ರಾಷ್ಟ್ರಗೀತೆಗೆ ಅಗೌರವ ಆರೋಪ: ಕಲಾಪದ ಮೊದಲ ದಿನವೇ ಸದನದಿಂದ ಹೊರನಡೆದ ತಮಿಳುನಾಡು ರಾಜ್ಯಪಾಲ
ರಾಷ್ಟ್ರಗೀತೆ ಹಾಡದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರು ಸರ್ಕಾರದ ಅನುಮೋದಿತ ಭಾಷಣ ಓದಲು ನಿರಾಕರಿಸಿ ಸದನದಿಂದ ಹೊರನಡೆದಿದ್ದಾರೆ. ಈ ಘಟನೆಯಿಂದ ರಾಜ್ಯಪಾಲ ಮತ್ತು ಸರ್ಕಾರದ ನಡುವೆ ತೀವ್ರ ಸಂಘರ್ಷ ಉಂಟಾಗಿದ್ದು, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಇದನ್ನು ಸಂವಿಧಾನ ವಿರೋಧಿ ನಡೆ ಎಂದು ಟೀಕಿಸಿದ್ದಾರೆ.
ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ -
ಚೆನ್ನೈ: ತಮಿಳುನಾಡು (Tamil Nadu) ರಾಜ್ಯಪಾಲ (Governor) ಆರ್.ಎನ್.ರವಿ (RN Ravi) ಅವರು ಮಂಗಳವಾರ ಮತ್ತೊಮ್ಮೆ ಸದನದಲ್ಲಿ ರಾಷ್ಟ್ರಗೀತೆ ಹಾಡದ ಕಾರಣಕ್ಕೆ ಅಸಮಾಧಾನ ವ್ಯಕ್ತಪಡಿಸಿ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಓದಲು ನಿರಾಕರಿಸಿ ಸದನದಿಂದ ಹೊರನಡೆದಿದ್ದಾರೆ. ಈ ನಡೆಯು ಸರ್ಕಾರ ಮತ್ತು ರಾಜ್ಯಪಾಲರ ನಡುವೆ ತೀವ್ರ ಘರ್ಷಣೆಗೆ ಕಾರಣವಾಗಿದೆ. ರಾಜ್ಯಪಾಲ ಆರ್.ಎನ್.ರವಿ ಅವರ ಈ ನಡೆಗೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, "ಇದು ಸಂವಿಧಾನ ವಿರೋಧಿ," ಎಂದು ಹೇಳಿದ್ದಾರೆ.
ರಾಜ್ಯಪಾಲರು ಸದನಕ್ಕೆ ಆಗಮಿಸಿದಾಗ, ತಮಿಳು ತಾಯಿ ವಾಜತ್ತು (ತಮಿಳುನಾಡು ನಾಡ ಗೀತೆ) ಹಾಡಲಾಯಿತು, ಆದರೆ ರಾಷ್ಟ್ರಗೀತೆ ಹಾಡಲು ನಿರಾಕರಿಸಲಾಯಿತು ಎಂದು ವರದಿಗಳು ತಿಳಿಸಿವೆ. ಕಲಾಪ ಆರಂಭವಾಗುತ್ತಿದ್ದಂತೆ, ಸಭಾಧ್ಯಕ್ಷ (Speaker) ಎಂ.ಅಪ್ಪಾವು (M Appavu) ಅವರು, ರಾಜ್ಯ ಸರ್ಕಾರದಿಂದ ಅನುಮೋದನೆ ಪಡೆದ ಔಪಚಾರಿಕ ಭಾಷಣವನ್ನು ಮಾತ್ರ ಓದುವಂತೆ ರಾಜ್ಯಪಾಲರನ್ನು ವಿನಂತಿಸಿದರು. ಆಡಳಿತ ಪಕ್ಷದ ಸದಸ್ಯರ ಆಕ್ಷೇಪಣೆಗಳ ನಡುವೆ ಮಧ್ಯಪ್ರವೇಶಿಸಿದ ಸಭಾಧ್ಯಕ್ಷರು, ವಿಧಾನಸಭಾ ನಿಯಮಗಳ ಪ್ರಾಮುಖ್ಯತೆಯನ್ನು ಒತ್ತಿಹೇಳಿ, “ವಿಧಾನಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಶಾಸಕರಿಗೆ ಮಾತ್ರ ಇದೆ, ಬೇರೆ ಯಾರಿಗೂ ಇಲ್ಲ,” ಎಂದು ಹೇಳಿದರು.
ಶಬರಿಮಲೆ ಅಯ್ಯಪ್ಪ ದೇಗುಲ ಚಿನ್ನ ಕಳವು ಪ್ರಕರಣ: ಬೆಂಗಳೂರು, ಬಳ್ಳಾರಿ ಸೇರಿ 21 ಕಡೆ ಇಡಿ ದಾಳಿ
ಇದಕ್ಕೆ ಸದನದ ಬಾವಿಯಿಂದಲೇ ಪ್ರತಿಕ್ರಿಯಿಸಿದ ರಾಜ್ಯಪಾಲ ರವಿ ಅವರು, ತಮ್ಮ ಭಾಷಣಕ್ಕೆ ಅಡ್ಡಿಪಡಿಸಿರುವುದು “ದುರದೃಷ್ಟಕರ” ಎಂದು ಹೇಳಿದರು. ಸಭೆಯ ಕಾರ್ಯವಿಧಾನಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು, “ನಾನು ನಿರಾಶನಾಗಿದ್ದೇನೆ. ರಾಷ್ಟ್ರಗೀತೆಗೆ ಸರಿಯಾ ಗೌರವ ನೀಡಲಾಗಿಲ್ಲ,” ಎಂದು ಹೇಳಿದರು. ಇಷ್ಟೇ ಅಲ್ಲದೇ ತಮ್ಮ ಮೈಕ್ರೋಫೋನ್ ಅನ್ನು ನಿರಂತರವಾಗಿ ಆಫ್ ಮಾಡಲಾಗುತ್ತಿತ್ತು ಎಂಬ ಆರೋಪವನ್ನೂ ರಾಜ್ಯಪಾಲರು ಮಾಡಿದ್ದಾರೆ.
ಇದಾದ ತಕ್ಷಣವೇ ಅವರು ತಮ್ಮ ಭಾಷಣವನ್ನು ಪೂರ್ಣಗೊಳಿಸದೇ ಅಥವಾ ಅಧಿಕೃತವಾಗಿ ಸಲ್ಲಿಸದೇ, ಸದನದಿಂದ ಹೊರನಡೆದಿದ್ದಾರೆ. ನಂತರ ಲೋಕಭವನ (ರಾಜಭವನ)ವು ಹೇಳಿಕೆಯೊಂದನ್ನು ನೀಡಿ, ಸಭಾತ್ಯಾಗದ ಹಿಂದಿನ ಕಾರಣಗಳನ್ನು ವಿವರಿಸಿದೆ. ಆ ಹೇಳಿಕೆಯಲ್ಲಿ ರಾಜ್ಯಪಾಲರ ಮೈಕ್ರೋಫೋನ್ ಅನ್ನು ಪುನಃ ಪುನಃ ಆಫ್ ಮಾಡಲಾಗಿದೆ ಮತ್ತು ಮಾತನಾಡಲು ಅವಕಾಶ ನೀಡಲಾಗಲಿಲ್ಲ ಎಂದು ಆರೋಪಿಸಲಾಗಿದೆ. ಜೊತೆಗೆ, ಸಿದ್ಧಪಡಿಸಿದ್ದ ಭಾಷಣದಲ್ಲಿ “ಅನೇಕ ಆಧಾರರಹಿತ ಆರೋಪಗಳು ಮತ್ತು ತಪ್ಪು ಮಾಹಿತಿ ನೀಡಲಾಗಿದೆ” ಹಾಗೂ ರಾಜ್ಯಪಾಲರು ಉಲ್ಲೇಖಿಸಿದ್ದ ಹಲವಾರು ಕಳವಳಕಾರಿ ಅಂಶಗಳನ್ನು ಆ ಭಾಷಣದಿಂದ ತೆಗೆದುಹಾಕಲಾಗಿದೆ ಎಂದು ಹೇಳಲಾಗಿದೆ. ಇದು ಸತತ ನಾಲ್ಕನೇ ವರ್ಷ ರಾಜ್ಯಪಾಲರು ತಮ್ಮ ಭಾಷಣವನ್ನು ಪೂರ್ಣಗೊಳಿಸದೆ ಹೊರನಡೆದ ಘಟನೆಯಾಗಿದೆ.