಿದ್ದೇನೆ. ತುಂಬಾ ಸಂತೋಷ ಮತ್ತು ಉತ್ಸುಕಳಾಗಿದ್ದೇನೆ. ಇಡೀ ಕುಟುಂಬ ಅವನನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಆಗಮಿಸಿದೆʼʼ ಎಂದು ಹೇಳಿದರು.
ಸಹೋದರನ ಮರಳುವಿಕೆಯ ಬಗ್ಗೆ ಮಾತನಾಡಿದ ಶುಕ್ಲಾ ಅವರ ಸಹೋದರಿ, ನಾನು ತುಂಬಾ ಸಂತೋಷ ಮತ್ತು ಉತ್ಸುಕಳಾಗಿದ್ದೇನೆ. ಅನೇಕ ದಿನಗಳಿಂದ ಈ ಸಮಯಕ್ಕಾಗಿ ಕಾಯುತ್ತಿದ್ದೆವು. ಅಂತಿಮವಾಗಿ ಅವನು ಲಖನೌಗೆ ಆಗಮಿಸುತ್ತಿದ್ದಾನೆ. ಇದು ಅತ್ಯಂತ ದೊಡ್ಡ ಸಾಧನೆ. ಎಲ್ಲ ಮಕ್ಕಳು ಮತ್ತು ಇಡೀ ಲಖನೌ ಅವರನ್ನು ಮನೆಗೆ ಸ್ವಾಗತಿಸಲು ಕಾಯುತ್ತಿದೆ. ಇದಕ್ಕಿಂತ ಸಂತೋಷವಾದುದು ಯಾವುದೂ ಇಲ್ಲ. ಜನರು ಅವರಿಗೆ ತುಂಬಾ ಪ್ರೀತಿಯನ್ನು ತೋರಿಸುತ್ತಿದ್ದಾರೆ ಮತ್ತು ಅವರು ಮಕ್ಕಳನ್ನು ಪ್ರೇರೇಪಿಸುತ್ತಿದ್ದಾರೆʼʼ ಎಂದರು.
ಇದನ್ನೂ ಓದಿ: CM Siddaramaiah: ಎಸ್‌ಸಿ-ಎಸ್‌ಟಿ ಜನರ ಮೇಲಿನ ದೌರ್ಜನ್ಯ ಪ್ರಕರಣ; 60 ದಿನದೊಳಗೆ ಆರೋಪ ಪಟ್ಟಿ ಸಲ್ಲಿಸಲು ಸಿಎಂ ಸೂಚನೆ
ಬಿಜೆಪಿಯಿಂದ ಅದ್ಧೂರಿ ಸ್ವಾಗತ
ಬಿಜೆಪಿ ಕಾರ್ಯಕರ್ತರು ರಸ್ತೆಯ ಎರಡೂ ಬದಿಗಳಲ್ಲಿ ಸಾಲುಗಟ್ಟಿ ನಿಂತು ಹೂವಿನ ದಳಗಳ ಸುರಿಮಳೆ ಮತ್ತು ರಾಷ್ಟ್ರಧ್ವಜಗಳನ್ನು ಬೀಸುತ್ತಾ, ಶುಭಾಂಶು ಶುಕ್ಲಾ ಅವರಿಗೆ ಸ್ವಾಗತವನ್ನು ಕೋರಿದರು.