ರಾಘವ್ ಚಡ್ಡಾ ಬಿಜೆಪಿ ಸೇರಿದ ಬಳಿಕ ಮೊದಲ ಬಾರಿಗೆ ಅರವಿಂದ್ ಕೇಜ್ರಿವಾಲ್ ಹೇಳಿದ್ದೇನು?
ರಾಜ್ಯಸಭೆಯಲ್ಲಿ ಪಕ್ಷದ ಉಪ ನಾಯಕ ಹುದ್ದೆಯಿಂದ ವಜಾಗೊಂಡ ಆಪ್ ಸಂಸದ ರಾಘವ್ ಚಡ್ಡಾ ಶುಕ್ರವಾರ ಬಿಜೆಪಿ ಸೇರಿದ ಬಳಿಕ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಅವರು ಕೇವಲ ಒಂದು ಸಾಲಿನ ಪ್ರತಿಕ್ರಿಯೆ ನೀಡಿದರು.
ಸಂಗ್ರಹ ಚಿತ್ರ -
ನವದೆಹಲಿ: ಸಂಸದ ರಾಘವ್ ಚಡ್ಡಾ (MP Raghav Chadha ) ಅವರೊಂದಿಗೆ ಅಶೋಕ್ ಮಿತ್ತಲ್ ಮತ್ತು ಸಂದೀಪ್ ಪಾಠಕ್ ಅವರು ಶುಕ್ರವಾರ ಆಪ್ (AAP) ತೊರೆದು ಬಿಜೆಪಿ (BJP) ಸೇರ್ಪಡೆಗೊಂಡರು. ಇದರ ಬಳಿಕ ಮೊದಲ ಬಾರಿಗೆ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ (Aam Aadmi Party chief) ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಈ ಕುರಿತು ಒಂದು ಸಾಲಿನ ಪ್ರತಿಕ್ರಿಯೆ ನೀಡಿರುವ ಅವರು, ಬಿಜೆಪಿ ಮತ್ತೊಮ್ಮೆ ಪಂಜಾಬಿಗಳಿಗೆ ದ್ರೋಹ ಮಾಡಿದೆ ಎಂದು ತಿಳಿಸಿದ್ದಾರೆ.
ರಾಜ್ಯಸಭೆಯಲ್ಲಿ ಪಕ್ಷದ ಉಪ ನಾಯಕ ಹುದ್ದೆಯಿಂದ ವಜಾಗೊಂಡ ಪಂಜಾಬ್ ಸಂಸದ ರಾಘವ್ ಚಡ್ಡಾ ಶುಕ್ರವಾರ ಬಿಜೆಪಿ ಸೇರಿದರು. ಪ್ರಧಾನಿ ಮೋದಿ, ಬಿಜೆಪಿಯ ಕುರಿತು ಮೃದು ಧೋರಣೆ ಹೊಂದಿರುವ ರಾಘವ್ ಚಡ್ಡಾ ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.
Janivara Row: ವಿದ್ಯಾರ್ಥಿಗಳ ಜನಿವಾರ ತೆಗೆಸಿದ್ದ ಕೃಪಾನಿಧಿ ಕಾಲೇಜಿನ ಮೂವರು ಸಿಬ್ಬಂದಿ ವಶಕ್ಕೆ
ರಾಘವ್ ಚಡ್ಡಾ ಅವರು ಶುಕ್ರವಾರ ಮಧ್ಯಾಹ್ನ ಬಿಜೆಪಿ ಸೇರಿದ ಬಳಿಕ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಒಂದು ಸಾಲಿನ ಪ್ರತಿಕ್ರಿಯೆಯನ್ನು ನೀಡಿ, ಬಿಜೆಪಿ ಮತ್ತೊಮ್ಮೆ ಪಂಜಾಬಿಗಳಿಗೆ ದ್ರೋಹ ಮಾಡಿದೆ ಎಂದು ತಿಳಿಸಿದರು.
ಇದಕ್ಕೂ ಮೊದಲು ಚಡ್ಡಾ ಅವರು ಅಶೋಕ್ ಮಿತ್ತಲ್ ಮತ್ತು ಸಂದೀಪ್ ಪಾಠಕ್ ಅವರೊಂದಿಗೆ ಇತರ ನಾಲ್ವರು ಬಿಜೆಪಿ ಸೇರುತ್ತಿರುವುದಾಗಿ ಘೋಷಿಸಿದರು. ಬಳಿಕ ಮಾತನಾಡಿದ ಅವರು, ನನ್ನ ಜೀವನದ 15 ವರ್ಷಗಳನ್ನು ನಾನು ಆಪ್ ಗೆ ನೀಡಿದೆ. ಈಗ ಅದು ಪ್ರಾಮಾಣಿಕ ರಾಜಕೀಯದಿಂದ ದೂರ ಸರಿದಿದೆ. ನಾನು ತಪ್ಪು ಪಕ್ಷದಲ್ಲಿದ್ದೆ. ಈಗ ಅದರಿಂದ ದೂರ ಸರಿದು ಜನರಿಗೆ ಹತ್ತಿರವಾಗುತ್ತಿದ್ದೇನೆ. ಇಂದಿನ ಆಪ್ ಭ್ರಷ್ಟ ಮತ್ತು ರಾಜಿ ಮಾಡಿಕೊಂಡ ಪಕ್ಷವಾಗಿದೆ ಎಂದು ತಿಳಿಸಿದರು.
ಆಪ್ ಸಂಸದರಾಗಿರುವ ರಾಘವ್ ಚಡ್ಡಾ, ಅಶೋಕ್ ಮಿತ್ತಲ್, ಸಂದೀಪ್ ಪಾಠಕ್ ಅವರೊಂದಿಗೆ ಇತರ ನಾಲ್ವರು ಬಿಜೆಪಿ ಸೇರುತ್ತಿರುವುದರಿಂದ ಆಪ್ ಸಂಸದರ ಸಂಖ್ಯೆ ಇಳಿಕೆಯಾಗಿದೆ. ಇದು ಪಕ್ಷಕ್ಕೆ ಭಾರಿ ಹಿನ್ನಡೆಯಾದಂತಾಗಿದೆ. ಎಎಪಿ ರಾಜ್ಯಸಭೆಯಲ್ಲಿ 10 ಸಂಸದರನ್ನು ಹೊಂದಿದೆ. ಪಂಜಾಬ್‌ನಿಂದ ಏಳು ಮತ್ತು ದೆಹಲಿಯಿಂದ ಮೂವರು.
ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್, ದೆಹಲಿ ಮಹಿಳಾ ಆಯೋಗದ ಮಾಜಿ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು ಕೂಡ ತಮ್ಮೊಂದಿಗೆ ಬಿಜೆಪಿ ಸೇರುತ್ತಾರೆ ಎಂದು ಚಡ್ಡಾ ಹೇಳಿದ್ದು, ಜೊತೆಗೆ ರಾಜಿಂದರ್ ಗುಪ್ತಾ, ವಿಕ್ರಮ್ ಸಾಹ್ನಿ ಕೂಡ ಪಕ್ಷ ಬದಲಾಯಿಸಲಿದ್ದಾರೆ ಎನ್ನಲಾಗಿದೆ.
2024ರ ಮೇ ತಿಂಗಳಲ್ಲಿ ಕೇಜ್ರಿವಾಲ್ ಅವರ ಸಹಾಯಕ ಬಿಭಾವ್ ಕುಮಾರ್ ಅವರೊಂದಿಗೆ ಮುಖ್ಯಮಂತ್ರಿ ನಿವಾಸದಲ್ಲಿ ಜಗಳ ಮಾಡಿಕೊಂಡಿದ್ದ ಸ್ವಾತಿ ಮಲಿವಾಲ್ ಪಕ್ಷ ತೊರೆದಿರುವುದರಲಿ ಯಾವುದೇ ಅಚ್ಚರಿಯಿಲ್ಲ. ಯಾಕೆಂದರೆ ಆಗಲೇ ಅವರು ಪಕ್ಷದೊಂದಿಗಿನ ತಮ್ಮ ಸಂಬಂಧವನ್ನು ಕಡಿದುಕೊಂಡಿದ್ದರು.
ಚಡ್ಡಾ ಅವರು ಪಕ್ಷ ತೊರೆದಿದ್ದನ್ನು ಟೀಕಿಸಿರುವ ಸಂಜಯ್ ಸಿಂಗ್, ಅವರು ಬಿಜೆಪಿಯ ಮಡಿಲಿಗೆ ಬಿದ್ದಿದ್ದಾರೆ ಎಂದು ಹೇಳಿದರು.
ಏಪ್ರಿಲ್ 2 ರಂದು ಕೇಜ್ರಿವಾಲ್ ಅವರು ಚಡ್ಡಾ ಅವರನ್ನು ರಾಜ್ಯಸಭೆಯಲ್ಲಿ ಪಕ್ಷದ ಉಪ ನಾಯಕ ಹುದ್ದೆಯಿಂದ ವಜಾಗೊಳಿಸಿ ಮಿತ್ತಲ್ ಅವರನ್ನು ನೇಮಕ ಮಾಡಿತ್ತು. ಆ ಬಳಿಕ ಪಕ್ಷದೊಳಗಿನ ಸಂಘರ್ಷ ಒಂದೊಂದಾಗಿ ಮುನ್ನೆಲೆಗೆ ಬರಲು ಪ್ರಾರಂಭಿಸಿತ್ತು. ಪಕ್ಷವು ಅವರನ್ನು ಮೌನಗೊಳಿಸಲು ಸಾಕಷ್ಟು ಪ್ರಯತ್ನ ಪಟ್ಟಿತ್ತು ಎನ್ನಲಾಗಿದೆ.
ಕಳೆದ ವರ್ಷ ಪಂಜಾಬ್ ಚುನಾವಣೆಯಲ್ಲಿ ಎಎಪಿ ಗೆಲ್ಲಲು ಸಹಾಯ ಮಾಡುವಲ್ಲಿ ಚಡ್ಡಾ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಮುಂದಿನ ವರ್ಷ ನಡೆಯಲಿರುವ ಚುನಾವಣೆಗೂ ಮುನ್ನವೇ ಅವರು ಪಕ್ಷ ತ್ಯಜಿಸಿದ್ದಾರೆ. ಚಡ್ಡಾ ಅವರು ಎಎಪಿಯ ರಾಷ್ಟ್ರೀಯ ವಕ್ತಾರರಾಗಿದ್ದರು. 26 ನೇ ವಯಸ್ಸಿನಲ್ಲಿ ಪಕ್ಷದ ರಾಷ್ಟ್ರೀಯ ಖಜಾಂಚಿಯಾಗಿ ನೇಮಕಗೊಂಡಿದ್ದ ಅವರು 2022ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು.