ಓದುಗರ ಓಣಿ
ವಿಶ್ವವಾಣಿ ಬಳಗದ ‘ಪ್ರವಾಸಿ ಪ್ರಪಂಚ’ ವಾರಪತ್ರಿಕೆಯು ನಿಜಕ್ಕೂ ಕನ್ನಡ ಪತ್ರಿಕೋದ್ಯಮದಲ್ಲಿನ ಒಂದು ಮೈಲಿಗಲ್ಲು ಎಂದರೆ ತಪ್ಪಾಗಲಾರದು. ಇದರ ಪುಟಪುಟಗಳತ್ತ ಕಣ್ಣು ಹಾಯಿಸಿದಷ್ಟೂ ಅನುಪಮ ಮಾಹಿತಿಗಳು. ಮುತ್ತಿನಂಥ ಅಕ್ಷರಜೋಡಣೆ, ಗುಣಮಟ್ಟದ ಮುದ್ರಣ, ಮುಖಪುಟಕ್ಕೆ ಶೋಭೆ ತರಬಲ್ಲಂಥ ಆರ್ಟ್ ಪೇಪರ್‌ನ ಬಳಕೆ ಇವನ್ನೆಲ್ಲಾ ನೋಡುತ್ತಿರುವಂತೆಯೇ ಓದುಗರು ಕಳೆದು ಹೋಗುತ್ತಾರೆ.
ಮಾರುಕಟ್ಟೆಯಲ್ಲಿ ಪ್ರಸ್ತುತ ಲಭ್ಯವಿರುವ ಇತರೆ ವಾರಪತ್ರಿಕೆಗಳು 25ರಿಂದ 50 ರುಪಾಯಿ ಮುಖ ಬೆಲೆಯಲ್ಲಿ ‘ಎ-4’ ಗಾತ್ರದ ಪ್ರಸ್ತುತಿಯಲ್ಲಿ ಮಾರಾಟವಾಗುತ್ತಿರುವ ಸಂದರ್ಭದಲ್ಲಿ, ‘ಪ್ರವಾಸಿ ಪ್ರಪಂಚ’ ಪತ್ರಿಕೆಯು ಇವೆಲ್ಲಕ್ಕೆ ಸವಾಲೊಡ್ಡುವ ರೀತಿಯಲ್ಲಿ ಕೇವಲ 15 ರುಪಾಯಿ ಬೆಲೆಯಲ್ಲಿ ಲಭ್ಯವಾಗುತ್ತಿದೆ. ಹೀಗೆ ಪ್ರತಿಯೊಬ್ಬರಿಗೂ ಕೈಗೆಟುಕುವ ದರದಲ್ಲಿ ಪತ್ರಿಕೆಯು ದೊರೆಯುವಂತೆ ಮಾಡಿರುವ ವಿಶ್ವವಾಣಿಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ಟರ ಸಾಹಸವನ್ನು ಮೆಚ್ಚಲೇಬೇಕು. ಭಟ್ಟರ ಪ್ರತಿಯೊಂದು ಕನಸೂ ಸಾಕಾರಗೊಳ್ಳಲಿ, ನವವಧುವಿನಂತೆ ಸಿಂಗರಿಸಿಕೊಂಡು ಬಂದಿರುವ ‘ಪ್ರವಾಸಿ ಪ್ರಪಂಚ’ವು ಪ್ರತಿಯೊಬ್ಬ ಓದುಗರ ಮನದಲ್ಲೂ ಶಾಶ್ವತವಾಗಿ ನೆಲೆಯೂರಲಿ ಎಂಬುದೇ ನನ್ನ ಆಶಯ.
ಇದನ್ನೂ ಓದಿ: Pravasi Prapancha: ಪ್ರವಾಸಿ ಪ್ರಪಂಚ ಬಿಡುಗಡೆಗೊಳಿಸಿದ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್
- ಬೆಂ. ಮು. ಮಾರುತಿ, ಬೆಂಗಳೂರು
ಮನೆಗೆ ಬಂದ ಪ್ರಪಂಚ!
ವಿಶ್ವೇಶ್ವರ ಭಟ್ಟರಿಗೆ ಮತ್ತು ಅವರ ವಿಶ್ವಾಸಿ ತಂಡಕ್ಕೆ ಅನಂತಾನಂತ ಹೃತ್ಪೂರ್ವಕ ಧನ್ಯವಾದಗಳು. ಪ್ರಪಂಚವನ್ನೇ ನನ್ನ ಮನೆಯೊಳಗೆ ತಂದಿಟ್ಟಿದ್ದೀರಿ! ‘ಪ್ರವಾಸಿ ಪ್ರಪಂಚ’ದ ಪ್ರಪ್ರಥಮ ಸಂಚಿಕೆಯ ಪುಟಗಳನ್ನು ತಿರುವುತ್ತ ತಿರುವುತ್ತ ಅವಾಕ್ಕಾದೆ! ನನ್ನ ನಿರೀಕ್ಷೆಗಿಂತ ಅದ್ಭುತವಾಗಿ ಮೂಡಿಬಂದಿದೆ ‘ಪ್ರವಾಸಿ ಪ್ರಪಂಚ’ ವಾರಪತ್ರಿಕೆ! ವಾರವಿಡೀ ಓದಿನ ಸುಖ ಅನುಭವಿಸಬಹುದು. ಪ್ರವಾಸದ ಒಲ ವಿಲ್ಲದವರಿಗೂ ಪ್ರವಾಸ ಕೈಗೊಳ್ಳುವ ಉಮೇದು ನೀಡುವಷ್ಟು ಸೊಗಸಾಗಿದೆ, ಮಾಹಿತಿಪೂರ್ಣ ವಾಗಿದೆ. ಕೂಲಂಕಷ ಓದಿ, ಆ ಪತ್ರಿಕೆಗೇ ಪ್ರತಿಕ್ರಿಯಿಸುತ್ತೇನೆ. ಕನ್ನಡದಲ್ಲಿ ಪ್ರಪ್ರಥಮ ಮತ್ತು ಭಾರತೀಯ ಪತ್ರಿಕಾರಂಗದಲ್ಲಿ ಅಪ್ರತಿಮ ಸಾಧನೆಯಾಗಿರುವ ‘ಪ್ರವಾಸಿ ಪ್ರಪಂಚ’ದ ಸೃಷ್ಟಿಕರ್ತ ವಿಶ್ವೇಶ್ವರ ಭಟ್ಟರಿಗೆ ಮತ್ತೊಮ್ಮೆ ಧನ್ಯವಾದಗಳು. ಸಾಹಸಕ್ಕಾಗಿ ಅಭಿನಂದನೆಗಳು.
- ಎಚ್. ಆನಂದರಾಮ ಶಾಸ್ತ್ರೀ , ಬೆಂಗಳೂರು
ಬೇಲಿಯೇ ಮೇಯ್ದಂತೆ..
ಶೈಕ್ಷಣಿಕ ವರ್ಷದ ಶಾಲೆಗಳು ಪ್ರಾರಂಭವಾಗಿವೆ. ಸರಕಾರಿ ಶಾಲೆಗಳಲ್ಲಿ ದಾಖಲಾತಿ ಇಲ್ಲದೇ ಈ ವರ್ಷವೂ ಕೆಲವು ಶಾಲೆಗಳು ವಿಲೀನವಾಗುವ ಸಾಧ್ಯತೆ ಇದ್ದರೆ, ಇನ್ನುಳಿದ ಶಾಲೆಗಳು ಮುಚ್ಚುವ ಹಂತದಲ್ಲಿವೆ. ಹೀಗಿರುವಾಗ ಸ್ವತಃ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಬಿಇಒ ಕಚೇರಿಯ ಸಿಬ್ಬಂದಿ ಗಳು ಖಾಸಗಿ ಶಾಲೆಗಳಿಗೆ ದಾಖಲಾತಿ ಮಾಡಿ ಎಂದು ಪಾಲಕರನ್ನು ಪ್ರೋತ್ಸಾಹಿಸಿ, ತಮ್ಮ ಹೆಸರು ಹೇಳಿ ಶಾಲಾ ಶುಲ್ಕವನ್ನು ಮನ್ನಾ ಮಾಡಿಸುತ್ತಿರುವುದು ಕೆಲವೆಡೆ ಕಂಡುಬರುತ್ತಿದೆ.
ಇಂದು ಬಹುತೇಕ ಸರಕಾರಿ ಉದ್ಯೋಗಿಗಳು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವುದು ಸಾಮಾನ್ಯ ಸಂಗತಿ. ಆದರೆ ಇಲ್ಲಿ ಶಿಕ್ಷಣ ಇಲಾಖೆಯ ಉದ್ಯೋಗಗಳೇ ಖಾಸಗೀಕರಣಕ್ಕೆ ಒತ್ತು ನೀಡು ವುದು ಸರಿಯೇ? ಇಂಥ ಸ್ಥಿತಿಯಲ್ಲಿ ಯಾವ ಪಾಲಕರು ತಾನೇ ಸರಕಾರಿ ಶಾಲೆಯತ್ತ ಮುಖ ಮಾಡು ತ್ತಾರೆ? ಇದರೊಂದಿಗೆ ಬಿಇಒ ಕಚೇರಿಯ ಅಧಿಕಾರಿಗಳು ನಿಯಮಗಳ ಹೆದರಿಕೆ ತೋರಿಸಿ ಖಾಸಗಿ ಶಾಲೆಯಲ್ಲಿ ಪುಕ್ಕಟೆ ಸೀಟ್ ಪಡೆಯುವುದು ಜಾಸ್ತಿಯಾಗಿದೆ. ಇದರ ಬಗ್ಗೆ ಶಿಕ್ಷಣ ಸಚಿವರು ವಿಶೇಷ ತನಿಖಾ ತಂಡ ರಚಿಸಿ, ಸೂಕ್ತ ಕ್ರಮ ಕೈಗೊಳ್ಳುವರೇ?
- ಸುರೇಂದ್ರ ಪೈ, ಭಟ್ಕಳ