Ranbir Kapoor: ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧ ಕಾಯ್ದೆ ಉಲ್ಲಂಘನೆ: ನಟ ರಣಬೀರ್ ಕಪೂರ್ ವಿರುದ್ಧ ದೂರು
ʼದಿ ಬ್ಯಾ***ಡ್ಸ್ ಆಫ್ʼ ಸೀರೀಸ್‌ನಲ್ಲಿ ನಟ ರಣಬೀರ್ ಕಪೂರ್ ಇ-ಸಿಗರೇಟ್ ಸೇದುತ್ತಿರುವ ದೃಶ್ಯವನ್ನು ತೋರಿಸಲಾಗಿದ್ದು, ಇದು 2019ರ ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧ ಕಾಯ್ದೆಯ ಉಲ್ಲಂಘನೆ. ಹೀಗಾಗಿ ಅವರು ಹಾಗೂ ವೆಬ್ ಶೋ ನಿರ್ಮಾಪಕರು ಮತ್ತು ನೆಟ್‌ಫ್ಲಿಕ್ಸ್ ವಿರುದ್ಧ ಪ್ರಕರಣ ದಾಖಲಿಸುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಮುಂಬೈ ಪೊಲೀಸರಿಗೆ ಆಗ್ರಹಿಸಿದೆ.

-

ಮುಂಬೈ: ಬಾಲಿವುಡ್ ನಟ ರಣಬೀರ್ ಕಪೂರ್ (actor Ranbir Kapoor) 2019ರ ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧ ಕಾಯ್ದೆಯನ್ನು (Electronic Cigarette Prohibition Act) ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (National Human Rights Commission) ಈ ಕುರಿತು ಕ್ರಮ ಕೈಗೊಳ್ಳುವಂತೆ ಮುಂಬೈ ಪೊಲೀಸರಿಗೆ (Mumbai Police) ಸೂಚಿಸಿದೆ. ʼದಿ ಬ್ಯಾ***ಡ್ಸ್ ಆಫ್ ಬಾಲಿವುಡ್ʼ ಸೀರೀಸ್‌ನಲ್ಲಿ ರಣಬೀರ್ ಕಪೂರ್ ಇ-ಸಿಗರೇಟ್ ಸೇದುತ್ತಿರುವ ದೃಶ್ಯವನ್ನು ತೋರಿಸಲಾಗಿದೆ. ಆದ್ದರಿಂದ ಈ ಚಿತ್ರದ ನಿರ್ಮಾಪಕರು ಮತ್ತು ನೆಟ್‌ಫ್ಲಿಕ್ಸ್ ವಿರುದ್ಧ ಪ್ರಕರಣ ದಾಖಲಿಸುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ತಿಳಿಸಿದೆ.
ʼದಿ ಬ್ಯಾ***ಡ್ಸ್ ಆಫ್ ಬಾಲಿವುಡ್ʼ ಸೀರೀಸ್‌ನಲ್ಲಿ ನಟ ರಣಬೀರ್ ಕಪೂರ್ ಇ-ಸಿಗರೇಟ್ ಸೇದುತ್ತಿರುವ ದೃಶ್ಯವನ್ನು ತೋರಿಸಲಾಗಿದೆ. ಇದು 2019ರ ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧ ಕಾಯ್ದೆಯ ಉಲ್ಲಂಘನೆಯಾಗಿದೆ. ಇ- ಸಿಗರೇಟ್‌ಗಳ ಜಾಹೀರಾತು, ಚಿತ್ರಣ ಹಾಗೂ ಪ್ರಚಾರದಲ್ಲಿ ಭಾಗಿಯಾಗಿದ್ದಕ್ಕಾಗಿ ನಟ ರಣಬೀರ್ ಕಪೂರ್, ʼದಿ ಬ್ಯಾ***ಡ್ಸ್ ಆಫ್ ಬಾಲಿವುಡ್ʼ ಸರಣಿಯ ನಿರ್ಮಾಪಕರು ಮತ್ತು ನೆಟ್‌ಫ್ಲಿಕ್ಸ್ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಮುಂಬೈ ಪೊಲೀಸರಿಗೆ ಒತ್ತಾಯಿಸಿದೆ.
ಈ ಕುರಿತು ಆಯೋಗಕ್ಕೆ ದೂರು ನೀಡಿರುವ ವಿನಯ್ ಜೋಶಿ, ಆರ್ಯನ್ ಖಾನ್ ನಿರ್ದೇಶನದ ʼದಿ ಬ್ಯಾ***ಡ್ಸ್ ಆಫ್ ಬಾಲಿವುಡ್ʼ ಸೀರೀಸ್ ಪ್ರಸ್ತುತ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿದೆ. ಈ ಸರಣಿಯ ಒಂದು ದೃಶ್ಯದಲ್ಲಿ ರಣಬೀರ್ ಕಪೂರ್ ಯಾವುದೇ ಎಚ್ಚರಿಕೆ ಅಥವಾ ಹಕ್ಕು ನಿರಾಕರಣೆ ಇಲ್ಲದೆ ಇ-ಸಿಗರೇಟ್ ಸೇದುತ್ತಿರುವುದನ್ನು ಕಾಣಬಹುದು ಎಂದು ತಿಳಿಸಿದ್ದಾರೆ.
ಚಿತ್ರದ ಈ ದೃಶ್ಯವನ್ನು ಬಹಿರಂಗವಾಗಿ ಸ್ಟ್ರೀಮ್ ಮಾಡಲಾಗಿದೆ. ಇದು ನಿಷೇಧಿತ ವಸ್ತುಗಳ ಬಳಕೆಯನ್ನು ಉತ್ತೇಜಿಸುತ್ತದೆ. ಯುವ ವೀಕ್ಷಕರನ್ನು ದಾರಿ ತಪ್ಪಿಸುತ್ತದೆ. ಇಂತಹ ಬೇಜವಾಬ್ದಾರಿ ವಿಷಯವು ಕಾನೂನುಬಾಹಿರ ಚಟುವಟಿಕೆಗಳನ್ನು ಉತ್ತೇಜಿಸುತ್ತದೆ, ಕಾನೂನು ಜಾರಿ ಸಂಸ್ಥೆಗಳನ್ನು ಅಗೌರವಿಸುತ್ತದೆ ಮತ್ತು ಸಾರ್ವಜನಿಕ ಆರೋಗ್ಯ ಮತ್ತು ನೈತಿಕತೆಗೆ ಹಾನಿ ಮಾಡುತ್ತದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಆಯೋಗವು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿಗೆ ನೊಟೀಸ್ ಜಾರಿ ಮಾಡಿದೆ.
ಇದನ್ನೂ ಓದಿ: Digital Arrest: ಬಿಜೆಪಿ ಸಂಸದ ಸುಧಾಕರ್ ಪತ್ನಿ ಡಿಜಿಟಲ್ ಅರೆಸ್ಟ್; 14 ಲಕ್ಷ ದೋಚಿದ ಸೈಬರ್ ವಂಚಕರು!
ಎಲೆಕ್ಟ್ರಾನಿಕ್ ಸಿಗರೇಟ್ ತಯಾರಕರು, ಆಮದುದಾರರ ಗುರುತು ಮತ್ತು ಕಾರ್ಯಾಚರಣೆಗಳ ಬಗ್ಗೆ ತನಿಖೆ ನಡೆಸಲು ಮುಂಬೈ ಪೊಲೀಸ್ ಆಯುಕ್ತರಿಗೆ ಸೂಚಿಸಲಾಗಿದೆ. ಇದರ ವರದಿ ಸಲ್ಲಿಸಲು ಎರಡು ವಾರ ಕಾಲಾವಕಾಶ ನೀಡುವಂತೆ ಆಯುಕ್ತರು ತಿಳಿಸಿದ್ದಾರೆ.