ನವದೆಹಲಿ, ಜ. 19: ತಮಿಳುನಾಡಿನ ಕರೂರ್‌ನಲ್ಲಿ ಕಳೆದ ವರ್ಷ ನಡೆದ ಕಾಲ್ತುಳಿತದಲ್ಲಿ (Stampede case in Karur) 41 ಜನರು ಸಾವನ್ನಪ್ಪಿದ ರ‍್ಯಾಲಿಯಲ್ಲಿ ಎಲ್ಲ ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸಿದ್ದೇನೆ ಎಂದು ಕಾಲಿವುಡ್ ನಟ-ರಾಜಕಾರಣಿ ವಿಜಯ್ (Vijay) ಕೇಂದ್ರ ತನಿಖಾ ದಳ (CBI)ಕ್ಕೆ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಸಿಬಿಐ ಪ್ರಧಾನ ಕಚೇರಿಯಲ್ಲಿದ್ದರು ಟಿವಿಕೆ ಮುಖ್ಯಸ್ಥ ವಿಜಯ್ ಅವರನ್ನು ಸೋಮವಾರ (ಜನವರಿ19) ಬೆಳಗ್ಗೆ ಎರಡನೇ ಸುತ್ತಿನ ವಿಚಾರಣೆ ನಡೆಸಲಾಯಿತು.
ಮೂಲಗಳ ಪ್ರಕಾರ, ಕಾರ್ಯಕ್ರಮದ ಸಮಯದಲ್ಲಿ ಪೊಲೀಸರು ಸೂಚಿಸಿದ ಎಲ್ಲ ಮಾರ್ಗಸೂಚಿಗಳನ್ನು ಪಾಲಿಸಿದ್ದೇನೆ ಎಂದು ವಿಜಯ್ ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ. ಸೆಪ್ಟೆಂಬರ್ 27ರಂದು ವಿಜಯ್ ಭಾಗವಹಿಸಿದ್ದ ಕರೂರ್ ರ‍್ಯಾಲಿಗೆ ಭಾರಿ ಸಂಖ್ಯೆಯ ಜನರು ಆಗಮಿಸಿದ್ದರು. ವಿಜಯ್ ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದ್ದರು. ಇದು ಮತ್ತಷ್ಟು ಜನದಟ್ಟಣೆಗೆ ಕಾರಣವಾಯಿತು. ನೂಕುನುಗ್ಗಲು ಆರಂಭವಾದ ನಂತರವೂ ಅವರು ತಮ್ಮ ಭಾಷಣವನ್ನು ಮುಂದುವರೆಸಿದರು ಎಂದು ಆರೋಪಿಸಲಾಗಿದೆ. ಅದಾಗ್ಯೂ ವಿಜಯ್ ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸರ ಅಸಮರ್ಪಕ ನಿಯೋಜನೆ ಕಾರಣ ಎಂದು ಟೀಕಿಸಿದ್ದಾರೆ.
ಕರೂರ್ ಕಾಲ್ತುಳಿತ ಪ್ರಕರಣ; ಟಿವಿಕೆ ಮುಖ್ಯಸ್ಥ, ನಟ ವಿಜಯ್‌ಗೆ ಸಿಬಿಐ ಸಮನ್ಸ್
ಜನವರಿ 12ರಂದು ಸಿಬಿಐ ಪ್ರಧಾನ ಕಚೇರಿಯಲ್ಲಿ ಆರು ಗಂಟೆಗಳಿಗೂ ಹೆಚ್ಚು ಕಾಲ ನಟನನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ನಂತರ ಜನವರಿ 13ರಂದು ಅವರಿಗೆ ಸಮನ್ಸ್ ಜಾರಿ ಮಾಡಲಾಗಿತ್ತು. ಆದರೆ ಪೊಂಗಲ್ ಹಬ್ಬವನ್ನು ಉಲ್ಲೇಖಿಸಿ ದಿನಾಂಕ ಬದಲಾವಣೆಗೆ ಅವರು ಮನವಿ ಮಾಡಿದ್ದರು.
ಪ್ರಕರಣದಲ್ಲಿ ಇದುವರೆಗೆ ಯಾರಿಗೂ ಕ್ಲೀನ್ ಚಿಟ್ ನೀಡಲಾಗಿಲ್ಲ ಎಂದು ಸಿಬಿಐ ಮೂಲಗಳು ಸ್ಪಷ್ಟಪಡಿಸಿವೆ. ಈ ಘಟನೆಯು ರಾಷ್ಟ್ರೀಯ ಆತ್ಮಸಾಕ್ಷಿಯನ್ನು ಅಲುಗಾಡಿಸಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಲ್ಲದೆ, ಘಟನೆಗೆ ಸಂಬಂಧಿಸಿದಂತೆ ನ್ಯಾಯಯುತ ತನಿಖೆ ಅಗತ್ಯವಿದೆ ಎಂದು ಹೇಳಿದ ನಂತರ ಕೇಂದ್ರ ಸಂಸ್ಥೆಯು ಕಾಲ್ತುಳಿತ ದುರಂತದ ತನಿಖೆಯನ್ನು ಕೈಗೆತ್ತಿಕೊಂಡಿತು.
ತಮಿಳುನಾಡು ಕಾಲ್ತುಳಿತ: ಕಂಬನಿ ಮಿಡಿದ ಕಮಲ್ ಹಾಸನ್, ರಜನಿಕಾಂತ್
ವಿಚಾರಣೆ ನಡೆಯುತ್ತಿರುವಾಗ ವಿಜಯ್ ಅಭಿಮಾನಿಗಳು ಸಿಬಿಐ ಪ್ರಧಾನ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದರು. ನೀವು ದಳಪತಿ ವಿಜಯ್ ಅವರನ್ನು ಮಾತ್ರ ದೂಷಿಸಲು ಸಾಧ್ಯವಿಲ್ಲ. ಪೊಲೀಸ್ ಪಡೆಯ ಸಂಖ್ಯೆ ತುಂಬಾ ಕಡಿಮೆಯಿತ್ತು ಎಂದು ಅಭಿಮಾನಿಯೊಬ್ಬರು ಸಮರ್ಥಿಸಿಕೊಂಡಿದ್ದಾರೆ.
ರ‍್ಯಾಲಿಯಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ನೆರೆದಿದ್ದರೂ, ಪೊಲೀಸ್ ಅಧಿಕಾರಿಗಳು ಇರಲಿಲ್ಲ. ಹೀಗಾಗಿ ಈ ದುರ್ಘಟನೆ ಸಂಭವಿಸಿತು. ಜನಸಂದಣಿಯೊಳಗೆ ಎಷ್ಟು ಜನರು ನುಸುಳಿದರು ಎಂದು ಯಾರಿಗೂ ತಿಳಿದಿಲ್ಲ. ನುಸುಳುಕೋರರೇ ಕಾಲ್ತುಳಿತಕ್ಕೆ ಕಾರಣಕರ್ತರು ಎಂದು ಮತ್ತೊಬ್ಬ ಅಭಿಮಾನಿ ಆರೋಪಿಸಿದ್ದಾರೆ.