ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Operation Sindoor: ಆಪರೇಷನ್ ಸಿಂಧೂರ್ ಟೀಕಿಸಿದ ಪ್ರಾಧ್ಯಾಪಕಿಯನ್ನು ಅಮಾನತು ಮಾಡಿದ ವಿಶ್ವವಿದ್ಯಾಲಯ

ಚೆನ್ನೈ (Chennai) ಸಮೀಪದ ಖಾಸಗಿ ವಿಶ್ವವಿದ್ಯಾಲಯವೊಂದು, 'ಆಪರೇಷನ್ ಸಿಂಧೂರ್' (Operation Sindoor) ಕಾರ್ಯಾಚರಣೆಯನ್ನು ಟೀಕಿಸಿದ ಸಹಾಯಕ ಪ್ರಾಧ್ಯಾಪಕಿಯನ್ನು (Assistant Professor) "ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ" ಎಂದು ಆರೋಪಿಸಿ ಗುರುವಾರ ಅಮಾನತುಗೊಳಿಸಿದೆ. ಅವರು 2016ರಲ್ಲಿ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಮತ್ತು 2017ರಲ್ಲಿ ಇಂದಿರಾ ಗಾಂಧಿ ಶಿಕ್ಷಣ ಶ್ರೇಷ್ಠತಾ ಪ್ರಶಸ್ತಿಯನ್ನು ಪಡೆದಿದ್ದರು ಹಾಗೂ 11 ವರ್ಷಗಳ ಬೋಧನಾ ಅನುಭವ ಹೊಂದಿದ್ದರು.

ಆಪರೇಷನ್ ಸಿಂಧೂರ್ ಟೀಕಿಸಿದ ಪ್ರಾಧ್ಯಾಪಕಿ!

Profile Vishakha Bhat May 9, 2025 3:05 PM

ಚೆನ್ನೈ: ಚೆನ್ನೈ (Chennai) ಸಮೀಪದ ಖಾಸಗಿ ವಿಶ್ವವಿದ್ಯಾಲಯವೊಂದು, 'ಆಪರೇಷನ್ ಸಿಂಧೂರ್' (Operation Sindoor) ಕಾರ್ಯಾಚರಣೆಯನ್ನು ಟೀಕಿಸಿದ ಸಹಾಯಕ ಪ್ರಾಧ್ಯಾಪಕಿಯನ್ನು (Assistant Professor) "ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ" ಎಂದು ಆರೋಪಿಸಿ ಗುರುವಾರ ಅಮಾನತುಗೊಳಿಸಿದೆ. ಎಸ್‌ಆರ್‌ಎಂ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿಯ (SRM Institute of Science and Technology) ಕೆರಿಯರ್ ಸೆಂಟರ್‌ನ ಸಹಾಯಕ ಪ್ರಾಧ್ಯಾಪಕಿಯಾಗಿರುವ ಎಸ್ ಲೋರಾ (S Lora), ತಮ್ಮ ವಾಟ್ಸಾಪ್ ಸ್ಟೇಟಸ್‌ನಲ್ಲಿ ನಾಗರಿಕ ಸಾವು-ನೋವುಗಳ ಬಗ್ಗೆ ಪೋಸ್ಟ್ ಮಾಡಿದ್ದರು. "ಬುಧವಾರ ಬೆಳಗ್ಗೆ ನಡೆದ ದಾಳಿಗಳಲ್ಲಿ ಭಾರತವು ಪಾಕಿಸ್ತಾನದಲ್ಲಿ ಒಬ್ಬ ಮಗುವನ್ನು ಕೊಂದು, ಇಬ್ಬರಿಗೆ ಗಾಯಗೊಳಿಸಿದೆ," ಎಂದು ಅವರು ಸ್ಟೇಟಸ್‌ನಲ್ಲಿ ಬರೆದಿದ್ದರು.

"ನಿಮ್ಮ ರಕ್ತದಾಹಕ್ಕಾಗಿ ಮತ್ತು ಚುನಾವಣಾ ಗಿಮ್ಮಿಕ್‌ಗಾಗಿ ನಿರಪರಾಧಿಗಳ ಜೀವವನ್ನು ಕೊಲ್ಲುವುದು ಶೌರ್ಯವಲ್ಲ, ನ್ಯಾಯವೂ ಅಲ್ಲ. ಇದು ಹೇಡಿತನದ ಕೃತ್ಯ!" ಎಂದು ಲೋರಾ ತಮ್ಮ ಸ್ಟೇಟಸ್‌ನಲ್ಲಿ ಟೀಕಿಸಿದ್ದರು. ಜೊತೆಗೆ, ಲಾಕ್‌ಡೌನ್ ಮತ್ತು ಆಹಾರ ಕೊರತೆಯಂತಹ ಅನಿಶ್ಚಿತತೆಗಳ ಬಗ್ಗೆಯೂ ಎಚ್ಚರಿಕೆ ನೀಡಿದ್ದರು.

ಈ ಪೋಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ಒಬ್ಬ ಬಳಕೆದಾರರು X ಪ್ಲಾಟ್‌ಫಾರ್ಮ್‌ನಲ್ಲಿ ಹಂಚಿಕೊಂಡಿದ್ದರು. ಕೆಲವೇ ಗಂಟೆಗಳ ನಂತರ, ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಎಸ್ ಪೊನ್ನುಸಾಮಿ ಅವರು ಲೋರಾ ವಿರುದ್ಧ ಅಮಾನತು ಆದೇಶ ಹೊರಡಿಸಿದರು. "ಎಸ್ ಲೋರಾ ಅವರು ಅನೈತಿಕ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಹೀಗಾಗಿ, ತನಿಖೆಯವರೆಗೆ ಅವರನ್ನು ತಕ್ಷಣದಿಂದ ಅಮಾನತುಗೊಳಿಸಲಾಗಿದೆ" ಎಂದು ಆದೇಶದಲ್ಲಿ ತಿಳಿಸಲಾಗಿದೆ. ಲೋರಾ ಅವರ ಬೋಧನಾ ಪ್ರೊಫೈಲ್‌ ಅನ್ನು ವಿಶ್ವವಿದ್ಯಾಲಯದ ವೆಬ್‌ಸೈಟ್‌ನಿಂದ ತೆಗೆದುಹಾಕಲಾಗಿದೆ.

ವೆಬ್‌ಸೈಟ್‌ನಲ್ಲಿ ಈ ಹಿಂದೆ ಲೋರಾ ಅವರು ಐರಿಷ್ ಪುರಾಣಶಾಸ್ತ್ರದಲ್ಲಿ ಡಾಕ್ಟರಲ್ ಸಂಶೋಧನೆ ಮಾಡುತ್ತಿರುವುದಾಗಿ ತಿಳಿಸಲಾಗಿತ್ತು. ಅವರು 2016ರಲ್ಲಿ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಮತ್ತು 2017ರಲ್ಲಿ ಇಂದಿರಾ ಗಾಂಧಿ ಶಿಕ್ಷಣ ಶ್ರೇಷ್ಠತಾ ಪ್ರಶಸ್ತಿಯನ್ನು ಪಡೆದಿದ್ದರು ಹಾಗೂ 11 ವರ್ಷಗಳ ಬೋಧನಾ ಅನುಭವ ಹೊಂದಿದ್ದರು.

ಈ ಸುದ್ದಿಯನ್ನೂ ಓದಿ: Operation Sindoor 2.0: ತಾಳ್ಮೆ ಪರೀಕ್ಷಿಸಬೇಡಿ... ಆಪರೇಷನ್‌ ಸಿಂದೂರ್‌ ಮುಂದುವರಿದಿದೆ- ಕುತಂತ್ರಿ ಪಾಕ್‌ಗೆ ರಾಜನಾಥ್‌ ಸಿಂಗ್‌ ವಾರ್ನಿಂಗ್‌

ವಿಶ್ವವಿದ್ಯಾಲಯದ ಉಪಕುಲಪತಿ ಎಸ್ ಮುತಮಿಳ್‌ಚೆಲ್ವನ್ ಅವರು ಘಟನೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಬೆಳವಣಿಗೆಗೆ ಪ್ರತಿಕ್ರಿಯಿಸಿದ ಬಿಜೆಪಿಯ ತಮಿಳುನಾಡು ರಾಜ್ಯ ಕಾರ್ಯದರ್ಶಿ ಎಸ್‌.ಜಿ.ಸೂರ್ಯಾ, "ಎಸ್ ಲೋರಾ ಅವರನ್ನು ಬೇರೆ ಯಾವುದೇ ಸಂಸ್ಥೆಯು ನೇಮಕ ಮಾಡಿಕೊಳ್ಳದಂತೆ ಖಾತರಿಪಡಿಸಬೇಕು. ಒಂದು ವೇಳೆ ಯಾವುದೇ ಸಂಸ್ಥೆ ಅವರನ್ನು ನೇಮಿಸಿದರೆ, ಭಾರತ-ವಿರೋಧಿ ಮನೋಭಾವಕ್ಕಾಗಿ ಅವರನ್ನು ಸಾರ್ವಜನಿಕವಾಗಿ ಗೊತ್ತುಪಡಿಸಿ ಛೀಮಾರಿ ಹಾಕಬೇಕು” ಎಂದು ಹೇಳಿದ್ದಾರೆ. ಸಹಾಯಕ ಪ್ರಾಧ್ಯಾಪಕಿ ಲೋರಾ ಇದುವರೆಗೆ ಅಮಾನತು ಆದೇಶದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.