Tahawwur Rana: ಭಾರತಕ್ಕೆ ರಾಣಾನನ್ನು ಹಸ್ತಾಂತರ ಮಾಡ್ತಿರೋ ಫೊಟೋ ರಿಲೀಸ್
Tahawwur Rana: ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ತಹಾವ್ವುರ್ ರಾಣಾನನ್ನು ಭಾರತಕ್ಕೆ ಕರೆ ತಂದ ಕೆಲವು ಗಂಟೆಗಳ ಬಳಿಕ ಅಮೆರಿಕಾದ ಅಧಿಕಾರಿಗಳು ಆತನನ್ನು ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸುವ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಇದೀಗ ಈ ಫೊಟೋ ಫುಲ್ ವೈರಲ್ ಆಗುತ್ತಿದೆ.


ನವದೆಹಲಿ: ಮುಂಬೈ ಭಯೋತ್ಪಾದಕ ದಾಳಿಯ (Mumbai 26/11 terror attack) ಮಾಸ್ಟರ್ ಮೈಂಡ್ ತಹಾವ್ವುರ್ ರಾಣಾನನ್ನು(Tahawwur Rana) ಭಾರತಕ್ಕೆ ಕರೆ ತಂದ ಕೆಲವು ಗಂಟೆಗಳ ಬಳಿಕ ಅಮೆರಿಕದ (America) ಅಧಿಕಾರಿಗಳು ಆತನನ್ನು ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸುವ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಲಾಸ್ ಏಂಜಲೀಸ್‌ನ ಮೆಟ್ರೋಪಾಲಿಟನ್ ಬಂಧನ ಕೇಂದ್ರದಲ್ಲಿದ್ದ ತಹಾವ್ವುರ್ ರಾಣಾನನ್ನು ಭಾರತಕ್ಕೆ ಒಪ್ಪಿಸದಂತೆ ಸಲ್ಲಿಸಿದ್ದ ಪರಿಶೀಲನಾ ಅರ್ಜಿಯನ್ನು ಅಮೆರಿಕ ಸುಪ್ರೀಂ ಕೋರ್ಟ್ ತಿರಸ್ಕರಿಸಿದ ಬಳಿಕ ಆತನನ್ನು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI) ಅಧಿಕಾರಿಗಳು ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳಿಗೆ ಹಸ್ತಾಂತರಿಸಿತ್ತು. ಆ ಬಳಿಕ ಶೀಘ್ರದಲ್ಲೇ ಅಧಿಕಾರಿಗಳ ತಂಡ ಆತನನ್ನು ಕರೆದುಕೊಂಡು ಭಾರತಕ್ಕೆ ಬಂದಿದೆ.
2008ರ ನವೆಂಬರ್ ತಿಂಗಳಲ್ಲಿ ನಡೆದ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಆರೋಪ ಹೊತ್ತಿರುವ ತಹವ್ವುರ್ ರಾಣಾನನ್ನು ಭಾರತಕ್ಕೆ ಕರೆತಂದ ಬಳಿಕ ಅಮೆರಿಕದ ಮಾರ್ಷಲ್‌ಗಳು ಆತನನ್ನು ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸುತ್ತಿರುವ ಹೊಸ ಚಿತ್ರಗಳನ್ನು ಬಿಡುಗಡೆ ಮಾಡಿದರು. ಏಪ್ರಿಲ್ 9 ರಂದು ಸುರಕ್ಷಿತ ಸ್ಥಳದಲ್ಲಿ ವಿದೇಶಾಂಗ ಸಚಿವಾಲಯದ ಪ್ರತಿನಿಧಿಗಳ ವಶಕ್ಕೆ ರಾಣಾನನ್ನು ಒಪ್ಪಿಸುತ್ತಿರುವಾಗ ರಾಣಾ ಜೈಲು ನೀಡಿದ ಕಡುಗೆಂಪು ಬಣ್ಣದ ವಸ್ತ್ರ ಧರಿಸಿದ್ದ. ಅಮೆರಿಕದ ಮಾರ್ಷಲ್‌ಗಳಿಂದ ಸುತ್ತುವರೆದಿರುವ ರಾಣಾನ ಈ ಫೋಟೋಗಳನ್ನು ಅಮೆರಿಕದ ನ್ಯಾಯ ಇಲಾಖೆ ಬಿಡುಗಡೆ ಮಾಡಿದೆ.

ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಲಷ್ಕರ್-ಎ-ತೊಯ್ಬಾದಿಂದ (ಎಲ್‌ಇಟಿ) ತರಬೇತಿ ಪಡೆದ ಹತ್ತು ಬಂದೂಕುಧಾರಿಗಳು 2008ರ ನವೆಂಬರ್ 26 ಮತ್ತು 29 ರ ನಡುವೆ ಮುಂಬೈನ ತಾಜ್ ಹೊಟೇಲ್ ನಲ್ಲಿ ದಾಳಿ ನಡೆಸಿತ್ತು. ಇದು ದೇಶಾದ್ಯಂತ ಸಾಕಷ್ಟು ಆತಂಕವನ್ನು ಉಂಟು ಮಾಡಿತ್ತು. ಈ ದಾಳಿಯಲ್ಲಿ ರಕ್ಷಣಾ ಸಿಬ್ಬಂದಿ ಸೇರಿದಂತೆ ನೂರಾರು ಮಂದಿ ಸಾವನ್ನಪ್ಪಿದ್ದರು. ಈ ದಾಳಿಗೆ ಬಾಲ್ಯದ ಸ್ನೇಹಿತ ಡೇವಿಡ್ ಕೋಲ್ಮನ್ ಹೆಡ್ಲಿಗೆ ಮಾರ್ಗದರ್ಶನ ಮಾಡುವಲ್ಲಿ ರಾಣಾ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಡೇವಿಡ್ ಕೋಲ್ಮನ್ ಹೆಡ್ಲಿ ನಕಲಿ ದಾಖಲೆಗಳ ಮೂಲಕ ಭಾರತಕ್ಕೆ ಮುಕ್ತವಾಗಿ ಪ್ರಯಾಣಿಸಲು ರಾಣಾ ಅನುವು ಮಾಡಿಕೊಟ್ಟಿದ್ದು, ಇದಕ್ಕಾಗಿ ತನ್ನ ಚಿಕಾಗೋ ಮೂಲದ ವಲಸೆ ವ್ಯವಹಾರ ಕಚೇರಿಯನ್ನು ಬಳಸಿಕೊಂಡಿದ್ದ ಎನ್ನಲಾಗಿದೆ. ಪಾಕಿಸ್ತಾನದಲ್ಲಿ ಎಲ್‌ಇಟಿಯಿಂದ ಮಿಲಿಟರಿ ತರಬೇತಿ ಪಡೆದಿದ್ದ ಹೆಡ್ಲಿ ಭಾರತದಲ್ಲಿ ದಾಳಿ ಮಾಡಲು ಸ್ಥಳ ಪತ್ತೆ ಹಚ್ಚಿ ಅದಕ್ಕೆ ಸಂಬಂಧಿಸಿ ವಿಡಿಯೋ ದಾಖಲೆಗಳನ್ನು ಎಲ್‌ಇಟಿ ಕಾರ್ಯಕರ್ತರೊಂದಿಗೆ ಹಂಚಿಕೊಂಡಿದ್ದ.
Tahawwur Rana has been brought from California by US Marshals and handed over to NIA team!#TahawwurHussainRana #NIA #USMarshals #MumbaiAttack #Canada #WaqfBill #Mumbai2611 pic.twitter.com/QvIEi40vOS
— North East West South (@prawasitv) April 11, 2025
ಮುಂಬೈ ದಾಳಿಯ ಅನಂತರ ಯುಎಸ್ ನ್ಯಾಯ ಇಲಾಖೆಯ ಅಧಿಕೃತ ಹೇಳಿಕೆಯ ಪ್ರಕಾರ, ಘಟನೆಯ ಬಳಿಕ ಭಯೋತ್ಪಾದಕರ ದಾಳಿಗೆ ಬಲಿಯಾದವರು ಇದಕ್ಕೆ ಅರ್ಹರು ಎಂದು ರಾಣಾ ಹೇಳಿ, ದಾಳಿ ಮಾಡಿದವರನ್ನು ಹೊಗಳಿದ್ದರು. ಅವರು ಪಾಕಿಸ್ತಾನದ ಅತ್ಯುನ್ನತ ಮಿಲಿಟರಿ ಗೌರವವಾದ ನಿಶಾನ್-ಎ-ಹೈದರ್‌ಗೆ ಅರ್ಹರು ಎಂದಿರುವುದು ಅವರ ಫೋನ್ ಸಂಭಾಷಣೆಯಲ್ಲಿ ಸಿಕ್ಕಿತ್ತು.
ಈ ಸುದ್ದಿಯನ್ನೂ ಓದಿ: Narendra Modi: ತಹವ್ವೂರ್ ರಾಣಾ ಭಾರತಕ್ಕೆ ಹಸ್ತಾಂತರ; 14 ವರ್ಷಗಳ ಹಿಂದೆ ಮೋದಿ ಮಾಡಿದ್ದ ಟ್ವೀಟ್ ವೈರಲ್
ಬಳಿಕ 2009ರಲ್ಲಿ ಪ್ರವಾದಿ ಮುಹಮ್ಮದ್ ಅವರ ವ್ಯಂಗ್ಯಚಿತ್ರಗಳನ್ನು ಪ್ರಕಟಿಸಿದ ಡ್ಯಾನಿಶ್ ಪತ್ರಿಕಾ ಕಚೇರಿ ಮೇಲೆ ಎಲ್‌ಇಟಿ ನೆರವಿನಿಂದ ಸಂಚು ರೂಪಿಸಿದ ಆರೋಪದ ಮೇಲೆ ರಾಣಾನನ್ನು ಬಂಧಿಸಲಾಯಿತು. 2013 ರಲ್ಲಿ ಯುಎಸ್ ನ್ಯಾಯಾಲಯವು ಎಲ್‌ಇಟಿಯನ್ನು ಬೆಂಬಲಿಸಲು ಸಂಚು ರೂಪಿಸಿದ್ದಕ್ಕಾಗಿ ರಾಣಾನನ್ನು ದೋಷಿ ಎಂದು ನಿರ್ಣಯಿಸಿ ಆತನಿಗೆ 14 ವರ್ಷಗಳ ಫೆಡರಲ್ ಜೈಲು ಶಿಕ್ಷೆ ವಿಧಿಸಿತು. ಡೇವಿಡ್ ಹೆಡ್ಲಿ ಮುಂಬೈ ದಾಳಿ ಸೇರಿದಂತೆ 12 ಭಯೋತ್ಪಾದನಾ ಆರೋಪಗಳಲ್ಲಿ ತಪ್ಪೊಪ್ಪಿಕೊಂಡಿದ್ದರಿಂದ ಆತನಿಗೆ 35 ವರ್ಷಗಳ ಶಿಕ್ಷೆ ವಿಧಿಸಲಾಯಿತು.
2020ರಲ್ಲಿ ಭಾರತವು ರಾಣಾನನ್ನು ವಿಚಾರಣೆಗಾಗಿ ಹಸ್ತಾಂತರಿಸುವಂತೆ ಅಮೆರಿಕಕ್ಕೆ ವಿನಂತಿ ಮಾಡಿತ್ತು. ಆದರೆ ರಾಣಾ ಪರ ವಕೀಲರು ಅನಾರೋಗ್ಯ, ಭಾರತದಲ್ಲಿ ಚಿತ್ರಹಿಂಸೆ ನೀಡಲಾಗುತ್ತದೆ ಎನ್ನುವ ನೆಪವೊಡ್ಡಿ ಹಸ್ತಾಂತರವನ್ನು ವಿಳಂಬಗೊಳಿಸಲು ಪ್ರಯತ್ನಿಸುತ್ತಿದ್ದರು. ಇದರಿಂದ ಈ ಪ್ರಕ್ರಿಯೆಯು ಸುಮಾರು ಐದು ವರ್ಷಗಳ ಕಾಲ ನಡೆಯಿತು.
ಫೆಬ್ರವರಿ 27ರಂದು ರಾಣಾ ಸಲ್ಲಿಸಿದ ಅರ್ಜಿಯಲ್ಲಿ ಬಹು ಹೃದಯಾಘಾತ, ದೀರ್ಘಕಾಲದ ಮೂತ್ರಪಿಂಡ ಕಾಯಿಲೆ, ಶಂಕಿತ ಮೂತ್ರಕೋಶ ಕ್ಯಾನ್ಸರ್, ಪಾರ್ಕಿನ್ಸನ್ ಕಾಯಿಲೆ ಮತ್ತು ದೀರ್ಘಕಾಲದ ಆಸ್ತಮಾ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವುದಾಗಿ ಹೇಳಿದರು. ಏಪ್ರಿಲ್ 8ರಂದು ಯುಎಸ್ ಸುಪ್ರೀಂ ಕೋರ್ಟ್ ರಾಣಾ ಅರ್ಜಿ ವಿಚಾರಣೆ ನಡೆಸಿ ಸಾಕಷ್ಟು ಚರ್ಚೆಯ ಬಳಿಕ ಅದನ್ನು ತಿರಸ್ಕರಿಸಿತ್ತು. ಮರುದಿನವೇ ಅಂದರೆ ಏಪ್ರಿಲ್ 9 ರಂದು ಆತನನ್ನು ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.