ಆಸ್ಪತ್ರೆಯಲ್ಲಿ ಹೆರಿಗೆ ವೇಳೆ ಗರ್ಭಿಣಿಗೆ ಕಪಾಳಮೋಕ್ಷ; ನವಜಾತ ಶಿಶು ಸಾವು
ಮಹಾರಾಷ್ಟ್ರದ ವಾಶಿಮ್ ಜಿ ಮಹಿಳಾ ಜಿಲ್ಲಾ ಆಸ್ಪತ್ರೆಯಲ್ಲಿ ಆಗಸ್ಟ್ 2ರಂದು ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಸಿಬ್ಬಂದಿಯ ನಿರ್ಲಕ್ಷ್ಯದಿಂದ ಗರ್ಭಿಣಿಯೊಬ್ಬಳು ಹೆರಿಗೆಯ ನಂತರ ತನ್ನ ಶಿಶುವನ್ನು ಕಳೆದುಕೊಂಡಿದ್ದಾಳೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಸದ್ಯ ಈ ಘಟನೆ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ.

ಸಾಂದರ್ಭಿಕ ಚಿತ್ರ

ಮುಂಬೈ: ಮಹಾರಾಷ್ಟ್ರದ (Maharashtra) ವಾಶಿಮ್ (Washim) ಜಿಲ್ಲೆಯ ಮಹಿಳಾ ಜಿಲ್ಲಾ ಆಸ್ಪತ್ರೆಯಲ್ಲಿ ಆಗಸ್ಟ್ 2ರಂದು ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಸಿಬ್ಬಂದಿಯ ನಿರ್ಲಕ್ಷ್ಯದಿಂದ ಗರ್ಭಿಣಿಯೊಬ್ಬಳು (Pregnant) ಹೆರಿಗೆಯ ನಂತರ ತನ್ನ ಶಿಶುವನ್ನು ಕಳೆದುಕೊಂಡಿದ್ದಾಳೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ದುಃಖದಲ್ಲಿರುವ ಕುಟುಂಬವು ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯ ವಿರುದ್ಧ ಕೊಲೆಗೈದ ಆರೋಪದಡಿ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದು, ಗರ್ಭಿಣಿಯನ್ನು ಹೆರಿಗೆ ಸಮಯದಲ್ಲಿ "ಅಮಾನವೀಯವಾಗಿ" ನಡೆಸಿಕೊಳ್ಳಲಾಗಿದೆ ಎಂದು ಆರೋಪಿಸಿದೆ.
ಘಟನೆಯ ವಿವರ
ಪಾಲ್ಸಾಖೇಡ್‌ನ ಶಿವಾನಿ ವೈಭವ್ ಗವ್ಹಾನೆ ಎಂಬಾಕೆಯನ್ನು ಆಗಸ್ಟ್ 2ರಂದು ಬೆಳಗ್ಗೆ 3 ಗಂಟೆಗೆ ವಾಶಿಮ್ ಜಿಲ್ಲಾ ಮಹಿಳಾ ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಿಸಲಾಗಿತ್ತು. ವೈದ್ಯರು ಪರೀಕ್ಷೆಯ ನಂತರ ಎಲ್ಲ ರಿಪೋರ್ಟ್‌ಗಳು ಸಾಮಾನ್ಯವಾಗಿವೆ ಮತ್ತು ಬೆಳಗ್ಗೆ 10 ಗಂಟೆಗೆ ಹೆರಿಗೆಯಾಗಲಿದೆ ಎಂದು ತಿಳಿಸಿದ್ದರು. ಆದರೆ "ರಾತ್ರಿಯಿಡೀ ತೀವ್ರವಾದ ಹೆರಿಗೆ ನೋವಿನಿಂದ ಕೂಗಾಡಿದರೂ, ದಾದಿಯರು ಮತ್ತು ವೈದ್ಯರು ಯಾರೂ ಗಮನ ಹರಿಸಲಿಲ್ಲ" ಎಂದು ಕುಟುಂಬ ಆರೋಪಿಸಿದೆ. ಮುಂಜಾನೆ 3ರಿಂದ ಸಂಜೆ 5 ಗಂಟೆಯವರೆಗೆ ಯಾವುದೇ ವೈದ್ಯ ಅಥವಾ ದಾದಿಯು ಪರೀಕ್ಷೆಗೆ ಬಂದಿಲ್ಲ ಎಂದು ಮಹಿಳೆಯ ಮನೆಯವರು ದೂರಿದೆ.
ಅಮಾನವೀಯ ಚಿಕಿತ್ಸೆ ಆರೋಪ
ಸಂಜೆ 5 ಗಂಟೆಗೆ ಶಿವಾನಿಯ ಸ್ಥಿತಿ ಹದಗೆಟ್ಟಾಗ ಒಬ್ಬ ವೈದ್ಯ ಪರೀಕ್ಷೆಗೆ ಬಂದರೂ, ಆಗಲೇ ತಡವಾಗಿತ್ತು. ಕುಟುಂಬವು, "ಶಿವಾನಿಯನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ. ಆಕೆಯ ಕೆನ್ನೆಗೆ ಕಪಾಳ ಮೋಕ್ಷ ಮಾಡಲಾಯಿತು. ಹೊಟ್ಟೆಯನ್ನು ಬಲವಂತವಾಗಿ ಒತ್ತಲಾಯಿತು ಮತ್ತು ಅನರ್ಹ ಸಿಬ್ಬಂದಿಯಿಂದ ಪರೀಕ್ಷೆ ಮಾಡಲಾಯಿತು" ಎಂದು ಆರೋಪಿಸಿದೆ. ಸಂಜೆ 5:30ಕ್ಕೆ ಹೆರಿಗೆಯಾದಾಗ, ವೈದ್ಯರು ನವಜಾತ ಶಿಶುವಿಗೆ ಹೃದಯ ಬಡಿತವಿಲ್ಲ ಎಂದು ಘೋಷಿಸಿ, ಮೃತಪಟ್ಟಿದೆ ಎಂದು ತಿಳಿಸಿದರು.
ಈ ಸುದ್ದಿಯನ್ನು ಓದಿ: Viral Video: ಮಹಿಳಾ ಪೊಲೀಸ್ ಮೇಲೆ ಸರ್ಪವನ್ನೆಸೆದ ಹಾವಾಡಿಗ; ವಿಡಿಯೊ ವೈರಲ್
ಕುಟುಂಬದ ಆಕ್ರೋಶ
ಶಿವಾನಿಯ ಅತ್ತೆ ಲತಾ ಗವ್ಹಾನೆ, "ವೈದ್ಯರು ಮತ್ತು ದಾದಿಯರ ನಿರ್ಲಕ್ಷ್ಯದಿಂದ ನವಜಾತ ಶಿಶು ಮೃತಪಟ್ಟಿದೆ. ಸೊಸೆಯನ್ನು ಆರೈಕೆ ಮಾಡಲು ಯಾರೂ ಬರಲಿಲ್ಲ" ಎಂದು ಆರೋಪಿಸಿದ್ದಾರೆ. ಶಿವಾನಿಯ ಮಾವ ದ್ವಾನೇಶ್ವರ್ ಗವ್ಹಾನೆ, "ಬೆಳಗ್ಗೆಯಿಂದ ಸಂಜೆಯವರೆಗೆ ಆಸ್ಪತ್ರೆ ಸಿಬ್ಬಂದಿಯನ್ನು ಕೇಳಿಕೊಂಡರೂ ಯಾರೂ ಕಿವಿಗೊಡಲಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು" ಎಂದು ಆಗ್ರಹಿಸಿದ್ದಾರೆ. ಕುಟುಂಬವು ಆಸ್ಪತ್ರೆ ಆಡಳಿತದ ನಿರ್ಲಕ್ಷ್ಯಕ್ಕೆ ತನಿಖೆ ಮತ್ತು ಕಠಿಣ ಕ್ರಮಕ್ಕೆ ಆಗ್ರಹಿಸಿದೆ.