ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಎಲ್‌ಐಸಿ ಕ್ಲರ್ಕ್‌ನಿಂದ ಲಕ್ಷಾಂತರ ಭಕ್ತರಿರುವ ಧಾರ್ಮಿಕ ನಾಯಕನವರೆಗೆ; ಗುರು ಕಲ್ಕಿ ಭಗವಾನ್ ನಿಧನ

Guru Kalki Bhagavan: ಖ್ಯಾತ ಆಧ್ಯಾತ್ಮಿಕ ಗುರು ಕಲ್ಕಿ ಭಗವಾನ್ ಚೆನ್ನೈನಲ್ಲಿ ಸೆಪ್ಟೆಂಬರ್‌ 29ರಂದು ನಿಧನ ಹೊಂದಿದರು. ಅವರಿಗೆ 77 ವರ್ಷ ವಯಸ್ಸಾಗಿತ್ತು. ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ, ಎಲ್‌ಐಸಿ ಕ್ಲರ್ಕ್ ಆಗಿ ವೃತ್ತಿ ಜೀವನ ಆರಂಭಿಸಿದ್ದ ಅವರು ಬಳಿಕ ಪ್ರಮುಖ ಧಾರ್ಮಿಕ ನಾಯಕನಾಗಿ ಹೊರಹೊಮ್ಮಿ ಪ್ರಪಂಚದಾದ್ಯಂತ ಲಕ್ಷಾಂತರ ಭಕ್ತರನ್ನು ಅವರು ಹೊಂದಿದ್ದರು.

ಖ್ಯಾತ ಧಾರ್ಮಿಕ ನಾಯಕ ಗುರು ಕಲ್ಕಿ ಭಗವಾನ್ ನಿಧನ

ಗುರು ಕಲ್ಕಿ ಭಗವಾನ್ (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole Oct 1, 2026 12:38 AM

ಚೆನ್ನೈ, ಅ. 1: ಖ್ಯಾತ ಆಧ್ಯಾತ್ಮಿಕ ನಾಯಕ ಗುರು ಕಲ್ಕಿ ಭಗವಾನ್ (Guru Kalki Bhagavan) ಚೆನ್ನೈನಲ್ಲಿ ನಿಧನರಾಗಿದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿತ್ತು. ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ, ಎಲ್‌ಐಸಿ ಕ್ಲರ್ಕ್ ಆಗಿ ವೃತ್ತಿ ಜೀವನ ಆರಂಭಿಸಿದ್ದ ಅವರು ಬಳಿಕ ಪ್ರಮುಖ ಧಾರ್ಮಿಕ ನಾಯಕನಾಗಿ ಹೊರಹೊಮ್ಮಿ ಪ್ರಪಂಚದಾದ್ಯಂತ ಲಕ್ಷಾಂತರ ಭಕ್ತರನ್ನು ಹೊಂದಿದ್ದರು. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚೆನ್ನೈಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಆ ಮೂಲಕ ಆಧ್ಯಾತ್ಮಿಕ ಗುರುವೊಬ್ಬರ ಯುಗಾಂತ್ಯವಾದಂತಾಗಿದೆ.

ಅವರ ಮಗ ಕೃಷ್ಣಾಜಿ ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಆಂಧ್ರ ಪ್ರದೇಶದ ವರದಯ್ಯಪಾಳ್ಯಂನ ಏಕಂ ದೇವಾಲಯದಲ್ಲಿ (ಗೋಲ್ಡನ್ ಸಿಟಿ) ಅಕ್ಟೋಬರ್‌ 3ರಂದು ಅಂತ್ಯಕ್ರಿಯೆ ನಡೆಯಲಿದೆ. ಬುಧವಾರ (ಸೆಪ್ಟೆಂಬರ್‌ 30) ಬೆಳಗ್ಗೆ 11 ಗಂಟೆಗೆ ಸಾರ್ವಜನಿಕ ದರ್ಶನಕ್ಕಾಗಿ ಅವರ ಪಾರ್ಥಿವ ಶರೀರವನ್ನು ಏಕಂ ದೇವಾಲಯಕ್ಕೆ ಸ್ಥಳಾಂತರಿಸಲಾಯಿತು. ಶನಿವಾರ ಕಲ್ಕಿ ಭಗವಾನ್ ಅವರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲು ಹಾಗೂ ದೇವಾಲಯದ ಆವರಣದಲ್ಲಿ ಸಮಾಧಿಯನ್ನು ನಿರ್ಮಿಸಲು ಸಿದ್ಧತೆಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ.

ಗುರು ಕಲ್ಕಿ ಭಗವಾನ್ ನಿಧನ:



ಕಲ್ಕಿ ಭಗವಾನ್ ಹಿನ್ನೆಲೆ

1949ರ ಮಾರ್ಚ್ 7ರಂದು ತಮಿಳುನಾಡಿನ ವೆಲ್ಲೂರು ಜಿಲ್ಲೆಯ ನಾಥಂ ಗ್ರಾಮದಲ್ಲಿ ಜನಿಸಿದ ಕಲ್ಕಿ ಭಗವಾನ್ ಅವರ ಮೂಲ ಹೆಸರು ವಿಜಯ್ ಕುಮಾರ್ ನಾಯ್ಡು. ಅವರು ಚೆನ್ನೈಯ ಡಿ.ಜಿ. ವೈಷ್ಣವ್ ಕಾಲೇಜಿನಲ್ಲಿ ಶಿಕ್ಷಣವನ್ನು ಪೂರೈಸಿದರು ಮತ್ತು ಆರಂಭದಲ್ಲಿ ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದಲ್ಲಿ (LIC) ಗುಮಾಸ್ತರಾಗಿ ಕೆಲಸ ಮಾಡಿದರು. ನಂತರ ಅವರು ರಾಜೀನಾಮೆ ನೀಡಿ ಆಧ್ಯಾತ್ಮಿಕ ಪಯಣವನ್ನು ಆರಂಭಿಸಿದರು.

ರಾಜ್ಯದ ಖ್ಯಾತ ರಂಗ ನಿರ್ದೇಶಕ, ಚಿಂತಕ ಚಿದಂಬರರಾವ್ ಜಂಬೆ ನಿಧನ

ಕಲ್ಕಿ ಭಗವಾನ್ ತಮ್ಮ ಆಧ್ಯಾತ್ಮಿಕ ಬೋಧನೆಗಳು, ಧ್ಯಾನ ಮತ್ತು ಒನ್‌ನೆಸ್‌ ಬ್ಲೆಸ್ಸಿಂಗ್ (Oneness Blessing) ಮೂಲಕ ಖ್ಯಾತಿ ಗಳಿಸಿದರು. ಭಾರತ ಮತ್ತು ಇತರ ಹಲವು ದೇಶಗಳಲ್ಲಿ ಸದ್ಯ ಅವರಿಗೆ ಲಕ್ಷಾಂತರ ಭಕ್ತರಿದ್ದಾರೆ. ಆಂಧ್ರ ಪ್ರದೇಶದ ತಿರುಪತಿ ಜಿಲ್ಲೆಯ ವರದಯ್ಯಪಾಳ್ಯಂನಲ್ಲಿ ಅವರ ಆಧ್ಯಾತ್ಮಿಕ ಕೇಂದ್ರ-ಏಕಂ ಅಥವಾ ಒನ್‌ನೆಸ್‌ ಸೆಂಟರ್‌ ಇದೆ. ಅಲ್ಲಿ ಅವರು ಅವರು ತಮ್ಮ ಪತ್ನಿ ಅಮ್ಮಾ ಭಗವಾನ್ ಅವರೊಂದಿಗೆ ಅನೇಕ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು.

ಅವರ ಈ ಸಂಸ್ಥೆಯು ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಯೋಜನೆಗಳು, ಆರೋಗ್ಯ ಸೇವಾ ಕಾರ್ಯಕ್ರಮಗಳು, ನೇತ್ರ ಚಿಕಿತ್ಸಾ ಶಿಬಿರಗಳು ಮತ್ತು ಶೈಕ್ಷಣಿಕ ನೆರವಿನಂತಹ ಸಮಾಜ ಸೇವಾ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿದೆ.

1992ರಲ್ಲಿ ತಮ್ಮನ್ನು ತಾವು ಕಲ್ಕಿ ಅವತಾರವೆಂದು ಘೋಷಿಸಿಕೊಂಡು 'ಕಲ್ಕಿ ಭಗವಾನ್' ಆಗಿ ಆಧ್ಯಾತ್ಮ ಜಗತ್ತಿಗೆ ಕಾಲಿಟ್ಟರು. ಆರಂಭದಲ್ಲಿ ಅವರು ಕುಪ್ಪಂ ಕ್ಷೇತ್ರದ ಶಾಂತಿಪುರಂನಲ್ಲಿ ಆಶ್ರಮವೊಂದನ್ನು ಸ್ಥಾಪಿಸಿದರು. ನಂತರ ತಮಿಳುನಾಡಿನ ತಿರುವಳ್ಳೂರು ಸಮೀಪದ ನೇಮಂನಿಂದ ಕಲ್ಕಿ ಭಗವಾನ್ ಆಗಿ ಆಧ್ಯಾತ್ಮಿಕ ಬೋಧನೆಗಳನ್ನು ನೀಡತೊಡಗಿದ್ದರು.

ವರದಯ್ಯಪಾಳ್ಯಂ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೋವರ್ಧನಪುರಂನಲ್ಲಿ ಕಲ್ಕಿ ಗ್ರಾಮೀಣ ಅಭಿವೃದ್ಧಿ ಟ್ರಸ್ಟ್ (Kalki Rural Development Trust) ಹೆಸರಿನಲ್ಲಿ ಒಂದು ಆಶ್ರಮ ತೆರೆದರು. ಈ ಆಶ್ರಮಗಳಲ್ಲಿ, ಅವರು ದೇಶ-ವಿದೇಶಗಳ ಭಕ್ತರಿಗಾಗಿ ಧ್ಯಾನ ಮತ್ತು ಮುಕ್ತಿ ದೀಕ್ಷೆಯಂತಹ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. 2008ರಲ್ಲಿ ಒನ್‌ನೆಸ್ ಸಂಸ್ಥೆಯು ವರದಯ್ಯಪಾಳ್ಯಂನಲ್ಲಿ 200 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಏಕಂ ದೇವಾಲಯವನ್ನು ಉದ್ಘಾಟಿಸಲಾಯಿತು.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಖ್ಯಾತ ಗಾಯಕಿ ಎಸ್‌. ಜಾನಕಿ ಇನ್ನಿಲ್ಲ; ಮೈಸೂರಿನಲ್ಲಿ ನಿಧನ

ವಿವಾದ

ಇವರ ಆಧ್ಯಾತ್ಮಿಕ ಪಯಣದ ಜತೆಗೆ ವಿವಾದಗಳೂ ಸುತ್ತಿಕೊಂಡಿದ್ದವು. ಕಮರ್ಷಿಯಲೈಸೇಶನ್, ಭೂ ವಿವಾದಗಳ ಜತೆಗೆ 2019ರ ಅಕ್ಟೋಬರ್‌ನಲ್ಲಿ ಐಟಿ ಇಲಾಖೆ ದಾಳಿ ನಡೆಸಿದ್ದು ದೇಶಾದ್ಯಂತ ಸುದ್ದಿಯಾಗಿತ್ತು. ಈ ವೇಳೆ ಭಾರಿ ಪ್ರಮಾಣದ ನಗದು, ವಿದೇಶಿ ಕರೆನ್ಸಿ ಮತ್ತು ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಅಲ್ಲದೆ, ಘೋಷಿಸದ ಆದಾಯ ಮತ್ತು ವಿದೇಶಿ ಹೂಡಿಕೆಗಳನ್ನು ಪತ್ತೆಹಚ್ಚಲಾಗಿದೆ ಎನ್ನುವ ಆರೋಪವೂ ಕೇಳಿ ಬಂದಿತ್ತು.

ದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.