Viral News: ಮಹಾ ಕುಂಭಮೇಳದಲ್ಲಿ ಭಾರೀ ಟ್ರಾಫಿಕ್ ಜಾಮ್; 300 ಕಿ.ಮೀ. ಸಾಲುಗಟ್ಟಿ ನಿಂತ ವಾಹನಗಳು
ಉತ್ತರಪ್ರದೇಶದ ಪ್ರಯಾಗ್‍ರಾಜ್‍ನಲ್ಲಿ ಮಹಾಕುಂಭ ಮೇಳ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಗ್‍ರಾಜ್‍ಗೆ ಹೋಗುವ ಮಾರ್ಗಗಳಲ್ಲಿ 300 ಕಿ.ಮೀ. ಉದ್ದಕ್ಕೆ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ. ಇದರಿಂದ ಮಹಾ ಕುಂಭಕ್ಕೆ ಹೋಗುವ ಸಾವಿರಾರು ಭಕ್ತರು ಹೆದ್ದಾರಿಗಳಲ್ಲಿ ಸಿಲುಕಿ ಪರದಾಡುವಂತಾಗಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಲಖನೌ: ಉತ್ತರಪ್ರದೇಶದ ಪ್ರಯಾಗ್‍ರಾಜ್‍ನಲ್ಲಿ ಮಹಾ ಕುಂಭಮೇಳ ನಡೆಯುತ್ತಿರುವ ಹಿನ್ನೆಲೆಯಲ್ಲಿ ಲಕ್ಷಾಂತರ ಭಕ್ತರು ಪ್ರತಿ ದಿನ ಆಗಮಿಸುತ್ತಿದ್ದಾರೆ. ಕುಂಭಮೇಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಾಹನ ಬರುತ್ತಿರುವ ಹಿನ್ನೆಲೆಯಲ್ಲಿ ನೂರಾರು ಕಿಲೋಮೀಟರ್‌ಗಳಷ್ಟು ಉದ್ದಕ್ಕೆ ಭಾರೀ ಟ್ರಾಫಿಕ್ ಜಾಮ್ ಕಂಡು ಬಂದ. ಇದರಿಂದ ಮಹಾ ಕುಂಭಕ್ಕೆ ಹೋಗುವ ಸಾವಿರಾರು ಭಕ್ತರು ಹೆದ್ದಾರಿಗಳಲ್ಲಿ ಸಿಲುಕಿಕೊಂಡಿದ್ದಾರೆ. ಟ್ರಾಫಿಕ್ ಜಾಮ್‍ನಲ್ಲಿ ಸಿಕ್ಕಿಬಿದ್ದ ವಾಹನಗಳ ಸಾಲು 300 ಕಿ.ಮೀ.ವರೆಗೆ ವಿಸ್ತರಿಸಿದೆ ಎಂದು ಮೂಲಗಳು ತಿಳಿಸಿವೆ. ಇದೀಗ ಎಲ್ಲೆಡೆ ವೈರಲ್(Viral News) ಆಗಿದೆ.
ವಸಂತ ಪಂಚಮಿಯ ಅಮೃತ್ ಸ್ನಾನದ ಬಳಿಕವೂ ಲಕ್ಷಾಂತರ ಜನರು ಪವಿತ್ರ ಸ್ನಾನಕ್ಕಾಗಿ ಪ್ರಯಾಗ್‍ರಾಜ್‍ಗೆ ಹೋಗುತ್ತಿದ್ದಾರೆ. ಸಂಚಾರವನ್ನು ನಿರ್ವಹಿಸಲು ಕಷ್ಟಪಡುತ್ತಿರುವ ನೆರೆಯ ಮಧ್ಯಪ್ರದೇಶದ ಹಲವಾರು ಜಿಲ್ಲೆಗಳ ಪೊಲೀಸರು ಪ್ರಯಾಗ್‍ರಾಜ್‍ಗೆ ಹೋಗುವ ಮಾರ್ಗದಲ್ಲಿ ವಾಹನ ಸಂಚಾರವನ್ನು ನಿಲ್ಲಿಸಿದ್ದಾರೆ. "200-300 ಕಿ.ಮೀ. ಟ್ರಾಫಿಕ್ ಜಾಮ್ ಇರುವುದರಿಂದ ಇಂದು ಪ್ರಯಾಗ್‌ರಾಜ್ ಕಡೆಗೆ ಹೋಗುವುದು ಅಸಾಧ್ಯ" ಎಂದು ಪೊಲೀಸರು ತಿಳಿಸಿದ್ದಾರೆ.
ವಾರಾಂತ್ಯದ ಜನದಟ್ಟಣೆಯಿಂದ ಟ್ರಾಫಿಕ್ ಜಾಮ್ ಉಂಟಾಗಿದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ (ರೇವಾ ವಲಯ) ಸಾಕೇತ್ ಪ್ರಕಾಶ್ ಪಾಂಡೆ ತಿಳಿಸಿದ್ದಾರೆ. ಒಂದೆರಡು ದಿನಗಳಲ್ಲಿ ಪರಿಸ್ಥಿತಿ ಸರಾಗವಾಗುವ ಸಾಧ್ಯತೆಯಿದೆ ಮತ್ತು ಪ್ರಯಾಗ್‍ರಾಜ್ ಆಡಳಿತದ ಸಮನ್ವಯದೊಂದಿಗೆ ಮಾತ್ರ ವಾಹನಗಳನ್ನು ಅನುಮತಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ವಾರಾಣಸಿ, ಲಖನೌ ಮತ್ತು ಕಾನ್ಪುರದಿಂದ ಪ್ರಯಾಗ್‍ರಾಜ್‍ಗೆ ಹೋಗುವ ಮಾರ್ಗಗಳಲ್ಲಿ 25 ಕಿ.ಮೀ.ವರೆಗೆ ಟ್ರಾಫಿಕ್ ಜಾಮ್ ಆಗಿರುವುದು ವರದಿಯಾಗಿದೆ. ಮೆಗಾ ಕುಂಭ ಉತ್ಸವವನ್ನು ಆಯೋಜಿಸುತ್ತಿರುವ ನಗರದ ಒಳಗೂ ಸಹ, ಸುಮಾರು 7 ಕಿ.ಮೀ.ವರೆಗೆ ಟ್ರಾಫಿಕ್ ಜಾಮ್ ಕಂಡುಬಂದಿದೆ.
ಪ್ರಯಾಗ್‌ರಾಜ್ ಜಂಕ್ಷನ್ ನಿಲ್ದಾಣದಲ್ಲಿ ಸದ್ಯಕ್ಕೆ ಒನ್‍ವೇ ಸಂಚಾರ ವ್ಯವಸ್ಥೆ ಜಾರಿಯಲ್ಲಿದೆ ಎನ್ನಲಾಗಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಪ್ರಯಾಗ್‍ರಾಜ್ ನಲ್ಲಿನ ಸಂಚಾರ ದಟ್ಟಣೆಯ ಬಗ್ಗೆ ಉತ್ತರ ಪ್ರದೇಶ ಸರ್ಕಾರವನ್ನು ಟೀಕಿಸಿದ್ದಾರೆ. ಇದು ನಗರದಲ್ಲಿ ಅಗತ್ಯ ವಸ್ತುಗಳ ಕೊರತೆಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ಇಂದು 46 ಲಕ್ಷಕ್ಕೂ ಹೆಚ್ಚು ಭಕ್ತರು ಪವಿತ್ರ ಸಂಗಮದಲ್ಲಿ ಸ್ನಾನ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ತಿಂಗಳು ಮಹಾ ಕುಂಭ ಪ್ರಾರಂಭವಾದಾಗಿನಿಂದ ಒಟ್ಟು 44 ಕೋಟಿ ಯಾತ್ರಾರ್ಥಿಗಳು ಸ್ನಾನ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Mahakumbh 2025: ಪ್ರಯಾಗ್‌ರಾಜ್‌ನಲ್ಲಿ ಕ್ರಿಕೆಟ್ ಆಟವಾಡಿದ ಸಾಧುಗಳು; ವಿಡಿಯೊ ವೈರಲ್
ಇತ್ತೀಚಿಗೆ ಸೋಶಿಯಲ್ ಮೀಡಿಯಾದ ವಿಡಿಯೊಂದರಲ್ಲಿ ಮಹಾ ಕುಂಭಮೇಳದ ಸಾಧುಗಳು ಕ್ರಿಕೆಟ್ ಪಂದ್ಯವನ್ನು ಆಡುವುದು ಸೆರೆಯಾಗಿದೆ. ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೊದಲ್ಲಿ ಜನರ ಜತೆ ಕೇಸರಿ ಧೋತಿ ಧರಿಸಿದ ಬಾಬಾ ಬಾಟಿಂಗ್ ಮಾಡುವುದು ಸೆರೆಯಾಗಿದೆ. ಜನ ಕೂಡ ಫುಲ್ ಜೋಶ್‌ನಲ್ಲಿ ಸಾಧುವನ್ನು ಹುರಿದುಂಬಿಸಿದ್ದಾರೆ. ಈ ವಿಡಿಯೊಗೆ 3,000 ಹೆಚ್ಚು ಲೈಕ್ಸ್ ಸಿಕ್ಕಿದೆ ಮತ್ತು ಅನೇಕರು ಕಾಮೆಂಟ್ ಮೂಲಕ ತಮ್ಮ ಪ್ರತಿಕ್ರಿಯೆಗಳನ್ನು ನಿಡಿದ್ದಾರೆ. ಕೆಲವು ನೆಟ್ಟಿಗರು ಕ್ಲಿಪ್ ಅನ್ನು ಶ್ಲಾಘಿಸಿದರು ಮತ್ತು ಇದು ಇಂದು ನೋಡಿದ ಅತ್ಯಂತ ಸುಂದರವಾದ ರೀಲ್‍ಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ. ಜನರು ಈ ಪಂದ್ಯಕ್ಕೆ ತಮ್ಮ ಪದಗಳಲ್ಲಿ ಶೀರ್ಷಿಕೆ ನೀಡಿದ್ದಾರೆ. ಒಬ್ಬರು ಇದನ್ನು "ಬಾಬಾ ಇಲೆವೆನ್ ವರ್ಸಸ್ ಪ್ರಯಾಗ್‌ರಾಜ್" ಎಂದು ಕರೆದರೆ, ಇನ್ನೊಬ್ಬರು "ಇದು ಮಹಾಕುಂಭ ನಾಗಾ ಲೀಗ್" ಎಂದು ಬರೆದಿದ್ದಾರೆ.