ವಿಮೆ ಇಲ್ಲದ ವಾಹನಗಳಿಗೆ ಇಂಧನ ಪೂರೈಕೆಗೆ ಬ್ರೇಕ್? ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ
ದೇಶದಲ್ಲಿ ಸುಮಾರು 56% ವಾಹನಗಳು ಮಾನ್ಯ ವಿಮೆ ಇಲ್ಲದೆ ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ, 'ವಿಮೆ ಇಲ್ಲದಿದ್ದರೆ ಇಂಧನವಿಲ್ಲ' ಎಂಬ ಪೈಲಟ್ ಯೋಜನೆ ರೂಪಿಸಲು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಹೊಸ ಕಾರುಗಳಿಗೆ 4 ವರ್ಷ ಹಾಗೂ ದ್ವಿಚಕ್ರ ವಾಹನಗಳಿಗೆ 6 ವರ್ಷಗಳ ಕಡ್ಡಾಯ ತೃತೀಯ ವ್ಯಕ್ತಿ ವಿಮೆ ಜಾರಿಗೊಳಿಸುವಂತೆ ನ್ಯಾಯಾಲಯ ಆದೇಶಿಸಿದೆ.
ವಿಮೆ ಇಲ್ಲದ ವಾಹನಗಳಿಗೆ ಇಂಧನ ಪೂರೈಕೆಗೆ ಬ್ರೇಕ್ -
ನವದೆಹಲಿ, ಆಗಸ್ಟ್ 5: ದೇಶದಲ್ಲಿ ಮಾನ್ಯ ಮೋಟಾರ್ ವಿಮೆ ಇಲ್ಲದೆ ಸಂಚರಿಸುತ್ತಿರುವ ವಾಹನಗಳ ಸಂಖ್ಯೆ ಆತಂಕಕಾರಿ ಮಟ್ಟದಲ್ಲಿರುವ ಹಿನ್ನೆಲೆಯಲ್ಲಿ, 'ವಿಮೆ ಇಲ್ಲದಿದ್ದರೆ ಇಂಧನವಿಲ್ಲ' (No Insurance, No Fuel) ಎಂಬ ಪೈಲಟ್ ಯೋಜನೆಯನ್ನು ರೂಪಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಮಹತ್ವದ ನಿರ್ದೇಶನ ನೀಡಿದೆ. ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಹಾಗೂ ಆಗಸ್ಟಿನ್ ಜಾರ್ಜ್ ಮಸಿಹ್ ಅವರಿದ್ದ ಪೀಠ, ರಸ್ತೆ ಅಪಘಾತಗಳಲ್ಲಿ ಸಂತ್ರಸ್ತರಿಗೆ ತ್ವರಿತ ಪರಿಹಾರ ದೊರಕಿಸುವುದು ಮತ್ತು ವಾಹನ ಮಾಲೀಕರು ಸಮಯಕ್ಕೆ ಸರಿಯಾಗಿ ವಿಮೆ ನವೀಕರಿಸುವುದನ್ನು ಖಚಿತಪಡಿಸಿಕೊಳ್ಳುವುದು ಈ ಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದೆ.
ಸಂಸತ್ತಿನ ಸ್ಥಾಯಿ ಸಮಿತಿಯ ವರದಿ ಪ್ರಕಾರ, ದೇಶದಲ್ಲಿರುವ ಸುಮಾರು 30 ಕೋಟಿ ವಾಹನಗಳಲ್ಲಿ 16.54 ಕೋಟಿ ವಾಹನಗಳು (ಸುಮಾರು 56%) ಮಾನ್ಯ ವಿಮೆ ಇಲ್ಲದೆ ಸಂಚರಿಸುತ್ತಿವೆ. ಇದು ಸಂವಿಧಾನದ ವಿಧಿ 21ರಡಿ ಇರುವ ಜೀವಿಸುವ ಹಕ್ಕಿಗೆ ಸಂಬಂಧಿಸಿದ ಗಂಭೀರ ವಿಷಯ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಹೊಸ ವಾಹನಗಳ ವಿಮೆ ಅವಧಿ ವಿಸ್ತರಣೆ
ಸುಪ್ರೀಂ ಕೋರ್ಟ್ 2018ರಲ್ಲಿ ನೀಡಿದ್ದ ಆದೇಶದಂತೆ, ಹೊಸ ಕಾರುಗಳಿಗೆ 3 ವರ್ಷ ಮತ್ತು ದ್ವಿಚಕ್ರ ವಾಹನಗಳಿಗೆ 5 ವರ್ಷಗಳ ತೃತೀಯ ವ್ಯಕ್ತಿ (Third-Party) ವಿಮೆ ಕಡ್ಡಾಯವಾಗಿತ್ತು. ಇದೀಗ ಆ ಅವಧಿಯನ್ನು ಮತ್ತೊಂದು ವರ್ಷ ಹೆಚ್ಚಿಸಲಾಗಿದ್ದು, ಕಾರುಗಳಿಗೆ – 4 ವರ್ಷಗಳ ಕಡ್ಡಾಯ ತೃತೀಯ ವ್ಯಕ್ತಿ ವಿಮೆ ಹಾಗೂ ದ್ವಿಚಕ್ರ ವಾಹನಗಳಿಗೆ – 6 ವರ್ಷಗಳ ಕಡ್ಡಾಯ ತೃತೀಯ ವ್ಯಕ್ತಿ ವಿಮೆ ಜಾರಿಗೆ ಬರಲಿದೆ.
'ವಿಮೆ ಇಲ್ಲದಿದ್ದರೆ ಇಂಧನವಿಲ್ಲ' ಯೋಜನೆ
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಹಾಗೂ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ಜಂಟಿಯಾಗಿ ಪೈಲಟ್ ಯೋಜನೆ ರೂಪಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಈ ಯೋಜನೆಯಡಿ,
* ಮಾನ್ಯ ವಿಮೆ ಇರುವ ವಾಹನಗಳಿಗೆ ಮಾತ್ರ ಪೆಟ್ರೋಲ್ ಅಥವಾ ಡೀಸೆಲ್ ನೀಡುವ ವ್ಯವಸ್ಥೆ ರೂಪಿಸುವ ಸಾಧ್ಯತೆಯನ್ನು ಪರಿಶೀಲಿಸಬೇಕು.
* ಇದರಿಂದ ವಿಮೆ ನವೀಕರಣ ಪ್ರಮಾಣ ಹೆಚ್ಚುವ ನಿರೀಕ್ಷೆಯಿದೆ.
* ವಿಮೆ ಇಲ್ಲದ ವಾಹನಗಳನ್ನು ಸುಲಭವಾಗಿ ಗುರುತಿಸಿ ಕಾನೂನು ಕ್ರಮ ಕೈಗೊಳ್ಳಲು ಅನುಕೂಲವಾಗಲಿದೆ.
ಅಪಘಾತಕ್ಕೀಡಾದ ವಾಹನ ವಿಮೆ ಪಡೆದಿದ್ದ ವಿಮಾ ಕಂಪನಿಯನ್ನು ಹೊಣೆಗಾರನ್ನಾಗಿ ಮಾಡಲಾಗುವುದಿಲ್ಲ
ಅನುಸರಣೆಗಾಗಿ ಪ್ರಮುಖ ನಿರ್ದೇಶನಗಳು
ನ್ಯಾಯಾಲಯವು ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ಹಲವು ಕ್ರಮಗಳನ್ನು ಸೂಚಿಸಿದೆ.
* ಹೆದ್ದಾರಿಗಳಲ್ಲಿರುವ Automatic Number Plate Recognition (ANPR) ಕ್ಯಾಮೆರಾಗಳನ್ನು VAHAN ಪೋರ್ಟಲ್ ಹಾಗೂ ವಿಮೆ ಡೇಟಾಬೇಸ್‌ಗೆ ಸಂಪರ್ಕಿಸಬೇಕು.
* ಪೆಟ್ರೋಲ್ ಬಂಕ್‌ಗಳಲ್ಲಿ ವಾಹನದ ವಿಮೆ ಸ್ಥಿತಿಯನ್ನು ಪರಿಶೀಲಿಸುವ ವ್ಯವಸ್ಥೆ ಅಭಿವೃದ್ಧಿಪಡಿಸಬೇಕು.
* ಪೊಲೀಸ್ ಸಿಬ್ಬಂದಿಗೆ ಸ್ಥಳದಲ್ಲೇ ವಾಹನದ ವಿಮೆ ಪರಿಶೀಲಿಸಿ ದಂಡ ವಿಧಿಸಲು ಮೊಬೈಲ್ ಆಪ್ ಅಥವಾ ಡಿಜಿಟಲ್ ಸಾಧನಗಳನ್ನು ಒದಗಿಸಬೇಕು.
ವಿಮೆ ವ್ಯವಸ್ಥೆ ಸರಳೀಕರಣ
ವಾಹನ ಮಾಲೀಕರಿಗೆ ಸುಲಭವಾಗುವಂತೆ ನಾಲ್ಕು ಹಂತದ ವಿಮೆ ವ್ಯವಸ್ಥೆಯನ್ನು ಜಾರಿಗೆ ತರಲು ನ್ಯಾಯಾಲಯ ಒಪ್ಪಿಗೆ ನೀಡಿದೆ.
- ಕಡ್ಡಾಯ ತೃತೀಯ ವ್ಯಕ್ತಿ ವಿಮೆ.
- ಪ್ರಯಾಣಿಕರು ಹಾಗೂ ಪಿಲಿಯನ್ ಸವಾರರಿಗೆ ಐಚ್ಛಿಕ ಕಾನೂನುಬದ್ಧ ಹೊಣೆಗಾರಿಕೆ ವಿಮೆ.
- ಮಾಲೀಕ, ಚಾಲಕ ಮತ್ತು ಪ್ರಯಾಣಿಕರಿಗೆ ವೈಯಕ್ತಿಕ ಅಪಘಾತ ವಿಮೆ.
- ವಾಹನದ ಹಾನಿಗೆ ಐಚ್ಛಿಕ ಸಮಗ್ರ (Comprehensive) ವಿಮೆ.
ವಿಮೆ ಕಂಪನಿಗಳು ಗ್ರಾಹಕರಿಗೆ ಸರಳ ಭಾಷೆಯಲ್ಲಿ ಮಾಹಿತಿಯನ್ನು ನೀಡಬೇಕು ಹಾಗೂ ಅಗತ್ಯವಿರುವ ಹೆಚ್ಚುವರಿ ವಿಮೆಗಳನ್ನು ಆಯ್ಕೆ ಮಾಡುವ ಅವಕಾಶ ಕಲ್ಪಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ಪ್ರಕರಣದ ಹಿನ್ನೆಲೆ
ಈ ಆದೇಶ ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡುವ ಪ್ರಕರಣದ ವಿಚಾರಣೆ ವೇಳೆ ಹೊರಬಿದ್ದಿದೆ. ತೆಲಂಗಾಣ ಹೈಕೋರ್ಟ್ ನೀಡಿದ್ದ ₹10,00,500 ಪರಿಹಾರ ಹಾಗೂ 7.5% ಬಡ್ಡಿ ನೀಡುವ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಸಮಗ್ರ ಮೋಟಾರ್ ವಿಮೆ (Comprehensive Policy) ವಾಹನದ ಮಾಲೀಕರಿಗೂ ಅನ್ವಯಿಸುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಈ ಸಂಬಂಧ ಕೇಂದ್ರ ಸರ್ಕಾರ, MoRTH, IRDAI ಸೇರಿದಂತೆ ಸಂಬಂಧಿತ ಎಲ್ಲಾ ಸಂಸ್ಥೆಗಳಿಗೆ ಆಗಸ್ಟ್ 14ರೊಳಗೆ ಅನುಸರಣೆ ವರದಿ ಸಲ್ಲಿಸಲು ಸೂಚಿಸಲಾಗಿದ್ದು, ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್ 18ರಂದು ನಡೆಯಲಿದೆ.