Vijay's Rally Stampede: ವಿಜಯ್ ಪ್ರಚಾರ ರ‍್ಯಾಲಿಯಲ್ಲಿ ಕಾಲ್ತುಳಿತಕ್ಕೆ ಕಾರಣವಾಯಿತೇ ಸಾರ್ವಜನಿಕ ಆಕ್ರೋಶ?
ತಮಿಳುನಾಡಿನ ಕರೂರಿನಲ್ಲಿ ತಮಿಳಗ ವೆಟ್ರಿ ಕಳಗಂ (TVK) ಮುಖ್ಯಸ್ಥ ಹಾಗೂ ನಟ ವಿಜಯ್ ಅವರ ಪ್ರಚಾರ ರ‍್ಯಾಲಿಯ ವೇಳೆ ಉಂಟಾದ ಕಾಲ್ತುಳಿತದಲ್ಲಿ 39 ಜನರು ಸಾವನ್ನಪ್ಪಿದ್ದು, ಸುಮಾರು 100 ಜನರು ಗಾಯಗೊಂಡಿದ್ದಾರೆ. ಇದಕ್ಕೆ ಸಾರ್ವಜನಿಕ ಆಕ್ರೋಶವೇ ಮುಖ್ಯ ಕಾರಣ ಎಂದು ನಟ ವಿಜಯ್ ಅವರ ಚೆನ್ನೈ ನಿವಾಸಕ್ಕೆ ಭೇಟಿ ನೀಡಿದ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

-

ಚೆನ್ನೈ: ತಮಿಳುನಾಡಿನ (Tamilnadu) ಕರೂರಿನಲ್ಲಿ ಕಾಲ್ತುಳಿತಕ್ಕೆ (Vijay's Rally Stampede) ಸಾರ್ವಜನಿಕ ಆಕ್ರೋಶವೇ ಮುಖ್ಯ ಕಾರಣ ಎಂದು ತಮಿಳಗ ವೆಟ್ರಿ ಕಳಗಂ (Tamilaga Vettri Kazhagam) ಮುಖ್ಯಸ್ಥ ಹಾಗೂ ನಟ ವಿಜಯ್ (Actor Vijay) ಅವರ ಚೆನ್ನೈ (Chennai) ನಿವಾಸಕ್ಕೆ ಭೇಟಿ ನೀಡಿದ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಕರೂರಿನಲ್ಲಿ ಶನಿವಾರ ನಡೆದ ಟಿವಿಕೆ ನಾಯಕ ವಿಜಯ್ ಅವರ ಪ್ರಚಾರ ರ‍್ಯಾಲಿಯ ವೇಳೆ ಉಂಟಾದ ಕಾಲ್ತುಳಿತದಲ್ಲಿ 39 ಜನರು ಸಾವನ್ನಪ್ಪಿದ್ದು, ಸುಮಾರು 100 ಜನರು ಗಾಯಗೊಂಡಿದ್ದಾರೆ. ಇದರ ಬಳಿಕ ಅವರ ಚೆನ್ನೈ ನಿವಾಸದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ತಮಿಳುನಾಡು ಸರ್ಕಾರದ ಮೂಲಗಳು ತಿಳಿಸಿವೆ.
ಕರೂರಿನಲ್ಲಿ ಉಂಟಾದ ಕಾಲ್ತುಳಿತ ಘಟನೆಯ ಬಳಿಕ ನಡೆದ ಪ್ರಮುಖ ಬೆಳವಣಿಗೆಗಳು ಇಂತಿವೆ: ತಮಿಳಗ ವೆಟ್ರಿ ಕಳಗಂ ನಾಯಕ ವಿಜಯ್ ಮನೆಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಯಾಕೆಂದರೆ ಸಾರ್ವಜನಿಕ ಆಕ್ರೋಶದಿಂದ ಅಪಾಯವಾಗಬಹುದು ಎನ್ನುವ ಕಾರಣದಿಂದ ಭದ್ರತೆ ಹೆಚ್ಚಿಸಲು ರಾಜ್ಯ ಪೊಲೀಸರಿಗೆ ಮನವಿ ಮಾಡಲಾಗಿತ್ತು.
இரவு முழுவதும் உயிரிழந்தவர்களின் குடும்பத்தினர் சிந்திய கண்ணீரும், அவர்களது துக்கம் நிறைந்த அழுகுரல் ஏற்படுத்திய வலியும் என் நெஞ்சத்திலிருந்து அகலவில்லை… #KarurTragedy pic.twitter.com/Z9K2TZs7NW
— M.K.Stalin - தமிழ்நாட்டை தலைகுனிய விடமாட்டேன் (@mkstalin) September 28, 2025
ತಮಿಳುನಾಡು ವಿಧಾನಸಭಾ ಚುನಾವಣೆ ಮೂಲಕ ಮೊದಲ ಬಾರಿಗೆ ಜನಪ್ರತಿನಿಧಿಯಾಗಲು ಸಿದ್ಧತೆ ನಡೆಸುತ್ತಿರುವ ನಟನಿಗೆ ಈ ಘಟನೆ ಬಹುದೊಡ್ಡ ಸವಾಲಾಗಿದೆ. ಯಾಕೆಂದರೆ ಇದು ಈಗಾಗಲೇ ಸಾಕಷ್ಟು ಟೀಕೆಗೆ ಗುರಿಯಾಗಿದೆ.
ರ‍್ಯಾಲಿಯಲ್ಲಿ ಮಾರ್ಗಸೂಚಿಗಳನ್ನು ಹೇಗೆ ಉಲ್ಲಂಘಿಸಲಾಗಿದೆ. ದುರಂತಕ್ಕೆ ಏನು ಕಾರಣ ಎನ್ನುವ ಕುರಿತು ಡಿಎಂಕೆ ನೇತೃತ್ವದ ರಾಜ್ಯ ಸರ್ಕಾರ ನಟ- ರಾಜಕಾರಣಿಯನ್ನು ತರಾಟೆಗೆ ತೆಗೆದುಕೊಂಡಿದೆ.
ರ‍್ಯಾಲಿಯ ಸಂಘಟಕರು ಕುಡಿಯುವ ನೀರು, ಆಹಾರಕ್ಕಾಗಿ ಸರಿಯಾದ ವ್ಯವಸ್ಥೆಗಳನ್ನು ಮಾಡಿರಲಿಲ್ಲ. ಇದರಿಂದ ಜನಸಮೂಹದಲ್ಲಿದ್ದ ಕೆಲವರು ಮೂರ್ಛೆ ಹೋದರು.
ನಟ ವಿಜಯ್ ಸುಮಾರು 7 ಗಂಟೆ ತಡವಾಗಿ ಸ್ಥಳಕ್ಕೆ ಬಂದಿದ್ದು ಸಾರ್ವಜನಿಕ ಆಕ್ರೋಶಕ್ಕೆ ಕಾರಣ ಎನ್ನಲಾಗುತ್ತಿದೆ. ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಮಧ್ಯಾಹ್ನದಿಂದಲೂ ಜನ ಸೇರುತ್ತಿದ್ದರು. ಇಕ್ಕಟ್ಟಾದ ಸ್ಥಳಕ್ಕೆ ಭಾರಿ ಜನಸಮೂಹ ನೆರೆದಿತ್ತು. ಅವರ ಬೆಂಬಲಿಗರು ಪೊಲೀಸ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದರು.
ವಿಜಯ್ ಮಾತನಾಡುತ್ತಿದ್ದಾಗಲೇ ಹಲವಾರು ಮಂದಿ ಕುಸಿದು ಬಿದ್ದರು. ಆದರೂ ಭಾಷಣ ಮುಂದುವರಿಸಲಾಗಿದೆ. ಯಾವುದೇ ತುರ್ತು ಚಿಕಿತ್ಸೆ ವ್ಯವಸ್ಥೆ ಮಾಡಲಿಲ್ಲ. ಬಳಿಕ ವಿಜಯ್ ತಿರುಚ್ಚಿ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಖಾಸಗಿ ವಿಮಾನದ ಮೂಲಕ ಚೆನ್ನೈಗೆ ತೆರಳಿದರು.
ಟಿವಿಕೆ ಪರ ವಕೀಲರು ರ‍್ಯಾಲಿಯಲ್ಲಿ ಪಕ್ಷವು ಎಲ್ಲ ಪೊಲೀಸ್ ಮಾರ್ಗಸೂಚಿಗಳನ್ನು ಪಾಲಿಸಿದೆ ಎಂದು ಹೇಳಿದ್ದಾರೆ. ಈ ದುರಂತವು ವಿಜಯ್ ಅವರನ್ನು ತೀವ್ರವಾಗಿ ಬಾಧಿಸಿದೆ ಮತ್ತು ಅವರು ತಮಿಳುನಾಡಿನ ಜನರನ್ನು ಪ್ರೀತಿಸುತ್ತಾರೆ. ರ‍್ಯಾಲಿಯ ವೇಳೆ ಸ್ವತಃ ವಿಜಯ್ ಅವರೇ ಜನರಿಗೆ ನೀರಿನ ಬಾಟಲಿಗಳನ್ನು ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ವಿಜಯ್, ನನ್ನ ಹೃದಯ ಛಿದ್ರವಾಗಿದೆ. ಪದಗಳಲ್ಲಿ ವ್ಯಕ್ತಪಡಿಸಲಾಗದ ಅಸಹನೀಯ ನೋವು ಮತ್ತು ದುಃಖದಲ್ಲಿ ನಾನು ನರಳುತ್ತಿದ್ದೇನೆ. ಕರೂರಿನಲ್ಲಿ ಪ್ರಾಣ ಕಳೆದುಕೊಂಡ ನನ್ನ ಪ್ರೀತಿಯ ಸಹೋದರ ಸಹೋದರಿಯರ ಕುಟುಂಬಗಳಿಗೆ ಆಳವಾದ ಸಂತಾಪ ಮತ್ತು ಸಹಾನುಭೂತಿಯನ್ನು ವ್ಯಕ್ತಪಡಿಸುತ್ತೇನೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂಬುದಾಗಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ಮತ್ತು ಡಿಎಂಕೆ ನಾಯಕ ಎಂಕೆ ಸ್ಟಾಲಿನ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ವಿಚಾರಿಸಿದರು. ಬಳಿಕ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡ ಅವರು, ರಾತ್ರಿಯಿಡೀ ಪ್ರಾಣ ಕಳೆದುಕೊಂಡವರ ಕುಟುಂಬಗಳು ಸುರಿಸಿದ ಕಣ್ಣೀರು ಮತ್ತು ಅವರ ದುಃಖ ತುಂಬಿದ ಅಳುವಿಕೆಯಿಂದ ಉಂಟಾದ ನೋವು ನನ್ನ ಹೃದಯವನ್ನು ಇನ್ನೂ ಬಿಟ್ಟಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: Vijay's Rally Stampede: ತಮಿಳುನಾಡು ಕಾಲ್ತುಳಿತ: ಕಂಬನಿ ಮಿಡಿದ ಕಮಲ್ ಹಾಸನ್, ರಜನಿಕಾಂತ್
ಟಿವಿಕೆ ಪ್ರಧಾನ ಕಾರ್ಯದರ್ಶಿ ಎನ್. ಆನಂದ್, ಜಂಟಿ ಪ್ರಧಾನ ಕಾರ್ಯದರ್ಶಿ ನಿರ್ಮಲ್ ಕುಮಾರ್ ಮತ್ತು ಕರೂರ್ ಪಶ್ಚಿಮ ಜಿಲ್ಲಾ ಕಾರ್ಯದರ್ಶಿ ವಿಪಿ ಮಥಿಯಜಗನ್ ವಿರುದ್ಧ ಪ್ರಕರಣ ದಾಖಲಾಗಿದೆ. ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿದೆ.