ʼವಂದೇ ಮಾತರಂʼ ಬಂಗಾಳಕ್ಕೆ ಸೀಮಿತವಾಗಿಲ್ಲ; ಪ್ರಿಯಾಂಕಾ ಗಾಂಧಿಗೆ ಅಮಿತ್ ಶಾ ತಿರುಗೇಟು
Amit Shah response: ಸಂಸತ್ತಿನಲ್ಲಿ ವಂದೇ ಮಾತರಂ ಗೀತೆಯ ವಿಚಾರವಾಗಿ ಚರ್ಚೆ ನಡೆಯುತ್ತಿದೆ. ಇದು ಪಶ್ಚಿಮ ಬಂಗಾಳದ ಚುನಾವಣೆಯ ಗಿಮಿಕ್ ಎಂದು ಕಾಂಗ್ರೆಸ್ ಆರೋಪಕ್ಕೆ ಅಮಿತ್ ಶಾ ತಿರುಗೇಟು ನೀಡಿದ್ದಾರೆ. ರಾಷ್ಟ್ರೀಯ ಗೀತೆ ಬಂಗಾಳಕ್ಕೆ ಮಾತ್ರ ಸೀಮಿತವಾಗಿಲ್ಲ, ಅದನ್ನು ರಾಜಕೀಯದೊಂದಿಗೆ ಜೋಡಿಸುವುದು ದುರದೃಷ್ಟಕರ ಎಂದು ಹೇಳಿದರು.
ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಅಮಿತ್ ಶಾ (ಸಂಗ್ರಹ ಚಿತ್ರ) -
ನವದೆಹಲಿ: ಪಶ್ಚಿಮ ಬಂಗಾಳ ಚುನಾವಣೆಯನ್ನು (West Bengal election) ಗಮನದಲ್ಲಿಟ್ಟುಕೊಂಡು ಎನ್‌ಡಿಎ ಸರ್ಕಾರ 'ವಂದೇ ಮಾತರಂ' (Vande Mataram) ಕುರಿತು ಸಂಸತ್ತಿನ ಚರ್ಚೆಯನ್ನು ಪ್ರಸ್ತಾಪಿಸಿದೆ ಎಂಬ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi) ಅವರ ಆರೋಪಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ತಿರುಗೇಟು ನೀಡಿದರು. ರಾಷ್ಟ್ರೀಯ ಗೀತೆ ಬಂಗಾಳಕ್ಕೆ ಮಾತ್ರ ಸೀಮಿತವಾಗಿಲ್ಲ, ಅದನ್ನು ರಾಜಕೀಯದೊಂದಿಗೆ ಜೋಡಿಸುವುದು ವಿಷಾದನೀಯ ಎಂದು ಹೇಳಿದರು.
ಪ್ರಿಯಾಂಕಾ ಗಾಂಧಿ ಅವರ ಹೆಸರನ್ನು ಉಲ್ಲೇಖಿಸದೆ ಅಮಿತ್ ಶಾ ʼವಂದೇ ಮಾತರಂʼಗೆ 150 ವರ್ಷಗಳ ಸಂಭ್ರಮಾಚರಣೆಯ ಭಾಗವಾಗಿ ಚರ್ಚೆ ನಡೆಸುವ ಅಗತ್ಯವನ್ನು ಕೆಲವರು ಪ್ರಶ್ನಿಸಿದ್ದಾರೆ ಎಂದು ಹೇಳಿದರು. ʼವಂದೇ ಮಾತರಂʼ ಬರೆಯಲ್ಪಟ್ಟಾಗ, ಭಾರತ ಸ್ವತಂತ್ರವಾದಾಗ, ಇಂದು ಮತ್ತು 2047ರಲ್ಲಿಯೂ ಇದರ ಬಗ್ಗೆ ಚರ್ಚೆ ಮತ್ತು ಅದರ ಕಡೆಗೆ ಸಮರ್ಪಣೆಯ ಅಗತ್ಯವಿದೆ ಎಂದು ಅವರು ಹೇಳಿದರು. ʼವಂದೇ ಮಾತರಂʼ ಅನ್ನು ಏಕೆ ಚರ್ಚಿಸಲಾಗುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.
ಬಂಕಿಮ್ ಚಂದ್ರ ಚಟರ್ಜಿಯನ್ನು ನಿರ್ಲಕ್ಷಿಸಿದ ಬಂಗಾಳ ಸರ್ಕಾರ: ವಂದೇ ಮಾತರಂ ಚರ್ಚೆಯ ನಡುವೆ ಮರಿಮೊಮ್ಮಗ ಹೇಳಿದ್ದೇನು?
ಬಂಗಾಳ ಚುನಾವಣೆ ಸಮೀಪಿಸುತ್ತಿರುವುದರಿಂದ ವಂದೇ ಮಾತರಂ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಕೆಲವರು ಭಾವಿಸಿದ್ದಾರೆ. ವಂದೇ ಮಾತರಂ ಅನ್ನು ಚುನಾವಣೆಗಳೊಂದಿಗೆ ಜೋಡಿಸುವ ಮೂಲಕ ಅದರ ವೈಭವವನ್ನು ಕಡಿಮೆ ಮಾಡಲು ಅವರು ಬಯಸುತ್ತಾರೆ. ʼವಂದೇ ಮಾತರಂʼ ರಚಿಸಿದ ಬಂಕಿಮ್ ಚಂದ್ರ ಚಟರ್ಜಿ ಬಂಗಾಳದಲ್ಲಿ ಜನಿಸಿದರು ಎಂಬುದು ನಿಜ. ಆದರೆ, ʼವಂದೇ ಮಾತರಂʼ ಬಂಗಾಳಕ್ಕೆ ಅಥವಾ ಭಾರತಕ್ಕೆ ಸೀಮಿತವಾಗಿರಲಿಲ್ಲ. ಪ್ರಪಂಚದ ಎಲ್ಲಿಯಾದರೂ, ಭಾರತೀಯ ಸ್ವಾತಂತ್ರ್ಯ ಹೋರಾಟಗಾರರು ಅಡಗುತಾಣಗಳಲ್ಲಿ ಭೇಟಿಯಾದಾಗ, ಅವರು ʼವಂದೇ ಮಾತರಂʼ ಅನ್ನು ಹೇಳುತ್ತಿದ್ದರು. ಇಂದಿಗೂ ಗಡಿಗಳಲ್ಲಿ ನಮ್ಮ ಸೈನಿಕರು ಮತ್ತು ಆಂತರಿಕ ಭದ್ರತೆಯ ಜವಾಬ್ದಾರಿಯನ್ನು ಹೊಂದಿರುವವರು ತಮ್ಮ ಪ್ರಾಣವನ್ನು ತ್ಯಾಗ ಮಾಡುವಾಗ, ಅವರ ಬಾಯಿಯಲ್ಲಿ ʼವಂದೇ ಮಾತರಂʼ ಎಂಬ ಘೋಷಣೆ ಬರುತ್ತದೆ ಎಂದು ಶಾ ರಾಜ್ಯಸಭೆಗೆ ತಿಳಿಸಿದರು.
ಸೋಮವಾರ ಸದನವನ್ನುದ್ದೇಶಿಸಿ ಮಾತನಾಡಿದ ಸಂಸದೆ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಮುಂದಿನ ವರ್ಷ ನಡೆಯಲಿರುವ ಬಂಗಾಳ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ, ʼವಂದೇ ಮಾತರಂʼ ಬಗ್ಗೆ ಚರ್ಚೆ ನಡೆಸುತ್ತಿದೆ ಎಂದು ಹೇಳಿದ್ದರು. ಈ ಹಾಡು 150 ವರ್ಷಗಳಿಗೂ ಹೆಚ್ಚು ಕಾಲ ನಮ್ಮ ಹೃದಯದಲ್ಲಿ ಸ್ಥಾನ ಪಡೆದಿದೆ. ನಮ್ಮ ದೇಶ 75 ವರ್ಷಗಳಿಂದ ಸ್ವತಂತ್ರವಾಗಿದೆ. ಈಗ ಈ ಚರ್ಚೆಯ ಅಗತ್ಯವೇನು? ನಾವು ಇದರ ಬಗ್ಗೆ ಚರ್ಚಿಸದಿದ್ದರೆ ಚುನಾವಣಾ ಸುಧಾರಣೆಗಳ ಕುರಿತು ಚರ್ಚೆಗೆ ನಿರಾಕರಿಸಿದ್ದೀರಿ. ಇದು ನಮ್ಮ ರಾಷ್ಟ್ರೀಯ ಗೀತೆ. ಇದರ ಬಗ್ಗೆ ಚರ್ಚೆ ಯಾಕೆ? ಎಂದು ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದರು. ಸರ್ಕಾರವು, ಸಾರ್ವಜನಿಕ ಗಮನವನ್ನು ಸಮಸ್ಯೆಗಳಿಂದ ಬೇರೆಡೆಗೆ ತಿರುಗಿಸಲು ಬಯಸುತ್ತದೆ ಎಂದು ಅವರು ಹೇಳಿದ್ದರು. ಈ ಸರ್ಕಾರವು ವರ್ತಮಾನ ಮತ್ತು ಭವಿಷ್ಯವನ್ನು ನೋಡಲು ಬಯಸುವುದಿಲ್ಲ. ನಮ್ಮನ್ನು ಭೂತಕಾಲದಲ್ಲಿಯೇ ಇಡುವುದು ನಿಮ್ಮ ಉದ್ದೇಶ ಎಂದು ಅವರು ಆರೋಪಿಸಿದ್ದರು.
ಅಮಿತ್ ಶಾ ಭಾಷಣದ ವಿಡಿಯೊ ಇಲ್ಲಿದೆ:
Agar Vande Matram ke 2 tukde na karte toh desh ka batwara nahi hota 🔥
— ExtraSpiceAni (@ShrivastavAni) December 9, 2025
HM Amit Shah rips apart congress ⚡️#VandeMataram150 pic.twitter.com/4ALhTUhyqa
ಸರ್ಕಾರವು ಚರ್ಚೆಗಳಿಗೆ ಹೆದರುವುದಿಲ್ಲ ಎಂದು ಶಾ ಹೇಳಿದರು. ನಾವು ಸಂಸತ್ತನ್ನು ಬಹಿಷ್ಕರಿಸುವುದಿಲ್ಲ. ಅವರು (ವಿರೋಧ ಪಕ್ಷ) ಸಂಸತ್ತು ಕಾರ್ಯನಿರ್ವಹಿಸಲು ಬಿಟ್ಟರೆ, ಎಲ್ಲ ವಿಷಯಗಳನ್ನು ಚರ್ಚಿಸಲಾಗುವುದು. ನಮಗೆ ಮರೆಮಾಡಲು ಏನೂ ಇಲ್ಲ ಎಂದು ಅವರು ಹೇಳಿದರು.
ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ʼವಂದೇ ಮಾತರಂʼ ಅನ್ನು ವಿಭಜಿಸಿ, ಅದರ 50ನೇ ವಾರ್ಷಿಕೋತ್ಸವದಂದು ಅದನ್ನು ಎರಡು ಚರಣಗಳಿಗೆ ಸೀಮಿತಗೊಳಿಸಿದರು ಎಂದು ಗೃಹ ಸಚಿವರು ಹೇಳಿದರು. ತುಷ್ಟೀಕರಣವು ಅಲ್ಲಿಂದ ಪ್ರಾರಂಭವಾಯಿತು. ಆ ತುಷ್ಟೀಕರಣವು ವಿಭಜನೆಗೆ ಕಾರಣವಾಯಿತು. ʼವಂದೇ ಮಾತರಂʼ 100 ವರ್ಷಗಳನ್ನು ಪೂರೈಸಿದಾಗ, ವಂದೇ ಮಾತರಂ ಹೇಳಿದವರನ್ನು ಇಂದಿರಾ ಗಾಂಧಿ ಜೈಲಿಗೆ ಹಾಕಿದರು. ತುರ್ತು ಪರಿಸ್ಥಿತಿ ಹೇರಲಾಯಿತು ಮತ್ತು ವಿರೋಧ ಪಕ್ಷದ ಲಕ್ಷಾಂತರ ಜನರನ್ನು ಜೈಲಿಗೆ ಹಾಕಲಾಯಿತು ಎಂದರು.
ವಂದೇ ಮಾತರಂ ಗೀತೆಯನ್ನು ಕಡಿತಗೊಳಿಸಿ ನೆಹರು ಅತೀ ದೊಡ್ಡ ಪಾಪ ಮಾಡಿದ್ದಾರೆ; ಬಿಜೆಪಿ ಕಿಡಿ
ಗೃಹ ಸಚಿವರ ಮಾತಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಂದೇ ಮಾತರಂ ಪಠಿಸುವ ಮೂಲಕ ತಮ್ಮ ಭಾಷಣವನ್ನು ಪ್ರಾರಂಭಿಸಿದರು. ವಂದೇ ಮಾತರಂ ಅನ್ನು ಸ್ವಾತಂತ್ರ್ಯದ ಘೋಷಣೆಯನ್ನಾಗಿ ಮಾಡಿದ್ದು ಕಾಂಗ್ರೆಸ್. ಕಾಂಗ್ರೆಸ್ ತನ್ನ ಸಮಾವೇಶಗಳಲ್ಲಿʼ ವಂದೇ ಮಾತರಂʼ ಹಾಡುವ ಸಂಪ್ರದಾಯವನ್ನು ಪ್ರಾರಂಭಿಸಿತು. ನೀವು ಅದನ್ನು ಮಾಡಿದ್ದೀರಾ? ಎಂದು ಪ್ರಶ್ನಿಸಿದರು. ಪ್ರಧಾನಿ ಮತ್ತು ಗೃಹ ಸಚಿವರು ಜವಾಹರಲಾಲ್ ನೆಹರು ಅವರನ್ನು ಅವಮಾನಿಸುವ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ. ನೆಹರು ನೇತೃತ್ವದ ಕಾಂಗ್ರೆಸ್ ʼವಂದೇ ಮಾತರಂʼನ ಪ್ರಮುಖ ಭಾಗಗಳನ್ನು ತೆಗೆದುಹಾಕಿದೆ ಎಂದು ಪ್ರಧಾನಿ ಆರೋಪಿಸಿದ್ದರು. ನೀವು ಮುಸ್ಲಿಂ ಲೀಗ್ ಜತೆ ಮೈತ್ರಿ ಮಾಡಿಕೊಂಡು ಬಂಗಾಳದಲ್ಲಿ ಸರ್ಕಾರ ರಚಿಸಿದಾಗ, ನಿಮ್ಮ ದೇಶಭಕ್ತಿ ಎಲ್ಲಿತ್ತು? ನಿಮ್ಮ ಇತಿಹಾಸವನ್ನು ಓದಿ, ಎಂದು ಖರ್ಗೆ ಖಾರವಾಗಿ ಪ್ರತಿಕ್ರಿಯಿಸಿದರು.
1937ರಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ʼವಂದೇ ಮಾತರಂʼನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಬೇಕೆಂದು ಶಿಫಾರಸು ಮಾಡಿ ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಿತು. ಈ ವೇಳೆ ನೆಹರು ಒಬ್ಬರೇ ಇದ್ದರಾ? ನೀವು ಅವರನ್ನೇ ಏಕೆ ಗುರಿಯಾಗಿಸಿಕೊಂಡಿದ್ದೀರಿ? ನೀವು ನೆಹರೂ ಅವರ ಪ್ರತಿಷ್ಠೆಯನ್ನು ಗುರಿಯಾಗಿಸಲು ಪ್ರಯತ್ನಿಸುತ್ತಿದ್ದರೆ, ಅದು ಅಸಾಧ್ಯ. ಬಂಗಾಳ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ʼವಂದೇ ಭಾರತ್ʼ ಚರ್ಚೆಯನ್ನು ಆಯೋಜಿಸುತ್ತಿದೆ ಎಂದು ಆರೋಪಿಸಿದ ಖರ್ಗೆ, ಭಾರತ ಮಾತೆಗೆ ನಿಜವಾದ ಗೌರವವೆಂದರೆ ಈ ಸಂಸತ್ತು ಜನರ ಸಮಸ್ಯೆಗಳಿಗಾಗಿ ಕೆಲಸ ಮಾಡುವುದು ಎಂದು ಹೇಳಿದರು.