ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಗಣರಾಜ್ಯೋತ್ಸವ ದಿನಕ್ಕೂ ಮುನ್ನ ಉಗ್ರರ ಕರಿನೆರಳು; ಕಡಿಮೆ ಬೆಲೆಯ ಸ್ಫೋಟಕ, ಡ್ರೋನ್ ತಯಾರಿಸಿದ ಭಯೋತ್ಪಾದಕರು

Republic Day threat: ಗಣರಾಜ್ಯೋತ್ಸವ ದಿನದ ಪರೇಡ್ ಮತ್ತು ಬೀಟಿಂಗ್ ದಿ ರಿಟ್ರೀಟ್ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಭಯೋತ್ಪಾದನಾ ಅಪಾಯದ ಬಗ್ಗೆ ಕೇಂದ್ರ ಭದ್ರತಾ ಸಂಸ್ಥೆಗಳು ಎಚ್ಚರಿಕೆ ನೀಡಿವೆ. ಕಡಿಮೆ ವೆಚ್ಚದ ಸ್ಫೋಟಕಗಳು, ಡ್ರೋನ್‌ಗಳು ಮತ್ತು ಹೊಸ ತಲೆಮಾರಿನ ಐಇಡಿ‌ಗಳು ಬಳಸಿ ಉಗ್ರರು ವಿಧ್ವಂಸಕ ಕೃತ್ಯಕ್ಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಗಣರಾಜ್ಯೋತ್ಸವ ದಿನಕ್ಕೂ ಮುನ್ನ ಉಗ್ರರ ಕರಿನೆರಳು

ಸಾಂದರ್ಭಿಕ ಚಿತ್ರ -

Priyanka P
Priyanka P Jan 7, 2026 4:17 PM

ನವದೆಹಲಿ, ಜ. 7: ಗಣರಾಜ್ಯೋತ್ಸವ ದಿನದ ಪರೇಡ್ (Republic Day Parade) ಮತ್ತು ಬೀಟಿಂಗ್ ದಿ ರಿಟ್ರೀಟ್ (Beating the Retreat) ಕಾರ್ಯಕ್ರಮದ ಹಿನ್ನೆಲೆಯಲ್ಲಿ ಭಯೋತ್ಪಾದನಾ ಕೃತ್ಯ ನಡೆಯುವ ಅಪಾಯವಿದ್ದು, ಕಡಿಮೆ ಬೆಲೆಯ ಸ್ಫೋಟಕಗಳು, ಡ್ರೋನ್‌ಗಳನ್ನು ಕೇಂದ್ರ ಭದ್ರತಾ ಸಂಸ್ಥೆಗಳು ಗುರುತಿಸಿವೆ. ಯಾವುದೇ ಅಪಾಯ ಸಂಭವಿಸದಂತೆ ಭದ್ರತಾ ವ್ಯವಸ್ಥೆಗಳನ್ನು ದೊಡ್ಡ ಮಟ್ಟದಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಉನ್ನತ ಮಟ್ಟದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಅಲ್‌ ಖೈದಾ, ಇಸ್ಲಾಮಿಕ್ ಸ್ಟೇಟ್ ಹಾಗೂ ಅವುಗಳ ಸಹಾಯಕ ಸಂಘಟನೆಗಳಂತಹ ಜಾಗತಿಕ ಭಯೋತ್ಪಾದಕ ಗುಂಪುಗಳು ಕಡಿಮೆ ವೆಚ್ಚದ, ಸುಲಭವಾಗಿ ಲಭ್ಯವಾಗುವ ಹಾಗೂ ಪತ್ತೆಹಚ್ಚಲು ಕಷ್ಟವಾಗುವ ಉಪಕರಣಗಳನ್ನು ಬಳಸಿ ಬಾಂಬ್‌ ಮತ್ತು ಐಇಡಿ‌ಗಳನ್ನು ತಯಾರಿಸುವ ತಂತ್ರಗಳನ್ನು ಸಕ್ರಿಯವಾಗಿ ಪರಸ್ಪರ ಹಂಚಿಕೊಳ್ಳುತ್ತಿವೆ ಎಂದು ತಿಳಿಸಿದ್ದಾರೆ.

ಮನೆಗೆ ಬಂದು ಆಹಾರ ಕೇಳಿದ ಭಯೋತ್ಪಾದಕರು: ಬಕರಾಲ್ ಕುಟುಂಬದಿಂದ ಸ್ಪೋಟಕ ಮಾಹಿತಿ

ಈ ಹೊಸ ತಲೆಮಾರಿನ ಐಇಡಿ‌ಗಳು ಮೆಟಲ್ ಡಿಟೆಕ್ಟರ್‌ಗಳು, ಶೋಧಕ ಶ್ವಾನದಳಗಳು ಹಾಗೂ ಕೈಯಿಂದ ತಪಾಸಣೆ ಮಾಡುವಂತಹ ಸಾಂಪ್ರದಾಯಿಕ ಭದ್ರತಾ ಕ್ರಮಗಳಿಂದ ತಿಳಿದುಕೊಳ್ಳಲಾಗದಂತೆ ವಿನ್ಯಾಸಗೊಳಿಸಲ್ಪಟ್ಟಿದ್ದು, ಭದ್ರತಾ ಪಡೆಗಳಿಗೆ ಗಂಭೀರ ಸವಾಲು ಒಡ್ಡುತ್ತಿವೆ.

ಮೂಲಗಳ ಪ್ರಕಾರ, ಅಲ್-ಖೈದಾ ಅಂಗಸಂಸ್ಥೆಗಳು ಸುಲಭವಾಗಿ ಲಭ್ಯವಿರುವ ವಸ್ತುಗಳನ್ನು ಬಳಸಿಕೊಂಡು ಬಾಂಬ್‌ಗಳು ಮತ್ತು ಐಇಡಿಗಳನ್ನು ತಯಾರಿಸಲು ಹಂತ-ಹಂತದ ತಂತ್ರಗಳನ್ನು ಪ್ರದರ್ಶಿಸುವ ವಿಡಿಯೊವನ್ನು ಬಿಡುಗಡೆ ಮಾಡಿದೆ. ಇದನ್ನು ಭಾರತೀಯ ಭದ್ರತಾ ಪಡೆಗಳು ಪತ್ತೆಹಚ್ಚಿವೆ. ಈ ವಿಧಾನಗಳು ಸಾಮಾನ್ಯ ಪತ್ತೆ ವ್ಯವಸ್ಥೆಗಳಿಗೆ ಗೊತ್ತಾಗದಂತೆ ವಿಶೇಷವಾಗಿ ರೂಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಕಲಿ ಗುರುತಿನ ಮೂಲಕ ನಕಲಿ ಪಾಸ್‌ಗಳು, ನಕಲಿ ಲೇಬಲ್‌ಗಳು ಅಥವಾ ಸೇವಾ ಉಡುಪುಗಳನ್ನು ಬಳಸಿ ಭದ್ರತಾ ಪ್ರದೇಶಗಳಿಗೆ ಪ್ರವೇಶಿಸಲು ಶತ್ರುಗಳು ಪ್ರಯತ್ನಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಯೋತ್ಪಾದಕ ಸಂಘಟನೆಗಳು ದೈನಂದಿನ ಬಳಕೆಯ ವಸ್ತುಗಳಂತೆ ಕಾಣುವ ರೀತಿಯಲ್ಲಿ ಹಳೆಯ ಮಾದರಿಯ ಐಇಡಿ‌ಗಳನ್ನು ತಯಾರಿಸುತ್ತಿರುವುದಾಗಿ ಸಂಸ್ಥೆಗಳು ವರದಿ ಮಾಡಿವೆ. ಇಂತಹ ಸಾಧನಗಳನ್ನು ತಯಾರಿಸಲು ಅಗತ್ಯವಾದ ಮಾಹಿತಿ ಆನ್‌ಲೈನ್‌ನಲ್ಲಿ ಸುಲಭವಾಗಿ ಲಭ್ಯವಿರುವುದರಿಂದ, ಅಪಾಯವು ಗಣನೀಯವಾಗಿ ಹೆಚ್ಚಾಗಿದೆ ಎಂದು ಮೂಲವೊಂದು ತಿಳಿಸಿದೆ. ದಾಳಿ ನಡೆಸಲು ತಂತ್ರಜ್ಞಾನದ ಬಳಕೆ, ವಿಶೇಷವಾಗಿ ಡ್ರೋನ್‌ಗಳು ಮತ್ತು ರಿಮೋಟ್-ಚಾಲಿತ ವ್ಯವಸ್ಥೆಗಳು ಹೆಚ್ಚುತ್ತಿರುವುದು ಮತ್ತೊಂದು ಕಳವಳಕಾರಿ ಅಂಶ.

ಪಾಕಿಸ್ತಾನದಲ್ಲಿ ಬೃಹತ್‌ ಸೇನಾ ಕಾರ್ಯಾಚರಣೆ; 11 ಸೈನಿಕರು, 19 ಭಯೋತ್ಪಾದಕರು ಬಲಿ

ಆಪರೇಷನ್ ಸಿಂದೂರ್ ಕಾರ್ಯಾಚರಣೆಯಿಂದ ಹತಾಶೆ

ಆಪರೇಷನ್ ಸಿಂದೂರ್ ನಂತರ ಭಯೋತ್ಪಾದನಾ ಅಪಾಯ ಮತ್ತಷ್ಟು ಹೆಚ್ಚಾಗಿದೆ. ಇದರ ಬಳಿಕ ಪಾಕಿಸ್ತಾನ ಆಧಾರಿತ ಭಯೋತ್ಪಾದಕ ಸಂಘಟನೆಗಳು ಹತಾಶೆಗೆ ಒಳಗಾಗಿವೆ. ಜೈಶ್-ಇ-ಮೊಹಮ್ಮದ್ ಮತ್ತು ಲಷ್ಕರ್‌-ಇ-ತೈಬಾ ಈಗಾಗಲೆ ಸಾಮಾಜಿಕ ಮಾಧ್ಯಮದಲ್ಲಿ ಬೆದರಿಕೆಯುಳ್ಳ ಹೇಳಿಕೆ ಬಿಡುಗಡೆ ಮಾಡಿವೆ. ಈ ಸಂಘಟನೆಗಳು ಹೆಚ್ಚಿನ ಜನಸಂಖ್ಯೆ ಇರುವ ಐತಿಹಾಸಿಕ ಮತ್ತು ಪ್ರವಾಸಿ ಸ್ಥಳಗಳನ್ನು, ಆರ್ಥಿಕ ಕೇಂದ್ರಗಳನ್ನು, ಪ್ರಸಿದ್ಧ ಧಾರ್ಮಿಕ ಸ್ಥಳಗಳು ಮತ್ತು ನಾಯಕರನ್ನು ಹಾಗೂ ರಕ್ಷಣಾ ಮತ್ತು ಭದ್ರತಾ ಸಂಸ್ಥೆಗಳನ್ನು ಗುರಿಯಾಗಿಸುವ ಮೂಲಕ ಆಪರೇಷನ್ ಸಿಂದೂರ್ ಕಾರ್ಯಾಚರಣೆಗೆ ಸೇಡು ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿರುವುದಾಗಿ ವರದಿಯಾಗಿದೆ.

ಜಾಗತಿಕ ಜಿಹಾದಿ ಗುಂಪುಗಳಾದ ಐಎಸ್, ಎಕ್ಯೂ ಮತ್ತು ಅವುಗಳ ಅಂಗಸಂಸ್ಥೆಗಳು ಭಾರತ ಮತ್ತು ಉನ್ನತ ಗಣ್ಯರ ವಿರುದ್ಧ ಪದೇ ಪದೆ ಬೆದರಿಕೆಗಳನ್ನು ಹಾಕಿವೆ. ಈ ಗುಂಪುಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅಪ್‌ಲೋಡ್ ಮಾಡುವ ವಿಡಿಯೊಗಳು ಮತ್ತು ಇತರ ವಿಷಯಗಳನ್ನು ಗುಪ್ತಚರ ಸಂಸ್ಥೆಗಳು ಸೂಕ್ಷ್ಮವಾಗಿ ಗಮನಿಸುತ್ತಿವೆ. ಇದು ದ್ವೇಷ ಹಾಗೂ ದೇಶದಲ್ಲಿ ವಿಧ್ವಂಸಕ ಚಟುವಟಿಕೆಗಳನ್ನು ನಡೆಸುವ ಉದ್ದೇಶವನ್ನು ಸೂಚಿಸುತ್ತದೆ ಎಂದು ವರದಿ ತಿಳಿಸಿದೆ.