ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

"ಸುಪ್ರೀಂ ಕೋರ್ಟ್ ಬಾಗಿಲು ಎಲ್ಲರಿಗೂ ಮುಕ್ತವಾಗಿ ತೆರೆದಿರುತ್ತದೆ”: ರಾಹುಲ್ ಗಾಂಧಿ ಭೇಟಿಯಾಗದಿರಲು ಕಾರಣ ಬಹಿರಂಗಪಡಿಸಿದ ಸಿಜೆಐ ಸೂರ್ಯ ಕಾಂತ್

CJI Surya Kant: ಸುಪ್ರೀಂ ಕೋರ್ಟ್‌ನ ಬಾಗಿಲು ಎಲ್ಲರಿಗೂ ಸದಾ ಮುಕ್ತವಾಗಿ ತೆರೆದಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ತಿಳಿಸಿದ್ದಾರೆ. ಸಾಮಾನ್ಯ ನಾಗರಿಕರಾಗಲಿ ಅಥವಾ ಜನಪ್ರತಿನಿಧಿಗಳಾಗಲಿ, ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದು ಎಂದು ಅವರು ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ ಎಲ್ಲರಿಗೂ ಮುಕ್ತ: ಸಿಜೆಐ ಸೂರ್ಯ ಕಾಂತ್

ಸಿಜೆಐ ಸೂರ್ಯ ಕಾಂತ್ (ಸಂಗ್ರಹ ಚಿತ್ರ) -

Priyanka P
Priyanka P Oct 12, 2026 12:14 PM

ನವದೆಹಲಿ, ಅ. 12: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರನ್ನು ಭೇಟಿಯಾಗದಿರಲು ತಾವು ತೆಗೆದುಕೊಂಡ ನಿರ್ಧಾರದ ಹಿಂದಿನ ಕಾರಣಗಳನ್ನು ಬಹಿರಂಗಪಡಿಸಲು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ (Surya Kant) ನಿರಾಕರಿಸಿದ್ದಾರೆ. ಅವರು ತಮ್ಮ ನಡುವೆ ವಿನಿಮಯವಾದ ಪತ್ರದ ಗೌಪ್ಯತೆಯನ್ನು ಕಾಯ್ದುಕೊಂಡಿದ್ದೇನೆ ಎಂದು ಹೇಳಿದ್ದಾರೆ.

ಲೋಕಸಭೆ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಸೋಮವಾರ (ಅ.12) ಸಂಜೆ 4ರಿಂದ 5 ಗಂಟೆಯ ನಡುವೆ ಭೇಟಿಗೆ ಅವಕಾಶ ಕೋರಿ ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದರು. ದೇಶದಲ್ಲಿ ನಡೆಯುತ್ತಿದೆ ಎನ್ನಲಾದ ಮತ ಕಳ್ಳತನವನ್ನು ತಡೆಯಲು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಲು, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲು ಹಾಗೂ ಮತ್ತೆ ಹಳೆಯ ಬ್ಯಾಲೆಟ್ ಪೇಪರ್ (ಕಾಗದದ ಮತಪತ್ರ) ವ್ಯವಸ್ಥೆಗೆ ಮರಳಲು ಒತ್ತಾಯಿಸಿ ಜ್ಞಾಪನಾ ಪತ್ರವನ್ನು ಸಲ್ಲಿಸಲು ಈ ಭೇಟಿಗೆ ಸಮಯ ಕೋರಲಾಗಿತ್ತು.

ವಿರೋಧ ಪಕ್ಷದ ನಾಯಕರ ಭೇಟಿಯ ಪ್ರಸ್ತಾವನೆಯನ್ನು ನಿರಾಕರಿಸಿದ ತಮ್ಮ ನಿರ್ಧಾರದ ಕುರಿತಾದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿರುವ ಭಾರತದ ಮುಖ್ಯ ನ್ಯಾಯಮೂರ್ತಿ, ತಮಗೆ ಈ ಪತ್ರವು ಒಂದು ದಿನ ಮುಂಚಿತವಾಗಿಯೇ ಲಭ್ಯವಾಗಿತ್ತು. ಅಂದೇ ರಾತ್ರಿ ತಾವು ಅದಕ್ಕೆ ಅಧಿಕೃತವಾಗಿ ಉತ್ತರಿಸಿದ್ದಾಗಿ ತಿಳಿಸಿದ್ದಾರೆ.

ಇಲ್ಲಿದೆ ಪೋಸ್ಟ್:



"ನನಗೆ ಭಾನುವಾರ (ಅ. 11) ಪತ್ರ ಬಂದಿತ್ತು. ನಾನು ನಿನ್ನೆ ರಾತ್ರಿಯೇ ಅದಕ್ಕೆ ಉತ್ತರಿಸಿದ್ದೇನೆ. ನಾನು ಆ ಪತ್ರದಲ್ಲಿ ಕೆಲವು ಕಾರಣಗಳನ್ನು ನೀಡಿದ್ದು, ಅದರ ಆಧಾರದ ಮೇಲೆ ಅವರನ್ನು ಭೇಟಿಯಾಗಿಲ್ಲ” ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಕಾರ್ಯಕ್ರಮದಲ್ಲಿ ಮಾತನಾಡಿದ ನಂತರ ಮುಖ್ಯ ನ್ಯಾಯಮೂರ್ತಿ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್‌ಗೆ ಇಂಡಿಯಾ ಒಕ್ಕೂಟದ ಮೆರವಣಿಗೆ ಇಂದು; ದೆಹಲಿಯಲ್ಲಿ ಬಿಗಿ ಭದ್ರತೆ, 6 ಮೆಟ್ರೋ ನಿಲ್ದಾಣ ಬಂದ್‌

ಪತ್ರದ ವಿವರಗಳನ್ನು ಬಹಿರಂಗಪಡಿಸಲು ಮುಖ್ಯ ನ್ಯಾಯಮೂರ್ತಿ ನಿರಾಕರಿಸಿದ್ದಾರೆ. ʼʼಆ ಪತ್ರದಲ್ಲಿ ಏನಿದೆ ಎಂಬುದನ್ನು ವಿರೋಧ ಪಕ್ಷದ ನಾಯಕರನ್ನೇ ಕೇಳಬಹುದು. ನಾನು ಅದರ ಗೌಪ್ಯತೆಯನ್ನು ಕಾಯ್ದುಕೊಂಡಿದ್ದೇನೆʼʼ ಎಂದು ಅವರು ಹೇಳಿದ್ದಾರೆ.

ಸಂಸದರು ಸೇರಿ ಜನಪ್ರತಿನಿಧಿಗಳು ತಮ್ಮ ಕಳವಳಗಳನ್ನು ಹೇಗೆ ಮುನ್ನಡೆಸಬೇಕು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯ ನ್ಯಾಯಮೂರ್ತಿ, ಸುಪ್ರೀಂ ಕೋರ್ಟ್‌ನ ಬಾಗಿಲು ಎಲ್ಲರಿಗೂ ಸದಾ ಮುಕ್ತವಾಗಿದೆ ಎಂದು ತಿಳಿಸಿದ್ದಾರೆ. ಸಾಮಾನ್ಯ ನಾಗರಿಕರಾಗಲಿ ಅಥವಾ ಜನಪ್ರತಿನಿಧಿಗಳಾಗಲಿ, ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದು ಎಂದು ಅವರು ಹೇಳಿದ್ದಾರೆ.

ʼʼಪ್ರತಿಯೊಬ್ಬ ಭಾರತೀಯ ನಾಗರಿಕನಿಗೂ ನ್ಯಾಯಾಲಯದ ಮೆಟ್ಟಿಲೇರುವ ಹಕ್ಕಿದೆ. ನ್ಯಾಯಾಂಗವು ಕಾನೂನಿನ ಪ್ರಕಾರ ಅವರ ಕುಂದುಕೊರತೆಗಳನ್ನು ಆಲಿಸುತ್ತದೆʼʼ ಎಂದು ಅವರು ಸ್ಪಷ್ಪಪಡಿಸಿದ್ದಾರೆ.