Waqf Amendment Bill: ಏ. 2ರಂದು ವಕ್ಫ್ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಮಂಡನೆ; ಬಿಜೆಪಿ, ಕಾಂಗ್ರೆಸ್‌ನಿಂದ ವಿಪ್ ಜಾರಿ
Kiren Rijiju: ಪ್ರತಿಪಕ್ಷಗಳ ವಿರೋಧದ ನಡುವೆಯೂ ವಕ್ಫ್ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮಂಡಿಸಲಿದೆ. ಮಸೂದೆಯ ಮೇಲಿನ ಚರ್ಚೆಗೆ 8 ಗಂಟೆಗಳ ಸಮಯವನ್ನು ನಿಗದಿಪಡಿಸಿರುವ ಸರ್ಕಾರ, ಬಹುಮತದಿಂದಾಗಿ ಅದು ಜಾರಿಗೆ ಬರುವ ವಿಶ್ವಾಸದಲ್ಲಿದೆ.


ಹೊಸದಿಲ್ಲಿ: ವಿವಾದಾತ್ಮಕ ವಕ್ಫ್ ತಿದ್ದುಪಡಿ ಮಸೂದೆ (Waqf Amendment Bill)ಯನ್ನು ಏ. 2ರಂದು ಲೋಕಸಭೆಯಲ್ಲಿ ಮಂಡಿಸಲು ವೇದಿಕೆ ಸಿದ್ಧವಾಗಿದೆ. ಪ್ರತಿಪಕ್ಷಗಳ ವಿರೋಧದ ನಡುವೆಯೂ ವಕ್ಫ್ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಬಿಜೆಪಿ (BJP) ನೇತೃತ್ವದ ಕೇಂದ್ರ ಸರ್ಕಾರ ಮಂಡಿಸಲಿದೆ. ಮಸೂದೆಯ ಮೇಲಿನ ಚರ್ಚೆಗೆ 8 ಗಂಟೆಗಳ ಸಮಯವನ್ನು ನಿಗದಿಪಡಿಸಿರುವ ಸರ್ಕಾರ, ಬಹುಮತದಿಂದಾಗಿ ಅದು ಜಾರಿಗೆ ಬರುವ ವಿಶ್ವಾಸದಲ್ಲಿದೆ. ಇತ್ತ ಕಾಂಗ್ರೆಸ್ (Congress) ನೇತೃತ್ವದ ವಿಪಕ್ಷಗಳು ವಿರೋಧಿಸುವುದಾಗಿ ತಿಳಿಸಿದೆ. ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು (Kiren Rijiju) ಮಂಗಳವಾರ ಈ ಬಗ್ಗೆ ಮಾತನಾಡಿ, "ಪ್ರತಿಯೊಂದು ರಾಜಕೀಯ ಪಕ್ಷಕ್ಕೂ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕಿದೆ. ತಿದ್ದುಪಡಿ ಮಸೂದೆಯ ಬಗ್ಗೆ ಯಾವ ರಾಜಕೀಯ ಪಕ್ಷವು ಯಾವ ನಿಲುವನ್ನು ಹೊಂದಿದೆ ಎಂಬುದು ಬುಧವಾರ ತಿಳಿಯಲಿದೆ. ತಿದ್ದುಪಡಿ ಮಸೂದೆಯನ್ನು ಯಾರು ವಿರೋಧಿಸಿದರು ಮತ್ತು ಯಾರು ಬೆಂಬಲಿಸಿದರು ಎಂಬುದು ಇತಿಹಾಸದಲ್ಲಿ ದಾಖಲಾಗಲಿದೆʼʼ ಎಂದು ಹೇಳಿದ್ದಾರೆ.
ಏ. 2ರಂದು ಲೋಕಸಭೆಯಲ್ಲಿ ಅನುಮೋದನೆ ದೊರೆತ ನಂತರ ಮಸೂದೆಯನ್ನು ಏ. 3ರಂದು ರಾಜ್ಯಸಭೆಯಲ್ಲಿ ಮಂಡಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಸಂಸತ್ತಿನ ಬಜೆಟ್ ಅಧಿವೇಶನವು ಏ. 4ರಂದು ಕೊನೆಗೊಳ್ಳಲಿದ್ದು, ಮಸೂದೆಯನ್ನು ಕಾನೂನಾಗಿ ರೂಪಿಸಲು ಲೋಕಸಭೆ ಮತ್ತು ರಾಜ್ಯಸಭೆ ಅಂಗೀಕರಿಸಬೇಕಾಗಿದೆ. ಕಾನೂನು ಅಂಗೀಕರಿಸಲು 272 ಮತಗಳ ಅಗತ್ಯವಿರುವ ಲೋಕಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 293 ಸ್ಥಾನಗಳನ್ನು ಹೊಂದಿದೆ. ಎನ್‌ಡಿಎಗೆ ಕಳವಳವನ್ನುಂಟು ಮಾಡುವ ಏಕೈಕ ಅಂಶವೆಂದರೆ ನಿತೀಶ್ ಕುಮಾರ್ ನೇತೃತ್ವದ ಜೆಡಿಯು. ನಿತೀಶ್ ಕುಮಾರ್ ಮಸೂದೆಯಲಲಿನ ತಿದ್ದುಪಡಿ ಬಗ್ಗೆ ಬಿಜೆಪಿ ನಾಯಕತ್ವಕ್ಕೆ ತಮ್ಮ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಜೆಡಿಯುನ 12 ಸದಸ್ಯರನ್ನು ಹೊಂದಿದೆ. ರಾಜ್ಯಸಭೆಯಲ್ಲಿಯೂ ಮಸೂದೆಗೆ ಯಾವುದೇ ಅಡೆತಡೆಗಳು ಎದುರಾಗುವ ಸಾಧ್ಯತೆ ಇಲ್ಲ. ಎನ್‌ಡಿಎಗೆ 125 ಸಂಸದರ ಬೆಂಬಲವಿದೆ. ಬಹುಮತದ ಅಗತ್ಯವಾದ ಸಂಖ್ಯೆ 118.
ವಕ್ಫ್ ತಿದ್ದುಪಡಿ ಮಸೂದೆ ಬಗ್ಗೆ ಸಚಿವ ಕಿರಣ್ ರಿಜಿಜು ಹೇಳಿದ್ದೇನು ಎನ್ನುವ ವಿವರ ಇಲ್ಲಿದೆ:
The Waqf (Amendment) Bill, 2024, is set for discussion in Lok Sabha tomorrow, with 8 hours allocated, extendable as needed.
— Kiren Rijiju (@KirenRijiju) April 1, 2025
The government is committed to a fair, open debate where every MP, across party lines, gets a voice.
But if some choose to evade discussion, what message… pic.twitter.com/50cOmqLgGs
ಈ ಸುದ್ದಿಯನ್ನೂ ಓದಿ: Waqf Amendment Bill: ವಕ್ಫ್ ತಿದ್ದುಪಡಿ ಮಸೂದೆ; ಏ. 2ರಂದು ಲೋಕಸಭೆಯಲ್ಲಿ ಮಂಡನೆ
1995ರ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಪ್ರಯತ್ನಿಸುವ ಈ ಮಸೂದೆಯನ್ನು ಆರಂಭದಲ್ಲಿ ಕಳೆದ ವರ್ಷ ಆಗಸ್ಟ್‌ನಲ್ಲಿ ಸಂಸತ್ತಿನಲ್ಲಿ ಮಂಡಿಸಲಾಗಿತ್ತು. ವಿಪಕ್ಷಗಳು ಮತ್ತು ವಿವಿಧ ಮುಸ್ಲಿಂ ಸಂಘಟನೆಗಳ ತೀವ್ರ ಪ್ರತಿಭಟನೆಯ ನಡುವೆ, ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ಕಳುಹಿಸಲಾಗಿತ್ತು. ಈ ಮಸೂದೆಗೆ 14 ತಿದ್ದುಪಡಿಗಳನ್ನು ಜೆಪಿಸಿ ಅಂಗೀಕರಿಸಿದೆ. ವಿಪಕ್ಷದ ಸಂಸದರು ಪ್ರಸ್ತಾಪಿಸಿದ 44 ತಿದ್ದುಪಡಿಗಳನ್ನು ಜಗದಾಂಬಿಕಾ ಪಾಲ್ ನೇತೃತ್ವದ ಸಮಿತಿ ತಿರಸ್ಕರಿಸಿದೆ. ಈ ಮಸೂದೆಯನ್ನು ಅಂತಿಮವಾಗಿ ಫೆಬ್ರವರಿಯಲ್ಲಿ ಕೇಂದ್ರ ಸಚಿವ ಸಂಪುಟ ಅನುಮೋದಿಸಿತು.
ಬಿಜೆಪಿ, ಕಾಂಗ್ರೆಸ್‌ನಿಂದ ವಿಪ್ ಜಾರಿ
ವಕ್ಫ್ ತಿದ್ದುಪಡಿ ಮಸೂದೆಯನ್ನು ಏ. 2ರಂದು ಸರ್ಕಾರ ಮಂಡಿಸಲಿರುವ ಕಾರಣ ಬಿಜೆಪಿ ಮಂಗಳವಾರ ತನ್ನ ಸಂಸದರಿಗೆ ಬುಧವಾರ ಹಾಜರಾಗುವಂತೆ ವಿಪ್ ಜಾರಿ ಮಾಡಿದೆ. ಜತೆಗೆ ಕಾಂಗ್ರೆಸ್ ತನ್ನ ಎಲ್ಲ ಸಂಸದರಿಗೆ 3 ದಿನಗಳ ಕಾಲ ಲೋಕಸಭೆಯಲ್ಲಿ ಹಾಜರಾಗುವಂತೆ 3 ಸಾಲಿನ ವಿಪ್ ನೀಡಿದೆ.
ವಿಪ್ ಎಂದರೇನು?
ಯಾವುದೇ ಒಂದು ಪಕ್ಷ ತನ್ನ ಶಿಸ್ತನ್ನು ಕಾಪಾಡಿಕೊಳ್ಳಲು ವಿಪ್ ಅನ್ನು ಬಳಸುತ್ತದೆ. ಬಹುಮತ ಸಾಬೀತುಪಡಿಸುವ ಸಂದರ್ಭದಲ್ಲಿ, ಮಸೂದೆ ಮಂಡಿಸುವಾಗ ವಿಧಾನಸಭೆ, ಲೋಕಸಭೆ ಅಧಿವೇಶನಕ್ಕೆ ಕಡ್ಡಾಯವಾಗಿ ಹಾಜರಾಗಲು, ಪಕ್ಷದ ಸಭೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಲು ವಿಪ್ ಮೂಲಕ ಪಕ್ಷದ ಶಾಸಕರಿಗೆ, ಸಂಸದರಿಗೆ ಸೂಚಿಸಲಾಗುತ್ತದೆ. ವಿಪ್ ಜಾರಿಯಾದ ನಂತರ ಅದನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಧಿಕಾರವನ್ನು ಪಕ್ಷ ಹೊಂದಿರುತ್ತದೆ. ಪಕ್ಷದ ಚಿಹ್ನೆಯಡಿ ಶಾಸಕ ಅಥವಾ ಸಂಸದರಾಗಿ ಆಯ್ಕೆಯಾದವರು ಇದನ್ನು ಪಾಲಿಸಬೇಕು.