ಉತ್ತರಾಖಂಡದಲ್ಲಿ ಭಾರಿ ಮಳೆ: ನೈನಿತಾಲ್‌ನಲ್ಲಿ ಭೂಕುಸಿತ, 5 ಮಂದಿ ಸಾವು, 141 ರಸ್ತೆ ಬಂದ್; ದುರಂತದ ಭೀಕರ ವಿಡಿಯೊ ವೈರಲ್
Uttarakhand Flood: ಉತ್ತರಾಖಂಡದಲ್ಲಿ ಭಾರಿ ಮಳೆಯಿಂದ ನೈನಿತಾಲ್ ಸೇರಿ ಹಲವು ಪ್ರದೇಶಗಳಲ್ಲಿ ಭೂಕುಸಿತ ಹಾಗೂ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕುಮಾವೂನ್ ಪ್ರದೇಶದಲ್ಲಿ 141 ರಸ್ತೆಗಳು ಬಂದ್ ಆಗಿದ್ದು, ಅಲ್ಮೋರಾದಲ್ಲಿ ಮಳೆ ಸಂಬಂಧಿತ ಪ್ರತ್ಯೇಕ ಘಟನೆಗಳಲ್ಲಿ ಐವರು ಮೃತಪಟ್ಟಿದ್ದಾರೆ.
ಸಾಂದರ್ಭಿಕ ಚಿತ್ರ -
ಡೆಹ್ರಾಡೂನ್, ಸೆ. 1: ಉತ್ತರಾಖಂಡದ ನೈನಿತಾಲ್‌ನಲ್ಲಿ ಮಂಗಳವಾರ (ಸೆಪ್ಟೆಂಬರ್ 1) ಸುರಿದ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಹಲವು ಪ್ರದೇಶಗಳಲ್ಲಿ ಭೂಕುಸಿತ ಹಾಗೂ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ (Uttarakhand Flood). ಬೆಟ್ಟಗಳಿಂದ ಬೃಹತ್ ಬಂಡೆಗಳು ಕುಸಿದು ರಸ್ತೆಗಳ ಮೇಲೆ ಬಿದ್ದಿದ್ದು, ಹಲವು ವಾಹನಗಳು ಹಾನಿಗೊಳಗಾಗಿವೆ. ಮಳೆ ಸಂಬಂಧಿತ ವಿವಿಧ ಘಟನೆಗಳಲ್ಲಿ ಐವರು ಮೃತಪಟ್ಟಿದ್ದಾರೆ. ಸದ್ಯ ಪ್ರವಾಹದ ತೀವ್ರತೆಯನ್ನು ತೋರಿಸುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನೈನಿತಾಲ್‌ನಲ್ಲಿ ಭಾರಿ ಮಳೆಯಿಂದ ನದಿಗಳು, ಹಳ್ಳಗಳು ಉಕ್ಕಿ ಹರಿಯುತ್ತಿವೆ. ಸೇತುವೆಗಳ ಸಮೀಪದಲ್ಲೇ ನೀರಿನ ಹರಿವು ಅಪಾಯಕಾರಿಯಾಗಿ ಹೆಚ್ಚಾಗಿದ್ದು, ವಾಹನ ಸವಾರರು ಜೀವಭಯದ ನಡುವೆ ಸಂಚರಿಸುವ ಪರಿಸ್ಥಿತಿ ಎದುರಾಗಿದೆ. ಹಲವು ಪ್ರದೇಶಗಳಲ್ಲಿ ಬೆಟ್ಟಗಳಿಂದ ನೀರು ಧುಮ್ಮಿಕ್ಕಿ ಹರಿಯುತ್ತಿರುವ ದೃಶ್ಯಗಳು ಕಂಡುಬಂದಿವೆ.
ಉತ್ತರಾಖಂಡದಲ್ಲಿ ಭೀಕರ ಪ್ರವಾಹ:
BREAKING: Severe monsoon floods hit UP & Uttarakhand. Mandakini River reaches a 20-year high, submerging Chitrakoot’s Ramghat. In Uttarakhand, landslides kill 3 in Almora as Uttarkashi hydropower plants remain on high red alert. pic.twitter.com/DcZuBkUXwJ
— HINT News (@9415st) September 1, 2026
ಹಲ್ದ್ವಾನಿ–ನೈನಿತಾಲ್ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿದ್ದು, ಬೃಹತ್ ಬಂಡೆಗಳು ರಸ್ತೆಗೆ ಉರುಳಿ ಬಿದ್ದಿವೆ. ಎರಡು ಪ್ರತ್ಯೇಕ ಘಟನೆಗಳಲ್ಲಿ ಕಾರ್‌ಗಳು ಭೂಕುಸಿತಕ್ಕೆ ಸಿಲುಕಿದ್ದು, ಒಂದು ಕಾರಿಗೆ ಬಂಡೆ ಬಡಿದು ಭಾಗಶಃ ಹಾನಿಯಾಗಿದೆ. ಯಾವುದೇ ಸಾವು-ನೋವು ವರದಿಯಾಗಿಲ್ಲ.
ನೈನಿತಾಲ್‌ಗೆ ಸಂಪರ್ಕ ಕಲ್ಪಿಸುವ ಹಲ್ದ್ವಾನಿ ಮತ್ತು ಕಾಲಾಧುಂಗಿ ಮಾರ್ಗಗಳಲ್ಲಿ ಭೂಕುಸಿತದಿಂದ ರಸ್ತೆ ಸಂಪರ್ಕ ತೀವ್ರವಾಗಿ ಅಸ್ತವ್ಯಸ್ತವಾಗಿದೆ. ದೋ ಗಾಂವ್–ಜ್ಯೋಲಿಕೋಟ್ ನಡುವಿನ ಭೂಕುಸಿತದಿಂದ ಹಲವು ಪ್ರಯಾಣಿಕರು ಮಾರ್ಗಮಧ್ಯೆ ಸಿಲುಕಿಕೊಂಡರು.
ಉತ್ತರಾಖಂಡದಲ್ಲಿ 141 ರಸ್ತೆಗಳು ಬಂದ್
ಭಾರಿ ಮಳೆಯ ಪರಿಣಾಮ ಕುಮಾವೂನ್ ಪ್ರದೇಶದಲ್ಲಿ 141 ರಸ್ತೆಗಳು ಬಂದ್ ಆಗಿವೆ. ಪಿಥೋರಾಗಢ, ಅಲ್ಮೋರಾ, ಬಾಗೇಶ್ವರ ಮತ್ತು ಚಂಪಾವತ್ ಜಿಲ್ಲೆಗಳಲ್ಲೂ ರಸ್ತೆ ಸಂಪರ್ಕಕ್ಕೆ ತೀವ್ರ ಹೊಡೆತ ಬಿದ್ದಿದೆ.
ಪ್ರವಾಹದ ಹೊಡೆತಕ್ಕೆ ನಲುಗಿದ ಮಧ್ಯ ಪ್ರದೇಶದಲ್ಲಿ ಮತ್ತೆ ನೆರೆ ಹಾವಳಿ; ಏರುತ್ತಿದೆ ನದಿ ನೀರಿನ ಮಟ್ಟ
ಗಡಿ ರಸ್ತೆಗಳು, ರಾಷ್ಟ್ರೀಯ ಹೆದ್ದಾರಿಗಳು, ರಾಜ್ಯ ಹೆದ್ದಾರಿಗಳು ಹಾಗೂ ಗ್ರಾಮೀಣ ಸಂಪರ್ಕ ರಸ್ತೆಗಳು ಬಂದ್ ಆಗಿವೆ. ನೈನಿತಾಲ್ ಹೆಚ್ಚುವರಿ ಜಿಲ್ಲಾಧಿಕಾರಿ ವಿವೇಕ್ ರೈ ಪ್ರಕಾರ, ಹಲ್ದ್ವಾನಿ–ನೈನಿತಾಲ್, ಹಲ್ದ್ವಾನಿ–ಭೀಮತಾಲ್ ಮತ್ತು ಹಲ್ದ್ವಾನಿ–ಕಾಲಾಧುಂಗಿ ರಸ್ತೆಗಳಲ್ಲಿನ ಅವಶೇಷ ತೆರವುಗೊಳಿಸಲು ಜೆಸಿಬಿ ಯಂತ್ರಗಳನ್ನು ನಿರಂತರವಾಗಿ ಬಳಸಲಾಗುತ್ತಿದೆ. ಕಾಲಾಧುಂಗಿ–ನೈನಿತಾಲ್ ರಸ್ತೆಯನ್ನು ಶೀಘ್ರದಲ್ಲೇ ತೆರವುಗೊಳಿಸುವ ನಿರೀಕ್ಷೆ ಇದೆ.
ಉತ್ತರಾಖಂಡದಲ್ಲಿ ತುಂಬಿ ಹರಿಯುತ್ತಿರುವ ನದಿ:
Gaula River in spate as incessant rain lashes Uttarakhand’s Kumaon region.
— Ravinder Singh (@ravindraJourno) September 1, 2026
With heavy rainfall expected to continue across Kumaon, rivers and streams in the region are likely to remain swollen and flow at high levels.#Uttarakhand #Kumaon #GaulaRiver #Haldwani #Rainfall pic.twitter.com/N0mkCWWoth
ಅಲ್ಮೋರಾದಲ್ಲಿ ಮಳೆ ಸಂಬಂಧಿತ ಘಟನೆಗಳಿಗೆ 5 ಮಂದಿ ಬಲಿ
ಅಲ್ಮೋರಾ ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ಸಂಭವಿಸಿದ ಪ್ರತ್ಯೇಕ ಘಟನೆಗಳಲ್ಲಿ ಐವರು ಮೃತಪಟ್ಟಿದ್ದಾರೆ. ಹವಾಲ್ಬಾಗ್ ಪ್ರದೇಶದಲ್ಲಿ ಅವಶೇಷಗಳಡಿ ಸಿಲುಕಿ ಮೂವರು ಮೃತಪಟ್ಟರೆ, ಧಾರ್ ಕಿ ತುನಿ ಪ್ರದೇಶದಲ್ಲಿ ಅವಶೇಷಗಳಡಿ ಸಿಲುಕಿದ ಇಬ್ಬರು ನೇಪಾಳಿ ಕಾರ್ಮಿಕರು ಅಸುನೀಗಿದ್ದಾರೆ. ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದ್ದು, ಅಲ್ಮೋರಾದಲ್ಲಿ ಎರಡು ದಿನಗಳಿಂದ ನಿರಂತರ ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 2ರಂದು ಅಂಗನವಾಡಿ ಕೇಂದ್ರಗಳಿಂದ 12ನೇ ತರಗತಿಯವರೆಗೆ ಎಲ್ಲ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಜಿಲ್ಲಾಧಿಕಾರಿ ಅಂಶುಲ್ ಸಿಂಗ್ ತುರ್ತು ಸಭೆ ನಡೆಸಿ, ಭಾರಿ ಮಳೆಯ ಸಂದರ್ಭದಲ್ಲಿ ಜನರು ಮನೆಯಿಂದ ಹೊರಗೆ ಬರದಂತೆ ಹಾಗೂ ಸುರಕ್ಷತೆಗೆ ಆದ್ಯತೆ ನೀಡುವಂತೆ ಮನವಿ ಮಾಡಿದ್ದಾರೆ. ಮುಂಗಾರು ಹಂತ ಹಂತವಾಗಿ ದುರ್ಬಲಗೊಳ್ಳುವ ನಿರೀಕ್ಷೆಯಿದ್ದರೂ, ಉತ್ತರಾಖಂಡದಲ್ಲಿ ಸದ್ಯ ಭಾರಿ ಮಳೆಯ ಅಬ್ಬರ ಮುಂದುವರಿದಿದೆ.