ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರತದಲ್ಲಿ ಅಡಗಿದ್ದ ಅಮೆರಿಕ ಪ್ರಜೆ ನೇಪಾಳಕ್ಕೆ ಪರಾರಿಯಾಗುವಾಗ ಅರೆಸ್ಟ್‌; ಯೋಧ ಎಂದು ಹೇಳಿಕೊಂಡು ಓಡಾಡಿಕೊಂಡಿದ್ದ ಈತನ ಉದ್ದೇಶ ಏನಾಗಿತ್ತು?

American Detained: ಅಮೆರಿಕದ ನೌಕಾಪಡೆ ಹಾಗೂ ವಿಶೇಷ ಪಡೆಯ ಮಾಜಿ ಯೋಧ ಎಂದು ಹೇಳಿಕೊಂಡಿರುವ ಜೋರ್ಡನ್ ಬ್ರೌನ್‌ನನ್ನು ಉತ್ತರ ಪ್ರದೇಶದ ಸೋನೌಲಿ ಭಾರತ–ನೇಪಾಳ ಗಡಿಯಲ್ಲಿ ಬಂಧಿಸಲಾಗಿದೆ. ಮಾನ್ಯ ದಾಖಲೆಗಳಿಲ್ಲದೆ ನೇಪಾಳ ಪ್ರವೇಶಿಸಲು ಯತ್ನಿಸಿದ ವೇಳೆ ಗಡಿ ಭದ್ರತಾ ಪಡೆ ತಡೆದಿದೆ. ಆತನ ಹೇಳಿಕೆಗಳ ಸತ್ಯಾಸತ್ಯತೆ ಕುರಿತು ತನಿಖೆ ಮುಂದುವರಿದಿದೆ.

ಅಮೆರಿಕ ನೌಕಾಪಡೆಯ ಮಾಜಿ ಯೋಧ ಬಂಧನ

ಉತ್ತರ ಪ್ರದೇಶದಲ್ಲಿ ಅಮೆರಿಕ ಪ್ರಜೆಯ ಬಂಧನ -

Profile
Sushmitha Jain Jul 14, 2026 5:53 PM

ಲಖನೌ, ಜು. 14: ಅಮೆರಿಕದ ನೌಕಾಪಡೆ ಹಾಗೂ ವಿಶೇಷ ಪಡೆಯ ಮಾಜಿ ಯೋಧ ಎಂದು ಹೇಳಿಕೊಂಡಿರುವ ಜೋರ್ಡನ್ ಬ್ರೌನ್ (Jordan Brown) ಎಂಬಾತನನ್ನು ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯ ಭಾರತ–ನೇಪಾಳ ಗಡಿಯ ಸೋನೌಲಿ ಪ್ರದೇಶದಲ್ಲಿ ಗಡಿ ಭದ್ರತಾ ಪಡೆ (Sashastra Seema Bal - SSB) ಸಿಬ್ಬಂದಿ ಬಂಧಿಸಿದ್ದಾರೆ. ಯಾವುದೇ ಮಾನ್ಯ ಪ್ರಯಾಣದ ದಾಖಲೆಗಳಿಲ್ಲದೆ ನೇಪಾಳ ಪ್ರವೇಶಿಸಲು ಯತ್ನಿಸಿದ್ದ ಆರೋಪದ ಮೇಲೆ ಆತನನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಲಾಗಿದೆ.

ಗಡಿ ಭದ್ರತಾ ಪಡೆ ಸಿಬ್ಬಂದಿ ನಿಯಮಿತ ಗಸ್ತು ನಡೆಸುತ್ತಿದ್ದ ವೇಳೆ ಅನುಮಾನಾಸ್ಪದವಾಗಿ ಕಂಡುಬಂದ ಬ್ರೌನ್‌ನನ್ನು ತಡೆದು ದಾಖಲೆಗಳನ್ನು ಪರಿಶೀಲಿಸಲು ಮುಂದಾದರು. ಈ ವೇಳೆ ಆತ ಸ್ಥಳದಿಂದ ಓಡಿಹೋಗಲು ಯತ್ನಿಸಿದರೂ ಸಿಬ್ಬಂದಿ ಬೆನ್ನಟ್ಟಿ ಬಂಧಿಸಿದರು. ಘಟನೆಗೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಅಮೆರಿಕ ಪ್ರಜೆಯ ಬಂಧನ:



ತಪಾಸಣೆ ವೇಳೆ ಆತನ ಬಳಿ 31,460 ರುಪಾಯಿ ನಗದು ಹಾಗೂ ಎರಡು ಮೊಬೈಲ್ ಫೋನ್‌ಗಳು ಪತ್ತೆಯಾಗಿವೆ. ಆದರೆ ಪಾಸ್‌ಪೋರ್ಟ್, ವೀಸಾ ಸೇರಿ ಭಾರತದಲ್ಲಿ ವಾಸಿಸಲು ಅಥವಾ ನೇಪಾಳಕ್ಕೆ ತೆರಳಲು ಅಗತ್ಯವಿರುವ ಯಾವುದೇ ಮಾನ್ಯ ದಾಖಲೆಗಳು ದೊರೆತಿಲ್ಲ.

ವಿಚಾರಣೆ ವೇಳೆ ಬ್ರೌನ್ ತಾನು ಅಮೆರಿಕದ ಕ್ಯಾಲಿಫೋರ್ನಿಯಾದ ನಿವಾಸಿಯಾಗಿದ್ದು, ಸುಮಾರು ಆರು ವರ್ಷಗಳ ಕಾಲ ಅಮೆರಿಕದ ನೌಕಾಪಡೆ ಹಾಗೂ ವಿಶೇಷ ಪಡೆಯಲ್ಲಿದ್ದೆ ಎಂದು ಹೇಳಿಕೊಂಡಿದ್ದಾನೆ. ಅಲ್ಲದೆ ವಿಶ್ವದ ಸುಮಾರು 70 ದೇಶಗಳಿಗೆ ಭೇಟಿ ನೀಡಿರುವುದಾಗಿಯೂ ಹೇಳಿದ್ದಾನೆ. ಆದರೆ ಆತ ನೀಡಿರುವ ಗುರುತು, ಭಾರತ ಪ್ರವೇಶದ ಮಾರ್ಗ ಹಾಗೂ ಪ್ರವಾಸದ ಉದ್ದೇಶದ ಬಗ್ಗೆ ಹಲವು ಪರಸ್ಪರ ವಿರುದ್ಧ ಹೇಳಿಕೆಗಳು ದಾಖಲಾಗಿವೆ.

3 ಕೊಲೆ ಮಾಡಿದ ಅಪರಾಧಿಯಿಂದ ಕೋರ್ಟ್ ಮುಂದೆಯೇ ಶಾಕಿಂಗ್ ಹೇಳಿಕೆ

ಪೊಲೀಸರ ಮಾಹಿತಿ ಪ್ರಕಾರ, ಬ್ರೌನ್ ಥೈಲ್ಯಾಂಡ್‌ಗೆ ತೆರಳಿದ್ದ ವೇಳೆ ತನ್ನ ಪಾಸ್‌ಪೋರ್ಟ್ ಕಳೆದುಕೊಂಡಿದ್ದು, ಅಲ್ಲಿಂದ ಶ್ರೀಲಂಕಾ ಮೂಲಕ 2025ರ ನವೆಂಬರ್‌ನಲ್ಲಿ ಸಮುದ್ರ ಮಾರ್ಗದ ಮೂಲಕ ಭಾರತ ಪ್ರವೇಶಿಸಿದ್ದಾನಂತೆ. ನಂತರ ಗೋವಾದಲ್ಲಿ ವಾಸವಿದ್ದು, ಅಲ್ಲಿಂದ ಬೆಂಗಳೂರು, ಲಖನೌ, ಗೋರಖ್‌ಪುರ ಮಾರ್ಗವಾಗಿ ಸೋನೌಲಿಗೆ ತಲುಪಿದ್ದಾನೆ ಎಂದು ತಿಳಿಸಿದ್ದಾನೆ.

ಇನ್ನೊಂದು ಹೇಳಿಕೆಯಲ್ಲಿ, ಗೋವಾದಲ್ಲಿ ಪರಿಚಯವಾದ ನಾಜ್ ಎಂಬ ನೇಪಾಳದ ವ್ಯಕ್ತಿಯನ್ನು ಭೇಟಿಯಾಗಲು ತೆರಳುತ್ತಿರುವುದಾಗಿ ಹೇಳಿದ್ದಾನೆ. ತನ್ನ ಪಾಸ್‌ಪೋರ್ಟ್ ಬೆಂಗಳೂರಿನಲ್ಲಿರುವ ಪರಿಚಯಸ್ಥನ ಬಳಿ ಇದೆ ಎಂದು ಹೇಳಿದ್ದರೂ, ಅದಕ್ಕೆ ಸಂಬಂಧಿಸಿದ ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ.

ಇದಲ್ಲದೆ, ಉತ್ತರಾಖಂಡ ಮೂಲದ ಮಹಿಳೆಯನ್ನು ವಿವಾಹವಾಗಿರುವುದಾಗಿ ಹಾಗೂ ಆಕೆ ಯೋಗ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ಹೇಳಿಕೊಂಡಿದ್ದಾನೆ. ಈ ಎಲ್ಲ ಮಾಹಿತಿಯ ಸತ್ಯಾಸತ್ಯತೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಸದ್ಯ ಜೋರ್ಡನ್ ಬ್ರೌನ್ ವಿರುದ್ಧ ವಲಸೆ ಮತ್ತು ವಿದೇಶಿಯರ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆತನ ನಿಜವಾದ ಗುರುತು, ಭಾರತ ಪ್ರವೇಶದ ಮಾರ್ಗ ಹಾಗೂ ಉದ್ದೇಶದ ಕುರಿತು ವಿವಿಧ ಭದ್ರತಾ ಸಂಸ್ಥೆಗಳು ತನಿಖೆ ಮುಂದುವರಿಸಿವೆ. ಈ ಕುರಿತು ಅಮೆರಿಕದ ರಾಯಭಾರ ಕಚೇರಿಗೂ ಮಾಹಿತಿ ನೀಡಲಾಗಿದೆ.