Pahalgam Terror Attack: ಪಾಕಿಸ್ತಾನಿ ಸೇನಾ ಮುಖ್ಯಸ್ಥರಿಂದಲೇ ಪಹಲ್ಗಾಮ್ ದಾಳಿಗೆ ಪ್ರಚೋದನೆ ?
ದಕ್ಷಿಣ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮಂಗಳವಾರ ನಡೆದ ದಾಳಿಗೆ ಪಾಕಿಸ್ತಾನಿ ಸೇನಾ ಮುಖ್ಯಸ್ಥರೇ ಪ್ರಚೋದನೆ ನೀಡಿರುವುದಾಗಿ ಭಾರತೀಯ ಗುಪ್ತಚರ ಅಧಿಕಾರಿಗಳು ಹೇಳಿದ್ದಾರೆ. ಪಾಕಿಸ್ತಾನಿ ಸೇನಾ ಮುಖ್ಯಸ್ಥ ಜನರಲ್ ಸೈಯದ್ ಅಸಿಮ್ ಮುನೀರ್ ಅಹ್ಮದ್ ಶಾ ಅವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಕಾಶ್ಮೀರವನ್ನು ಪಾಕಿಸ್ತಾನದ ಕುತ್ತಿಗೆಯ ರಕ್ತನಾಳ ಎಂದಿರುವುದು ಮಾತ್ರವಲ್ಲ ಕಾಶ್ಮೀರ, ದ್ವಿರಾಷ್ಟ್ರ ಸಿದ್ಧಾಂತ, ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ವಿಭಜನೆಯ ಕುರಿತು ಹೇಳಿಕೆಗಳನ್ನು ನೀಡಿದ್ದಾರೆ. ಇದು ಉಗ್ರರಿಗೆ ಪ್ರಚೋದನೆ ನೀಡಿದಂತಾಗಿದೆ ಎನ್ನಲಾಗಿದೆ.


ನವದೆಹಲಿ: ದಕ್ಷಿಣ ಕಾಶ್ಮೀರದ (south Kashmir) ಪಹಲ್ಗಾಮ್‌ನಲ್ಲಿ (Pahalgam ) ಮಂಗಳವಾರ ನಡೆದ ದಾಳಿಗೆ ಪಾಕಿಸ್ತಾನಿ ಸೇನಾ ಮುಖ್ಯಸ್ಥ ( Pakistani Army Chief ) ಜನರಲ್ ಸೈಯದ್ ಅಸಿಮ್ ಮುನೀರ್ ಅಹ್ಮದ್ ಶಾ (General Syed Asim Munir Ahmad Shah) ಅವರ ಪ್ರಚೋದನೆ ಕಾರಣ ಎನ್ನಲಾಗುತ್ತಿದೆ. ಅವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಕಾಶ್ಮೀರವನ್ನು ಪಾಕಿಸ್ತಾನದ ಕುತ್ತಿಗೆಯ ರಕ್ತನಾಳ ಎಂದು ಕರೆದಿದ್ದರು. ಅಲ್ಲದೇ ಅವರು ಕಾಶ್ಮೀರ, ದ್ವಿರಾಷ್ಟ್ರ ಸಿದ್ಧಾಂತ, ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ವಿಭಜನೆಯ ಕುರಿತು ಹೇಳಿಕೆಗಳನ್ನು ನೀಡಿದ್ದು, ಇದು ಉಗ್ರರಿಗೆ ಪ್ರಚೋದನೆ ನೀಡಿದಂತಾಗಿದೆ ಎಂದು ಗುಪ್ತಚರ ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮಂಗಳವಾರ ನಡೆದ ದಾಳಿಯಲ್ಲಿ ಮಂಗಳವಾರ 26 ಪ್ರವಾಸಿಗರು ಸಾವನ್ನಪ್ಪಿದ್ದು ಇದರ ಹೊಣೆಯನ್ನು ಲಷ್ಕರ್-ಎ-ತೈಬಾ ಗೆ ಸೇರಿದ ದಿ ರೆಸಿಸ್ಟೆನ್ಸ್ ಫ್ರಂಟ್ ಎಂಬ ಭಯೋತ್ಪಾದಕ ಗುಂಪು ಹೊತ್ತುಕೊಂಡಿದೆ. ಪಹಲ್ಗಾಮ್‌ನ ರೆಸಾರ್ಟ್ ಪಟ್ಟಣದಿಂದ ಸುಮಾರು ಆರು ಕಿಲೋಮೀಟರ್ ದೂರದಲ್ಲಿರುವ ಬೈಸರನ್‌ನಲ್ಲಿರುವ ಜನಪ್ರಿಯ ಪ್ರವಾಸಿ ತಾಣದಲ್ಲಿ ಈ ಘಟನೆ ನಡೆದಿತ್ತು.
ಈ ದಾಳಿಯ ಕಾರಣಗಳ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಇದಕ್ಕೆ ಪಾಕಿಸ್ತಾನಿ ಸೇನಾ ಮುಖ್ಯಸ್ಥ ಜನರಲ್ ಸೈಯದ್ ಅಸಿಮ್ ಮುನೀರ್ ಅಹ್ಮದ್ ಶಾ ಅವರ ಪ್ರಚೋದನಕಾರಿ ಭಾಷಣವು ಕಾರಣ. ಅವರ ಮಾತುಗಳು ಲಷ್ಕರ್-ಎ-ತೊಯ್ಬಾಕ್ಕೆ (ಎಲ್‌ಇಟಿ) ಸಂಬಂಧಪಟ್ಟ ಸಂಘಟನೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್‌ನಂತಹ ಉಗ್ರಗಾಮಿಗಳಿಗೆ ಧೈರ್ಯ ತುಂಬಿರಬಹುದು ಎಂದು ಹೇಳಿದ್ದಾರೆ.
ಅಸಿಮ್ ಮುನೀರ್ ಹೇಳಿರುವುದೇನು?
ಇಸ್ಲಾಮಾಬಾದ್‌ನಲ್ಲಿ ನಡೆದ ಸಾಗರೋತ್ತರ ಪಾಕಿಸ್ತಾನಿಗಳ ಸಮಾವೇಶದಲ್ಲಿ ಮಾತನಾಡಿದ ಅಸಿಮ್ ಮುನೀರ್, ಕಾಶ್ಮೀರ ಪಾಕಿಸ್ತಾನದ ಕುತ್ತಿಗೆಯ ರಕ್ತನಾಳ. ಪಾಕಿಸ್ತಾನ ಇದನ್ನು ಮರೆಯುವುದಿಲ್ಲ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ಎದುರು ಅವರು ಈ ರೀತಿ ಮಾತುಗಳನ್ನಾಡಿದ್ದರು. ಅವರು ತಮ್ಮ ಮಾತನ್ನು ಮುಂದುವರಿಸುತ್ತಾ, ಪಾಕಿಸ್ತಾನ ರಚನೆಗಾಗಿ ನಮ್ಮ ಪೂರ್ವಜರು ಅಪಾರ ತ್ಯಾಗ ಮಾಡಿದ್ದಾರೆ. ನಾವು ಕೂಡ ಈ ದೇಶದ ಸೃಷ್ಟಿಗೆ ಬಹಳಷ್ಟು ತ್ಯಾಗ ಮಾಡಿದ್ದೇವೆ ಮತ್ತು ಅದನ್ನು ಹೇಗೆ ರಕ್ಷಿಸಿಕೊಳ್ಳಬೇಕೆಂದು ನಮಗೆ ತಿಳಿದಿದೆ ಎಂದು ಹೇಳಿದ್ದಾರೆ.
ದ್ವಿರಾಷ್ಟ್ರ ಸಿದ್ಧಾಂತದ ಬಗ್ಗೆಮಾತನಾಡಿರುವ ಅವರು, ಭಾರತ ಮತ್ತು ಪಾಕಿಸ್ತಾನ ಎರಡು ವಿಭಿನ್ನ ರಾಷ್ಟ್ರಗಳು. ಪಾಕಿಸ್ತಾನಿಗಳು ಅವರ ಸಂಸ್ಕೃತಿ, ಸಿದ್ಧಾಂತಗಳಲ್ಲಿ ಹಿಂದೂಗಳಿಗಿಂತ ಭಿನ್ನರಾಗಿದ್ದಾರೆ. ನಮ್ಮ ಪೂರ್ವಜರು ಜೀವನದ ಪ್ರತಿಯೊಂದು ಅಂಶದಲ್ಲೂ ನಾವು ಹಿಂದೂಗಳಿಗಿಂತ ಭಿನ್ನರು ಎಂದು ಭಾವಿಸಿದ್ದರು. ನಮ್ಮ ಧರ್ಮ, ಪದ್ಧತಿ, ಸಂಪ್ರದಾಯ, ಆಲೋಚನೆ, ಮಹತ್ವಾಕಾಂಕ್ಷೆಗಳು ವಿಭಿನ್ನವಾಗಿವೆ. ಕಾಶ್ಮೀರ ಈ ಎರಡು ರಾಷ್ಟ್ರಗಳ ಸಿದ್ಧಾಂತದ ಅಡಿಪಾಯವಾಗಿತ್ತು. ನಾವು ಎರಡು ರಾಷ್ಟ್ರಗಳುಒಂದಲ್ಲ ಎಂದು ಅವರು ತಿಳಿಸಿದ್ದರು.
ಮುನೀರ್ ಅವರ ಈ ಭಾಷಣದಲ್ಲಿ ಹಿಂದೂ ಮತ್ತು ಮುಸ್ಲಿಮರ ನಡುವಿನ ವ್ಯತ್ಯಾಸಗಳ ಬಗ್ಗೆ ಒತ್ತಿಹೇಳಿದ್ದರು.. ಇದು ಟಿಆರ್‌ಎಫ್ ಸದಸ್ಯರಿಗೆ ಪಹಲ್ಗಾಮ್‌ನ ಬೈಸನ್ ಕಣಿವೆಯಲ್ಲಿ ಧರ್ಮದ ಆಧಾರದ ಮೇಲೆ ಪ್ರವಾಸಿಗರ ಮೇಲೆ ದಾಳಿ ನಡೆಸಲು ಪ್ರೇರೇಪಿಸಿರಬಹುದು ಎಂದು ಗುಪ್ತಚರ ಅಧಿಕಾರಿಗಳು ಹೇಳಿದ್ದಾರೆ.
ಪಹಲ್ಗಾಮ್‌ನ ಬೈಸನ್ ಕಣಿವೆಯಲ್ಲಿಉಗ್ರರು ಪ್ರವಾಸಿಗರಲ್ಲಿ ಇಸ್ಲಾಮಿಕ್ ನಂಬಿಕೆಯ ಕಲ್ಮಾವನ್ನು ಪಠಿಸಲು ಒತ್ತಾಯಿಸಿದ್ದಾರೆ. ಇದನ್ನು ಮಾಡಲು ವಿಫಲರಾದವರನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ದಾಳಿಯ ಪ್ರಮುಖ ಶಂಕಿತರಲ್ಲಿ ಎಲ್‌ಇಟಿ ಕಮಾಂಡರ್ ಸೈಫುಲ್ಲಾ ಕಸೂರಿ, ಖಾಲಿದ್ ಎಂಬ ಹೆಸರಿನಿಂದ ಕರೆಯಲ್ಪಡುವ ಅಬು ಮೂಸಾ ಸೇರಿದಂತೆ ರಾವಲ್ಕೋಟ್ ಮೂಲದ ಇಬ್ಬರು ಎಲ್‌ಇಟಿ ನಿರ್ವಾಹಕರು ಭಾಗಿಯಾಗಿರಬಹುದು ಎಂದು ಗುಪ್ತಚರ ಮಾಹಿತಿ ತಿಳಿಸಿದೆ.
ಏಪ್ರಿಲ್ 18ರಂದು ರಾವಲ್ಕೋಟ್‌ನಲ್ಲಿ ರಾಲಿ ನಡೆಸಿದ ಅಬು ಮೂಸಾ ಅಲ್ಲಿ ಹಿಂಸಾಚಾರಕ್ಕೆ ಬಹಿರಂಗವಾಗಿ ಪ್ರೋತ್ಸಾಹ ಕೊಟ್ಟಿದ್ದಾನೆ. ಈ ವೇಳೆ ಆತ ಜಿಹಾದ್ ಮುಂದುವರಿಯುತ್ತದೆ, ಬಂದೂಕುಗಳು ದಾಳಿ ಮಾಡುತ್ತವೆ ಮತ್ತು ಕಾಶ್ಮೀರದಲ್ಲಿ ಶಿರಚ್ಛೇದ ನಡೆಯುತ್ತಲೇ ಇರುತ್ತದೆ. ಭಾರತವು ಸ್ಥಳೀಯರಲ್ಲದವರಿಗೆ ನಿವಾಸ ಪ್ರಮಾಣಪತ್ರಗಳನ್ನು ನೀಡುವ ಮೂಲಕ ಕಾಶ್ಮೀರದ ಜನಸಂಖ್ಯಾಶಾಸ್ತ್ರವನ್ನು ಬದಲಾಯಿಸಲು ಬಯಸುತ್ತದೆ ಎಂದು ಹೇಳಿದ್ದಾನೆ.
ಪಾಕಿಸ್ತಾನಿ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಭಾಷಣವು ಉಗ್ರಗಾಮಿಗಳಿಗೆ ಪ್ರಚೋದನೆ ಕೊಟ್ಟಂತಾಗಿದೆ. ಭಾರತದಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ ಬಳಿಕ ಅಲ್ಲಿ ಹಿಂದೂ ವಿರೋಧಿ ಮಾತುಗಳು ಕೇಳಿ ಬರುತ್ತಿವೆ. ಇದು ಕಾಶ್ಮೀರದಲ್ಲಿ ದಾಳಿ ನಡೆಸಲು ಸಂಘಟಿತ ತಂತ್ರವಾಗಿರಬಹುದು ಎನ್ನುತ್ತಾರೆ ಗುಪ್ತಚರ ಅಧಿಕಾರಿಗಳು.
ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರ ಭಾರತ ಭೇಟಿಯ ಸಂದರ್ಭದಲ್ಲೇ ಪಹಲ್ಗಾಮ್ ದಾಳಿಯನ್ನು ಮಾಡಲಾಗಿದೆ. ಇದಕ್ಕೆ ರಾಜಕೀಯ ಕಾರಣ ನೀಡುವ ಪ್ರಯತ್ನ ಮಾಡಲಾಗಿದೆಯೇ ಎನ್ನುವುದನ್ನು ಕೂಡ ಅಧಿಕಾರಿಗಳು ವಿಶ್ಲೇಷಿಸುತ್ತಿದ್ದಾರೆ.
ಇದನ್ನೂ ಓದಿ: Pahalgam terror attack: ಪಹಲ್ಗಾಮ್ ಉಗ್ರರ ದಾಳಿ; ನಾಳೆ ಸರ್ವಪಕ್ಷಗಳ ಸಭೆ

ಆರೋಪ ನಿರಾಕರಿಸಿದ ಪಾಕ್
ಕಾಶ್ಮೀರದಲ್ಲಿ ನಡೆದ ಭಯೋತ್ಪಾದನಾ ದಾಳಿಯಲ್ಲಿ ತಾವು ಭಾಗಿಯಾಗಿಲ್ಲ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಹೇಳಿದ್ದಾರೆ. ಮಾಧ್ಯಮವೊಂದಕ್ಕೆ ಮಾತನಾಡಿದ ಅವರು, ಪಾಕಿಸ್ತಾನಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಇದೆಲ್ಲವೂ ಸ್ವದೇಶಿಯಾಗಿ ಬೆಳೆದದ್ದು. ಭಾರತದ ವಿರುದ್ಧ ಒಂದಲ್ಲ, ಎರಡಲ್ಲ ಡಜನ್‌ಗಟ್ಟಲೆ ಕ್ರಾಂತಿಗಳು ನಡೆಯುತ್ತಿವೆ. ನಾಗಾಲ್ಯಾಂಡ್‌ನಿಂದ ಕಾಶ್ಮೀರದವರೆಗೆ, ದಕ್ಷಿಣದಲ್ಲಿ, ಛತ್ತೀಸ್‌ಗಢದಲ್ಲಿ, ಮಣಿಪುರದಲ್ಲಿ ಕ್ರಾಂತಿಗಳಾಗುತ್ತಿವೆ. ಭಾರತ ಸರ್ಕಾರದ ವಿರುದ್ಧ ಈ ಕ್ರಾಂತಿಗಳು ನಡೆಯುತ್ತಿವೆ ಎಂದಿದ್ದಾರೆ.
ಪ್ರಧಾನಿ ಶೆಹಬಾಜ್ ಷರೀಫ್ ಅವರ ಆಪ್ತ ಸಹಾಯಕರಾಗಿರುವ ಆಸಿಫ್, ಕಾಶ್ಮೀರ ಹಿಂಸಾಚಾರವನ್ನು ವಿಶಾಲವಾದ ದೇಶೀಯ ದಂಗೆಯ ಭಾಗವೆಂದು ಕರೆದಿದ್ದಾರೆ.
ಟಿಆರ್‌ಎಫ್ ಎಂದರೇನು?
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಅನಂತರ 2019ರಲ್ಲಿ ಎಲ್‌ಇಟಿಯ ಪ್ರಾಕ್ಸಿ ಸಂಘಟನೆಯಾದ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಅಸ್ತಿತ್ವಕ್ಕೆ ಬಂದಿತ್ತು. ಇದು ಲಷ್ಕರ್ ಹೊರತುಪಡಿಸಿ ತೆಹ್ರೀಕ್-ಎ-ಮಿಲ್ಲತ್ ಇಸ್ಲಾಮಿಯಾ ಮತ್ತು ಘಜ್ನವಿ ಹಿಂದ್ ಸೇರಿದಂತೆ ವಿವಿಧ ಸಂಘಟನೆಗಳ ಮಿಶ್ರಣವಾಗಿದೆ. ಟಿಆರ್‌ಎಫ್ ಭಯೋತ್ಪಾದಕ ಚಟುವಟಿಕೆಗಳನ್ನು ಮುಂದುವರಿಸಲು ಭಯೋತ್ಪಾದಕರ ನೇಮಕಾತಿ, ಒಳನುಸುಳುವಿಕೆ ಮತ್ತು ಪಾಕಿಸ್ತಾನದಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಶಸ್ತ್ರಾಸ್ತ್ರ ಮತ್ತು ಮಾದಕವಸ್ತುಗಳ ಕಳ್ಳಸಾಗಣೆ ಕುರಿತು ಪ್ರಚಾರ ನಡೆಸುತ್ತಿದೆ ಎಂದು ಭಾರತೀಯ ಗೃಹ ಸಚಿವಾಲಯ ಹೇಳಿದೆ.
ಜೈಶ್-ಎ-ಮೊಹಮ್ಮದ್ ಮತ್ತು ಎಲ್‌ಇಟಿ ಧಾರ್ಮಿಕ ಅರ್ಥಗಳನ್ನು ಹೊಂದಿದೆ. ಹೀಗಾಗಿ ಅವುಗಳಿಗೆ ಜಾಗತಿಕ ಮನ್ನಣೆ ನೀಡುವುದು ಸಾಧ್ಯವಿಲ್ಲ. ಅದಕ್ಕೆ ಪರ್ಯಾಯವಾಗಿ ಪಾಕಿಸ್ತಾನವು ಎಲ್‌ಇಟಿಗೆ ಟಿಆರ್‌ಎಫ್ ಎಂಬ ಹೆಸರನ್ನು ನೀಡಿದೆ. ಈ ಮೂಲಕ ಅದಕ್ಕೆ ಜಾಗತಿಕ ರಾಜಕೀಯದಲ್ಲಿ ಸ್ಥಾನ ಕೊಡಿಸುವ ಪ್ರಯತ್ನ ಮಾಡುತ್ತಿದೆ. ಟಿಆರ್‌ಎಫ್ ಧರ್ಮದಿಂದಲ್ಲ ಜನರ ಚಳುವಳಿಯಾಗಿ ಗುರುತಿಸುವಂತೆ ಮಾಡಲಾಗಿದೆ.
2023ರ ಜನವರಿಯಲ್ಲಿ ಟಿಆರ್‌ಎಫ್ ಭಯೋತ್ಪಾದನ ಕುರಿತು ಪ್ರಚಾರಕ್ಕಾಗಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿಯಲ್ಲಿ ಅದನ್ನು "ಭಯೋತ್ಪಾದಕ ಸಂಘಟನೆ" ಎಂದು ಭಾರತೀಯ ಗೃಹ ಸಚಿವಾಲಯ ಘೋಷಿಸಿತು.
ಇದಕ್ಕೆ ಕೆಲವು ತಿಂಗಳ ಮೊದಲು ಟಿಆರ್‌ಎಫ್ ಕಾಶ್ಮೀರದಲ್ಲಿ ಪತ್ರಕರ್ತರಿಗೆ ಬೆದರಿಕೆಗಳನ್ನು ಒಡ್ಡಿತ್ತು. ಸೈಫುಲ್ಲಾ ಕಸೂರಿ ಎಂದು ಕರೆಯಲ್ಪಡುವ ಸೈಫುಲ್ಲಾ ಖಾಲಿದ್ ಎಲ್‌ಇಟಿಯ ಉಪ ಮುಖ್ಯಸ್ಥ ಮತ್ತು ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಪಾಕಿಸ್ತಾನಿ ಭಯೋತ್ಪಾದಕ ಹಫೀಜ್ ಸಯೀದ್ ಜೊತೆ ನಿಕಟ ಸಂಪರ್ಕವನ್ನು ಹೊಂದಿದ್ದಾನೆ ಎಂದು ಪತ್ರಿಕೆಗಳು ವರದಿ ಮಾಡಿದ್ದರಿಂದ ಪತ್ರಿಕೆಗಳಿಗೆ ಟಿಆರ್‌ಎಫ್ ಬೆದರಿಕೆಯನ್ನು ಒಡ್ಡಿತ್ತು.