ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಉಪವಾಸ ಮುಂದುವರಿಸಿದ ಸೋನಮ್ ವಾಂಗ್ಚುಕ್: ಸರ್ಕಾರದ ಸಂಧಾನಕ್ಕೂ ಮಣಿಯದೆ ಹೋರಾಟ

Sonam Wangchuk: ನೀಟ್ ಪರೀಕ್ಷೆ ಅಕ್ರಮಗಳ ವಿರುದ್ಧ ನಡೆಯುತ್ತಿರುವ ಹೋರಾಟದ ನಡುವೆ ಸೋನಮ್ ವಾಂಗ್ಚುಕ್ ತಮ್ಮ 23ನೇ ದಿನದ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸುವುದಾಗಿ ಘೋಷಿಸಿದ್ದಾರೆ. ಯುವ ಪ್ರತಿಭಟನಾಕಾರರಿಗೆ ಸಂಸದರೊಂದಿಗೆ ಭೇಟಿಗೆ ಅವಕಾಶ ಸಿಗುವವರೆಗೆ ಉಪವಾಸ ಕೈಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಇದೇ ವೇಳೆ ಕೇಂದ್ರ ಸಚಿವ ಜೆ.ಪಿ. ನಡ್ಡಾ ಸಿಜೆಪಿ ಪ್ರತಿನಿಧಿಗಳೊಂದಿಗೆ ಸಂಧಾನ ಸಭೆ ನಡೆಸಿದ್ದು, ದೆಹಲಿ ಹೈಕೋರ್ಟ್ ವಾಂಗ್ಚುಕ್ ಅವರ ವೈದ್ಯಕೀಯ ವರದಿಗಳನ್ನು ಸಲ್ಲಿಸುವಂತೆ ಆಸ್ಪತ್ರೆಗಳಿಗೆ ಸೂಚನೆ ನೀಡಿದೆ.

ಮುಂದುವರಿದ ಸೋನಮ್ ವಾಂಗ್ಚುಕ್ ಉಪವಾಸ

ಸೋನಮ್ ವಾಂಗ್ಚುಕ್ -

Profile
Sushmitha Jain Jul 20, 2026 10:10 PM

ನವದೆಹಲಿ, ಜೂ. 20: ನೀಟ್-ಯುಜಿ (NEET-UG) ಪರೀಕ್ಷೆ ಅಕ್ರಮಗಳನ್ನು ಖಂಡಿಸಿ ಕ್ರಾಂತಿಕಾರಿ ಯುವ ಚಳವಳಿಯಾಗಿ ಮಾರ್ಪಟ್ಟಿರುವ ಕಾಕ್ರೋಚ್ ಜನತಾ ಪಾರ್ಟಿ (CJP) ಪ್ರತಿಭಟನಾಕಾರರನ್ನು ಕೇಂದ್ರ ಸರ್ಕಾರ ಭೇಟಿಯಾದ ಬೆನ್ನಲ್ಲೇ, ಹೋರಾಟಗಾರ ಸೋನಮ್ ವಾಂಗ್ಚುಕ್(Sonam Wangchuk) ತಮ್ಮ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸುವುದಾಗಿ ಹೇಳಿದ್ದಾರೆ. ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಅವರು, ಯುವ ನಾಯಕರಿಗೆ ಸಂಸತ್ತಿನಲ್ಲಿ ಸಂಸದರನ್ನು ಭೇಟಿ ಮಾಡಲು ಅವಕಾಶ ನೀಡುವವರೆಗೆ ಅಥವಾ ಸಂಸದರೇ ಆಸ್ಪತ್ರೆಗೆ ಬಂದು ತಮ್ಮನ್ನು ಭೇಟಿಯಾಗುವವರೆಗೆ ತಾವು ಮೌನವಾಗಿ ಕೂರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಆಂಗ್ಮೋ, ತಮ್ಮ ಪತಿಯ ಸಹಿ ಇರುವ ಕೈಬರಹದ ಸಂದೇಶವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು, "ನನ್ನ ಉಪವಾಸ ಸತ್ಯಾಗ್ರಹ ಇಂದು 23ನೇ ದಿನಕ್ಕೆ ಕಾಲಿಟ್ಟಿದ್ದು, ಇದು ಮುಂದುವರಿಯಲಿದೆ. ಶಾಂತಿಯುತವಾಗಿ ಪ್ರತಿಭಟಿಸುತ್ತಿರುವ ಯುವಕರ ಮೇಲೆ ಪೊಲೀಸರು ನಡೆಸುತ್ತಿರುವ ದೌರ್ಜನ್ಯವನ್ನು ಕಂಡು ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ. ಯುವ ಮುಖಂಡರಿಗೆ ಸಂಸತ್ ಭವನದಲ್ಲಿ ಸಂಸದರನ್ನು ಭೇಟಿ ಮಾಡಲು ಅನುಮತಿಸುವವರೆಗೆ ಅಥವಾ ನನ್ನನ್ನು ಆಸ್ಪತ್ರೆಯಲ್ಲೇ ಭೇಟಿಯಾಗಲು ಬಿಡುವವರೆಗೆ ನಾನು ಉಪವಾಸ ಕೈಬಿಡುವುದಿಲ್ಲ" ಎಂದು ತಿಳಿಸಿದ್ದಾರೆ. ಅಲ್ಲದೆ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸುತ್ತಿರುವ ಸಿಜೆಪಿ ಪ್ರತಿಭಟನಾಕಾರರಿಗೆ ಅವರು ಬೆಂಬಲ ಸೂಚಿಸಿದ್ದಾರೆ.

ಸಿಜೆಪಿ ಜತೆ ಕೇಂದ್ರ ಸಚಿವ ಜೆ.ಪಿ. ನಡ್ಡಾ ಸಂಧಾನ ಸಭೆ

ಕೇಂದ್ರದ ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆ ತಾರಕಕ್ಕೇರಿದ ಬೆನ್ನಲ್ಲೇ, ಕೇಂದ್ರ ಸಚಿವ ಜೆ.ಪಿ. ನಡ್ಡಾ, ಸಿಜೆಪಿ ಸದಸ್ಯರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರೊಂದಿಗೆ ಸೋಮವಾರ ಪ್ರಮುಖ ಸಂಧಾನ ಸಭೆ ನಡೆಸಿದರು. ಈ ವೇಳೆ ಸಿಜೆಪಿ ನಾಯಕರು ನೀಟ್ ಪರೀಕ್ಷೆ ಅಕ್ರಮಗಳ ಹೊಣೆಗಾರಿಕೆ ಸೇರಿ ತಮ್ಮ ಪ್ರಮುಖ ಬೇಡಿಕೆಗಳ ಪಟ್ಟಿಯನ್ನು ಸರ್ಕಾರಕ್ಕೆ ಹಸ್ತಾಂತರಿಸಿದ್ದಾರೆ.

ಕೇಂದ್ರದ ಮುಂದೆ ಸಿಜೆಪಿ ಇಟ್ಟ ಬೇಡಿಕೆಗಳಿವು

ಬೋಸ್ಟನ್ ವಿಶ್ವವಿದ್ಯಾಲಯದ ಪದವೀಧರ ಹಾಗೂ ಈ ಹಿಂದೆ ಎಎಪಿ ಸೋಷಿಯಲ್ ಮೀಡಿಯಾ ತಂಡದಲ್ಲಿ ಕೆಲಸ ಮಾಡಿದ್ದ ಅಭಿಜಿತ್ ದೀಪ್ಕೆ ಆರಂಭಿಸಿದ ಈ ಕಾಕ್ರೋಚ್ ಜನತಾ ಪಾರ್ಟಿಯು ರಾಜಕೀಯ ವಿಡಂಬನೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಆರಂಭಗೊಂಡು ಈಗ ಬೃಹತ್ ಆಂದೋಲನವಾಗಿ ಬೆಳೆದಿದೆ. ಸದ್ಯ ದೆಹಲಿ ಪೊಲೀಸರು ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ಯಾವುದೇ ವದಂತಿಗಳನ್ನು ಸಾರ್ವಜನಿಕರು ನಂಬಬಾರದು ಎಂದು ವಿನಂತಿಸಿದ್ದಾರೆ.

ವಾಂಗ್ಚುಕ್ ವೈದ್ಯಕೀಯ ವರದಿ ಕೇಳಿದ ದೆಹಲಿ ಹೈಕೋರ್ಟ್:

ಇದೇ ವೇಳೆ, ಸೋನಮ್ ವಾಂಗ್ಚುಕ್ ಅವರನ್ನು ಸಫ್ದರ್ಜಂಗ್ ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಮೇದಾಂತ ಆಸ್ಪತ್ರೆಗೆ ವರ್ಗಾಯಿಸಲು ಸಿಂಗಲ್ ಜಡ್ಜ್ ನಿರಾಕರಿಸಿದ್ದನ್ನು ಪ್ರಶ್ನಿಸಿ ಅವರ ಪತ್ನಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ನಡೆಸಿದೆ.

ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕರಿಯಾ ಅವರಿದ್ದ ಪೀಠವು, ಕೇವಲ ಪ್ಯಾಥಾಲಾಜಿ ವರದಿಗಳು ಮಾತ್ರ ರೋಗಿಯ ಸ್ಥಿತಿಯನ್ನು ನಿರ್ಧರಿಸಲು ಸಾಧ್ಯವಿಲ್ಲ, ಅದನ್ನು ಕ್ಲಿನಿಕಲ್ ಸ್ಥಿತಿಯೊಂದಿಗೆ ಪರಿಶೀಲಿಸಬೇಕು ಎಂದು ಹೇಳಿದೆ. ಅಲ್ಲದೆ, ಸಫ್ದರ್ಜಂಗ್ ಆಸ್ಪತ್ರೆ, ಏಮ್ಸ್ ಮತ್ತು ಖಾಸಗಿ ಪ್ರಯೋಗಾಲಯಗಳು ಸಿದ್ಧಪಡಿಸಿರುವ ಎಲ್ಲ ಹೆಲ್ತ್ ಬುಲೆಟಿನ್ ಹಾಗೂ ಮೆಡಿಕಲ್ ವರದಿಗಳನ್ನು ಅಫಿಡವಿಟ್ ಮೂಲಕ ಸಲ್ಲಿಸುವಂತೆ ಕೋರ್ಟ್ ಆದೇಶಿಸಿದೆ.