ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಶ್ರೀಹರಿಕೋಟಾದಿಂದ ಖಾಸಗಿ ರಾಕೆಟ್ ವಿಕ್ರಮ್-1 ಯಶಸ್ವಿ ಉಡಾವಣೆ: ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು

Vikram-1 Private Rocket: ಭಾರತದ ಖಾಸಗಿ ಬಾಹ್ಯಾಕಾಶ ಸಂಸ್ಥೆ ಸ್ಕೈರೂಟ್ ಏರೋಸ್ಪೇಸ್ ಅಭಿವೃದ್ಧಿಪಡಿಸಿರುವ ವಿಕ್ರಮ್-1 ರಾಕೆಟ್ ಅನ್ನು ಶ್ರೀಹರಿಕೋಟಾದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲು ವಿನ್ಯಾಸಗೊಳಿಸಲಾದ ಈ ರಾಕೆಟ್, ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ನಿರ್ಮಿಸಿದೆ.

ಶ್ರೀಹರಿಕೋಟಾದಿಂದ ಖಾಸಗಿ ರಾಕೆಟ್ ವಿಕ್ರಮ್-1 ಯಶಸ್ವಿ ಉಡಾವಣೆ

ರಾಕೆಟ್ 'ವಿಕ್ರಮ್-1' ಉಡಾವಣೆ -

Profile
Sushmitha Jain Jul 18, 2026 3:03 PM

ನವದೆಹಲಿ, ಜು. 18: ಭಾರತದ ಖಾಸಗಿ ಬಾಹ್ಯಾಕಾಶ ಸಂಸ್ಥೆ ಸ್ಕೈರೂಟ್ ಏರೋಸ್ಪೇಸ್ (Skyroot Aerospace) ಅಭಿವೃದ್ಧಿಪಡಿಸಿರುವ 'ವಿಕ್ರಮ್-1' (Vikram-1) ರಾಕೆಟ್‌ ಅನ್ನು ಆಂಧ್ರ ಪ್ರದೇಶದ ಶ್ರೀಹರಿಕೋಟಾ ಉಡಾವಣಾ ಕೇಂದ್ರದಿಂದ ಶನಿವಾರ (ಜುಲೈ 18) ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಉಡಾವಣೆಗೆ ಮುನ್ನ ಕೆಲ ಕ್ಷಣಗಳ ಕಾಲ ಯೋಜಿತ ವಿರಾಮ ನೀಡಲಾಗಿದ್ದು, ಬಳಿಕ ನಿಗದಿತ ಸಮಯಕ್ಕೆ ರಾಕೆಟ್ ಆಕಾಶಕ್ಕೇರಿತು.

ಉಡಾವಣೆಯ ಕೊನೆಯ ಹತ್ತು ಸೆಕೆಂಡುಗಳ ಕ್ಷಣಗಣನೆ ಪೂರ್ಣಗೊಂಡ ತಕ್ಷಣ ಪ್ರಕಾಶಮಾನವಾದ ಜ್ವಾಲೆಗಳು ಹಾಗೂ ದಟ್ಟ ಹೊಗೆಯೊಂದಿಗೆ ರಾಕೆಟ್ ಗಗನಕ್ಕೇರಿತು. ಈ ಮೂಲಕ ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರ ಮತ್ತೊಂದು ಮಹತ್ವದ ಸಾಧನೆ ದಾಖಲಿಸಿದೆ.

'ವಿಕ್ರಮ್-1' ರಾಕೆಟ್‌ ಉಡಾವಣೆ:



ವಿಕ್ರಮ್-1 ವಿಶೇಷತೆಗಳೇನು?

ವಿಕ್ರಮ್-1 ಭಾರತದಲ್ಲಿ ಖಾಸಗಿ ಸಂಸ್ಥೆಯೊಂದು ಸಂಪೂರ್ಣವಾಗಿ ಅಭಿವೃದ್ಧಿಪಡಿಸಿರುವ ಮೊದಲ ಉಪಗ್ರಹ ಉಡಾವಣಾ ರಾಕೆಟ್ ಎನಿಸಿಕೊಂಡಿದೆ. ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಉದ್ದೇಶದಿಂದ ಇದನ್ನು ವಿನ್ಯಾಸಗೊಳಿಸಲಾಗಿದೆ.

ರಾಕೆಟ್ ಸಂಪೂರ್ಣ ಕಾರ್ಬನ್ ಸಂಯೋಜಿತ ವಸ್ತುವಿನಿಂದ ನಿರ್ಮಾಣವಾಗಿದ್ದು, ಇದು ಸಾಂಪ್ರದಾಯಿಕ ಉಕ್ಕಿಗಿಂತ ಹಗುರ ಹಾಗೂ ಹೆಚ್ಚು ಬಲಿಷ್ಠವಾಗಿದೆ. ಇದರಿಂದ ರಾಕೆಟ್‌ನ ಕಾರ್ಯಕ್ಷಮತೆ ಹೆಚ್ಚುವ ನಿರೀಕ್ಷೆಯಿದೆ.

ಈ ರಾಕೆಟ್‌ನ ಕಕ್ಷೆ ಹೊಂದಾಣಿಕೆ ಘಟಕ ಸಂಪೂರ್ಣ ತ್ರಿ-ಆಯಾಮ ಮುದ್ರಣ (3D Printing) ತಂತ್ರಜ್ಞಾನದಲ್ಲಿ ನಿರ್ಮಿಸಲಾದ ದ್ರವ ಇಂಧನ ಎಂಜಿನ್‌ನಿಂದ ಕಾರ್ಯನಿರ್ವಹಿಸುವುದು ಮತ್ತೊಂದು ವೈಶಿಷ್ಟ್ಯ.

ಇಸ್ರೋ ತೊರೆದ 100ಕ್ಕೂ ಹೆಚ್ಚು ವಿಜ್ಞಾನಿಗಳು:‌ ಕೇಂದ್ರ ಸರ್ಕಾರಕ್ಕೆ ತಲೆನೋವಾದ ಸಾಮೂಹಿಕ ರಾಜೀನಾಮೆ

ವಿಕ್ರಮ್-1 ಭಾರತದ ಅತಿ ಉದ್ದದ ಏಕಘಟಕ ಕಾರ್ಬನ್ ಸಂಯೋಜಿತ ರಾಕೆಟ್ ಹಂತವಾಗಿದ್ದು, ದೇಶೀಯ ತಂತ್ರಜ್ಞಾನ ಮತ್ತು ವೈಮಾನಿಕ ಎಂಜಿನಿಯರಿಂಗ್ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಹಂತಗಳ ವಿಭಜನೆ ಹಾಗೂ ಪೇಲೋಡ್ ಬೇರ್ಪಡಿಸಲು ಸುಧಾರಿತ ವಾಯುಚಾಲಿತ ವ್ಯವಸ್ಥೆಯನ್ನು ಬಳಸಲಾಗಿದೆ.

ರಾಕೆಟ್ ಹೊತ್ತೊಯ್ದ ವಿಶೇಷ ಪೇಲೋಡ್‌ಗಳು

'ಆಗಮನ' ಕಾರ್ಯಾಚರಣೆಯಡಿ ಉಡಾವಣೆಯಾದ ಈ ರಾಕೆಟ್‌ನಲ್ಲಿ ಭವಿಷ್ಯದಲ್ಲಿ ಬಾಹ್ಯಾಕಾಶ ಕಸದ ತೆರವುಗೊಳಿಸುವ ಉದ್ದೇಶಕ್ಕಾಗಿ ರೋಬೋಟಿಕ್ ಕೈ ತಂತ್ರಜ್ಞಾನ ಪರೀಕ್ಷಿಸುವ 'ಎಂಬ್ರೇಸ್' ಯೋಜನೆಯ ಪೇಲೋಡ್ ಕೂಡ ಸೇರಿಸಲಾಗಿದೆ.

ಇದಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರ ʼವಂದೇ ಮಾತರಂʼ ಸಂದೇಶವಿರುವ ಕಾರ್ಡ್‌, ವಿಶ್ವದ ವಿವಿಧ ಭಾಗಗಳ ಬೆಂಬಲಿಗರ ಶುಭಾಶಯ ಸಂದೇಶಗಳು, ಡಾ. ವಿಕ್ರಂ ಸಾರಾಭಾಯಿ, ಸರ್ ಸಿ.ವಿ. ರಾಮನ್ ಹಾಗೂ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಸೂಕ್ಷ್ಮ ಶಿಲ್ಪಗಳನ್ನು ಹೊಂದಿರುವ ಚಿನ್ನದ ಪುಟ್ಟ ರಾಕೆಟ್ ಹಾಗೂ ಪ್ರಯೋಗಾಲಯದಲ್ಲಿ ಬೆಳೆಸಲಾದ 'ಕಾಸ್ಮಿಕ್ ಬ್ಲೂಮ್' ವಜ್ರವನ್ನೂ ಕಲಾತ್ಮಕ ಪೇಲೋಡ್ ಆಗಿ ಹೊತ್ತೊಯ್ಯಲಾಗಿದೆ.

ವಿಕ್ರಮ್-1 ಯಶಸ್ವಿ ಉಡಾವಣೆ ಭಾರತದ ಖಾಸಗಿ ಬಾಹ್ಯಾಕಾಶ ವಲಯದ ಸಾಮರ್ಥ್ಯವನ್ನು ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಸಾಬೀತುಪಡಿಸಿರುವ ಮಹತ್ವದ ಸಾಧನೆ.

ಪ್ರಧಾನಿ ಮೋದಿ ಅಭಿನಂದನೆ

ಭಾರತದ ಪ್ರಥಮ ಖಾಸಗಿ ರಾಕೆಟ್ ‘ವಿಕ್ರಮ್-1’ ಇಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ನಭಕ್ಕೆ ಚಿಮ್ಮಿದೆ. ಈ ಐತಿಹಾಸಿಕ ಸಾಧನೆಯ ಬೆನ್ನಲ್ಲೇ ಸ್ಕೈರೂಟ್ ಏರೋಸ್ಪೇಸ್ ತಂಡದೊಂದಿಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದರು. ʼʼಇದು ಭಾರತದ ಬಾಹ್ಯಾಕಾಶ ಪಯಣದಲ್ಲಿ ಅತ್ಯಂತ ನಿರ್ಣಾಯಕ ಕ್ಷಣ. ಈ ಮಹಾನ್ ಸಾಧನೆಯು ದೇಶದ ಲಕ್ಷಾಂತರ ಯುವಕರು ದೊಡ್ಡದಾಗಿ ಕನಸು ಕಾಣಲು ಪ್ರೇರೇಪಿಸುತ್ತದೆʼʼ ಎಂದು ಪ್ರಧಾನಿ ಮೋದಿ ಮೆಚ್ಚುಗೆ ಸೂಚಿಸಿದರು.