IPL 2025: ಶತಕದ ಜತೆಯಾಟದಲ್ಲಿ ದಾಖಲೆ ಬರೆದ ಗಿಲ್-ಸುದರ್ಶನ್ ಜೋಡಿ
ಗುಜರಾತ್ ತಂಡದ ನಾಯಕ ಶುಭಮನ್ ಗಿಲ್ ಅವರು ಐಪಿಎಲ್ ಇತಿಹಾಸದಲ್ಲಿ 3500 ರನ್ಗಳನ್ನು ಪೂರ್ಣಗೊಳಿಸಿದ ಅತ್ಯಂತ ಕಿರಿಯ ಆಟಗಾರ ಮತ್ತು 25 ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ.



ಗುಜರಾತ್ ಟೈಟಾನ್ಸ್ ತಂಡದ ಆರಂಭಿಕ ಆಟಗಾರರಾದ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಜೋಡಿ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಮೊದಲ ವಿಕೆಟ್ಗೆ 112 ರನ್ಗಳ ಸ್ಕೋರ್ ಕಲೆಹಾಕುವ ಮೂಲಕ ಐಪಿಎಲ್ನಲ್ಲಿ ನೂತನ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಜೋಡಿ 6ನೇ ಶತಕದ ಜತೆಯಾಟವಾಡುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಮೊದಲ ವಿಕೆಟ್ಗೆ ಅತಿ ಹೆಚ್ಚು ಶತಕದ ಜತೆಯಾಟ ನಡೆಸಿದ ಮೊದಲ ಭಾರತೀಯ ಜೋಡಿ ಎನಿಸಿಕೊಂಡರು. ಈ ಮೂಲಕ ತಲಾ 5 ಶತಕಗಳ ಜತೆಯಾಟ ಹೊಂದಿರುವ ಕೆಎಲ್ ರಾಹುಲ್-ಮಯಾಂಕ್ ಅಗರ್ವಾಲ್ ಮತ್ತು ಗೌತಮ್ ಗಂಭೀರ್-ರಾಬಿನ್ ಉತ್ತಪ್ಪ ಜೋಡಿಯ ದಾಖಲೆಯನ್ನು ಮುರಿದಿದ್ದಾರೆ.

ಕೆಕೆಆರ್ ವಿರುದ್ಧ ಶುಭಮನ್ ಗಿಲ್, 55 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ 10 ಮನಮೋಹಕ ಬೌಂಡರಿಗಳೊಂದಿಗೆ 90 ರನ್ಗಳನ್ನು ಸಿಡಿಸಿದರು. ಆದರೆ, 18ನೇ ಓವರ್ನ ಕೊನೆಯ ಎಸೆತದಲ್ಲಿ ವೈಭವ್ ಅರೋರಾಗೆ ವಿಕೆಟ್ ಒಪ್ಪಿಸುವ ಮೂಲಕ ಕೇವಲ10 ರನ್ ಅಂತರದಲ್ಲಿ ಶತಕ ವಂಚಿತರಾದರು.

ಸೋಮವಾರ ಇಲ್ಲಿನ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಗುಜರಾತ್ ಟೈಟನ್ಸ್ ನೀಡಿದ್ದ 199 ರನ್ಗಳ ಗುರಿಯನ್ನು ಹಿಂಬಾಲಿಸಿದ ಕೋಲ್ಕತಾ ನೈಟ್ ರೈಡರ್ಸ್, ಅಜಿಂಕ್ಯ ರಹಾನೆ (50) ಬಿಟ್ಟರೆ ಇನ್ನುಳಿದ ಬ್ಯಾಟ್ಸ್ಮನ್ಗಳು ವಿಫಲರಾದರು. ಇದರ ಪರಿಣಾಮವಾಗಿ ಕೆಕೆಆರ್ ತನ್ನ ಪಾಲಿನ 20 ಓವರ್ಗಳನ್ನು ಪೂರ್ಣಗೊಳಿಸಿದರೂ 8 ವಿಕೆಟ್ಗಳ ನಷ್ಟಕ್ಕೆ 159 ರನ್ಗಳಿಗೆ ಸೀಮಿತವಾಗಿ 39 ರನ್ ಅಂತರದ ಸೋಲು ಕಂಡಿತು.
ಇದನ್ನೂ ಓದಿ IPL 2025: ಆರ್ಸಿಬಿ ಪರ ಅಚ್ಚರಿಯ ಹೇಳಿಕೆ ಕೊಟ್ಟ ಅಂಬಾಟಿ ರಾಯುಡು!

ಕೆಕೆಆರ್ ತಂಡವನ್ನು 39 ರನ್ಗಳಿಂದ ಮಣಿಸಿದ ಗುಜರಾತ್ ಟೈಟಾನ್ಸ್ ತಂಡ ಅಂಕಪಟ್ಟಿ ಯಲ್ಲಿ ತನ್ನ ಅಗ್ರಸ್ಥಾನವನ್ನು ಇನ್ನಷ್ಟು ಗಟ್ಟಿಗೊಳಿಸಿದೆ. ಪ್ಲೇ ಆಫ್ ಪ್ರವೇಶಿಸಬೇಕಿದ್ದರೆ, ಇನ್ನುಳಿದ 6 ಪಂದ್ಯಗಳ ಪೈಕಿ ಕನಿಷ್ಠ 2 ಪಂದ್ಯ ಗೆದ್ದರೂ ಸಾಕು. ತಂಡದ ಉಭಯ ಆಟಗಾರರಾದ ಸಾಯಿ ಸುದರ್ಶನ್(417 ರನ್) ಮತ್ತು ಪ್ರಸಿದ್ಧ್ ಕೃಷ್ಣ(16 ವಿಕೆಟ್) ಕ್ರಮವಾಗಿ ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ಹೊಂದಿದ್ದಾರೆ.