ವಿಬಿ ಜಿ ರಾಮ್ ಜಿ ಕಾಯ್ದೆಗೆ ತೀವ್ರ ವಿರೋಧ; ಜನವರಿ 8ರಿಂದ ಮನರೇಗಾ ಬಚಾವೋ ಅಭಿಯಾನ ಘೋಷಿಸಿದ ಕಾಂಗ್ರೆಸ್
MNREGA Bachao Abhiyan: ವಿಬಿ ಜಿ ರಾಮ್ ಜಿ ಕಾಯ್ದೆಗೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಜನವರಿ 8ರಿಂದ ಮನರೇಗಾ ಬಚಾವೋ ಅಭಿಯಾನವನ್ನು ದೇಶಾದ್ಯಂತ ಆರಂಭಿಸುವುದಾಗಿ ಘೋಷಿಸಿದೆ. ಈ ಕಾಯ್ದೆ ಗ್ರಾಮೀಣ ನಾಗರಿಕರ ಉದ್ಯೋಗ ಹಕ್ಕನ್ನು ದುರ್ಬಲಗೊಳಿಸುತ್ತದೆ ಮತ್ತು ಮನರೇಗಾ ಕಾಯ್ದೆಯನ್ನು ಹಾಳು ಮಾಡುತ್ತದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕಾಂಗ್ರೆಸ್ ಪ್ರತಿಭಟನೆ -
ನವದೆಹಲಿ, ಜ. 3: ಜನವರಿ 8ರಿಂದ ಜಿ ರಾಮ್‌ಜಿ (G-RAMG) ಕಾಯ್ದೆಯ ವಿರುದ್ಧ ರಾಷ್ಟ್ರವ್ಯಾಪಿ ಆಂದೋಲನವನ್ನು ಕಾಂಗ್ರೆಸ್ ಶನಿವಾರ (ಜನವರಿ 3) ಘೋಷಿಸಿದೆ. ಈ ಕಾಯ್ದೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MNREGA)ಯನ್ನು ಮೌನವಾಗಿ ಕೊಲ್ಲುತ್ತದೆ ಮತ್ತು ಗ್ರಾಮೀಣ ನಾಗರಿಕರಿಗೆ ಖಾತರಿ ಪಡಿಸಲಾದ ಕೆಲಸ ಮಾಡುವ ಕಾನೂನುಬದ್ಧ ಹಕ್ಕನ್ನು ದುರ್ಬಲಗೊಳಿಸುತ್ತದೆ ಎಂದು ಕಾಂಗ್ರೆಸ್ (Congress) ಆರೋಪಿಸಿದೆ.
ನವದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ಹಿರಿಯ ನಾಯಕ ಜೈರಾಮ್ ರಮೇಶ್ ಈ ಘೋಷಣೆ ಹೊರಡಿಸಿದರು.
ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ವೇಣುಗೋಪಾಲ್, ಮನರೇಗಾ ಬಚಾವೊ ಅಭಿಯಾನ ಎಂಬ ಹೆಸರಿನಲ್ಲಿ ದೇಶಾದ್ಯಂತ ಅಭಿಯಾನ ನಡೆಸಲಾಗುವುದು. ಈ ಮೂಲಕ ಮನರೇಗಾವನ್ನು ರಕ್ಷಿಸಲು ಕಾಂಗ್ರೆಸ್ ಒಂದು ವಿವರವಾದ ಕಾರ್ಯಯೋಜನೆಯನ್ನು ಅಂತಿಮಗೊಳಿಸಿದೆ ಎಂದು ಹೇಳಿದರು. ಜಿ ರಾಮ್ ಜಿ (G-RAMG) ಎಂಬುದು ಭಾರತ ಸರ್ಕಾರ ಜಾರಿಗೆ ತಂದಿರುವ ಕಾನೂನು. ಈ ಕಾಯ್ದೆಯ ವಿರುದ್ಧ ಮುಂದಿನ ಹಂತದ ಕ್ರಮಗಳ ಕುರಿತು ಗಂಭೀರ ಚರ್ಚೆ ನಡೆಸಲಾಗಿದೆ. ಮನರೇಗಾವನ್ನು ಉಳಿಸಲು ದೇಶಾದ್ಯಂತ ಅಭಿಯಾನವನ್ನು ಆರಂಭಿಸುವಂತೆ ಕಾಂಗ್ರೆಸ್ ರಾಷ್ಟ್ರೀಯ ಸಮಿತಿ ನಿರ್ಧರಿಸಿದೆ ಎಂದು ಹೇಳಿದರು.
ಮಹಾತ್ಮಾ ನನ್ನ ಕುಟುಂಬದವರಲ್ಲ...ನರೇಗಾ ಕಾನೂನು ದುರ್ಬಲಗೊಳಿಸಲಿದೆ ಮಸೂದೆ: ಪ್ರಿಯಾಂಕಾ ಗಾಂಧಿ
ಹೊಸ ಕಾನೂನನ್ನು ಹಾನಿಕಾರಕವೆಂದು ಕರೆದ ವೇಣುಗೋಪಾಲ್, ಇದು ಮನರೇಗಾ ನಾಶ ಮಾಡುತ್ತದೆ. ಮನರೇಗಾದಿಂದಾಗಿ ಹಸಿವು ಕಡಿಮೆಯಾಯಿತು. ವಲಸೆ ಕಡಿಮೆಯಾಯಿತು ಮತ್ತು ರಸ್ತೆಗಳು, ಕಾಲುವೆಗಳು ಮತ್ತು ಅಣೆಕಟ್ಟುಗಳು ಸೃಷ್ಟಿಯಾದವು. ಕೋವಿಡ್ ಅವಧಿಯಲ್ಲಿ ಮತ್ತು ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ, ಮನರೇಗಾ ಈ ದೇಶದ ಜನರಿಗೆ ರಕ್ಷಣಾ ಜಾಲವಾಗಿ ಕಾರ್ಯನಿರ್ವಹಿಸಿತು ಎಂದು ಹೇಳಿದರು.
ಜಿ ರಾಮ್ ಜಿ ಅಡಿಯಲ್ಲಿ ಉದ್ಯೋಗವು ಇನ್ಮುಂದೆ ಖಾತರಿಪಡಿಸಿದ ಹಕ್ಕಾಗಿಲ್ಲ. ಇದು ಸರ್ಕಾರದಿಂದ ಅಲ್ಲ, ಪಂಚಾಯತ್‌ಗಳ ಮೂಲಕ ಮಾತ್ರ ಕೆಲಸ ನೀಡಲಾಗುತ್ತದೆ. ಮನರೇಗಾ ಬೇಡಿಕೆ ಆಧಾರಿತ ಯೋಜನೆಯಾಗಿದ್ದರೆ, ಜಿ ರಾಮ್ ಜಿನಲ್ಲಿ ಬಜೆಟ್ ಮಿತಿಗಳನ್ನು ಸೇರಿಸಲಾಗಿದೆ. ಇದು ಉದ್ಯೋಗದ ಕಾನೂನುಬದ್ಧ ಹಕ್ಕನ್ನು ಮೌನವಾಗಿ ಕೊಲ್ಲುತ್ತದೆ ಎಂದು ವೇಣುಗೋಪಾಲ್ ಹೇಳಿದರು.
ಮನರೇಗಾ ಒಂದು ವಿಕೇಂದ್ರೀಕೃತ ಯೋಜನೆಯಾಗಿತ್ತು. ಈಗ ಎಲ್ಲವೂ ದೆಹಲಿಯಲ್ಲಿ ನಿರ್ಧರಿಸಲ್ಪಡುತ್ತದೆ. ಇದರಿಂದ ಹಳ್ಳಿಗಳು ತೊಂದರೆ ಅನುಭವಿಸುತ್ತವೆ. ಅನೇಕ ಪಂಚಾಯತ್‌ಗಳಿಗೆ ಶೂನ್ಯ ಅನುದಾನವೇ ಲಭ್ಯವಾಗಲಿದೆ ಎಂದು ಅವರು ಹೇಳಿದರು.
ವಿಬಿ ಜಿ ರಾಮ್ ಜಿ ಮಸೂದೆಗೆ ರಾಷ್ಟ್ರಪತಿ ಅಂಕಿತ; ಹಿಂದಿನ ನರೇಗಾ ಯೋಜನೆಗಿಂತ ಹೇಗೆ ಭಿನ್ನ?
ಈ ಕಾಯ್ದೆ ಸಂವಿಧಾನದ ವಿಧಿಗಳನ್ನು ಉಲ್ಲಂಘಿಸುತ್ತಿದೆ ಎಂದು ಜೈರಾಮ್ ರಮೇಶ್ ಆರೋಪಿಸಿದರು. ಸಂವಿಧಾನದ 258ನೇ ವಿಧಿಯ ಪ್ರಕಾರ, ಈ ಸೂತ್ರವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವಿನ ಸಮಾಲೋಚನೆಯ ನಂತರ ನಿರ್ಧರಿಸಬೇಕು. ಆದರೆ ಅವರು ಅದನ್ನು ಮಾಡಿಲ್ಲ. ತಮ್ಮದೇ ಆದ ನಿರ್ಧಾರ ತೆಗೆದುಕೊಂಡಿದ್ದಾರೆ. ಇದು ಸಂವಿಧಾನ ಉಲ್ಲಂಘನೆ ಎಂದು ಅವರು ಹೇಳಿದರು.
ಮಾರ್ಗಸೂಚಿಯನ್ನು ಪ್ರಕಟಿಸಿದ ಅವರು, ಈ ಅಭಿಯಾನವು ಜನವರಿ 8ರಂದು ಪ್ರಾರಂಭವಾಗಿ 45 ದಿನಗಳವರೆಗೆ ನಡೆಯಲಿದೆ ಎಂದು ಹೇಳಿದರು. ಇದು ರಾಷ್ಟ್ರೀಯ ಚಳುವಳಿಯಾಗಲಿದೆ. ಅಗತ್ಯವಿದ್ದರೆ ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಅವರು ಹೇಳಿದರು.