ಬ್ರಿಕ್ಸ್ ಶೃಂಗಸಭೆ: ಭದ್ರತೆಗಾಗಿ 15,000 ದೆಹಲಿ ಪೊಲೀಸ್ ಸಿಬ್ಬಂದಿ; ಬಹು ಹಂತದ ಸರ್ಪಗಾವಲು
BRICS Summit: ನವದೆಹಲಿಯ ಭಾರತ್ ಮಂಟಪದಲ್ಲಿ ಸೆಪ್ಟೆಂಬರ್ 12 ಮತ್ತು 13ರಂದು ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ರಷ್ಯಾ, ಚೀನಾ ಸೇರಿದಂತೆ ವಿಶ್ವದ ಅನೇಕರ ಗಣ್ಯರು ಭಾಗಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಶೃಂಗಸಭೆಗೆ ಬಹು ಹಂತದ ಭದ್ರತೆಯನ್ನು ನೀಡಲಾಗುತ್ತಿದೆ. ಇದಕ್ಕಾಗಿ 15,000 ದೆಹಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು.
ಸಂಗ್ರಹ ಚಿತ್ರ -
ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸೆಪ್ಟೆಂಬರ್ 12 ಮತ್ತು 13ರಂದು ನಡೆಯಲಿರುವ ಬ್ರಿಕ್ಸ್ ಶೃಂಗಸಭೆಗೆ (BRICS Summit 2026) ಬಹು ಹಂತದ ಭದ್ರತೆಯನ್ನು (multi-layered security) ಒದಗಿಸಲಾಗುತ್ತದೆ. ಈ ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಸೇರಿದಂತೆ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತೆಗೆ 15,000 ದೆಹಲಿ ಪೊಲೀಸ್ ಸಿಬ್ಬಂದಿಯನ್ನು (Delhi Police personnel) ನಿಯೋಜಿಸಲಾಗುವುದು ಎಂದು ವಿಶೇಷ ಪೊಲೀಸ್ ಆಯುಕ್ತ ಮನೀಶ್ ಕುಮಾರ್ ಅಗರ್ವಾಲ್ ತಿಳಿಸಿದ್ದಾರೆ.
ಈ ಕುರಿತು ಗುರುವಾರ ಮಾಹಿತಿ ನೀಡಿದ ಅವರು, ರಾಷ್ಟ್ರ ರಾಜಧಾನಿಯಾದ್ಯಂತ ನವದೆಹಲಿ, ದೆಹಲಿ ಪೊಲೀಸರು ಬ್ರಿಕ್ಸ್ ಶೃಂಗಸಭೆಗೆ ಬಹು ಹಂತದ ಭದ್ರತೆಯನ್ನು ಒದಗಿಸಲಿದ್ದಾರೆ. ಸುಮಾರು 15,000 ಸಿಬ್ಬಂದಿ ಮತ್ತು 200 ಕಂಪೆನಿಗಳ ಅರೆಸೈನಿಕ ಪಡೆಗಳನ್ನು ನಿಯೋಜಿಸಲಾಗುವುದು ಎಂದರು.
ಬ್ರಿಕ್ಸ್ ಶೃಂಗಸಭೆಯ ವೇಳೆಯಲ್ಲಿ ದೇಶ- ವಿದೇಶದ ಗಣ್ಯರು ರಾಷ್ಟ್ರ ರಾಜಧಾನಿಗೆ ಆಗಮಿಸಲಿರುವುದರಿಂದ ಅವರಿಗೆ ಗರಿಷ್ಠ ಭದ್ರತೆಯನ್ನು ಒದಗಿಸಲು ಸಾರ್ವಜನಿಕರಿಗೆ ಕನಿಷ್ಠ ಅನಾನುಕೂಲತೆ ಉಂಟು ಮಾಡುವಂತೆ ನೋಡಿಕೊಳ್ಳಲು ವ್ಯವಸ್ಥೆಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
ವ್ಯಾಪಕ ಬಂದೋಬಸ್ತ್ ಗೆ ಮುಂಗಡ ಸಲಹೆಗಳನ್ನು ಸಹ ನೀಡಿದ್ದೇವೆ ಎಂದ ಅವರು, ಶೃಂಗಸಭೆಗಾಗಿ ದೆಹಲಿ ಪೊಲೀಸರು ಬಹು ಸಂಸ್ಥೆಗಳೊಂದಿಗೆ ನಿಕಟ ಸಮನ್ವಯ ನಡೆಸುತ್ತಿದ್ದಾರೆ. ಇದಕ್ಕಾಗಿ ಗುರುತಿಸಲಾಗಿರುವ ಎಲ್ಲಾ ಮಾರ್ಗಗಳ ವ್ಯಾಪಕ ಸಮೀಕ್ಷೆಗಳನ್ನು ಪೂರ್ಣಗೊಳಿಸಲಾಗಿದೆ ಎಂದರು.
ಕಾನೂನು, ಸುವ್ಯವಸ್ಥೆ, ಭದ್ರತೆ, ಸಂಚಾರ ನಿರ್ವಹಣೆಗಾಗಿ ಬೃಹತ್ ಮಟ್ಟದಲ್ಲಿ ಸಿಬ್ಬಂದಿ ನಿಯೋಜನೆ ಮಾಡಲಾಗುವುದು. ವಿಮಾನ ನಿಲ್ದಾಣ, ಹೋಟೆಲ್ ಮತ್ತು ಗಣ್ಯರು ಭೇಟಿ ನೀಡಬಹುದಾದ ನಿಗದಿತ ಸ್ಥಳಗಳು ಭದ್ರತಾ ವ್ಯವಸ್ಥೆಯಲ್ಲಿ ಒಳಗೊಳ್ಳುತ್ತದೆ ಎಂದು ಅವರು ಹೇಳಿದರು.
ಶೃಂಗಸಭೆ ನಡೆಯುವ ಪ್ರಮುಖ ಸ್ಥಳವಾದ ಭಾರತ್ ಮಂಟಪದ ಸುತ್ತಮುತ್ತ ಪ್ರವೇಶ ನಿಯಂತ್ರಣ, ಜಾಗರೂಕತೆ ಮತ್ತು ಬಲವಾದ ಭದ್ರತಾ ಕ್ರಮಗಳೊಂದಿಗೆ ಬಹು-ಹಂತದ ಭದ್ರತಾ ವ್ಯವಸ್ಥೆಯನ್ನು ಜಾರಿಗೆಗೊಳಿಸಲಾಗಿದೆ. ಗಣ್ಯರ ಚಲನೆಯ ಸಮಯದಲ್ಲಿ ಸುಗಮ ಭದ್ರತಾ ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳಲು ನೆರೆಯ ರಾಜ್ಯಗಳೊಂದಿಗೆ ಸಮನ್ವಯ ಸಭೆಗಳನ್ನು ಕೂಡ ನಡೆಸಿರುವುದಾಗಿ ಅವರು ಹೇಳಿದರು.
ಗುಪ್ತಚರ ಮಾಹಿತಿಗಳನ್ನು ಸಂಬಂಧಪಟ್ಟ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಲಾಗುವುದು. ಲಭ್ಯವಿರುವ ಎಲ್ಲಾ ಮಾಹಿತಿಗಳನ್ನು ಭದ್ರತಾ ಕ್ರಮದ ಭಾಗವಾಗಿ ವಿಶ್ಲೇಷಿಸಲಾಗುವುದು ಎಂದರು.
ಪ್ರವಾಹ ಪೀಡಿತ ಕುಟುಂಬಗಳಿಗೆ ಪರಿಹಾರವಾಗಿ ಅವಧಿ ಮೀರಿದ ಕೆಮ್ಮಿನ ಸಿರಪ್ ವಿತರಣೆ; ಹಲವು ಮಕ್ಕಳು ಅಸ್ವಸ್ಥ
ಬ್ರಿಕ್ಸ್ ಶೃಂಗಸಭೆ ಸೆಪ್ಟೆಂಬರ್ 12 ಮತ್ತು 13 ರಂದು ನಡೆಯಲಿದ್ದು ವಿದೇಶಿ ನಿಯೋಗಗಳು ಮತ್ತು ಗಣ್ಯರ ಸಂಚಾರಕ್ಕೆ ಅನುಕೂಲವಾಗುವಂತೆ ಸೆಪ್ಟೆಂಬರ್ 10 ರಿಂದ 14 ರವರೆಗೆ ರಾಷ್ಟ್ರ ರಾಜಧಾನಿಯಲ್ಲಿ ಸಂಚಾರ ನಿರ್ಬಂಧಗಳು ಇರಲಿದೆ ಎಂದು ಅವರು ಹೇಳಿದರು.