ನವದೆಹಲಿ, ಮೇ 16: ಮಸೀದಿಯಲ್ಲಿ ಧ್ವನಿವರ್ಧಕದ ಧ್ವನಿ ಮಿತಿಮೀರಿದ್ದಕ್ಕೆ ಸಂಬಂಧಿಸಿದಂತೆ ದೂರು ನೀಡಿದ ಹಿನ್ನೆಲೆಯಲ್ಲಿ ಗುಂಪೊಂದು ಕಲ್ಲು ತೂರಾಟ ನಡೆಸಿ ಪೊಲೀಸ್ ಠಾಣೆಯನ್ನು ಧ್ವಂಸಗೊಳಿಸಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಪಶ್ಚಿಮ ಬಂಗಾಳದ (West Bengal) ಅಸನ್ಸೋಲ್‌ನಲ್ಲಿ ಶುಕ್ರವಾರ (ಮೇ 15) ರಾತ್ರಿ ಈ ಘಟನೆ ನಡೆದಿದೆ. ಸ್ಥಳೀಯರ ಪ್ರಕಾರ, ದೂರು ದಾಖಲಾದ ನಂತರ ಜಹಾಂಗಿರಿ ಮೊಹಲ್ಲಾ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ಮಸೀದಿ ಅಧಿಕಾರಿಗಳಿಗೆ ಧ್ವನಿವರ್ಧಕದ ಧ್ವನಿಯನ್ನು ಕಡಿಮೆ ಮಾಡುವಂತೆ ಒತ್ತಾಯಿಸಿದರು. ಇದು ಮುಸ್ಲಿಂ ಸಮುದಾಯದವರನ್ನು ಕೆರಳಿಸಿತು.
ಬೀದಿಗಳಿದು ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆ ಶೀಘ್ರದಲ್ಲೇ ಹಿಂಸೆಯ ರೂಪ ತಾಳಿತು. ಉದ್ರಿಕ್ತಗೊಂಡ ಗುಂಪೊಂದು ಪೊಲೀಸರ ಮೇಲೆ ಇಟ್ಟಿಗೆಗಳು ಮತ್ತು ಕಲ್ಲುಗಳಿಂದ ದಾಳಿ ಮಾಡಿ, ಆಸ್ತಿಪಾಸ್ತಿಗೆ ಹಾನಿ ಮಾಡಿತು. ಅನೇಕ ಪೊಲೀಸ್ ವಾಹನಗಳು ಮತ್ತು ನಿಲ್ಲಿಸಿದ್ದ ಬೈಕ್‌ಗಳನ್ನು ಸಹ ಧ್ವಂಸಗೊಳಿಸಲಾಯಿತು. ವಿಡಿಯೊದಲ್ಲಿ ಆಟೋರಿಕ್ಷಾದ ಮುಂಭಾಗದ ಗಾಜು ಸಂಪೂರ್ಣವಾಗಿ ಪುಡಿಪುಡಿಯಾಗಿರುವುದು ಕಂಡುಬಂದಿದೆ.
ಇಲ್ಲಿದೆ ವಿಡಿಯೊ:
ಹಿಂಸಾಚಾರ ಹೆಚ್ಚಾದ ಬಳಿಕ ಪೊಲೀಸರು ಲಾಠಿಚಾರ್ಜ್ ಮಾಡಿ ಗುಂಪನ್ನು ಚದುರಿಸಲು ಅಶ್ರುವಾಯು ಪ್ರಯೋಗಿಸಿದರು. ಘಟನೆಯ ನಂತರ ಇಡೀ ಪ್ರದೇಶವು ಕಲ್ಲು ಮತ್ತು ಅವಶೇಷಗಳಿಂದ ಆವೃತವಾಗಿತ್ತು. ಗಲಭೆ ಪೀಡಿತ ಪ್ರದೇಶ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೀದಿಯಲ್ಲಿ ನಮಾಜ್ ನಿಷೇಧ, ಕಲ್ಲೆಸೆಯುವವರಿಗೆ ಕಠಿಣ ಶಿಕ್ಷೆ: ಪಶ್ಚಿಮ ಬಂಗಾಳದಲ್ಲಿ ನೂತನ ಕ್ರಮ
ಘಟನೆಯ ಬಗ್ಗೆ ಸಮಗ್ರ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಅಸನ್ಸೋಲ್ ದುರ್ಗಾಪುರ ಪೊಲೀಸ್ ಕಮಿಷನರೇಟ್‌ನ ಉಪ ಪೊಲೀಸ್ ಆಯುಕ್ತ (ಡಿಸಿ) ಪಿವಿಜಿ ಸತೀಶ್ ಹೇಳಿದ್ದಾರೆ. ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿ ಧ್ವಂಸ ಮಾಡಿದ ದುಷ್ಕರ್ಮಿಗಳನ್ನು ವಿಡಿಯೊ ದೃಶ್ಯಾವಳಿಗಳು ಮತ್ತು ಸಿಸಿಟಿವಿ ಮೂಲಕ ಗುರುತಿಸಲಾಗುತ್ತಿದೆ. ಯಾವುದೇ ಅಪರಾಧಿಗಳನ್ನು ಸುಮ್ಮನೆ ಬಿಡುವುದಿಲ್ಲ. ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ರಾಜ್ಯಾದ್ಯಂತ ಧಾರ್ಮಿಕ ಸ್ಥಳಗಳು ಮತ್ತು ಕಾರ್ಯಕ್ರಮಗಳಲ್ಲಿ ಅನುಮತಿಸಲಾದ ಶಬ್ಧ ಮಿತಿಗಳನ್ನು ಮೀರಿದ ಧ್ವನಿವರ್ಧಕಗಳ ಬಳಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ ಒಂದು ದಿನದ ನಂತರ ಈ ಘಟನೆ ನಡೆದಿದೆ. ರಾಜ್ಯ ಸಚಿವಾಲಯ ನಬನ್ನಾದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ, ಶಬ್ಧಮಾಲಿನ್ಯ ನಿಯಮಗಳನ್ನು ವಿನಾಯಿತಿ ಇಲ್ಲದೆ ಜಾರಿಗೊಳಿಸಬೇಕು ಎಂದು ಮುಖ್ಯಮಂತ್ರಿ ಸುವೇಂದು ಅಧಿಕಾರಿ ಒತ್ತಿ ಹೇಳಿದರು.