Tirupati Darshan: ತಿರುಪತಿಗೆ ಬರುವ ಭಕ್ತರೇ ಗಮನಿಸಿ; ಇಂದಿನಿಂದ ತಿಮ್ಮಪ್ಪನ ದರ್ಶನದ ಬುಕಿಂಗ್ನಲ್ಲಿ ಹೊಸ ಬದಲಾವಣೆ
ವಿಶ್ವಪ್ರಸಿದ್ಧ ತಿರುಪತಿ ಏಳುಕೊಂಡಲ ಶ್ರೀವಾರಿ ದೇವಸ್ಥಾನಕ್ಕೆ ಪ್ರತಿದಿನವೂ ವಿವಿಧ ರಾಜ್ಯಗಳು ಹಾಗೂ ವಿದೇಶಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ದೇವರ ದರ್ಶನ ಪಡೆಯಲು ಭಕ್ತರು ಹಲವು ಗಂಟೆಗಳ ಕಾಲ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ. ತಮಿಳುನಾಡು ಮತ್ತು ಕರ್ನಾಟಕದಿಂದ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಭಕ್ತರ ಸೌಕರ್ಯಕ್ಕಾಗಿ ದೇವಸ್ಥಾನ ಆಡಳಿತವು ವಿಐಪಿ ಹಾಗೂ ವಿಶೇಷ ದರ್ಶನ ಟಿಕೆಟ್‌ಗಳನ್ನು ಮೂರು ತಿಂಗಳ ಮುಂಚಿತವಾಗಿಯೇ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡುತ್ತದೆ.
ತಿರುಮಲ ತಿರುಪತಿ ದೇವಸ್ಥಾನ -
ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಂ (Tirumala Tirupati Devasthanam) ಜನವರಿ 9ರಿಂದ ಪ್ರಯೋಗಾತ್ಮಕವಾಗಿ ಶ್ರೀವಾಣಿ ಟ್ರಸ್ಟ್ (Srivani Trust) ಟಿಕೆಟ್‌ಗಳಿಗಾಗಿ ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆಯನ್ನು ಪರಿಚಯಿಸಲು ಸಿದ್ಧವಾಗಿದೆ. ಶ್ರೀವಣಿ ಟ್ರಸ್ಟ್‌ಗೆ 10,500 ರೂ. ಅಥವಾ ಅದಕ್ಕಿಂತ ಹೆಚ್ಚು ದೇಣಿಗೆ ನೀಡುವ ಭಕ್ತರಿಗೆ ಶ್ರೀವಾಣಿ ಟ್ರಸ್ಟ್ ಮೂಲಕ ನೀಡಲಾಗುವ ವಿಶೇಷ ವಿಐಪಿ ದರ್ಶನ ಟಿಕೆಟ್‌ಗಳು ಇವುಗಳಾಗಿದ್ದು, ಅದೇ ದಿನ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ತ್ವರಿ ಮತ್ತು ಕಡಿಮೆ ಜನಸಂದಣಿಯೊಂದಿಗೆ ತಿಮ್ಮಪ್ಪನ ದರ್ಶನ ಪಡೆಯಲು ಅವಕಾಶ ಕಲ್ಪಿಸುತ್ತವೆ.
ಈಗ ತಿರುಮಲದ ಕೌಂಟರ್‌ಗಳಲ್ಲಿ ವಿತರಿಸಲಾಗುತ್ತಿರುವ 800 ಶ್ರೀವಾಣಿ ಟ್ರಸ್ಟ್ ಬ್ರೇಕ್ ದರ್ಶನ ಟಿಕೆಟ್‌ಗಳು ಇನ್ನು ಮುಂದೆ ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡುವ ಮೂಲಕ ಲಭ್ಯವಾಗುವಂತೆ ಮಾಡಲಾಗುತ್ತದೆ. ಮೂರು ತಿಂಗಳ ಮುಂಚಿತವಾಗಿ ಬಿಡುಗಡೆ ಮಾಡಲಾಗುವ 500 ಟಿಕೆಟ್‌ಗಳ ಆನ್‌ಲೈನ್ ಕೋಟಾಗೆ ಇವು ಹೆಚ್ಚುವರಿಯಾಗಿರುತ್ತವೆ. ಪ್ರತಿದಿನ ಬೆಳಿಗ್ಗೆ 9 ಗಂಟೆಯಿಂದ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತಿದ್ದು, ಮಧ್ಯಾಹ್ನ 2 ಗಂಟೆಯವರೆಗೆ ಬುಕ್ಕಿಂಗ್‌ಗೆ ಅವಕಾಶವಿರುತ್ತದೆ. ಅದೇ ದಿನದ ದರ್ಶನಕ್ಕಾಗಿ ಭಕ್ತರು ಸಂಜೆ 4 ಗಂಟೆಗೆ ತಿರುಮಲದಲ್ಲಿ ಹಾಜರಿರಬೇಕಾಗುತ್ತದೆ ಎಂದು ಟಿಟಿಡಿ ಹೇಳಿದೆ.
ಉಪಗ್ರಹ ಉಡಾವಣೆಗೂ ಮುನ್ನ ತಿರುಪತಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಇಸ್ರೋ ವಿಜ್ಞಾನಿಗಳು
ಒಂದು ತಿಂಗಳ ಪ್ರಯೋಗಾತ್ಮಕ ಅವಧಿಯ ಬಳಿಕ, ಒಟ್ಟಾರೆ ಶ್ರೀವಾಣಿ ದರ್ಶನ ಸಮಯಗಳ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ದರ್ಶನಕ್ಕಾಗಿ ದೀರ್ಘಕಾಲ ಕಾಯುವುದನ್ನು ತಪ್ಪಿಸಲು ಭಕ್ತರು ಆನ್‌ಲೈನ್ ಬುಕ್ಕಿಂಗ್ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಟಿಟಿಡಿ ಮನವಿ ಮಾಡಿದೆ.
ಮಾರ್ಚ್ 3ರಂದು 10 ಗಂಟೆ ದೇವಸ್ಥಾನ ಬಂದ್
ಇದೇ ಮಾರ್ಚ್ 3ರಂದು ಚಂದ್ರಗ್ರಹಣದ ಇರುವುದರಿಂದ ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನವು 10 ಗಂಟೆಗಳಿಗಿಂತ ಹೆಚ್ಚು ಕಾಲ ಬಂದ್ ಆಗಿರಲಿದೆ ಎಂದು ಟಿಟಿಡಿ ತಿಳಿಸಿದೆ. ಭಕ್ತರು ತಮ್ಮ ಟಿಕೆಟ್ ಬುಕ್ಕಿಂಗ್ ಹಾಗೂ ವಸತಿ ವ್ಯವಸ್ಥೆಯನ್ನು ಅದಕ್ಕೆ ಅನುಗುಣವಾಗಿ ಯೋಜಿಸಿಕೊಳ್ಳುವಂತೆ ಟಿಟಿಡಿ ಸಲಹೆ ನೀಡಿದೆ. ಮಾರ್ಚ್ 3ರಂದು ಚಂದ್ರಗ್ರಹಣವು ಮಧ್ಯಾಹ್ನ 3.20ರಿಂದ ಸಂಜೆ 6.47ರವರೆಗೆ, ಅಂದಾಜು ಮೂರೂವರೆ ಗಂಟೆಗಳ ಕಾಲ ಇರಲಿದೆ. ಸಂಪ್ರದಾಯದಂತೆ, ದೇವಸ್ಥಾನದ ಬಾಗಿಲುಗಳನ್ನು ಆರು ಗಂಟೆಗಳ ಮುಂಚಿತವಾಗಿ ಮುಚ್ಚಲಾಗುತ್ತದೆ. ಅದರಂತೆ, ಮಾರ್ಚ್ 3ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 7.30ರವರೆಗೆ ದೇವಸ್ಥಾನ ಮುಚ್ಚಿರಲಿದೆ ಎಂದು ಟಿಟಿಡಿ ಹೇಳಿದೆ.
ಚಂದ್ರಗ್ರಹಣದ ನಂತರ ದೇವಸ್ಥಾನದಲ್ಲಿ ಶುದ್ಧೀಕರಣ ವಿಧಿವಿಧಾನಗಳು ಪೂರ್ಣಗೊಂಡ ನಂತರ, ಅದೇ ದಿನ ರಾತ್ರಿ 8.30 ಗಂಟೆಯಿಂದ ಭಕ್ತರಿಗೆ ತಿಮ್ಮಪ್ಪನ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಗ್ರಹಣದ ಹಿನ್ನೆಲೆಯಲ್ಲಿ ಆ ದಿನದ ಎಲ್ಲಾ ಇತರ ಸೇವೆಗಳನ್ನು ರದ್ದುಗೊಳಿಸಲಾಗಿದೆ ಎಂದು ಟಿಟಿಡಿ ತಿಳಿಸಿದೆ.