10ನೇ ತರಗತಿ ವಿದ್ಯಾರ್ಥಿಗೆ 30 ಸೆಕೆಂಡ್‌ನಲ್ಲಿ 27 ಬಾರಿ ಚಾಕುವಿನಿಂದ ಇರಿದ ಅಪ್ರಾಪ್ತರು; ಬೆಚ್ಚಿ ಬೀಳಿಸುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ
ಮಧ್ಯ ಪ್ರದೇಶದ ಭೋಪಾಲ್‌ನಲ್ಲಿ ಸ್ನೂಕರ್ ಕ್ಲಬ್‌ನಲ್ಲಿ ನಡೆದ ಭೀಕರ ದಾಳಿಯಲ್ಲಿ 10ನೇ ತರಗತಿಯ ವಿದ್ಯಾರ್ಥಿಯನ್ನು ಇಬ್ಬರು ಅಪ್ರಾಪ್ತರು ಕೇವಲ 30 ಸೆಕೆಂಡ್‌ಗಳಲ್ಲಿ 27 ಬಾರಿ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾರೆ. ಹಳೆಯ ವೈಷಮ್ಯವೇ ದಾಳಿಗೆ ಕಾರಣ ಎನ್ನಲಾಗಿದೆ. ವಿದ್ಯಾರ್ಥಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪ್ರಕರಣ ಸಂಬಂಧ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.
ವಿದ್ಯಾರ್ಥಿಯ ಮೇಲೆ ಅಪ್ರಾಪ್ತರಿಂದ ಹಲ್ಲೆ -
ಭೋಪಾಲ್, ಫೆ. 23: ಮಧ್ಯ ಪ್ರದೇಶದ (Madhya Pradesh) ಭೋಪಾಲ್‌ನಲ್ಲಿ (Bhopal) ಅತ್ಯಂತ ಭೀಕರ ಘಟನೆಯೊಂದು ನಡೆದಿದೆ. ಸ್ನೂಕರ್ ಕ್ಲಬ್ (Snooker Club) ಒಂದರಲ್ಲಿ 10ನೇ ತರಗತಿಯ ವಿದ್ಯಾರ್ಥಿಯ ಮೇಲೆ ಇಬ್ಬರು ಅಪ್ರಾಪ್ತರು ಕೇವಲ 30 ಸೆಕೆಂಡ್‌ಗಳಲ್ಲಿ 27 ಬಾರಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವರದಿಗಳ ಪ್ರಕಾರ, ಈ ಘಟನೆಯು ಫೆಬ್ರವರಿ 15ರಂದು ನಡೆದಿದ್ದರೂ, ದಾಳಿಯ ಸಿಸಿಟಿವಿ ವಿಡಿಯೊ ಫೆಬ್ರವರಿ 22ರಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರವಷ್ಟೇ ಬೆಳಕಿಗೆ ಬಂದಿದೆ. ಆರೋಪಿಗಳಾದ ಇಬ್ಬರು ಅಪ್ರಾಪ್ತರು ಕ್ಲಬ್‌ಗೆ ನುಗ್ಗಿ ವಿದ್ಯಾರ್ಥಿಯ ಮೇಲೆ ಮಿಂಚಿನ ವೇಗದಲ್ಲಿ ದಾಳಿ ನಡೆಸಿದ್ದಾರೆ. ಈ ಹಿಂದೆ ನಡೆದಿದ್ದ ಜಗಳವೊಂದರಲ್ಲಿ ಸಂತ್ರಸ್ತ ವಿದ್ಯಾರ್ಥಿಯು ಆರೋಪಿಗಳಲ್ಲಿ ಒಬ್ಬನಿಗೆ ಕಪಾಳಮೋಕ್ಷ ಮಾಡಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಈ ದಾಳಿ ನಡೆದಿದೆ ಎನ್ನಲಾಗಿದೆ.
ಟೈಮ್ಸ್ ನೌ ನವಭಾರತ್ ಸುದ್ದಿಸಂಸ್ಥೆಯ ಎಕ್ಸ್ ಪೋಸ್ಟ್:
मध्य प्रदेश के भोपाल में 10वीं के छात्र पर चाकू से हमला.. 30 सेकेंड में 27 बार चाकू से हमला#DopaharNonStop @JyotiMishra999 | Madhya Pradesh | Bhopal | Crime pic.twitter.com/CiNEY1KzUv
— Times Now Navbharat (@TNNavbharat) February 23, 2026
ವಿದ್ಯಾರ್ಥಿಗೆ ಗಂಭೀರ ಗಾಯ
ಅಪ್ರಾಪ್ತರು ನಡೆಸಿದ ದಾಳಿಯ ತೀವ್ರತೆಗೆ ವಿದ್ಯಾರ್ಥಿಯ ಕೈಗಳ ಮೇಲೆ 10ಕ್ಕೂ ಹೆಚ್ಚು ಆಳವಾದ ಗಾಯಗಳಾಗಿದ್ದು, ಎರಡು ಬೆರಳುಗಳು ಕತ್ತರಿಸಿ ಹೋಗಿವೆ. ಅಷ್ಟೇ ಅಲ್ಲದೆ ಬೆನ್ನು ಮತ್ತು ಭುಜದ ಭಾಗಕ್ಕೂ ಗಂಭೀರ ಪೆಟ್ಟಾಗಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ಮುಂದುವರಿದಿದೆ.
ಬೈಕ್ ನಿಲ್ಲಿಸಿದ್ದಕ್ಕೆ ಆರು ಜನರ ತಲೆಗೆ ಗಂಭೀರ ಪೆಟ್ಟು: ಕ್ಷುಲ್ಲಕ ಕಾರಣಕ್ಕೆ ರಕ್ತದ ಕೋಡಿ
ಪೊಲೀಸ್ ತನಿಖೆ
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ದಾಳಿ ಮಾಡಿದ ಅಪ್ರಾಪ್ತರು ಮತ್ತು ಸಂತ್ರಸ್ತ ವಿದ್ಯಾರ್ಥಿ ಒಂದೇ ಕೋಚಿಂಗ್ ಸೆಂಟರ್‌ನಲ್ಲಿ ಓದುತ್ತಿದ್ದರು. ಹಳೆಯ ವೈಷಮ್ಯವೇ ಈ ಕೃತ್ಯಕ್ಕೆ ಕಾರಣವಾಗಿದೆ. ಈಗಾಗಲೇ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ವೈದ್ಯಕೀಯ ವರದಿ ಬಂದ ನಂತರ ಮತ್ತಷ್ಟು ಗಂಭೀರ ಪ್ರಕರಣಗಳನ್ನು ದಾಖಲಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಕೇವಲ ಕ್ಷುಲ್ಲಕ ಕಾರಣಕ್ಕೆ ಅಪ್ರಾಪ್ತರು ಇಷ್ಟೊಂದು ಭೀಕರವಾಗಿ ವರ್ತಿಸಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.