ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದೆಹಲಿಗೆ ಹೊರಟಿದ್ದ ಇಂಡಿಗೋ ಡ್ರೀಮ್‌ಲೈನರ್‌ನಲ್ಲಿ ತಾಂತ್ರಿಕ ದೋಷ; ಯುಟರ್ನ್‌ ಹೊಡೆದು ಲಂಡನ್‌ಗೆ ಮರಳಿದ ವಿಮಾನ

IndiGo flight returns to London: ದೆಹಲಿಗೆ ಹೊರಟಿದ್ದ ಇಂಡಿಗೋ ಬೋಯಿಂಗ್ 787-9 ಡ್ರೀಮ್‌ಲೈನರ್ ವಿಮಾನವು ಬುಧವಾರ (ಸೆಪ್ಟೆಂಬರ್‌ 23) ಮುಂಜಾನೆ ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣಕ್ಕೆ ಮರಳಿದೆ. ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ತಾಂತ್ರಿಕ ದೋಷ ಕಂಡುಬಂದಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ದೆಹಲಿಗೆ ಹೊರಟಿದ್ದ ಇಂಡಿಗೋ ಡ್ರೀಮ್‌ಲೈನರ್‌ನಲ್ಲಿ ತಾಂತ್ರಿಕ ದೋಷ

ಸಾಂದರ್ಭಿಕ ಚಿತ್ರ -

Priyanka P
Priyanka P Sep 23, 2026 7:25 PM

ಲಂಡನ್, ಸೆ. 23: ಇಂಗ್ಲೆಂಡ್‌ನಿಂದ ದೆಹಲಿಗೆ ಹೊರಟಿದ್ದ ಇಂಡಿಗೋ (IndiGo) ಬೋಯಿಂಗ್ 787-9 ಡ್ರೀಮ್‌ಲೈನರ್ ವಿಮಾನವು ಯುಟರ್ನ್‌ ಹೊಡೆದು ಬುಧವಾರ (ಸೆಪ್ಟೆಂಬರ್‌ 23) ಮುಂಜಾನೆ ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣಕ್ಕೆ (London Heathrow Airport) ಮರಳಿದ್ದು, ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ತಾಂತ್ರಿಕ ದೋಷ ಕಂಡುಬಂದಿದೆ ಎಂದು ಸಂಸ್ಥೆ ತಿಳಿಸಿದೆ. ಸಮಸ್ಯೆ ಪತ್ತೆಯಾದ ನಂತರ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಇಂಡಿಗೋ ವಿಮಾನ 6E04 ದೆಹಲಿಗೆ ಪ್ರಯಾಣ ಮುಂದುವರಿಸದೆ, ಲಂಡನ್ ಹೀಥ್ರೂ ವಿಮಾನ ನಿಲ್ದಾಣಕ್ಕೆ ವಾಪಸ್ ಬಂದಿದೆ ಎಂದು ಮೂಲಗಳು ತಿಳಿಸಿವೆ.

ವಿಮಾನ ಟ್ರ್ಯಾಕಿಂಗ್ ದತ್ತಾಂಶದ ಪ್ರಕಾರ, ಬುಧವಾರ ಭಾರತೀಯ ಕಾಲಮಾನ ಬೆಳಗಿನ ಜಾವ 12.40ರ ಸುಮಾರಿಗೆ ವಿಮಾನ ಹೊರಟು, ರಾತ್ರಿ 2 ಗಂಟೆ ಸುಮಾರಿಗೆ ಲಂಡನ್‌ನ ಹೀಥ್ರೂಗೆ ಮರಳಿತು. ಸೆಪ್ಟೆಂಬರ್ 22ರಂದು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ತಾಂತ್ರಿಕ ದೋಷ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ, ಪ್ರಮಾಣಿತ ಕಾರ್ಯಾಚರಣಾ ಸುರಕ್ಷತಾ ಕ್ರಮಗಳ ಅನುಸಾರ ವಿಮಾನವನ್ನು ಲಂಡನ್‌ಗೆ ಹಿಂದಿರುಗಿಸಲು ಪೈಲಟ್‌ಗಳು ನಿರ್ಧರಿಸಿದರು.

ವಿಮಾನವು ಪ್ರಸ್ತುತ ನಿರ್ವಹಣಾ ಪರಿಶೀಲನೆಗಳಿಗೆ ಒಳಗಾಗಿದ್ದು, ಅಗತ್ಯ ಅನುಮತಿಗಳನ್ನು ಪಡೆದ ನಂತರ ಕಾರ್ಯಾಚರಣೆಯನ್ನು ಪುನರಾರಂಭಿಸಲಾಗುವುದು ಎಂದು ಇಂಡಿಗೋ ತಿಳಿಸಿದೆ. ವಿಮಾನಯಾನ ಸಂಸ್ಥೆಯು ಪ್ರಯಾಣಿಕರಿಗೆ ವಸತಿ ವ್ಯವಸ್ಥೆಯನ್ನು ಮಾಡಿದೆ. ಮುಂದಿನ ಲಭ್ಯವಿರುವ ವಿಮಾನಗಳಲ್ಲಿ ಆಸನ ವ್ಯವಸ್ಥೆ ಮಾಡಲಾಗುತ್ತಿದೆ. ಒಟ್ಟಿನಲ್ಲಿ ಪ್ರಯಾಣಿಕರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇಂಗ್ಲೆಂಡ್ ನಲ್ಲೂ ಇಂಡಿಗೋ ಬಿಕ್ಕಟ್ಟು ನೆನಪಿಸುವ ತಾಂತ್ರಿಕ ದೋಷ: 2 ಸಾವಿರಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು

ಇಂಡಿಗೋದಲ್ಲಿ ನಮ್ಮ ಗ್ರಾಹಕರು, ಸಿಬ್ಬಂದಿ ಮತ್ತು ವಿಮಾನಗಳ ಸುರಕ್ಷತೆಯು ನಮ್ಮ ಪ್ರಮುಖ ಆದ್ಯತೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ಈ ವಾರದ ಆರಂಭದಲ್ಲಿ ನಡೆದ ಪ್ರತ್ಯೇಕ ಘಟನೆಯಲ್ಲಿ, ಅಗರ್ತಲಾದಿಂದ ದೆಹಲಿಗೆ ಹೋಗುತ್ತಿದ್ದ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ನಂತರ, ಲಖನೌದ ಚೌಧರಿ ಚರಣ್ ಸಿಂಗ್ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇಂಡಿಗೋ ವಿಮಾನ 6E6504 ಸಂಜೆ 6.29ಕ್ಕೆ ಲಖನೌ ವಿಮಾನ ನಿಲ್ದಾಣದಲ್ಲಿ 103 ಪ್ರಯಾಣಿಕರು ಮತ್ತು ಆರು ಸಿಬ್ಬಂದಿಯೊಂದಿಗೆ ಇಳಿಯಿತು. ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಈ ಎಚ್ಚರಿಕೆಯ ಬಳಿಕ, ಲಖನೌ ವಿಮಾನ ನಿಲ್ದಾಣವು ತುರ್ತು ಪ್ರತಿಕ್ರಿಯ ಕ್ರಮಗಳನ್ನು ಸಕ್ರಿಯಗೊಳಿಸಿತು. ವಿಮಾನ, ಪ್ರಯಾಣಿಕರು ಹಾಗೂ ಸಿಬ್ಬಂದಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಗ್ನಿಶಾಮಕ ಮತ್ತು ರಕ್ಷಣಾ ತಂಡಗಳು, ಆಂಬ್ಯುಲೆನ್ಸ್‌ಗಳು ಹಾಗೂ ಟರ್ಮಿನಲ್ ಸಹಾಯ ಸಿಬ್ಬಂದಿಯನ್ನು ನಿಯೋಜಿಸಲಾಯಿತು.