French Open 2026: ಫೈನಲ್ನಲ್ಲಿ ಆನ್ ಸೆ ಯಂಗ್ ಎದುರು ಸೋತ ಪಿವಿ ಸಿಂಧೂ!
2026ರ ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ಫೈನಲ್ನಲ್ಲಿ ಭಾರತದ ಪಿ.ವಿ. ಸಿಂಧೂ, ದಕ್ಷಿಣ ಕೊರಿಯಾದ ಆನ್ ಸೆ ಯಂಗ್ ವಿರುದ್ಧ ಸೋಲು ಕಂಡರು. ಮೊದಲ ಗೇಮ್ ಗೆದ್ದರೂ, ನಂತರದ ಎರಡು ಗೇಮ್ಗಳಲ್ಲಿ ಸೋತು ಭಾರತೀಯ ಆಟಗಾರ್ತಿ ( 21-16, 11-21, 12-21) ರನ್ನರ್ ಅಪ್ಗೆ ತೃಪ್ತಿಪಟ್ಟರು.
ಫ್ರೆಂಚ್ ಓಪನ್ ಫೈನಲ್ನಲ್ಲಿ ಸೋತ ಪಿವಿ ಸಿಂಧೂ. -
ಪ್ಯಾರಿಸ್: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧೂ (PV Sindhu) ಅವರು 2026ರ ಫ್ರೆಂಚ್ ಓಪನ್ (French Open 2026) ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್ ಫೈನಲ್ನಲ್ಲಿ ದಕ್ಷಿಣ ಕೊರಿಯಾದ ವಿಶ್ವದ ನಂ.1 ಆಟಗಾರ್ತಿ ಆನ್ ಸೆ ಯಂಗ್ ವಿರುದ್ಧ ಸೋಲು ಅನುಭವಿಸಿದ್ದಾರೆ. ಆರಂಭಿಕ ಗೇಮ್ ಗೆದ್ದು ಉತ್ತಮ ಪ್ರದರ್ಶನ ನೀಡಿದರೂ, ನಂತರದ ಎರಡು ಗೇಮ್ಗಳಲ್ಲಿ ಪ್ರಾಬಲ್ಯ ಸಾಧಿಸಲು ವಿಫಲರಾದ ಸಿಂಧೂ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟರು.
ಭಾನುವಾರ ಪ್ಯಾರಿಸ್ನ ಅರೇನಾ ಗ್ರ್ಯಾಂಡ್ ಪ್ಯಾರಿಸ್ನಲ್ಲಿ ನಡೆದ ಫೈನಲ್ನಲ್ಲಿ ಸಿಂಧೂ 21-16, 11-21, 12-21 ಅಂತರದಿಂದ ಆನ್ ಸೆ ಯಂಗ್ ವಿರುದ್ಧ ಸೋತರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಪಂದ್ಯದಲ್ಲಿ ಸಿಂಧೂ ಮೊದಲ ಗೇಮ್ನಲ್ಲಿ ಅದ್ಭುತ ಆಟ ಪ್ರದರ್ಶಿಸಿ ಗೆಲುವಿನ ಭರವಸೆ ಮೂಡಿಸಿದ್ದರು. ಆದರೆ, ಎರಡನೇ ಗೇಮ್ನಲ್ಲಿ ತಿರುಗೇಟು ನೀಡಿದ ಆನ್ ಸೆ ಯಂಗ್ ಪಂದ್ಯವನ್ನು ಸಮಬಲಕ್ಕೆ ತಂದರು. ನಿರ್ಣಾಯಕ ಮೂರನೇ ಗೇಮ್ನಲ್ಲಿಯೂ ತಮ್ಮ ವೇಗ, ನಿಖರ ಹೊಡೆತಗಳು ಮತ್ತು ಬಲಿಷ್ಠ ಸ್ಮ್ಯಾಶ್ಗಳ ಮೂಲಕ ಸಿಂಧೂ ಅವರನ್ನು ಹಿಂದಿಕ್ಕಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಪಂದ್ಯದ ಆರಂಭದಿಂದಲೇ ಸಿಂಧೂ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದರು. ನೆಟ್ ಬಳಿಯ ಚುರುಕಿನ ಹೊಡೆತಗಳು, ಕೋರ್ಟ್ನ ಖಾಲಿ ಜಾಗಗಳಿಗೆ ಶಟಲ್ಕಾಕ್ ಕಳುಹಿಸುವ ತಂತ್ರ ಮತ್ತು ತಮ್ಮ ಎತ್ತರದ ಅನುಕೂಲವನ್ನು ಸಮರ್ಥವಾಗಿ ಬಳಸಿಕೊಂಡರು. ಸ್ಕೋರ್ 11-11ರಲ್ಲಿ ಸಮಬಲಗೊಂಡ ಬಳಿಕ ಸಿಂಧೂ ವೇಗ ಹೆಚ್ಚಿಸಿದರು. ಆನ್ ಸೆ ಯಂಗ್ ಅವರನ್ನು ನಿರಂತರವಾಗಿ ಓಡಿಸುವ ಮೂಲಕ ಒತ್ತಡ ಹೇರಿದರು. ಎದುರಾಳಿಯಿಂದ ಕೆಲವು ತಪ್ಪುಗಳನ್ನು ಮಾಡಿಸುವಲ್ಲಿ ಯಶಸ್ವಿಯಾದ ಸಿಂಧೂ, ಅಂತಿಮವಾಗಿ ಮೊದಲ ಗೇಮ್ ಅನ್ನು 21-16ರಿಂದ ಗೆದ್ದುಕೊಂಡರು. ಇದು ಆನ್ ಸೆ ಯಂಗ್ ವಿರುದ್ಧದ ಹಿಂದಿನ ಮುಖಾಮುಖಿಗಳಲ್ಲಿ ಸಿಂಧು ಒಂದು ಗೇಮ್ ಗೆದ್ದ ಎರಡನೇ ಸಂದರ್ಭವಾಗಿತ್ತು. ಇದರಿಂದ ಪಂದ್ಯದಲ್ಲಿ ಅಚ್ಚರಿಯ ಫಲಿತಾಂಶ ದಾಖಲಾಗುವ ನಿರೀಕ್ಷೆ ಮೂಡಿತ್ತು.
ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ದಾಖಲೆಯ ಪದಕ ಗೆದ್ದ ಭಾರತೀಯ ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ
ಎರಡನೇ ಗೇಮ್ನಲ್ಲಿ ಆನ್ ಸೆ ಯಂಗ್ ತಿರುಗೇಟು
ಮೊದಲ ಗೇಮ್ ಸೋತ ಬಳಿಕ ಆನ್ ಸೆ ಯಂಗ್ ತಮ್ಮ ಆಟದ ತಂತ್ರವನ್ನು ಬದಲಿಸಿಕೊಂಡರು. ನೆಟ್ ಬಳಿಯ ಹೊಡೆತಗಳಿಗೆ ಹೆಚ್ಚು ಎಚ್ಚರಿಕೆಯಿಂದ ಪ್ರತಿಕ್ರಿಯಿಸಿದ ಅವರು, ಸಿಂಧೂ ಅವರ ಚಲನವಲನಕ್ಕೆ ಅಡ್ಡಿಯಾಗುವಂತೆ ಬಲಿಷ್ಠ ಸ್ಮ್ಯಾಶ್ಗಳನ್ನು ಪ್ರಯೋಗಿಸಿದರು.
ಎರಡನೇ ಗೇಮ್ನ ವಿರಾಮದ ವೇಳೆಗೆ 11-7 ಮುನ್ನಡೆ ಸಾಧಿಸಿದ್ದ ಆನ್ ಸೆ ಯಂಗ್, ನಂತರವೂ ತಮ್ಮ ಹಿಡಿತವನ್ನು ಮುಂದುವರಿಸಿದರು. ಸಿಂಧೂ ಅಂಕಗಳನ್ನು ಗಳಿಸಲು ಪ್ರಯತ್ನಿಸಿದರೂ, ದಕ್ಷಿಣ ಕೊರಿಯಾದ ಆಟಗಾರ್ತಿಯ ವೇಗ ಮತ್ತು ನಿಖರತೆಯನ್ನು ಎದುರಿಸುವುದು ಕಷ್ಟವಾಯಿತು. ಅಂತಿಮವಾಗಿ ಆನ್ ಸೆ ಯಂಗ್ 21-11 ಅಂತರದಲ್ಲಿ ಎರಡನೇ ಗೇಮ್ ಗೆದ್ದು ಪಂದ್ಯವನ್ನು ನಿರ್ಣಾಯಕ ಹಂತಕ್ಕೆ ಕೊಂಡೊಯ್ದರು.
ನಿರ್ಣಾಯಕ ಗೇಮ್ನಲ್ಲಿ ಸಿಂಧೂ ಹೋರಾಟ ವ್ಯರ್ಥ
ಮೂರನೇ ಗೇಮ್ನ ಆರಂಭದಲ್ಲಿ ಸಿಂದೂ ಉತ್ತಮ ಹೋರಾಟ ನೀಡಿದರು. ಒಂದು ಹಂತದಲ್ಲಿ 8-5 ಮುನ್ನಡೆಯನ್ನೂ ಪಡೆದಿದ್ದರು. ಆದರೆ, ಆನ್ ಸೆ ಯಂಗ್ ಮತ್ತೆ ಪಂದ್ಯದ ನಿಯಂತ್ರಣ ಪಡೆದುಕೊಂಡರು. ಸತತ ಅಂಕಗಳನ್ನು ಗಳಿಸಿದ ಅವರು ಸಿಂಧೂ ಮೇಲಿನ ಒತ್ತಡ ಹೆಚ್ಚಿಸಿದರು. ವಿಶೇಷವಾಗಿ ದೇಹದತ್ತ ಗುರಿಯಿಟ್ಟು ಹೊಡೆದ ಸ್ಮ್ಯಾಶ್ಗಳು ಮತ್ತು ವೇಗದ ರ್ಯಾಲಿಗಳು ಸಿಂಧು ಅವರ ಆಟಕ್ಕೆ ತಡೆಯಾದವು. ಕೊನೆಗೆ ಆನ್ ಸೆ ಯಂಗ್ 21-12ರಿಂದ ಮೂರನೇ ಗೇಮ್ ಗೆದ್ದು ಪ್ರಶಸ್ತಿ ಎತ್ತಿಹಿಡಿದರು.
🚨 SINDHU FINISHES RUNNER-UP AT FRENCH OPEN (BWF SUPER 750)🥈 India’s PV Sindhu goes down fighting against reigning Olympic & World Champion An Se Young in the Final, l 21-16, 11-21, 12-21. A fantastic run from the Indian shuttler! WELL PLAYED, CHAMP! 👏❤️ https://t.co/0BdDjisOen
— The Khel India (@TheKhelIndia) October 25, 2026
ಆನ್ ಸೆ ಯಂಗ್ ವಿರುದ್ಧ ಸಿಂಧುಗೆ ಸತತ 11ನೇ ಸೋಲು
ಈ ಸೋಲಿನೊಂದಿಗೆ ಆನ್ ಸೆ ಯಂಗ್ ವಿರುದ್ಧ ಭಾರತೀಯ ಆಟಗಾರ್ತಿಯ ಸೋಲಿನ ಸರಣಿ 11 ಪಂದ್ಯಗಳಿಗೆ ವಿಸ್ತರಿಸಿದೆ. ಈ ಇಬ್ಬರು ಆಟಗಾರ್ತಿಯರ ನಡುವಿನ ಮುಖಾಮುಖಿಯಲ್ಲಿ ಸಿಂಧೂ ಇನ್ನೂ ಗೆಲುವು ಸಾಧಿಸಿಲ್ಲ. ವಿಶ್ವದ ನಂ.11 ಆಟಗಾರ್ತಿಯಾಗಿರುವ ಸಿಂಧೂ, ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಫೈನಲ್ ತಲುಪಿದ್ದರು. ಜುಲೈನಲ್ಲಿ ನಡೆದ ಜಪಾನ್ ಓಪನ್ನಲ್ಲಿ ಪ್ರಶಸ್ತಿ ಗೆದ್ದಿದ್ದ ಅವರು, ಫ್ರೆಂಚ್ ಓಪನ್ ಮೂಲಕ ಈ ವರ್ಷದ ಎರಡನೇ ಪ್ರಶಸ್ತಿ ಗೆಲ್ಲುವ ಗುರಿ ಹೊಂದಿದ್ದರು. ಆದರೆ, ಆನ್ ಸೆ ಯಂಗ್ ಅವರ ಸವಾಲನ್ನು ಮೀರಿ ನಿಲ್ಲಲು ಸಾಧ್ಯವಾಗಲಿಲ್ಲ.