ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Readers Colony: ಇದು ನಮ್ಮ ತಂಡವೇ?

ಐಪಿಎಲ್ ಪಂದ್ಯಾವಳಿಯ ತಂಡಗಳಲ್ಲಿ ಒಂದೆನಿಸಿರುವ ‘ಆರ್ ಸಿಬಿ’ಯ ಅಭಿಮಾನಿಗಳು ‘ಈ ಸಲ ಕಪ್ ನಮ್ದೇ’ ಎಂದು ಕಳೆದ ಹತ್ತಾರು ವರ್ಷಗಳಿಂದಲೂ ಹೇಳಿಕೊಂಡೇ ಬರುತ್ತಿದ್ದಾರೆ. ಆದರೆ ಅದು ಗಗನಕುಸುಮವೇ ಆಗಿದ್ದು, ಈ ಬಾರಿಯಾದರೂ ತಂಡವು ಚಾಂಪಿಯನ್ ಆಗಲಿ ಎಂದು ಆಶಿಸುತ್ತಿದ್ದಾರೆ, ಇರಲಿ. ಆದರೆ, ‘ಆರ್‌ಸಿಬಿ’ ಎಂಬುದರ ಹೆಸರಿನಲ್ಲಿ ಮಾತ್ರವೇ ಬೆಂಗಳೂರು ಅಂತ ಇದೆಯೇ ಹೊರತು, ತಂಡದಲ್ಲಿ ಕರ್ನಾಟಕದ ಆಟಗಾರರು ಒಬ್ಬರೋ ಇಬ್ಬರೋ ಇರುತ್ತಾರೆ

ಓದುಗರ ಓಣಿ: ಇದು ನಮ್ಮ ತಂಡವೇ?

Profile Ashok Nayak Apr 7, 2025 2:42 PM

ಐಪಿಎಲ್ ಪಂದ್ಯಾವಳಿಯ ತಂಡಗಳಲ್ಲಿ ಒಂದೆನಿಸಿರುವ ‘ಆರ್ ಸಿಬಿ’ಯ ಅಭಿಮಾನಿಗಳು ‘ಈ ಸಲ ಕಪ್ ನಮ್ದೇ’ ಎಂದು ಕಳೆದ ಹತ್ತಾರು ವರ್ಷಗಳಿಂದಲೂ ಹೇಳಿಕೊಂಡೇ ಬರು ತ್ತಿದ್ದಾರೆ. ಆದರೆ ಅದು ಗಗನಕುಸುಮವೇ ಆಗಿದ್ದು, ಈ ಬಾರಿಯಾದರೂ ತಂಡವು ಚಾಂಪಿ ಯನ್ ಆಗಲಿ ಎಂದು ಆಶಿಸುತ್ತಿದ್ದಾರೆ, ಇರಲಿ. ಆದರೆ, ‘ಆರ್‌ಸಿಬಿ’ ಎಂಬುದರ ಹೆಸರಿನಲ್ಲಿ ಮಾತ್ರವೇ ಬೆಂಗಳೂರು ಅಂತ ಇದೆಯೇ ಹೊರತು, ತಂಡದಲ್ಲಿ ಕರ್ನಾಟಕದ ಆಟಗಾರರು ಒಬ್ಬರೋ ಇಬ್ಬರೋ ಇರುತ್ತಾರೆ. ಅದು ಕೂಡ ಪ್ರಮುಖ ಆಟಗಾರರಾಗಿ ಅಲ್ಲ, ‘ಆಟಕ್ಕುಂ ಟು ಲೆಕ್ಕಕ್ಕಿಲ್ಲ’ ಎಂಬಂತೆ! ಇಂತಿರುವ ತಂಡಕ್ಕೆ ‘ನಮ್ಮ ಕರ್ನಾಟಕದ ತಂಡ’ ಎಂದು ಅಭಿಮಾನ ವ್ಯಕ್ತಪಡಿಸುವುದು ಹೇಗೆ? ಇದು ಆರ್‌ಸಿಬಿಗೆ ಮಾತ್ರವಲ್ಲದೆ, ಐಪಿಎಲ್ ಆಡುವ ಎಲ್ಲ ತಂಡಗಳಿಗೂ ಅನ್ವಯ.

ಹಾಗಾಗಿ ಐಪಿಎಲ್ ಆಯೋಜಕರು ಕನಿಷ್ಠಪಕ್ಷ ಐದು ಮಂದಿ ಸ್ಥಳೀಯ ಆಟಗಾರರನ್ನು ತಂಡವು ಒಳಗೊಳ್ಳುವಂಥ ನಿಯಮವನ್ನು ರೂಪಿಸಲಿ. ಆಗ, ‘ಇದು ನಮ್ಮ ತಂಡ’ ಎಂಬ ಭಾವ ಮೂಡುತ್ತದೆ. ಜತೆಗೆ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡಿದಂತೆಯೂ ಆಗುತ್ತದೆ. ಹಣ ಗಳಿಕೆ ಮತ್ತು ಅಬ್ಬರವೇ ಐಪಿಎಲ್ ಪಂದ್ಯಾವಳಿಯ ಉದ್ದೇಶವಾಗದಿರಲಿ.

ಇದನ್ನೂ ಓದಿ: Dr Murali Mohan Chuntaru Column: ನಮ್ಮ ಆರೋಗ್ಯದ ಗುಟ್ಟು ನಮ್ಮ ಕೈಯಲ್ಲೇ ಇದೆ

- ಪತ್ತಂಗಿ ಎಸ್.ಮುರಳಿ, ಬೆಂಗಳೂರು

ಭಾರತದ ನಿಜ‘ರತ್ನ’

ಮೋಹನ್ ವಿಶ್ವ ಅವರು ತಮ್ಮ ‘ವೀಕೆಂಡ್ ವಿತ್ ಮೋಹನ್’ ಅಂಕಣದಲ್ಲಿ (ಏ.೫) ಭಾರತ ಮತ್ತು ಇಡಿ ಪ್ರಪಂಚ ಕಂಡ ಒಬ್ಬ ಧೀಮಂತ ವ್ಯಕ್ತಿಯಾದ ಉದ್ಯಮಿ ರತನ್ ಟಾಟಾ ಅವರ ಬಗ್ಗೆ ಬರೆದಿದ್ದು ಮೆಚ್ಚುಗೆಯಾಯಿತು.

ಯಾರೇ ಆಗಲಿ, ವ್ಯಾಪಾರ-ವಹಿವಾಟನ್ನು ಶುರುಮಾಡಿದಾಗ ಇರುವ ಪ್ರಾಮಾಣಿಕತೆ, ವಿಧೇಯತೆ, ಸರಕು ಮಾರಿದ ನಂತರ ಕೊಡುವ ಅಗತ್ಯ ಸೇವೆ, ಪ್ರತಿಯಾಗಿ ಗ್ರಾಹಕರ ಸಲಹೆ - ಸೂಚನೆಗೆ ಕಿವಿಗೊಡುವಿಕೆ ಇವೆಲ್ಲವೂ, ವಹಿವಾಟು ವೃಕ್ಷವಾಗಿ ಬೆಳೆದ ನಂತರ ಕಾಣ ಸಿಗುವುದು ವಿರಳ. ಇನ್ನು, ಕೇವಲ ದುಡ್ಡು ಮಾಡುವ ಉದ್ದೇಶದಿಂದ ಅಂಗಡಿ ತೆರೆದು, ಗ್ರಾಹಕ ಸೇವೆಯ ಕಡೆ ಮುಖಮಾಡದೇ ಇರುವವರು ಕೂಡ ಇದ್ದಾರೆ. ಜಗತ್ತು ಈ ಎಲ್ಲರನ್ನೂ ನೋಡಿದೆ. ಆದರೆ, ಸಾಕಷ್ಟು ದಶಕಗಳ ಹಿಂದೆಯೇ ಉದ್ಯಮವನ್ನು ಸ್ಥಾಪಿಸಿ, ಇಂದು ಅಡುಗೆ ಉಪ್ಪಿನಿಂದ ಹಿಡಿದು ವಿಮಾನ ಯಾನದ ತನಕ ತನ್ನ ಗ್ರಾಹಕ ಸೇವೆಯನ್ನು ವಿಸ್ತರಿಸಿದ್ದು ಸರ್ವಮಾನ್ಯ ‘ಟಾಟಾ ಸಂಸ್ಥೆ’.

ಇದರ ಸಂಸ್ಥಾಪಕರಿಗೆ ನಿಜಕ್ಕೂ ಒಂದು ದೊಡ್ಡ ಸಲಾಂ. ಇಂದು ಈ ಉದ್ಯಮ ಸಮೂಹ ದಲ್ಲಿ ಲಕ್ಷಗಟ್ಟಲೆ ಉದ್ಯೋಗಿಗಳು ದುಡಿಯುತ್ತಿದ್ದು, ಅಂಥ ಪ್ರತಿಯೊಬ್ಬರನ್ನೂ ಟಾಟಾ ಸಂಸ್ಥೆಯು ತನ್ನ ಸ್ವಂತ ಮಕ್ಕಳಂತೆ ಸಂರಕ್ಷಿಸುತ್ತದೆ, ಅವರ ಬೇಕು ಬೇಡಗಳನ್ನು ಪ್ರಾಮಾಣಿಕವಾಗಿ ಪೂರೈಸುತ್ತದೆ ಎಂದರೆ ದೊಡ್ಡ ಮಾತಲ್ಲ.

ಭಾರತದಲ್ಲಿ ಪ್ರಾರಂಭಗೊಂಡು ವಿಶ್ವಾದ್ಯಂತ ವ್ಯಾಪಿಸಿರುವ ಟಾಟಾ ಸಂಸ್ಥೆಯು, ದೇಶ ಕಂಡ ಅತ್ಯಂತ ಹೆಮ್ಮೆಯ, ನಂಬಿಕಸ್ಥ, ವಿಶ್ವಾಸಾರ್ಹ, ಪಾರದರ್ಶಕ, ದೇಶದ ಕಾನೂನು ಪಾಲಿಸುವ-ಗೌರವಿಸುವ ಹಾಗೂ ಗ್ರಾಹಕ-ಪರ ಸಂಸ್ಥೆಯಾಗಿದೆ ಎಂದರೆ ಅತಿಶಯೋಕ್ತಿ ಯಲ್ಲ. ತಮ್ಮ ಪೂರ್ವಜರು ಕಟ್ಟಿ ಬೆಳೆಸಿದ ಈ ಸಂಸ್ಥೆಗೆ ಮೂರು ದಶಕಕ್ಕೂ ಹೆಚ್ಚು ಕಾಲ ಅಧ್ವರ್ಯುವಾಗಿದ್ದ ರತನ್ ಟಾಟಾ ಅವರು, ಅದಕ್ಕೆ ಸಮಾಜದಲ್ಲಿ ಇನ್ನೂ ಹೆಚ್ಚಿನ ಹೆಸರು ತಂದುಕೊಟ್ಟರು. ಅತಿ ಸರಳ ಬದುಕು ನಡೆಸಿ ವಿಶ್ವಕ್ಕೇ ಮಾದರಿಯಾದರು. ಮನಸ್ಸು ಮಾಡಿದರೆ ಮತ್ತೊಬ್ಬರು ಕೂಡ ಇಷ್ಟು ದೊಡ್ಡ ಕಂಪನಿಯನ್ನು ಕಟ್ಟಿ ಬೆಳೆಸಬಹುದು; ಆದರೆ ರತನ್ ಟಾಟಾ ಅವರಂಥ ಸರಳ-ಪಾರದರ್ಶಕ ಜೀವನ ನಡೆಸುವುದು ಕಷ್ಟ ಸಾಧ್ಯ. ರತನ್ ಟಾಟಾ ಅವರು ಮಾಡಿದ ಸತ್ಕರ್ಮಗಳ ಪಟ್ಟಿ ಯಾವ ಲೆಕ್ಕಕ್ಕೂ ಸಿಗದು, ಅಂತೆಯೇ ಅವರ ವ್ಯಕ್ತಿತ್ವದ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ.

ಇಂಥ ಸಾತ್ವಿಕ, ಸಜ್ಜನ, ಸತ್ಪಾತ್ರ ಉದ್ಯಮಿಯ ಬಗ್ಗೆ ಮಾಹಿತಿ ನೀಡಿದ ಅಂಕಣ ಕಾರರಿಗೆ ಹಾಗೂ ಪ್ರಕಟಿಸಿದ ಪತ್ರಿಕೆಗೆ ನನ್ನ ವಿಶೇಷ ನಮನಗಳು.

- ಲಕ್ಷ್ಮೀಕಾಂತ ಪಾಟೀಲ, ಮೈಸೂರು

ಸದಭಿರುಚಿ ಮೂಲೆಗುಂಪು

ನಾವು ಚಿಕ್ಕವರಿದ್ದಾಗ, ಸರಕಾರಿ ಒಡೆತನದ ದೂರದರ್ಶನದಲ್ಲಿ ಸದಭಿರುಚಿಯ ಕಾರ್ಯ ಕ್ರಮಗಳನ್ನೇ ವೀಕ್ಷಿಸುವ ಸೌಭಾಗ್ಯ ನಮ್ಮದಾಗಿತ್ತು. ಭಾನುವಾರ ಬೆಳಗಿನ ‘ರಂಗೋಲಿ’ ಚಿತ್ರಗೀತೆಗಳು, ಅಂದು ಸಂಜೆಯ ಚಲನಚಿತ್ರ ಮಾತ್ರವಲ್ಲದೆ, ಯುಜಿಸಿ ಕಾರ್ಯಕ್ರಮ ವನ್ನೂ ವೀಕ್ಷಿಸುತ್ತಿದ್ದೆವು. ರೈತರಿಗೆ ಉಪಯುಕ್ತ ಮಾಹಿತಿ ನೀಡುವ ಕಾರ್ಯಕ್ರಮವೂ ಇರುತ್ತಿತ್ತು. ಒಟ್ಟಾರೆಯಾಗಿ ಮನೆಮಂದಿಯೆಲ್ಲ ಒಟ್ಟಿಗೆ ಕುಳಿತು ಯಾವುದೇ ಮುಜುಗರ ವಿಲ್ಲದೆ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಿತ್ತು.

ಆದರೆ, ಈಚೀಚೆಗಂತೂ ಡಿಸ್ಕವರಿ ಚಾನಲ್ ಅನ್ನು ಹೊರತುಪಡಿಸಿದರೆ, ಖಾಸಗಿ ಮನರಂಜನಾ ವಾಹಿನಿಗಳು ಮತ್ತು ಸುದ್ದಿ ವಾಹಿನಿಗಳನ್ನು ವೀಕ್ಷಿಸುವುದಕ್ಕೇ ಮುಜುಗರ ವಾಗುತ್ತಿದೆ. ನಮ್ಮ ಕೆಲ ಖಾಸಗಿ ಸುದ್ದಿವಾಹಿನಿಗಳಲ್ಲಿ, ಯಾರಿಗೂ ಉಪಯೋಗಕ್ಕೆ ಬಾರದ ಸಣ್ಣ ಸುದ್ದಿಯೊಂದನ್ನು ಇಟ್ಟುಕೊಂಡು, ಚರ್ಚೆಯ ಹೆಸರಲ್ಲಿ ಮನಸ್ಸಿಗೆ ಬಂದಂತೆ ಮಾತಾಡಿಕೊಂಡು ದಿನಪೂರ್ತಿ ರುಬ್ಬುತ್ತಾರೆ. ಇವಕ್ಕೆ ಹೋಲಿಸಿದರೆ ದೂರದರ್ಶನ ‘ಚಂದನ’ದಲ್ಲಿ ಬರುವ 30 ನಿಮಿಷಗಳ ವಾರ್ತೆ ನಿಜಕ್ಕೂ ಆಹ್ಲಾದಕರವಾಗಿರುತ್ತದೆ.

ಇನ್ನು ಮನರಂಜನಾ ವಾಹಿನಿಗಳ ‘ರಿಯಾಲಿಟಿ ಷೋ’ಗಳ ಕಥೆಯನ್ನು ಹೇಳುವುದೇ ಬೇಡ; ಕೆಲವಂತೂ ಅಷ್ಟರ ಮಟ್ಟಿಗೆ ಅಸಭ್ಯವಾಗಿರುತ್ತವೆ, ಅಸಹ್ಯ ಹುಟ್ಟಿಸುತ್ತವೆ. ಹಿರಿಯ ನಟರೊಬ್ಬರ ಮಗ ನಡೆಸಿಕೊಡುವ ಕಾರ್ಯಕ್ರಮವಂತೂ ಕೆಲವೊಮ್ಮೆ ಸಭ್ಯತೆಯ ಎಲ್ಲೆ ಮೀರುವುದುಂಟು. ಇನ್ನು ಧಾರಾವಾಹಿಗಳಲ್ಲಂತೂ, ‘ಒಬ್ಬ ಗಂಡ, ಇಬ್ಬರು ಹೆಂಡತಿಯರು’ ಎಂಬ ಫಾರ್ಮುಲಾ ಅಥವಾ ಅನೈತಿಕ ಸಂಬಂಧದ ಕಥೆಯೇ ವೀಕ್ಷಕರಿಗೆ ಕಟ್ಟಿಟ್ಟಬುತ್ತಿ. ಇದರಿಂದ ಸಮಾಜಕ್ಕೆ ಸಿಗುವ ಸಂದೇಶವಾದರೂ ಏನು ಅಂತ ಇಂಥ ಕಾರ್ಯಕ್ರಮಗಳ ನಿರ್ಮಾತೃಗಳು ಒಮ್ಮೆಯಾದರೂ ಯೋಚಿಸಿರುತ್ತಾರೆಯೇ?

ಸಿನಿಮಾಗಳಿಗೆ ಸೆನ್ಸಾರ್ ಮಂಡಳಿ ಇರುವಂತೆ, ಕಿರುತೆರೆ ವಾಹಿನಿಗಳಿಗೂ ಇರಬೇಕು. ಇಂಥದೊಂದು ಕಡಿವಾಣ ಇಲ್ಲದಿದ್ದರೆ ಸಮಾಜದ ಸ್ವಾಸ್ಥ್ಯ ಇನ್ನಷ್ಟು ಕುಸಿಯುವುದರಲ್ಲಿ ಅನುಮಾನವಿಲ್ಲ. ಇನ್ನು ಮುಂದಾದರೂ, ಕಿರುತೆರೆಯಲ್ಲಿ ಕೀಳು ಅಭಿರುಚಿಯ ಕಾರ್ಯ ಕ್ರಮಗಳು ಬಿತ್ತರವಾಗುವುದು ಕೊನೆಗೊಳ್ಳಲಿ. ನಮ್ಮ ಸಂಸ್ಕೃತಿ-ಪರಂಪರೆಯನ್ನು ಬಿಂಬಿಸುವಂಥ ಅಥವಾ ಮಾಹಿತಿ ಒದಗಿಸುವಂಥ ಕಾರ್ಯಕ್ರಮಗಳು ಪ್ರಸಾರವಾಗಲಿ ಎಂಬುದು ನನ್ನ ಆಶಯ.

- ವೆಂಕಟೇಶ್ ಕೆ.ಎಸ್., ಬೆಂಗಳೂರು