ಇವು ಕೃಷಿಗೂ ಪೂರಕ
ದ್ವಿದಳ ಧಾನ್ಯದ ಸಸ್ಯಗಳು ಅತಿವೃಷ್ಟಿ ಅಥವಾ ಅನಾವೃಷ್ಟಿಯಂಥ ವಾತಾವರಣವನ್ನೂ ತಾಳಿಕೊಳ್ಳ ಬಲ್ಲ ಶಕ್ತಿಯನ್ನು ಹೊಂದಿವೆ. ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭ ನೀಡುವ ಈ ಬೆಳೆಗಳು ರೈತರಿಗೆ ಆರ್ಥಿಕವಾಗಿ ಪ್ರಯೋಜನಕಾರಿಯಾಗಿರುವುದರ ಜತೆಗೆ, ಪರಿಸರ ರಕ್ಷಣೆಯ ವಿಷಯದಲ್ಲೂ ದಾರಿ ತೋರುತ್ತವೆ.


ಓದುಗರ ಓಣಿ
ದ್ವಿದಳ ಧಾನ್ಯಗಳು ಭಾರತೀಯ ಆಹಾರ ಪದ್ಧತಿಯ ಮಹತ್ವದ ಭಾಗವಾಗಿವೆ. ಪ್ರೋಟೀನ್‌ನ ಸಮೃದ್ಧ ಮೂಲವಾಗಿರುವ ಇವು, ವಿಶೇಷವಾಗಿ ಸಸ್ಯಾಹಾರಿಗಳಿಗೆ ಪೌಷ್ಟಿಕತೆಯನ್ನು ಒದಗಿಸುತ್ತವೆ. ತೊಗರಿ, ಹೆಸರು, ಕಡಲೆ, ಅವರೆ ಮುಂತಾದ ಪ್ರಮುಖ ದ್ವಿದಳ ಧಾನ್ಯಗಳಲ್ಲಿ ವಿಟಮಿನ್, ಖನಿಜಾಂಶ ಮತ್ತು ನಾರಿನ ಅಂಶಗಳು ಇದ್ದು, ದೇಹದ ಆರೋಗ್ಯವನ್ನು ಕಾಪಿಡುವಲ್ಲಿ ಇವು ಮಹ ತ್ವದ ಪಾತ್ರವನ್ನು ವಹಿಸುತ್ತವೆ.
ಇಂಥ ಧಾನ್ಯಗಳು ಕೃಷಿ ವಲಯಕ್ಕೂ ತಮ್ಮದೇ ಆದ ರೀತಿಯಲ್ಲಿ ಕೊಡುಗೆಯನ್ನು ನೀಡುತ್ತವೆ. ಇವು ಮಣ್ಣಿನಲ್ಲಿನ ನೈಟ್ರೋಜೆನ್ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಮಣ್ಣಿನ ಫಲವತ್ತತೆಯನ್ನು ಸುಧಾರಿಸುತ್ತವೆ. ಇವಕ್ಕೆ ನೀರಿನ ಅಗತ್ಯ ಕಡಿಮೆಯಿರುವುದರಿಂದ ಶುಷ್ಕ ಮಣ್ಣಿನ ಪ್ರದೇಶದಲ್ಲೂ ಈ ಧಾನ್ಯಗಳನ್ನು ಸುಲಭವಾಗಿ ಬೆಳೆಯಬಹುದು.
ದ್ವಿದಳ ಧಾನ್ಯದ ಸಸ್ಯಗಳು ಅತಿವೃಷ್ಟಿ ಅಥವಾ ಅನಾವೃಷ್ಟಿಯಂಥ ವಾತಾವರಣವನ್ನೂ ತಾಳಿ ಕೊಳ್ಳಬಲ್ಲ ಶಕ್ತಿಯನ್ನು ಹೊಂದಿವೆ. ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭ ನೀಡುವ ಈ ಬೆಳೆಗಳು ರೈತರಿಗೆ ಆರ್ಥಿಕವಾಗಿ ಪ್ರಯೋಜನಕಾರಿಯಾಗಿರುವುದರ ಜತೆಗೆ, ಪರಿಸರ ರಕ್ಷಣೆಯ ವಿಷಯದಲ್ಲೂ ದಾರಿ ತೋರುತ್ತವೆ.
ಇದನ್ನೂ ಓದಿ: Vishweshwar Bhat Column: ಪೈಲಟ್ʼಗೆ ನಿದ್ದೆ ಬಂದರೆ...
ಆದ್ದರಿಂದ, ದ್ವಿದಳ ಧಾನ್ಯ ಬೆಳೆಗಳ ಬಗ್ಗೆ ರೈತರಿಗೆ ಹೆಚ್ಚೆಚ್ಚು ಮಾಹಿತಿ ನೀಡುವ ನಿಟ್ಟಿನಲ್ಲಿ ಸರಕಾರಗಳು, ಕೃಷಿ ಇಲಾಖೆ ಮತ್ತು ಸಂಶೋಧನಾ ಸಂಸ್ಥೆಗಳು ಗಮನ ಹರಿಸಬೇಕು. ಗುಣಮಟ್ಟದ ಬೀಜದ ವಿತರಣೆಯಿಂದ ಮೊದಲ್ಗೊಂಡು, ಸಸ್ಯಗಳ ಉಪಚಾರ, ಕಟಾವು, ಸಂಗ್ರಹಣೆ ಮತ್ತು ಮಾರುಕಟ್ಟೆ ಸೌಲಭ್ಯಗಳವರೆಗಿನ ವಿವಿಧ ಹಂತದ ಚಟುವಟಿಕೆಗಳ ಕುರಿತು ಅವು ಕೃಷಿಕರನ್ನು ಮಾಹಿತಿವಂತರನ್ನಾಗಿಸಬೇಕು.
- ಡಾ.ವಿಜಯಕುಮಾರ್ ಎಚ್.ಕೆ., ರಾಯಚೂರು
ಅವಗಣನೆ ಏಕೆ?
ಕರ್ನಾಟಕದ ಎರಡು ಸುಪ್ರಸಿದ್ಧ ದೇವಾಲಯಗಳಿಗೆ ಇತ್ತೀಚೆಗೆ ಅಂತರ್ಜಾಲದ ಮುಖಾಂತರ ನಮ್ಮ ಯಥಾಶಕ್ತಿ ಕಾಣಿಕೆಯನ್ನು ಕಳುಹಿಸಿದೆವು. ಅದಕ್ಕೆ ಸಂಬಂಧಿಸಿದ ಸ್ವೀಕೃತಿ ರಸೀದಿಯೂ ಒಡನೆಯೇ ಬಂದಿತು. ಆದರೆ ಆ ಎರಡೂ ರಸೀದಿಗಳು ಸಂಪೂರ್ಣ ಆಂಗ್ಲಮಯವಾಗಿದ್ದುದು ಕಂಡು ಕೊಂಚ ಬೇಸರವಾಯಿತು. ರಸೀದಿಯನ್ನು ಕನ್ನಡ ಭಾಷೆಯಲ್ಲಿ ನೀಡುವುದಕ್ಕೆ ಇರುವ ಅಡ್ಡಿಯಾದರೂ ಏನು? ಪರರಾಜ್ಯಗಳು ಮತ್ತು ಹೊರದೇಶಗಳಿಂದಲೂ ಬರುವ ದೇಣಿಗೆ/ಕಾಣಿಕೆಗಳನ್ನು ಗಮನ ದಲ್ಲಿಟ್ಟುಕೊಂಡು ಈ ವ್ಯವಸ್ಥೆಯಿರಬಹುದು ಎಂಬುದನ್ನು ಒಪ್ಪೋಣ. ಆದರೆ ಕನ್ನಡ ಮತ್ತು ಆಂಗ್ಲ ಎರಡೂ ಭಾಷೆಗಳು ಅಡಕವಾಗಿರುವ ರೀತಿಯಲ್ಲಿ ರಸೀದಿ ಮಾದರಿಯನ್ನು ಸಿದ್ಧಪಡಿಸಲು ಸಾಧ್ಯವಿದೆಯಲ್ಲವೇ? ಇದು ಕಾಗದರಹಿತ ರಸೀದಿ ಆಗಿರುವುದರಿಂದ ನಷ್ಟವೇನೂ ಆಗುವುದಿಲ್ಲ.
ಇನ್ನು ಮುಂದಾದರೂ ಕರ್ನಾಟಕದ ಎಲ್ಲ ದೇಗುಲಗಳು ಮತ್ತು ದೇಣಿಗೆ ಪಡೆವ ಸಂಘ-ಸಂಸ್ಥೆಗಳು ಕನ್ನಡದಲ್ಲೇ ರಸೀದಿ ನೀಡಲಿ. ಈ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಗಮನಹರಿಸು ವಂತಾಗಲಿ.
- ಪತ್ತಂಗಿ ಎಸ್.ಮುರಳಿ, ಬೆಂಗಳೂರು