Waqf amendment bill: ವಕ್ಫ್ ಕದನಕ್ಕೆ ಕೆಲವೇ ಕ್ಷಣದಲ್ಲಿ ರಣಕಹಳೆ; ತೀವ್ರ ವಿರೋಧಕ್ಕೆ INDI ಬಣ ಸಜ್ಜು
Waqf bill:ವಿವಾದಿತ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಬುಧವಾರ ಲೋಕಸಭೆಯಲ್ಲಿ ಮಂಡಿಸಲಿದ್ದು, ವಿರೋಧ ಪಕ್ಷ ಮತ್ತು ಆಡಳಿತ ಪಕ್ಷದ ನಡುವೆ ತೀವ್ರ ವಾಕ್ಸಮರ ನಡೆಯುವ ಸಾಧ್ಯತೆಯಿದೆ. ಸ್ಪೀಕರ್ ಓಂ ಬಿರ್ಲಾ ಅಧ್ಯಕ್ಷತೆಯ ಲೋಕಸಭೆ ವ್ಯವಹಾರ ಸಲಹಾ ಸಮಿತಿ (ಬಿಎಸಿ) ಈ ಮಸೂದೆ ಕುರಿತು ಚರ್ಚಿಸಲು ಎಂಟು ಗಂಟೆಗಳ ಸಮಯಾವಕಾಶವನ್ನು ಮೀಸಲಿಟ್ಟಿದೆ..


ನವದೆಹಲಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ವಿವಾದಿತ ವಕ್ಫ್ (ತಿದ್ದುಪಡಿ) ಮಸೂದೆಯನ್ನು(Waqf amendment bill) ಬುಧವಾರ ಲೋಕಸಭೆಯಲ್ಲಿ ಮಂಡಿಸಲಿದ್ದು, ವಿರೋಧ ಪಕ್ಷ ಮತ್ತು ಆಡಳಿತ ಪಕ್ಷದ ನಡುವೆ ತೀವ್ರ ವಾಕ್ಸಮರ ನಡೆಯುವ ಸಾಧ್ಯತೆಯಿದೆ. ಸ್ಪೀಕರ್ ಓಂ ಬಿರ್ಲಾ ಅಧ್ಯಕ್ಷತೆಯ ಲೋಕಸಭೆ ವ್ಯವಹಾರ ಸಲಹಾ ಸಮಿತಿ (ಬಿಎಸಿ) ಈ ಮಸೂದೆ ಕುರಿತು ಚರ್ಚಿಸಲು ಎಂಟು ಗಂಟೆಗಳ ಸಮಯಾವಕಾಶವನ್ನು ಮೀಸಲಿಟ್ಟಿದೆ. ಬಿಎಸಿ ಸಭೆ ನಡೆಯುತ್ತಿರುವ ಸಮಯದಲ್ಲಿಯೂ ವಿಪಕ್ಷಗಳು ಸಭಾತ್ಯಾಗ ಮಾಡಿದ್ದು, ಸರ್ಕಾರ ತಮ್ಮ ಧ್ವನಿಯನ್ನು ಹತ್ತಿಕ್ಕಲು ಹೊರಟಿದೆ ಎಂದು ಆರೋಪಿಸಿದೆ. “ತಮ್ಮ ಧ್ವನಿಯನ್ನು ನಿರ್ಲಕ್ಷಿಸಲಾಗುತ್ತಿದೆ. ಮಣಿಪುರದ ಪರಿಸ್ಥಿತಿ ಮತ್ತು ಮತದಾರರ ಫೋಟೋ ಗುರುತಿನ ಚೀಟಿಗಳ ಮೇಲಿನ ವಿವಾದ ಸೇರಿದಂತೆ ಹೆಚ್ಚಿನ ವಿಷಯಗಳನ್ನು ಚರ್ಚಿಸಲು ಮತ್ತು ದೇಶದಲ್ಲಿ ನಡೆಯುತ್ತಿರುವ ಪ್ರಮುಖ ಘಟನೆಗಳನ್ನು ಚರ್ಚೆಗೆ ಕೈಗೆತ್ತಿಕೊಳ್ಳಲು ವಿರೋಧ ಪಕ್ಷಗಳು ಹೆಚ್ಚಿನ ಸಮಯವನ್ನು ಬಯಸುತ್ತಿವೆ” ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಉಪ ನಾಯಕ ಗೌರವ್ ಗೊಗೊಯ್ ಅವರು ಹೇಳಿದರು.
ವಿಪ್ ಜಾರಿ ಮಾಡಿದ ಕಾಂಗ್ರೆಸ್, ಬಿಜೆಪಿ:
ಸರ್ಕಾರವು ವಕ್ಫ್ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವ ಮುನ್ನಾ ದಿನವೇ ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ತಮ್ಮ ಎಲ್ಲಾ ಸಂಸದರಿಗೆ ವಿಪ್ ಜಾರಿ ಮಾಡಿ, ಸದನದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ಕೇಳಿಕೊಂಡಿದೆ. ವಿವಾದಿತ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಲೋಕಸಭೆಯಲ್ಲಿ ಚರ್ಚೆ ಮತ್ತು ಅಂಗೀಕಾರಕ್ಕಾಗಿ ಕೈಗೆತ್ತಿಕೊಳ್ಳಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದ ನಂತರ ಕಾಂಗ್ರೆಸ್ ಮೂರು ಸಾಲಿನ ವಿಪ್ ಹೊರಡಿಸಿದೆ.
ಪ್ರತ್ಯೇಕ ಸಭೆ ನಡೆಸಿದ INDI ಬಣ:
ಸಂಸತ್ತಿನಲ್ಲಿ ವಕ್ಫ್ ಮಸೂದೆ ವಿರುದ್ಧ ಒಗ್ಗಟ್ಟಿನಿಂದ ಹೋರಾಡಲು ವಿಪಕ್ಷಗಳ INDI ಬಣ ಸಂಸತ್ ಭವನದಲ್ಲಿ ಸಭೆ ನಡೆಸಿದೆ ಎಂದು ವರದಿಯಾಗಿದೆ. ಬಣದ ಎಲ್ಲಾ ಸದಸ್ಯ ಪಕ್ಷಗಳು ಒಗ್ಗಟ್ಟಿನಿಂದ ಈ ಮಸೂದೆಯನ್ನು ವಿರೋಧಿಸುವ ನಿಲುವು ತಾಳಿದ್ದು, ಈ ಮೂಲಕ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಲು ನಿರ್ಧರಿಸಿವೆ. “INDI ಬಣವು ಸಂಸತ್ತಿನಲ್ಲಿ ಮಸೂದೆಯನ್ನು ವಿರೋಧಿಸಲಿದೆ. ಮಸೂದೆ ಪರಿಚಯಿಸುವಾಗಲೇ ನಮ್ಮ ಒಕ್ಕೂಟ ಹಾಗೂ ಸಮಾನ ಮನಸ್ಕ ಪಕ್ಷಗಳು ಈ ಮಸೂದೆಯನ್ನು ವಿರೋಧಿಸಿದ್ದವು. ಈ ಮಸೂದೆಯು ಸಂವಿಧಾನದ ಮೂಲ ರಚನೆಗೆ ವಿರುದ್ಧವಾಗಿದೆ. INDI ಒಕ್ಕೂಟ ಇದನ್ನು ಖಡಾಖಂಡಿತವಾಗಿ ವಿರೋಧಿಸಲಿದ್ದು, ಇತರ ಪಕ್ಷಗಳಿಗೂ ಈ ಮಸೂದೆ ವಿರುದ್ಧ ಮತ ಚಲಾಯಿಸುವಂತೆ ಮನವಿ ಮಾಡುತ್ತೇವೆ” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Waqf Amendment Bill: ಏ. 2ರಂದು ವಕ್ಫ್ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಮಂಡನೆ; ಬಿಜೆಪಿ, ಕಾಂಗ್ರೆಸ್‌ನಿಂದ ವಿಪ್ ಜಾರಿ
ಏನಿದು ವಕ್ಫ್ (ತಿದ್ದುಪಡಿ) ಮಸೂದೆ?
ವಿವಾದಾತ್ಮಕ ಮಸೂದೆಯನ್ನು ಕಳೆದ ವರ್ಷ ಆಗಸ್ಟ್‌ನಲ್ಲಿ ಲೋಕಸಭೆಗೆ ಪರಿಚಯಿಸಲಾಗಿತ್ತು. ವಕ್ಫ್ ಕಾಯ್ದೆಯ ನಿಯಮಗಳಿಗೆ 40 ತಿದ್ದುಪಡಿಗಳನ್ನು ಪ್ರಸ್ತಾಪಿಸುವ ಈ ಮಸೂದೆಯು, ವಕ್ಫ್ ಮಂಡಳಿಗಳಲ್ಲಿ ಮುಸ್ಲಿಂ ಮಹಿಳೆಯರು ಮತ್ತು ಮುಸ್ಲಿಮೇತರರಿಗೆ ಪ್ರಾತಿನಿಧ್ಯ ನೀಡಲಿದೆ. ಇಸ್ಲಾಮಿಕ್ ದತ್ತಿ ನಿಧಿಯನ್ನು ನಿರ್ವಹಿಸುವ ಭಾರತದ ವಕ್ಫ್ ಮಂಡಳಿಗಳ ನಿಯಂತ್ರಣ ಮತ್ತು ಆಡಳಿತದಲ್ಲಿ ವ್ಯಾಪಕ ಬದಲಾವಣೆಗಳನ್ನು ಈ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. 2006ರಲ್ಲಿ ರಾಜಿಂದರ್ ಸಾಚಾರ್ ಸಮಿತಿ ನೀಡಿದ ಶಿಫಾರಸುಗಳಿಗೆ ಅನುಗುಣವಾಗಿ ಈ ಮಸೂದೆಯು ಪುರಾತನ ಮತ್ತು ಸಂಕೀರ್ಣ ವಕ್ಫ್ ವ್ಯವಸ್ಥೆಯನ್ನು ಆಧುನೀಕರಿಸಲಿದೆ ಎಂದು ಸರ್ಕಾರ ವಾದಿಸಿದೆ.