Teen Spy: ಭಾರತದ ವಿರುದ್ಧ ಬೇಹುಗಾರಿಕೆ ನಡೆಸಲು ಅಪ್ರಾಪ್ತರ ಬ್ರೇನ್ ವಾಶ್‌ಗೆ ಮುಂದಾದ ಪಾಪಿ ಪಾಕಿಸ್ತಾನ!
ವೈಟ್‌ಕಾಲರ್ ಉಗ್ರವಾದದ ಬಳಿಕ ಇದೀಗ ‘ಅಪ್ರಾಪ್ತ ಗುಪ್ತಚರ ಜಾಲ’ವೊಂದು ಆಕ್ಟಿವ್ ಆಗಿದ್ದು, ಭಾರತಕ್ಕೆ ಮತ್ತೊಂದು ದೊಡ್ಡ ಭದ್ರತಾ ಬೆದರಿಕೆಯಾಗುತ್ತಿದೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳು ಅಪ್ರಾಪ್ತ ಬಾಲಕರನ್ನು ಗುರಿಯಾಗಿಸಿಕೊಂಡು, ಅವರಿಗೆ ಬ್ರೈನ್ ವಾಶ್ ಮಾಡುವ ಮೂಲಕ ಬೇಹುಗಾರಿಕೆ ಕಾರ್ಯಗಳಿಗೆ ಬಳಸುತ್ತಿರುವುದು ಬೆಳಕಿಗೆ ಬಂದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈಗಾಗಲೇ 37ಕ್ಕಿಂತ ಹೆಚ್ಚು ಅಪ್ರಾಪ್ತರು ಭದ್ರತಾ ಸಂಸ್ಥೆಗಳ ನಿಗಾದಲ್ಲಿದ್ದಾರೆ.
ಸಾಂದರ್ಭಿಕ ಚಿತ್ರ -
ಪಠಾಣ್ಕೋಟ್, ಜ.7: ವೈಟ್‌ಕಾಲರ್ ಉಗ್ರವಾದ (white-collar terrorism)ದ ನಂತರ, ಅಪ್ರಾಪ್ತ ಗುಪ್ತಚರ ಜಾಲ (Teen Spy Network)ವು ಭಾರತ (India)ಕ್ಕೆ ಗಂಭೀರ ಭದ್ರತಾ ಸವಾಲಾಗಿ ಪರಿಣಮಿಸಿದೆ. ಪಾಕಿಸ್ತಾನ (Pakistan)ದ ಗುಪ್ತಚರ ಸಂಸ್ಥೆ ಇದೀಗ ಅಪ್ರಾಪ್ತ ಬಾಲಕರನ್ನು ತನ್ನ ಬಲೆಗೆ ಬೀಳಿಸಿಕೊಂಡು, ಬ್ರೇನ್ ವಾಶ್ ಮಾಡಿ ಅವರಿಂದ ಬೇಹುಗಾರಿಕೆ ಮಾಡಿಸುತ್ತಿರುವುದು ಪತ್ತೆಯಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈಗಾಗಲೇ 37ಕ್ಕೂ ಹೆಚ್ಚು ಅಪ್ರಾಪ್ತರು ಭದ್ರತಾ ಸಂಸ್ಥೆಗಳ ನಿಗಾದಲ್ಲಿದ್ದಾರೆ. ಇವರಲ್ಲಿ 12 ಮಂದಿ ಪಂಜಾಬ್(Punjab) ಮತ್ತು ಹರಿಯಾಣ (Haryana)ದವರಾಗಿದ್ದು, 25 ಬಾಲಕರು ಜಮ್ಮು ಮತ್ತು ಕಾಶ್ಮೀರ (Jammu and Kashmir)ದವರಾಗಿದ್ದಾರೆ. 14ರಿಂದ 17 ವರ್ಷ ವಯಸ್ಸಿನ ಈ ಕಿಶೋರರನ್ನು ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ಗುಪ್ತಚರ ಸಂಸ್ಥೆ ತನ್ನ ಬಲೆಗೆ ಬೀಳಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಭಾರತದಲ್ಲಿ ಅಸ್ಥಿರತೆಯನ್ನುಂಟು ಮಾಡಲು ತನ್ನ ಭೂಭಾಗದಲ್ಲೇ ಉಗ್ರ ಸಂಘಟನೆಗಳಿಗೆ ಆಶ್ರಯ ನೀಡುವ ಪಾಕಿಸ್ತಾನದಲ್ಲಿ ISI ಪ್ರಮುಖ ಪಾತ್ರ ವಹಿಸುತ್ತಿದೆ ಎಂಬುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಈ ವಾರ ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ 15 ವರ್ಷದ ಬಾಲಕನನ್ನು ಬಂಧಿಸಿದ ಬಳಿಕ ಈ ಕಿಶೋರ ಗುಪ್ತಚರ ಜಾಲ ಬಹಿರಂಗವಾಗಿದೆ. ಆ ಬಾಲಕ ಪಾಕಿಸ್ತಾನದಲ್ಲಿರುವ ಏಜೆನ್ಸಿಗಳು ಹಾಗೂ ಅವರ ಹ್ಯಾಂಡ್ಲರ್‌ಗಳೊಂದಿಗೆ ಸಂಪರ್ಕದಲ್ಲಿದ್ದನೆಂಬ ಗುಪ್ತಚರ ಮಾಹಿತಿ ತಿಳಿದುಬಂದಿದೆ.
ಪೊಲೀಸರು ಆತನ ಮೊಬೈಲ್ ಪರಿಶೀಲಿಸಿದಾಗ ಉಗ್ರ ಸಂಘಟನೆಗಳ ಮುಖಂಡ ಸಂಘಟನೆಗಳು ಹಾಗೂ ISI ಆಧಾರಿತ ಏಜೆನ್ಸಿಗಳು ಮತ್ತು ಅವರ ಹ್ಯಾಂಡ್ಲರ್‌ಗಳೊಂದಿಗೆ ಆ ಬಾಲಕ ಸಂಪರ್ಕದಲ್ಲಿದ್ದ ಎಂದು ಪಠಾಣ್ಕೋಟ್‌ನ ಹಿರಿಯ ಪೊಲೀಸ್ ಅಧೀಕ್ಷಕ (SSP) ದಲ್ಜಿಂದರ್ ಸಿಂಗ್ ಧಿಲ್ಲನ್ ತಿಳಿಸಿದ್ದಾರೆ. “ಪಾಕಿಸ್ತಾನ ಆಧಾರಿತ ಏಜೆನ್ಸಿಗಳು ಅವನನ್ನು ಬಲೆಗೆ ಬೀಳಿಸಿತ್ತು. ಅವರ ಸೂಚನೆಯಂತೆ ಭಾರತೀಯ ಭದ್ರತಾ ಪಡೆಗಳ ಸಂವೇದನಾಶೀಲ ಸ್ಥಳಗಳನ್ನು ಅವನು ವೀಡಿಯೋ ಮಾಡಿದ್ದ,” ಎಂದು ಅವರು ಹೇಳಿದ್ದಾರೆ.
“ಆ ಬಾಲಕನ ಫೋನ್ ಕ್ಲೋನ್ ಮಾಡಲಾಗಿದ್ದು, ಇದರ ಮೂಲಕ ಅವನ ಹ್ಯಾಂಡ್ಲರ್‌ಗಳು ಅವನ ಚಟುವಟಿಕೆಗಳನ್ನು ನೈಜ ಸಮಯದಲ್ಲೇ ಗಮನಿಸುತ್ತಿದ್ದರು. ಅವನು ಫೋನ್‌ನಲ್ಲಿ ಸಂಗ್ರಹಿಸಿದ್ದ ಮಾಹಿತಿಯನ್ನು ಸುಲಭವಾಗಿ ಪಡೆಯಲು ಇದರಿಂದ ಸಾಧ್ಯವಾಗಿತ್ತು. ದುರುದ್ದೇಶಪೂರಿತ ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ ಆತನ ಫೋನ್ ಕ್ಲೋನ್ ಮಾಡಲಾಗಿತ್ತು. ಇದು ISIಯ ತಂತ್ರಗಳ ಅತ್ಯಂತ ಸುಧಾರಿತ ಸ್ವರೂಪವನ್ನು ತೋರಿಸುತ್ತದೆ,” ಎಂದು SSP ಹೇಳಿದ್ದಾರೆ.
ತನಿಖೆಯನ್ನು ತೀವ್ರಗೊಳಿಸಿದಾಗ ಈ ಅಪ್ರಾಪ್ತರ ಗುಪ್ತಚರ ಜಾಲ ಬಹಿರಂಗವಾಗಿದ್ದು, ಅನೇಕ ಬಾಲಕರನ್ನು ISI ಆನ್‌ಲೈನ್ ಮೂಲಕ ಪ್ರಭಾವಿತಗೊಳಿಸಿರುವುದು ಪತ್ತೆಯಾಗಿದೆ. ಅಧಿಕೃತವಲ್ಲದ ಆ್ಯಪ್‌ಗಳನ್ನು ಬಳಸಿಕೊಂಡು ಈ ಅಪ್ರಾಪ್ತರ ಬ್ರೇನ್ ವಾಶ್ ಮಾಡಲಾಗಿದ್ದು, ಪಾಕಿಸ್ತಾನಕ್ಕೆ ಗುಪ್ತಚರ ಮಾಹಿತಿ ಒದಗಿಸುವಂತೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆ ಬಾಲಕನನ್ನು ಬಂಧಿಸದೇ ಇದ್ದಿದ್ದರೆ, ಅವನು ಇನ್ನೂ ಗಂಭೀರ ಚಟುವಟಿಕೆಗಳಿಗೆ ಭಾಗಿಯಾಗುವ ಸಾಧ್ಯತೆ ಇತ್ತು. ಇಂತಹ ದುರುದ್ದೇಶಪೂರಿತ ಪ್ರಯತ್ನಗಳನ್ನು ತಡೆಯಲು ಜಾಗೃತಿ ಮತ್ತು ಎಚ್ಚರಿಕೆಯ ಅತ್ಯಗತ್ಯ ಎಂದು ಎಂದು ಹೇಳಿದ SSP ಧಿಲ್ಲನ್ ತಿಳಿಸಿದ್ದಾರೆ.