ಶ್ರೀವತ್ಸ ಜೋಶಿಯವರ ‘ತಿಳಿರು ತೋರಣ’ ಅಂಕಣದಲ್ಲಿ (ಡಿ.21) ಮೂಡಿ ಬಂದ ‘ಕೋಮಲ ಕುಸುಮವು ಕಠೋರವೆನಿಸುವ ಕಥಾನಕಗಳು’ ಶೀರ್ಷಿಕೆಯ ಲೇಖನ ನನ್ನನ್ನು ಬೇರೆಯದೇ ಒಂದು ಲೋಕಕ್ಕೆ ಕೊಂಡೊಯ್ದಿತು. ಯಾವತ್ತೂ ಇಂಥ ಅಪೂರ್ವ ಕಥಾನಕಗಳನ್ನು ಕೇಳಿರಲಿಲ್ಲ, ಓದಿರ ಲಿಲ್ಲ. ಕಥಾನಕಗಳಲ್ಲಿ ಬಳಸಿದ ಕನ್ನಡವಂತೂ ಉನ್ನತ ಮಟ್ಟದಲ್ಲಿತ್ತು. ಕೆಲವು ರೂಪಕಗಳು, ಕೆಲವು ವಾಕ್ಯಗಳು ಮತ್ತೆ ಮತ್ತೆ ಓದಬೇಕೆನಿಸಿದವು. ಮತ್ತೆ ಮತ್ತೆ ಓದಿದೆ. ಮುದ ನೀಡಿತು.
ಶ್ರೀವತ್ಸ ಜೋಶಿಯವರು ಪ್ರತಿ ವಾರವೂ ಒಂದಿಂದು ಹೊಸ ವಿಷಯವನ್ನು ಆಯ್ದುಕೊಂಡು, ಅದನ್ನು ಆಳವಾಗಿ ಅಧ್ಯಯನ ಮಾಡಿ, eನಪ್ರಸರಣದ ಜತೆಗೆ ಅಲ್ಲಲ್ಲಿ ಕೊಡುವ ಗುದ್ದುಗಳು, ವ್ಯಂಗ್ಯ, ಅಣಕಗಳು ಒಳ್ಳೆಯ ಕಚಗುಳಿಯನ್ನೂ ನೀಡುತ್ತವೆ. ‘ತಿಳಿರು ತೋರಣ’ ನನ್ನ ಪ್ರೀತಿಯ ಅಂಕಣ. ಇದನ್ನು ಬರೆಯುತ್ತಿರುವ ಜೋಶಿಯವರಿಗೂ, ಪ್ರಕಟಿಸುತ್ತಿರುವ ‘ವಿಶ್ವವಾಣಿ’ ಪ್ರತಿಕೆಗೂ ಅನಂತ ಧನ್ಯವಾದಗಳು.
- ಶಿವಶಂಕರ ಪ್ರಭು, ಮುಂಡ್ಕೂರು
ಧರ್ಮದ ಹೆಸರಲ್ಲಿ ಅಧರ್ಮ!
ದಾವಣಗೆರೆಯಲ್ಲಿ ಹುಟ್ಟಿ ಬೆಳೆದಿರುವ ನಾನು ಬಾಲ್ಯದಿಂದಲೂ ಲಿಂಗಾಯತರ-ವೀರಶೈವರ ಒಡನಾಡಿದವನು. ಅವರ ಬಗ್ಗೆ ನನಗೆ ಪ್ರೀತಿ ಇದೆ, ಹಲವು ಮಹಾನುಭಾವರ ಬಗ್ಗೆ ಗೌರವವಿದೆ. ಆದರೆ, ಈಗ ಆಗುತ್ತಿರುವ ಬೆಳವಣಿಗೆ ನೋಡಿ ಬೇಸರವೆನಿಸುತ್ತಿದೆ. ಲಿಂಗಾಯತ-ವೀರಶೈವ ಒಂದೇ ಎಂಬ, ಬೇರೆ ಬೇರೆ ಎಂಬ ವಿವಾದ, ಪ್ರತ್ಯೇಕ ಮೀಸಲಾತಿ ಬೇಕು-ಬೇಡ ಎಂಬ ವಿವಾದ, ಈ ವಿವಾದಗಳಿಂದಾಗಿ ಇಂದು, ಕಂಡಕಂಡವರೆಲ್ಲ ಲಿಂಗಾಯತರ-ವೀರಶೈವರ ಬಗ್ಗೆ ಮಾತ್ರವಲ್ಲ, ಹಿಂದೂ ಧರ್ಮದ ಬಗ್ಗೆಯೂ ಮನಬಂದಂತೆ ಮಾತನಾಡುವ ಮತ್ತು ಜಾಲತಾಣಗಳಲ್ಲಿ ಗೀಚಾಡುವ ಪರಿಸ್ಥಿತಿ ಬಂದಿದೆ!
ಇದನ್ನೂ ಓದಿ: Readers Colony: ಲೇಖನ ಚೆನ್ನಾಗಿದೆ
ಈ ಪರಿಸ್ಥಿತಿಗೆ ಎಲ್ಲ ಪಕ್ಷಗಳ ರಾಜಕಾರಣಿಗಳ ಮತ್ತು ಬಹಳಷ್ಟು ಮಠಾಧೀಶರ ಕೊಡುಗೆ ಪ್ರಮುಖ ವಾಗಿರುವುದು ಅತ್ಯಂತ ಖೇದಕರ ಸಂಗತಿ. ತಮ್ಮ ಪಕ್ಷದ ಸಿದ್ಧಾಂತದ ಅನುಸಾರ ಪ್ರತ್ಯೇಕ ಧರ್ಮ-ಮೀಸಲಾತಿ ಬೇಡವೆಂದು ಇದ್ದರೆ, ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ, ಕೇಂದ್ರದಲ್ಲಿ ಅವರದೇ ಪಕ್ಷ ಆಳುತ್ತಿರುವಾಗ, ಈ ವಿವಾದಕ್ಕೆ ತಾರ್ಕಿಕ ಅಂತ್ಯ ಕಾಣಿಸಿ, ‘ಪ್ರತ್ಯೇಕ ಧರ್ಮ-ಮೀಸಲಾತಿ ಸಾಧ್ಯವೂ ಇಲ್ಲ, ಸಾಧುವೂ ಅಲ್ಲ’ ಎಂದು ಸಮಾಜಕ್ಕೆ ಮನದಟ್ಟು ಮಾಡಬಹುದಿತ್ತು.
ಈಗಿನ ಆಳುಗರು ಪ್ರತ್ಯೇಕ ಧರ್ಮದ-ಮೀಸಲಾತಿಯ ಪರವಾಗಿ ಇದ್ದುದಾದರೆ, ಅದಕ್ಕಾಗಿ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಿ, ಅದು ಸಾಧ್ಯವೋ ಇಲ್ಲವೋ ಎಂಬುದನ್ನು ಶ್ರುತಮಾಡಿ ವಿವಾದಕ್ಕೆ ಕೊನೆ ಹಾಡಬಹುದಿತ್ತು. ಉಭಯ ಪಕ್ಷದವರೂ ಇದೇನನ್ನೂ ಮಾಡದೆ, ಚುನಾವಣೆ ಗಳಲ್ಲಿ ಮತ ಗಳಿಕೆಯ ಉದ್ದೇಶವನ್ನು ಒಳಗಿಟ್ಟುಕೊಂಡು, ಡಬಲ್ ಗೇಮ್ ಆಡುತ್ತ, ವಿವಾದವನ್ನು ಬೇಕೆಂದೇ ಜೀವಂತವಾಗಿ ಇರಿಸಿದ್ದಾರೆ.
ಬಹುತೇಕ ಮಠಾಧೀಶರು ತಮ್ಮ ಮೂಗಿನ ನೇರಕ್ಕೆ ಮತ್ತು ತಮ್ಮ ಉದ್ದೇಶ ಸಾಧನೆಗೆ ತಕ್ಕಂತೆ ವಿಚಾರಗಳನ್ನು ಹರಿಬಿಡುತ್ತಿದ್ದಾರೆ. ಇದರಿಂದಾಗಿ ಲಿಂಗಾಯತ-ವೀರಶೈವ ಶ್ರೀಸಾಮಾನ್ಯನು ಗೋಜಲಿಗೆ ಒಳಗಾಗಿದ್ದಾನೆ. ಬಸವಣ್ಣನವರ ಹೆಸರು ಮನಸೋ ಇಚ್ಛೆ ಬಳಕೆ ಆಗುತ್ತಿದ್ದು, ಅವರ ತತ್ತ್ವ, ಆದರ್ಶಗಳು ಮೂಲೆಗೆ ಸರಿದಿವೆ. ಬಹುಶಃ ಜನಸಮೂಹವೇ ಜಾಗೃತವಾಗಿ ಈ ವಿವಾದಕ್ಕೆ ಒಂದು ತಾರ್ಕಿಕ ಅಂತ್ಯ ಕಾಣಿಸಬೇಕೇನೋ! ಒಕ್ಕಲಿಗರ ಮೀಸಲಾತಿಯ ವಿಷಯದಲ್ಲಿಯೂ ಪರಿಸ್ಥಿತಿಯು ಶುಭ್ರವಾಗಿ ಇಲ್ಲ.
- ಎಚ್. ಆನಂದರಾಮ ಶಾಸ್ತೀ, ಬೆಂಗಳೂರು