ಜಾತಿ ಆಧಾರಿತ ರಾಜಕೀಯ ರ‍್ಯಾಲಿ, ವಾಹನ ಸ್ಟಿಕ್ಕರ್, ಸೈನ್‌ಬೋರ್ಡ್‌ಗಳಿಗೆ ನಿಷೇಧ
ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಜಾತಿ ಆಧಾರಿತ ರ‍್ಯಾಲಿಗಳನ್ನು ನಿಷೇಧಿಸಿದೆ. ವಾಹನಗಳಲ್ಲಿ ಜಾತಿ ಸೂಚಿಸುವ ಘೋಷಣೆಗಳನ್ನ, ಸಂದೇಶಗಳ ಪೋಸ್ಟರ್ ಗಳನ್ನು ಹಾಕುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಯೋಗಿ ಆದಿತ್ಯನಾಥ್ -

ಲಖನೌ: ಉತ್ತರ ಪ್ರದೇಶ (Uttar Pradesh) ಸರ್ಕಾರವು ಜಾತಿಯ ಉಲ್ಲೇಖವನ್ನು ಪೊಲೀಸ್ ದಾಖಲೆಗಳು (Police Documents), ಸರ್ಕಾರಿ ಫಾರ್ಮ್‌ಗಳು, ವಾಹನಗಳು ಮತ್ತು ಸಾರ್ವಜನಿಕ ಸ್ಥಳಗಳಿಂದ ತೆಗೆದುಹಾಕಲು ಆದೇಶವನ್ನು ಹೊರಡಿಸಿದೆ. ಜಾತಿಯ (Caste) ಉಲ್ಲೇಖ, ರಾಷ್ಟ್ರ ವಿರೋಧಿ ಮತ್ತು ಸಾಂವಿಧಾನಿಕ, ನೈತಿಕತೆಗೆ ವಿರುದ್ಧ ಎಂದು ವಿವರಿಸಿದ ಅಲಹಾಬಾದ್ ಹೈಕೋರ್ಟ್ (Allahabad High Court) ತೀರ್ಪಿನ ಅನುಸಾರ ಈ ಕ್ರಮ ಕೈಗೊಳ್ಳಲಾಗಿದೆ.
ಆದೇಶದ ವಿವರ
ಮುಖ್ಯ ಕಾರ್ಯದರ್ಶಿ ದೀಪಕ್ ಕುಮಾರ್ ಅವರ ಆದೇಶದಂತೆ, ಎಫ್‌ಐಆರ್, ಬಂಧನ ಮೆಮೊ, ಇತರ ಪೊಲೀಸ್ ದಾಖಲೆಗಳಲ್ಲಿ ಇನ್ನು ಮುಂದೆ ಜಾತಿಯನ್ನು ಉಲ್ಲೇಖಿಸದೆ, ಗುರುತಿಗಾಗಿ ಪೋಷಕರ ಹೆಸರನ್ನು ಬಳಸಲಾಗುವುದು. ಪೊಲೀಸ್ ಠಾಣೆಯ ನೋಟಿಸ್ ಬೋರ್ಡ್‌ಗಳು, ವಾಹನಗಳು ಮತ್ತು ಫಲಕಗಳಿಂದ ಜಾತಿ ಸಂಕೇತಗಳು, ಘೋಷಣೆಗಳನ್ನು ತಕ್ಷಣ ತೆಗೆಯಲು ಸೂಚನೆ ನೀಡಲಾಗಿದೆ. ಜಾತಿ ಆಧಾರಿತ ರ‍್ಯಾಲಿಗಳನ್ನು ನಿಷೇಧಿಸಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇದರ ಉಲ್ಲಂಘನೆಯನ್ನು ಗಮನಿಸಲು ಪೊಲೀಸರಿಗೆ ಆದೇಶಿಸಲಾಗಿದೆ.
ವಿನಾಯಿತಿ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ದಾಖಲಾಗುವ ಪ್ರಕರಣಗಳಲ್ಲಿ ಮಾತ್ರ ಜಾತಿಯ ಉಲ್ಲೇಖ ಕಾನೂನು ಅಗತ್ಯವಾಗಿರುವುದರಿಂದ ವಿನಾಯಿತಿ ನೀಡಲಾಗಿದೆ. ಪೊಲೀಸ್ ಮಾರ್ಗಸೂಚಿಗಳು ಮತ್ತು ಕೈಪಿಡಿಗಳಲ್ಲಿ ತಿದ್ದುಪಡಿಗಳನ್ನು ಮಾಡಲಾಗುವುದು.
ಈ ಸುದ್ದಿಯನ್ನು ಓದಿ: Viral Video: ವಿದ್ಯಾರ್ಥಿಯಿಂದ ಪಾದ ಮಸಾಜ್ ಪಡೆದ ಶಿಕ್ಷಕಿ; ಆಘಾತಕಾರಿ ವಿಡಿಯೊ ವೈರಲ್, ನೆಟ್ಟಿಗರು ಆಕ್ರೋಶ
ಆದೇಶದ ಪ್ರಮುಖ ಅಂಶಗಳು
- CCTNSನಿಂದ ಜಾತಿ ತೆಗೆದುಹಾಕುವಿಕೆ: ಕ್ರೈಂ ಆಂಡ್ ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್‌ವರ್ಕ್‌ನಿಂದ ‘ಜಾತಿ’ ಕಾಲಂ ತೆಗೆಯಲಾಗುವುದು.
- ತಾಯಿಯ ಹೆಸರು ದಾಖಲು: ಗುರುತಿಗಾಗಿ ತಂದೆ/ಗಂಡನ ಜೊತೆಗೆ ತಾಯಿಯ ಹೆಸರನ್ನು ದಾಖಲಿಸಲಾಗುವುದು.
- ಜಾತಿ ಕಾಲಂ ಖಾಲಿ ಬಿಡುವುದು: ತಾಂತ್ರಿಕ ಬದಲಾವಣೆಯವರೆಗೆ ಜಾತಿ ಕಾಲಂ ಅನಿವಾರ್ಯವಲ್ಲ, ಖಾಲಿ ಬಿಡಬೇಕು.
- ವಾಹನಗಳಿಂದ ಜಾತಿ ಗುರುತು ತೆಗೆಯುವಿಕೆ: ಜಾತಿಯನ್ನು ಸೂಚಿಸುವ ಸ್ಟಿಕರ್‌ಗಳಿಗೆ ಮೋಟಾರು ವಾಹನ ಕಾಯ್ದೆಯಡಿ ಶಿಕ್ಷೆ.
- ಜಾತಿ ರ‍್ಯಾಲಿಗಳ ನಿಷೇಧ: ಜಾತಿ ಆಧಾರಿತ ಸಾರ್ವಜನಿಕ ಸಭೆಗಳನ್ನು ನಿಷೇಧಿಸಲಾಗಿದೆ.
ಕೋರ್ಟ್‌ನ ಆಕ್ಷೇಪ
ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಎಫ್‌ಐಆರ್, ಬಂಧನ ಮೆಮೊಗಳಲ್ಲಿ ಜಾತಿಯ ಉಲ್ಲೇಖವು ಗುರುತಿನ ಚೌಕಟ್ಟಿನಂತೆ ಕಾರ್ಯನಿರ್ವಹಿಸುತ್ತದೆ. ಇದು ತಾರತಮ್ಯವನ್ನು ಉತ್ತೇಜಿಸುತ್ತದೆ ಮತ್ತು ಸಾಂವಿಧಾನಿಕ ಮೌಲ್ಯಗಳಿಗೆ ಧಕ್ಕೆ ತರುತ್ತದೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ‘ಎಕ್ಸ್’ನಲ್ಲಿ, “5,000 ವರ್ಷಗಳಿಂದ ಮನಸ್ಸಿನಲ್ಲಿ ಬೇರೂರಿರುವ ಜಾತಿ ತಾರತಮ್ಯವನ್ನು ಆಡಳಿತಾತ್ಮಕ ಕ್ರಮಗಳಿಂದ ಮಾತ್ರ ತೊಡೆಯಲಾಗದು. ಜಾತಿಯನ್ನು ಕೇಳುವ ಮನೋಭಾವ, ಜಾತಿ ಆಧಾರಿತ ಆರೋಪಗಳನ್ನು ಹೇಗೆ ತಡೆಯುವುದು?” ಎಂದು ಪ್ರಶ್ನಿಸಿದ್ದಾರೆ. ಈ ಆದೇಶವು ಜಾತಿವಾದದ ವಿರುದ್ಧದ ಹೋರಾಟದಲ್ಲಿ ಮಹತ್ವದ ಹೆಜ್ಜೆಯಾಗಿದೆ.