ನವದೆಹಲಿ, ಸೆ. 12: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಶುಕ್ರವಾರ (ಸೆಪ್ಟೆಂಬರ್ 11) ನಡೆದ ಬ್ರಿಕ್ಸ್ ಬಿಸಿನೆಸ್ ಫೋರಮ್ (BRICS Business Forum) ಸಮಾವೇಶ ಸುಂದರ ಕ್ಷಣವೊಂದಕ್ಕೆ ಸಾಕ್ಷಿಯಾಯಿತು. ಸಮಾವೇಶದಲ್ಲಿ ಭಾಗವಹಿಸಿದ್ದ ಪ್ರತಿನಿಧಿಗಳ ಗುಂಪೊಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಬಳಿ ಫೋಟೊಗೆ ವಿನಂತಿಸಿದ್ದಾರೆ. ಈ ವೇಳೆ ಅತ್ಯಂತ ಸರಳವಾಗಿ, ಲಘು ದಾಟಿಯಲ್ಲಿ ಮಾತನಾಡಿದ ಮೋದಿ ಫೋಟೊಗೆ ಪೋಸ್ ನೀಡಿ ಗಮನ ಸೆಳೆದರು. ಜಾಗತಿಕ ನಾಯಕರು ಹಾಜರಿದ್ದ ಈ ಸಮಾರಂಭದಲ್ಲಿ ಪ್ರಧಾನಿಯ ನಡೆಯು ಎಲ್ಲರ ಮನಗೆದ್ದಿದೆ.
ಪ್ರಧಾನಿ ಮೋದಿ ಬ್ರಿಕ್ಸ್ ಶೃಂಗಸಭೆ ಸ್ಥಳದಿಂದ ಹೊರಡಲು ಹೊರಟಿದ್ದಾಗ ಪ್ರತಿನಿಧಿಗಳಲ್ಲಿ ಒಬ್ಬರು ನಮಗೆ ಒಂದು ಫೋಟೊ ಸಿಗಬಹುದೇ? ಎಂದು ಕೇಳಿದರು. ಪ್ರತಿನಿಧಿಗಳೊಂದಿಗೆ ಪೋಸ್ ನೀಡಲು ಪ್ರಧಾನಿ ಒಪ್ಪಿಕೊಂಡರು. ನೀವೆಲ್ಲ ಅದೃಷ್ಟವಂತರು ಎಂದು ಪ್ರಧಾನಿಯೊಂದಿಗೆ ಫೋಟೊ ತೆಗೆಸಿಕೊಂಡ ಮಹಿಳೆಯರಿಗೆ ಅಧಿಕಾರಿಯೊಬ್ಬರು ಹೇಳಿದರು. ಕೂಡಲೇ ಎಲ್ಲರೂ ನಗುತ್ತಾ, ಹೌದು...ನಾವು ಅದೃಷ್ಟವಂತರು ಎಂದು ಧ್ವನಿಗೂಡಿಸಿದರು.
ಇಲ್ಲಿದೆ ವಿಡಿಯೊ:
ಶುಕ್ರವಾರ ನರೇಂದ್ರ ಮೋದಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಮತ್ತು ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಸೇರಿ ವಿವಿಧ ದೇಶಗಳ ಉನ್ನತ ನಾಯಕರೊಂದಿಗೆ ಒಟ್ಟಾಗಿ ಹೆಜ್ಜೆ ಹಾಕಿದರು. ಈ ವೇಳೆ ಪ್ರಧಾನಿ ಮೋದಿ ಜಾಗತಿಕ ನಾಯಕರೊಂದಿಗೆ ಕೈಜೋಡಿಸಿ ನಡೆದುಕೊಂಡು ಹೋಗುತ್ತಿರುವ ದೃಶ್ಯಗಳು ಕಂಡುಬಂತು.
ಬ್ರಿಕ್ಸ್ ಶೃಂಗಸಭೆ ವೇಳೆ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಪ್ರಧಾನಿ ನರೇಂದ್ರ ಮೋದಿ ಮಾತುಕತೆ
ಎರಡು ದಿನಗಳ ಬ್ರಿಕ್ಸ್ ಶೃಂಗಸಭೆಗಾಗಿ ಭಾರತಕ್ಕೆ ಆಗಮಿಸಿರುವ ರಷ್ಯಾ ಅಧ್ಯಕ್ಷ ಪುಟಿನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸೇರಿ ಹಲವು ವಿಶ್ವ ನಾಯಕರನ್ನು ಪ್ರಧಾನಿ ಮೋದಿ ಸ್ವಾಗತಿಸಿದರು. ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯ ಧ್ಯೇಯವಾಕ್ಯ ಸ್ಥಿತಿಸ್ಥಾಪಕತ್ವ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆಗಾಗಿ ನಿರ್ಮಾಣ.
ನವದೆಹಲಿಯಲ್ಲಿ ನಡೆಯುತ್ತಿರುವ ಶೃಂಗಸಭೆಯಲ್ಲಿ ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್, ದಕ್ಷಿಣ ಆಫ್ರಿಕಾದ ಅಧ್ಯಕ್ಷ ರಾಮಫೋಸಾ, ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ, ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ, ಅಬುಧಾಬಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್, ಇಥಿಯೋಪಿಯನ್ ಪ್ರಧಾನಿ ಅಬಿಯ್ ಅಹ್ಮದ್ ಅಲಿ, ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಮತ್ತು ವಿಯೆಟ್ನಾಂ ಪ್ರಧಾನಿ ಲೆ ಮಿನ್ ಹಂಗ್ ಭಾಗವಹಿಸಿದ್ದಾರೆ.
ಯುಎನ್ ಸೆಕ್ರೆಟರಿ-ಜನರಲ್ ಆಂಟೋನಿಯೊ ಗುಟೆರಸ್, ಡಬ್ಲ್ಯುಟಿಒ ಮಹಾನಿರ್ದೇಶಕ ಎನ್ಗೋಜಿ ಒಕೊಂಜೊ-ಇವಾಲಾ, ಡಬ್ಲ್ಯುಎಚ್‌ಒ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್ (ಎನ್‌ಡಿಬಿ) ಅಧ್ಯಕ್ಷೆ ದಿಲ್ಮಾ ರೌಸೆಫ್ ಮತ್ತು ಏಷ್ಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್ ಮುಖ್ಯಸ್ಥ ಝೌ ಜಿಯಾಯಿ ಕೂಡ ಪ್ರಮುಖ ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.