ನವದೆಹಲಿ, ಆ. 10: ಕಣ್ಣಿನ ಚಿಕಿತ್ಸೆಗಾಗಿ ತೃಣಮೂಲ ಕಾಂಗ್ರೆಸ್ (TMC) ಪ್ರಧಾನ ಕಾರ್ಯದರ್ಶಿ ಮತ್ತು ಲೋಕಸಭಾ ಸಂಸದ ಅಭಿಷೇಕ್ ಬ್ಯಾನರ್ಜಿ ಅವರಿಗೆ ಮೂರು ವಾರಗಳ ಕಾಲ ವಿದೇಶ ಪ್ರವಾಸ ಮಾಡಲು ಸುಪ್ರೀಂ ಕೋರ್ಟ್ (Supreme Court) ಅನುಮತಿ ನೀಡಿದೆ. ವಿದೇಶ ಪ್ರಯಾಣಕ್ಕೆ ವಿಧಿಸಲಾಗಿದ್ದ ನಿರ್ಬಂಧವನ್ನು ಸಡಿಲಿಸಲು ನಿರಾಕರಿಸಿದ್ದ ಕೋಲ್ಕತ್ತಾ ಹೈಕೋರ್ಟ್‌ನ (Calcutta High Court) ಆದೇಶವನ್ನು ರದ್ದುಗೊಳಿಸಿ, ಸುಪ್ರೀಂ ಕೋರ್ಟ್ ಈ ಅನುಮತಿ ನೀಡಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನ ಅವರಿದ್ದ ಪೀಠವು ಈ ಆದೇಶವನ್ನು ಅಂಗೀಕರಿಸಿದೆ. ವಿದೇಶ ಪ್ರವಾಸಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ್ದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಆಗಸ್ಟ್ 5ರಂದು ಪ್ರಶ್ನಿಸಲಾದ ಆದೇಶವನ್ನು ನೀಡುವ ಸಂದರ್ಭದಲ್ಲಿ, ಕೋಲ್ಕತಾದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗಾಗಿ ರಚಿಸಲಾಗಿದ್ದ ವೈದ್ಯಕೀಯ ಮಂಡಳಿಯ ಮುಂದೆ ಹಾಜರಾಗಲು ಸಂಸದ ಅಭಿಷೇಕ್ ಬ್ಯಾನರ್ಜಿ ಸಿದ್ಧರಿರಲಿಲ್ಲ ಎನ್ನುವುದನ್ನು ಹೈಕೋರ್ಟ್ ಗಮನಿಸಿತ್ತು.
ಅಭಿಷೇಕ್ ಬ್ಯಾನರ್ಜಿ ವಿರುದ್ಧ ಹೇಳಿಕೆ: ಬಂಡಾಯ ಶಾಸಕ ಮದನ್ ಮಿತ್ರಾಗೆ ಕಾನೂನು ಸಂಕಷ್ಟ
ಬ್ಯಾನರ್ಜಿ ವೈದ್ಯಕೀಯ ಮಂಡಳಿಯ ಮುಂದೆ ಹಾಜರಾಗಿದ್ದರೆ, ತಜ್ಞರು ನೀಡಿದ ಅಭಿಪ್ರಾಯದ ಆಧಾರದ ಮೇಲೆ, ಅವರು ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲು ಸಾಧ್ಯವಾಗುತ್ತಿತ್ತು ಎಂದು ಹೇಳಿತ್ತು.
ಆಗಸ್ಟ್ 3ರಂದು ವಿದೇಶ ಪ್ರವಾಸಕ್ಕೆ ಅನುಮತಿ ಕೋರಿ ಅಭಿಷೇಕ್ ಬ್ಯಾನರ್ಜಿ ಸಲ್ಲಿಸಿದ್ದ ಅರ್ಜಿಯನ್ನು ಒಂದು ವಾರದೊಳಗೆ ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಈ ವೇಳೆ ತನಿಖೆಗೆ ಸಹಕರಿಸುವಂತೆ ಮತ್ತು ಈ ಹಿಂದೆ ಆದೇಶಿಸಿದಂತೆ ನ್ಯಾಯಾಲಯದ ಅನುಮತಿಯಿಲ್ಲದೆ ವಿದೇಶ ಪ್ರವಾಸ ಮಾಡಬಾರದು ಎಂದು ಅಭಿಷೇಕ್ ಬ್ಯಾನರ್ಜಿಗೆ ಹೈಕೋರ್ಟ್ ನಿರ್ದೇಶಿಸಿತ್ತು.
ಹೈಕೋರ್ಟ್ ಬ್ಯಾನರ್ಜಿ ಅವರಿಗೆ ನೀಡಿದ್ದ ರಕ್ಷಣೆಯನ್ನು ಅಕ್ಟೋಬರ್ 6ರವರೆಗೆ ಅಥವಾ ಮುಂದಿನ ಆದೇಶದವರೆಗೆ ವಿಸ್ತರಿಸಿತ್ತು. ತಾತ್ಕಾಲಿಕ ರಕ್ಷಣೆ ನೀಡುವಾಗ ವಿಧಿಸಿದ್ದ ಷರತ್ತುಗಳನ್ನು ಮಾರ್ಪಡಿಸುವಂತೆ ಅವರು ಸಲ್ಲಿಸಿದ್ದ ಅರ್ಜಿಯನ್ನು ಆಗಸ್ಟ್‌ನಲ್ಲಿ ವಿಚಾರಣೆ ನಡೆಸುವುದಾಗಿ ಹೈಕೋರ್ಟ್ ತಿಳಿಸಿತ್ತು. ಆದರೆ, ವಿಚಾರಣೆಗೆ ಯಾವುದೇ ನಿರ್ದಿಷ್ಟ ದಿನಾಂಕವನ್ನು ನಿಗದಿಪಡಿಸಿರಲಿಲ್ಲ. ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಬ್ಯಾನರ್ಜಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಇದೀಗ ಅವರಿಗೆ ರಿಲೀಫ್ ಸಿಕ್ಕಿದೆ.