ಅರಾವಳಿ ಬೆಟ್ಟ; ತನ್ನದೇ ತೀರ್ಪಿಗೆ ತಡೆ ನೀಡಿದ ಸುಪ್ರೀಂ ಕೋರ್ಟ್: ಪರಿಶೀಲನೆಗೆ ಸಮಿತಿ ರಚನೆ
ಅರಾವಳಿ ಬೆಟ್ಟಗಳ ಕುರಿತು ತಾನೇ ನೀಡಿರುವ ಆದೇಶವನ್ನು ತಡೆ ಹಿಡಿದ ಸುಪ್ರೀಂ ಕೋರ್ಟ್ ಇದರ ಪರಿಶೀಲನೆಗೆ ತಜ್ಞರ ಸಮಿತಿಯನ್ನು ಸ್ಥಾಪಿಸಿದೆ. ಅರಾವಳಿ ಬೆಟ್ಟಗಳ ಕುರಿತು ಹಿಂದಿನ ಸಮಿತಿ ಮಾಡಿರುವ ಶಿಫಾರಸುಗಳ ಪರಿಣಾಮವನ್ನು ತಜ್ಞರ ಸಮಿತಿ ಪರಿಶೀಲಿಸುವಂತೆ ಸೂಚಿಸಿದೆ.
(ಸಂಗ್ರಹ ಚಿತ್ರ) -
ನವದೆಹಲಿ: ಅರಾವಳಿ ಬೆಟ್ಟಗಳ (Aravalli Hills) ಕುರಿತು ತಾನೇ ನೀಡಿರುವ ಆದೇಶಕ್ಕೆ (Aravalli Hills order) ತಡೆ ನೀಡಿರುವ ಸುಪ್ರೀಂ ಕೋರ್ಟ್ (Supreme Court) ಹಿಂದಿನ ಸಮಿತಿ ನೀಡಿರುವ ಶಿಫಾರಸುಗಳ ಪರಿಶೀಲನೆಗೆ ತಜ್ಞರ ಸಮಿತಿಯನ್ನು ಸ್ಥಾಪಿಸಿದೆ. ಹಿಂದಿನ ಸಮಿತಿಯು ಹೆಚ್ಚಾಗಿ ಅಧಿಕಾರಿಗಳನ್ನು ಒಳಗೊಂಡಿತ್ತು. ಇದರಲ್ಲಿ ಅನುಮೋದಿಸಿರುವ ವ್ಯಾಖ್ಯಾನಗಳಿಗೆ ಕೆಲವು ಸ್ಪಷ್ಟೀಕರಣ ಅಗತ್ಯವಿದೆ ಎಂದು ಸೋಮವಾರ ಸುಪ್ರೀಂ ಕೋರ್ಟ್ ಸೋಮವಾರ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಕಳೆದ ನವೆಂಬರ್ ತಿಂಗಳಲ್ಲಿ ಅಂಗೀಕರಿಸಲಾದ ತೀರ್ಪನ್ನು ತಡೆ ಹಿಡಿದಿರುವುದಾಗಿ ಹೇಳಿದೆ.
ಅರಾವಳಿ ಬೆಟ್ಟಗಳ ಶ್ರೇಣಿಯ ಕುರಿತು ಈ ಹಿಂದೆ ರಚಿಸಿದ್ದ ಸಮಿತಿ ಮಾಡಿರುವ ಶಿಫಾರಸುಗಳು ಪರಿಸರದ ಮೇಲೆ ಬೀರಿರುವ ಪರಿಣಾಮವನ್ನು ತಜ್ಞರ ಸಮಿತಿಯು ಪರಿಶೀಲಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ, ಎ.ಜಿ. ಮಸಿಹ್ ಅವರನ್ನೊಳಗೊಂಡ ಪೀಠವು ಆದೇಶಿಸಿದೆ.
ಅರಾವಳಿ ಬೆಟ್ಟಗಳಲ್ಲಿ ಗಣಿಗಾರಿಕೆಯನ್ನು ನಿಯಂತ್ರಿಸುವ ಸಲುವಾಗಿ ರಚಿಸಲಾದ ಸಮಿತಿಯ ಶಿಫಾರಸುಗಳ ಆಧಾರದಲ್ಲಿ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ಈ ಕುರಿತು ಕೇಂದ್ರ ಸರ್ಕಾರ ಮತ್ತು ಅರಾವಳಿ ವ್ಯಾಪ್ತಿಯ ನಾಲ್ಕು ರಾಜ್ಯಗಳಾದ ರಾಜಸ್ಥಾನ, ಗುಜರಾತ್, ದೆಹಲಿ ಮತ್ತು ಹರಿಯಾಣಗಳಿಗೆ ನೊಟೀಸ್ ಜಾರಿ ಮಾಡಿ ಪ್ರತಿಕ್ರಿಯೆ ನೀಡುವಂತೆ ತಿಳಿಸಿದೆ.
ಪರಿಸರ ರಕ್ಷಣೆಯನ್ನು ಉಲ್ಲೇಖಿಸಿರುವ ಸುಪ್ರೀಂ ಕೋರ್ಟ್, ಹಿಂದಿನ ಸಮಿತಿಯ ವರದಿ ಅಥವಾ ಅರಾವಳಿ ಶ್ರೇಣಿಯ ಕುರಿತು ನ್ಯಾಯಾಲಯದ ತೀರ್ಪನ್ನು ಜಾರಿಗೆ ತರುವ ಮೊದಲು ತಜ್ಞರ ಪರಿಶೀಲನೆ ಅಗತ್ಯ ಎಂದು ಹೇಳಿದೆ.
Aravalli Definition Suo Moto Case: The Supreme Court has “put in abeyance” its earlier decision (issued on November 20) to accept the Central Environment Ministry’s definition of Aravalli Hills and Aravalli Range.
— ANI (@ANI) December 29, 2025
Acceptance of the said definition by the top court in November… pic.twitter.com/JfDTRPle8J
ಅರಾವಳಿ ಶ್ರೇಣಿಯ ವ್ಯಾಪ್ತಿ ಸೀಮಿತಗೊಳಿಸಲು ಪ್ರಯತ್ನಿಸಿದ ಶಿಫಾರಸುಗಳಿಂದ ಉಂಟಾಗುವ ಪರಿಣಾಮಗಳ ಕುರಿತು ನ್ಯಾಯಾಲಯಕ್ಕೆ ಮಾರ್ಗದರ್ಶನ ಬೇಕಾಗಿದೆ. ಇದಕ್ಕಾಗಿ ವಸ್ತುನಿಷ್ಠವಾದ ಪರಿಶೀಲನೆ ಅಗತ್ಯವಿದೆ ಎಂದಿರುವ ನ್ಯಾಯಪೀಠ ಗಣಿಗಾರಿಕೆಗೆ ಅರ್ಹವಾದ ಅರಾವಳಿ ಅಲ್ಲದ ಪ್ರದೇಶಗಳ ವ್ಯಾಪ್ತಿ ವಿಸ್ತರಿಸಲಾಗಿದೆಯೋ ಮತ್ತು ಬೆಟ್ಟದ ರಚನೆಗಳ ನಡುವಿನ ಭೌಗೋಳಿಕ ಅಂತರದಲ್ಲಿ ನಿಯಂತ್ರಿತ ಗಣಿಗಾರಿಕೆಯನ್ನು ಅನುಮತಿಸಬೇಕೋ ಬೇಡವೋ ಎನ್ನುವ ಕುರಿತು ಆತಂಕವಿದೆ. ಹೀಗಾಗಿ ಇದನ್ನು ಪರಿಸರ ಮಾನದಂಡಗಳ ಅಡಿಯಲ್ಲಿ ನಿರ್ವಹಿಸಬೇಕಿದೆ ಎಂದು ಹೇಳಿದೆ.
ಉತ್ತರಪ್ರದೇಶದಲ್ಲಿ 2.8 ಕೋಟಿ, ಅಸ್ಸಾಂನಲ್ಲಿ 10.56 ಲಕ್ಷ ಹೆಸರು ಮತದಾರರ ಪಟ್ಟಿಯಿಂದ ಅಳಿಸಿದ ಎಸ್ಐಆರ್
ಅರಾವಳಿ ಶ್ರೇಣಿಯ ಪರಿಸರವನ್ನು ಕಾಪಾಡಿಕೊಳ್ಳಲು ತಜ್ಞರು ಮಾಡಿರುವ ಶಿಫಾರಸುಗಳಲ್ಲಿರುವ ನ್ಯೂನತೆಗಳನ್ನು ಪರಿಹರಿಸಲು ಸಮಗ್ರ ಮೌಲ್ಯಮಾಪನ ಅಗತ್ಯವಾಗಿದೆ. ಹೀಗಾಗಿ ತಜ್ಞ ಸಮಿತಿಯು ಸಲ್ಲಿಸಿದ ವರದಿಯನ್ನು ವಿಶ್ಲೇಷಿಸಲು ಉನ್ನತ ತಜ್ಞರ ಸಮಿತಿ ರಚನೆಗೆ ಪ್ರಸ್ತಾಪಿಸಲಾಗಿದೆ. ಇದರಲ್ಲಿ ವೈಜ್ಞಾನಿಕ ಮತ್ತು ಪರಿಸರ ಪರಿಣತರು ಭವಿಷ್ಯದ ನಿರ್ಧಾರಗಳಿಗೆ ಮಾರ್ಗದರ್ಶನ ನೀಡಬೇಕು ಎಂದು ನ್ಯಾಯಪೀಠ ತಿಳಿಸಿದೆ.
ಅರಾವಳಿ ಬೆಟ್ಟದ ವ್ಯಾಪ್ತಿಯಲ್ಲಿ ನಡೆಯುವ ಗಣಿಗಾರಿಕೆಗೆ ಸಂಬಂಧಿಸಿ ಉಂಟಾಗಿರುವ ವಿವಾದ ಮತ್ತು ಪ್ರತಿಭಟನೆಗಳ ನಡುವೆ ಸುಪ್ರೀಂ ಕೋರ್ಟ್ ಈ ಕುರಿತಾದ ಮುಂದಿನ ವಿಚಾರಣೆಯನ್ನು ಜನವರಿ 21ಕ್ಕೆ ಮುಂದೂಡಿದೆ.