ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Readers Colony: ಜನ ಪ್ರತಿನಿಧಿಗಳು ಎಲ್ಲಿ?

ಸುಮಾರು ಮೂರು ತಿಂಗಳಿನಿಂದ, ಬೆಂಗಳೂರು ಮಹಾನಗರಿಯಲ್ಲಿನ ರಸ್ತೆ ಗುಂಡಿಗಳ ಬಗ್ಗೆಯೇ ಮಾಧ್ಯಮಗಳು ಸಾರ್ವಜನಿಕರು, ಉದ್ಯಮಿಗಳು ಹಾಗೂ ಸಹಜವಾಗಿ ವಿಪಕ್ಷೀಯರಿಂದ ಟೀಕೆಗಳು ಹೊಮ್ಮುತ್ತಲೇ ಇವೆ. ಸರಕಾರವೂ ನಿದ್ರೆಯಿಂದ ಎಚ್ಚೆತ್ತುಕೊಂಡಂತೆ, ಕೋಟ್ಯಂತರ ರುಪಾಯಿ ಮಂಜೂರು ಮಾಡಿ ರಸ್ತೆ ಗುಂಡಿಗಳಿಗೆ ತೇಪೆ ಹಾಕಲು ಆರಂಭಿಸಿದೆ

ಸುಮಾರು ಮೂರು ತಿಂಗಳಿನಿಂದ, ಬೆಂಗಳೂರು ಮಹಾನಗರಿಯಲ್ಲಿನ ರಸ್ತೆ ಗುಂಡಿಗಳ ಬಗ್ಗೆಯೇ ಮಾಧ್ಯಮಗಳು ಸಾರ್ವಜನಿಕರು, ಉದ್ಯಮಿಗಳು ಹಾಗೂ ಸಹಜವಾಗಿ ವಿಪಕ್ಷೀಯರಿಂದ ಟೀಕೆಗಳು ಹೊಮ್ಮುತ್ತಲೇ ಇವೆ. ಸರಕಾರವೂ ನಿದ್ರೆಯಿಂದ ಎಚ್ಚೆತ್ತುಕೊಂಡಂತೆ, ಕೋಟ್ಯಂತರ ರುಪಾಯಿ ಮಂಜೂರು ಮಾಡಿ ರಸ್ತೆ ಗುಂಡಿಗಳಿಗೆ ತೇಪೆ ಹಾಕಲು ಆರಂಭಿಸಿದೆ; ಆದರೆ ರಸ್ತೆಗಳ ಅವಸ್ಥೆ ನೋಡಿದರೆ ಅದು ಶವವನ್ನು ಸಿಂಗರಿಸಿದಂತೆ ಆಗಿದೆ.

ನಮ್ಮ ಜನಪ್ರತಿನಿಧಿಗಳು ಈ ಅವ್ಯವಸ್ಥೆಯನ್ನು ಕಂಡೂ ಕಾಣದಂತೆ ಇರುವುದಕ್ಕೆ ಏನನ್ನುವುದು? ತಂತಮ್ಮ ಕ್ಷೇತ್ರದಲ್ಲಿ ಹದಗೆಟ್ಟಿರುವ ರಸ್ತೆಗಳು ಹಾಗೂ ಅಪಾಯಕಾರಿ ಗುಂಡಿಗಳನ್ನು ಅವರು ಗಮನಿಸಿ, ಅಧಿಕಾರಿಗಳನ್ನು ಕಂಡು, ಅವನ್ನು ಸರಿಪಡಿಸುವಂತೆ ಆಗ್ರಹಿಸಬಹುದಿತ್ತು.

ಇನ್ನಾದರೂ ನಮ್ಮ ಜನಪ್ರತಿನಿಧಿಗಳು ಮನೆಯಿಂದ ಹೊರಬಂದು, ತಮ್ಮ ಕ್ಷೇತ್ರಗಳ ಉದ್ದಗಲಕ್ಕೂ ಸಂಚರಿಸಿ, ಇರಬಹುದಾದ ಅವ್ಯವಸ್ಥೆಗಳನ್ನು ಮನವರಿಕೆ ಮಾಡಿಕೊಂಡು, ಅವನ್ನು ಸರಿಪಡಿಸು ವತ್ತ ಗಮನ ಹರಿಸಲಿ. ತನ್ಮೂಲಕ, ತಮ್ಮನ್ನು ಚುನಾಯಿಸಿದ ಜನರ ಋಣವನ್ನು ತೀರಿಸಲಿ.

- ಬೆಳ್ಳೆ ಚಂದ್ರಶೇಖರಶೆಟ್ಟಿ, ಬೆಂಗಳೂರು

ಹೆಣ್ಣನ್ನು ಗೌರವಿಸಿ

ನಾಗರಿಕ ಸಮಾಜ ಎಂದು ಹೇಳಿಕೊಳ್ಳುವ ನಮ್ಮ ಇಂದಿನ ವ್ಯವಸ್ಥೆಯಲ್ಲಿ ಈಗಲೂ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಹಿಂಸೆ ಮತ್ತು ಕಿರುಕುಳ ಆತಂಕ ಹುಟ್ಟಿಸುವಂತಿವೆ. ಹೆಣ್ಣು ಮಕ್ಕಳ ಶಿಕ್ಷಣ, ಉದ್ಯೋಗಾವಕಾಶ, ಸಮಾನತೆ ಎಂಬ ಮಾತುಗಳೇನೋ ಜೋರಾಗಿ ಕೇಳಿ ಬರು ತ್ತಿದ್ದರೂ ಅವರ ‘ಸುರಕ್ಷತೆ’ ಇನ್ನೂ ಪ್ರಶ್ನಾರ್ಥಕವಾಗೇ ಉಳಿದಿದೆ. ಅಂಕಿ-ಅಂಶಗಳ ಪ್ರಕಾರ, ನಮ್ಮ ರಾಜ್ಯದಲ್ಲೇ ಗಣನೀಯ ಸಂಖ್ಯೆಯ ಪ್ರಕರಣಗಳು ದಾಖಲಾಗಿವೆ. ಇದು ಕಾನೂನು-ವ್ಯವಸ್ಥೆಯ ವೈಫಲ್ಯವಷ್ಟೇ ಅಲ್ಲ, ಜತೆಗೆ ಮಾನವೀಯ ಮೌಲ್ಯಗಳ ಕುಸಿತದ ದ್ಯೋತಕವೂ ಹೌದು.

ಇದನ್ನೂ ಓದಿ: Lokesh Kaayarga Column: ಪರೀಕ್ಷೆಯ ಮಾನ ʼದಂಡʼವಾಗಬಾರದು

ಮಹಿಳೆಯರ ಮೇಲೆ ನಡೆಯುವ ಹಿಂಸೆಯ ಹಿಂದಿರುವುದು ‘ವಿಲಕ್ಷಣ ಧೋರಣೆ’. ಹೆಣ್ಣನ್ನು ಇಂದಿಗೂ ಅಸಹಾಯಕಳಂತೆ, ಅಬಲೆಯಂತೆ ನೋಡುವ ದೃಷ್ಟಿ ಬೇರೂರಿರುವುದೇ ದೊಡ್ಡ ಸಮಸ್ಯೆ. ಕಾನೂನು ಎಷ್ಟೇ ನಿಷ್ಠುರಿಯಾದರೂ, ಇಂಥ ಮನೋಧರ್ಮ ಬದಲಾಗದಿದ್ದರೆ ಮಹಿಳೆ ಯರ ಸುರಕ್ಷತೆಯ ಖಾತ್ರಿಯಿರುವುದಿಲ್ಲ. ಈ ಕಾರಣದಿಂದಲೇ ಮಕ್ಕಳಿಗೆ ಶಾಲಾ ಹಂತದಿಂದಲೇ ಸಮಾನತೆ, ಗೌರವ ಮತ್ತು ಸಹಜೀವನದ ಪಾಠಗಳನ್ನು ಬೋಧಿಸುವುದು ಅತ್ಯಗತ್ಯವಾಗಿದೆ. ಮಹಿಳಾ ಸುರಕ್ಷತೆಯ ವಿಷಯವನ್ನು ಕೇವಲ ಸರಕಾರ ಅಥವಾ ಪೊಲೀಸರ ಹೊಣೆಗಾರಿಕೆಯಾಗಿ ನೋಡುವುದು ತಪ್ಪು; ಪ್ರತಿಯೊಬ್ಬ ನಾಗರಿಕನೂ ಈ ವಿಷಯದಲ್ಲಿ ಬಾಧ್ಯಸ್ಥ ನಾಗಬೇಕು.

ಬೀದಿಯಲ್ಲಿ ಮಹಿಳೆಯರಿಗೆ ಕಿರುಕುಳವಾಗುತ್ತಿರುವುದನ್ನು ಕಂಡೂ ಸುಮ್ಮನಿರುವುದು ಇಲ್ಲವೇ ಜಾಗ ಖಾಲಿಮಾಡುವುದು ಸಹಾನುಭೂತಿಯ ಕೊರತೆಯಷ್ಟೇ ಅಲ್ಲ, ಅದು ಅಪರಾಧಕ್ಕೆ ನೀಡಿದ ಮೌನ ಸಮ್ಮತಿಯೂ ಆಗಿಬಿಡುತ್ತದೆ. ಸಮಾಜವೇ ಧೈರ್ಯವಾಗಿ ನಿಂತಾಗ ಮಾತ್ರವೇ ಇಂಥ ದೌರ್ಜನ್ಯಕ್ಕೆ ಕಡಿವಾಣ ಬೀಳಲು ಸಾಧ್ಯ.

ಬಹುತೇಕರು ಅಂದುಕೊಂಡಿರುವಂತೆ ಮಹಿಳೆ ದುರ್ಬಲಳಲ್ಲ; ಆಕೆ ಬದುಕಿನ ಶಕ್ತಿ, ಕುಟುಂಬದ ಅಡಿಗಲ್ಲು, ಸಮಾಜದ ನಿಜವಾದ ಬಲ. ಹೀಗಾಗಿ ಆಕೆಯ ಮನಸ್ಸನ್ನು ಮುರಿಯುವ ಬದಲು ಜತೆಗಿಟ್ಟುಕೊಂಡು ಜತನವಾಗಿ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಬೇಕು. ಮಹಿಳಾ ಸುರಕ್ಷತೆಯ ನಿಟ್ಟಿನಲ್ಲಿ ನಿಷ್ಠುರ ಕಾನೂನುಗಳ ಜತೆಜತೆಗೆ, ಮನೋಧರ್ಮದ ಬದಲಾವಣೆಯ ಅಗತ್ಯವೂ ಇದೆ ಎಂಬುದನ್ನು ಅರಿಯೋಣ.

- ಶಿವಯೋಗಿ ಎಂ.ವಿ., ರಾಂಪುರ